(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾದ ಪದ್ಯಭಾಗ)
ಎನ್ನ ಪೆತ್ತವರಿವರೀ ಮನೆಯೊಡವೆಗ
ಳೆನ್ನವೆಂದೆರವಿಲ್ಲದಿರ್ಪ
ಕನ್ಯೆಯನನ್ಯರಿಗೀವನ್ನೆವರಮುರೆ
ಮನ್ನಿಸುವುದು ಮಮತೆಯೊಳು ೧೧
(ಎನ್ನ ಪೆತ್ತವರ್ ಇವರ್, ಈ ಮನೆಯ ಒಡವೆಗಳ್, ಎನ್ನವೆಂದು, ಎರವಿಲ್ಲದೆ ಇರ್ಪ ಕನ್ಯೆಯನ್, ಅನ್ಯರಿಗೆ ಈವನ್ನೆವರಂ, ಉರೆ ಮಮತೆಯೊಳು ಮನ್ನಿಸುವುದು.)
ಇವರು ನನ್ನನ್ನು ಹೆತ್ತವರು, ಈ ಮನೆಯ(ತವರುಮನೆಯ) ಒಡವೆಗಳು ನನ್ನವು ಎಂದೋ ನನಗೆ ಸಲ್ಲತಕ್ಕವು ಎಂದೋ ಭಾವಿಸದೆ, ಯಾವುದನ್ನೂ ಬೇಡದೆ ಅಥವಾ ಯಾಚಿಸದೆ ತವರು ಮನೆಯಲ್ಲಿ ಬೆಳೆಯುತ್ತಿರುವ ಹೆಣ್ಣನ್ನು ಮದುವೆಮಾಡಿ ಅನ್ಯರಿಗೆ ಕೊಡುವಲ್ಲಿಯವರೆಗೆ ಹೆತ್ತವರು, ಹಿರಿಯರು ಚೆನ್ನಾಗಿ ಮಮತೆಯಿಂದ ಗೌರವಿಸಬೇಕು.
(ಹೊನ್ನಮ್ಮ ಈ ಪದ್ಯದಲ್ಲಿ ಹೆಣ್ಣುಮಕ್ಕಳ ನಿಷ್ಕಲ್ಮಷ ಹಾಗೂ ನಿಸ್ವಾರ್ಥ ಮನೋಭಾವ ಹಾಗೂ ಅದಕ್ಕೆ ಪೂರಕವಾಗಿ ಹೆತ್ತವರು, ಹಿರಿಯರು ಹೆಣ್ಣುಮಕ್ಕಳನ್ನು ನಡೆಸಿಕೊಳ್ಳಬೇಕಾದ ಅವಶ್ಯಕತೆಯನ್ನು ವಿವರಿಸಿದ್ದಾಳೆ. ಮಕ್ಕಳು ಬೆಳೆದಂತೆ ಅವರ ಮನಸ್ಸಿನಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಗಂಡುಮಕ್ಕಳಿಗೆ ಮನೆಯ ಮೇಲಾಗಲೀ ಹೆತ್ತವರ ಮೇಲಾಗಲೀ ಅಂತಹ ಮೋಹ, ಮಮಕಾರ ಉಂಟಾಗುವುದಿಲ್ಲ. ಆದರೆ ಹೆಣ್ಣುಮಕ್ಕಳು ಮಾತ್ರ ತವರುಮನೆಯಲ್ಲಿ ತಾವು ಹೆಚ್ಚು ಕಾಲ ಇರುವುದಕ್ಕಾಗುವುದಿಲ್ಲ ಎಂಬುದು ತಿಳಿದ್ದಿದ್ದರೂ ಹೆತ್ತವರನ್ನು ತನ್ನವರು ಎಂದು ಭಾವಿಸಿ ಬದುಕುತ್ತಾರೆ. ಆದರೆ ತವರು ಮನೆಯ ಒಡವೆಗಳನ್ನಾಗಲೀ, ಆಸ್ತಿಯನ್ನಾಗಲೀ, ಸಂಪತ್ತನ್ನಾಗಲೀ ತನ್ನವು ಎಂದೋ ತನಗೇ ಸಲ್ಲಬೇಕು ಎಂದೋ ಭಾವಿಸಿಕೊಳ್ಳುವುದಿಲ್ಲ.ಹೆತ್ತವರು ಉಡುಗೊರೆಯಾಗಿ ಮನಸಾ ಕೊಟ್ಟಿದ್ದನ್ನು ಸ್ವೀಕರಿಸುತ್ತಾರೆಯೇ ವಿನಾ ಹೆತ್ತವರಲ್ಲಿ ಅವರು ಏನನ್ನೂ ಬೇಡಿಕೊಳ್ಳುವುದಿಲ್ಲ. ಹೀಗಿರುವಾಗ ಇಂತಹ ಹೆಣ್ಣುಮಕ್ಕಳನ್ನು ಹೆತ್ತವರು, ಮನೆಯ ಹಿರಿಯರು ಮದುವೆಮಾಡಿ ಕೊಡುವಲ್ಲಿಯವರೆಗೆ ಅವರ ಆಸೆಗಳನ್ನು ಪೂರೈಸುತ್ತ, ಅವರ ಮನಸ್ಸನ್ನು ಸಂತೋಷಪಡಿಸುತ್ತ ತುಂಬಾ ಮಮತೆಯಿಂದ, ಪ್ರೀತಿಯಿಂದ ಚೆನ್ನಾಗಿ ಗೌರವಿಸಬೇಕು ಎಂದು ಹೊನ್ನಮ್ಮ ವಾದಿಸುತ್ತಾಳೆ.)
ಅರಿತು ನಿಟ್ಟಿಸೆ ಗಂಡುಮಕ್ಕಳಿಂದತಿಶಯ
ದೆರಕದೊಳೆಸೆವ ಪೆಣ್ಗಳನು
ಪೊರನೋಟದಿಂದ ನೋಡದೆ ಪೋಲೆನಿಸದೆ
ಮರುಕವೆರಸಿ ಮನ್ನಿಪುದು. ೧೨
(ಅರಿತು ನಿಟ್ಟಿಸೆ, ಗಂಡುಮಕ್ಕಳಿಂದ ಅತಿಶಯದ ಎರಕದೊಳ್ ಎಸೆವ ಪೆಣ್ಗಳನು ಪೊರನೋಟದಿಂದ ನೋಡದೆ, ಪೋಲ್ ಎನಿಸದೆ ಮರುಕ ಬೆರಸಿ ಮನ್ನಿಪುದು)
ಪರಾರ್ಶಿಸಿ ನೋಡಿದಾಗ ಗಂಡುಮಕ್ಕಳಿಗಿಂತಲೂ ಅತಿಶಯವಾದ ಪ್ರೀತಿಯಿಂದ ಶೋಭಿಸುವ ಹೆಣ್ಣುಮಕ್ಕಳನ್ನು ಹೊರನೋಟದಿಂದ, ತಾತ್ಸಾರದಿಂದ ನೋಡದೆ; ಅವರ ಜನ್ಮವೇ ವ್ಯರ್ಥವೆಂದು ಭಾವಿಸದೆ ಗೌರವದಿಂದ ಮನ್ನಿಸಬೇಕು.
(ಕುಟುಂಬದಲ್ಲಿ ಹೆತ್ತವರು ಹಾಗೂ ಹಿರಿಯರು ಹೆಣ್ಣುಮಕ್ಕಳನ್ನು ನೋಡಿಕೊಳ್ಳಬೇಕಾದ ಕ್ರಮವನ್ನು ಮತ್ತು ಅದರ ಅವಶ್ಯಕತೆಯನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಮನೆಯಲ್ಲಿ ಬೆಳೆಯುತ್ತಿರುವ ಗಂಡುಮಕ್ಕಳನ್ನು ಹಾಗೂ ಹೆಣ್ಣುಮಕ್ಕಳನ್ನು ಅವರ ಗುಣನಡತೆ, ಮಾತುಗಾರಿಕೆ, ಹೆತ್ತವರೊಂದಿಗೆ ಅಥವಾ ಹಿರಿಯರೊಂದಿಗಿನ ಸಂಬಂಧಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳೇ ಅತಿಶಯವಾದ ಪ್ರೀತಿಯಿಂದ ಶೋಭಿಸುತ್ತಾರೆ. ಹೆಣ್ಣುಮಕ್ಕಳು ಮನೆಮಂದಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಮನೆಯ ಶೋಭೆಗೆ ಕಾರಣರಾಗುತ್ತಾರೆ. ಅಂತಹ ಹೆಣ್ಣುಮಕ್ಕಳನ್ನು ಮೇಲಿಂದ ಮೇಲೆ ನೋಡದೆ, ತುಚ್ಛವಾಗಿ ಪರಿಭಾವಿಸದೆ, ನಿರ್ಲಕ್ಷಿಸದೆ ಅವರ ಗುಣ, ನಡತೆ, ಮಾತು, ಮನೆಗೆಲಸ, ಹೆತ್ತವರ ಮೇಲಿನ ಗೌರವ, ಹಿರಿಯರ ಮೇಲಿನ ಭಯಭಕ್ತಿಗಳನ್ನು ಅರಿತುಕೊಂಡು ಅವರಿಗೆ ಗಂಡುಮಕ್ಕಳಿಗಿಂತ ಹೆಚ್ಚು ವಾತ್ಸಲ್ಯವನ್ನು, ಪ್ರೀತಿ-ವಿಶ್ವಾಸಗಳನ್ನು ಗೌರವವನ್ನು ತೋರಬೇಕು ಎಂದು ಹೊನ್ನಮ್ಮ ಅಭಿಪ್ರಾಯಪಡುತ್ತಾಳೆ.)
ಸುಗುಣನಾವನು ಸುಚರಿತ್ರನಾವನು ಕಣ್ಗೆ
ಸೊಗಸುವ ಸೊಬಗನಾರೆಂದು
ಬಗೆದು ಭಾವಿಸಿ ಪೆಣ್ಣನೀವುದು ವಂಶದೊ
ಳೊಗೆದೊಳ್ಗುವರನಿಗೊಲಿದು. ೧೩
(ಸುಗುಣನ್ ಆವನು? ಸುಚರಿತ್ರನ್ ಆವನು? ಕಣ್ಗೆ ಸೊಗಸುವ ಸೊಬಗನ್ ಆವನು? ಎಂದು ಬಗೆದು ಭಾವಿಸಿ ವಂಶದೊಳ್ ಒಗೆದ ಒಳ್ ಕುವರನಿಗೆ ಒಲಿದು ಪೆಣ್ಣನ್ ಈವುದು.)
ಹೆತ್ತ ಮಗಳನ್ನು ಮದುವೆಮಾಡಿಕೊಡುವಾಗ ಒಳ್ಳೆಯ ಗುಣವಂತನೂ ಒಳ್ಳೆಯ ಗುಣನಡತೆಯುಳ್ಳವನೂ ನೋಡುವುದಕ್ಕೆ ಅತ್ಯಂತ ಸುಂದರನಾದವನೂ ಒಳ್ಳೆಯ ವಂಶದಲ್ಲಿ ಹುಟ್ಟಿರುವ ಒಳ್ಳೆಯ ಹುಡುಗನಿಗೆ ಮನತುಂಬಿ ಮದುವೆಮಾಡಿಕೊಡಬೇಕು.
(ಹೆತ್ತವರು ಹಾಗೂ ಕುಟುಂಬದ ಹಿರಿಯರು ಹೆಣ್ಣುಮಕ್ಕಳನ್ನು ಮದುವೆಮಾಡಿ ಕೊಡುವಾಗ ಗಮನಿಸಬೇಕಾದ ಅಥವಾ ಪರಿಶೀಲಿಸಬೇಕಾದ ವಿಷಯಗಳನ್ನು ಈ ಪದ್ಯದಲ್ಲಿ ಹೊನ್ನಮ್ಮ ವಿವರಿಸಿದ್ದಾಳೆ. ಹೆಣ್ಣುಮಕ್ಕಳನ್ನು ಹೆತ್ತು, ಸಾಕುವುದು ಮಾತ್ರವಲ್ಲ ಅವರು ಪ್ರಾಯಪ್ರಬುದ್ಧರಾದಾಗ ಒಳ್ಳೆಯ ಹುಡುಗನಿಗೆ ಮದುವೆಮಾಡಿಕೊಡುವುದೂ ಹೆತ್ತವರ, ಹಿರಿಯರ ಕರ್ತವ್ಯ. ಸಂಚಿಯ ಹೊನ್ನಮ್ಮನ ಪ್ರಕಾರ, ಹುಡುಗ ಒಳ್ಳೆಯ ಗುಣವಂತನೂ, ಒಳ್ಳೆಯ ನಡತೆಯುಳ್ಳವನೂ ಚೆಲುವನೂ ಆಗಿರಬೇಕು. ಮೇಲಾಗಿ ಒಳ್ಳೆಯ ವಂಶದಲ್ಲಿ ಹುಟ್ಟಿ ಬೆಳೆದಿರಬೇಕು. ಗುಣವಿಲ್ಲದ, ಒಳ್ಳೆಯ ನಡತೆಯಿಲ್ಲದ, ಸುಂದರವಾದ ರೂಪವಿಲ್ಲದ ಹುಡುಗನಿಗೆ ಮದುವೆಮಾಡಿಕೊಡುವುದು ಹುಡುಗಿಯ ಭವಿಷ್ಯದ ದೃಷ್ಟಿಯಿಂದ ಹಾಗೂ ಆಕೆಯ ಬದುಕಿನ ಸುಖ, ಸಂತೋಷಗಳ ದೃಷ್ಟಿಯಿಂದ ಹಿತವಲ್ಲ ಎಂಬುದು ಹೊನ್ನಮ್ಮನ ಅಭಿಪ್ರಾಯ. ಮದುವೆ್ಮಾಡಿ ಕೊಡುವಾಗಲೂ ಹುಡುಗಿ ತೃಪ್ತಿಪಡುವಂತೆ, ಮನತುಂಬಿ ಮದುವೆಮಾಡಿಕೊಡಬೇಕು. ಮದುವೆ ವಿಜೃಂಭಣೆಯಿಂದ ಅಲ್ಲದಿದ್ದರೂ ಹುಡುಗಿಗೆ ತೃಪ್ತಿಯಾಗುವಂತೆ, ಅವಳ ಮನಸ್ಸು ಮೆಚ್ಚುವಂತಿರಬೇಕು ಎಂಬುದು ಹೊನ್ನಮ್ಮನ ನಿಲುವು.)
ಅಲೆಗೆಯ್ಯದವಮತಿಯೆಸಗದ ವೈರವ
ಬಲಿಸದ ಬರಿದೆ ಪಳಿಯದ
ಕೊಲೆ ಬೈಗಳಿಂದ ಕೋಟಲೆಗೊಳಿಸದ ಸ
ತ್ಕುಲಕ್ಕೀವುದು ಕುವರಿಯನು ೧೪
(ಅಲೆಗೆಯ್ಯದ, ಅವಮತಿ ಎಸಗದ, ವೈರವ ಬಲಿಸದ, ಬರಿದೆ ಪಳಿಯದ, ಕೊಲೆ ಬೈಗಳಿಂದ ಕೋಟಲೆಗೊಳಿಸದ ಸತ್ಕುಲಕ್ಕೆ ಕುವರಿಯನು ಈವುದು)
ಹೆಣ್ಣುಮಕ್ಕಳಿಗೆ ಮದುವೆಮಾಡಿಕೊಡುವಾಗ ಹುಡುಗನ ಕುಲವನ್ನೂ ಪರಿಶೀಲಿಸಬೇಕು. ಹೆಣ್ಣನ್ನು ಹಿಂಸೆಗೆ ಒಳಪಡಿಸದ, ಅವಮಾನಿಸದ, ವೈರತ್ವವನ್ನು ಬೆಳೆಸದ, ವಿನಾ ಕಾರಣ ನಿಂದಿಸದ, ಕೊಲೆ, ಬೈಗುಳಗಳಿಂದ ತೊಂದರೆಗೆ ಒಳಪಡಿಸದ ಒಳ್ಳೆಯ ಕುಲಕ್ಕೆ ಹೆಣ್ಣುಮಗಳನ್ನು ಮದುವೆಮಾಡಿಕೊಡಬೇಕು.
(ಹೆಣ್ಣುಮಕ್ಕಳ ಮದುವೆಯ ಸಂದರ್ಭದಲ್ಲಿ ಹುಡುಗನ ಮನೆತನ, ಹುಡುಗನ ಹೆತ್ತವರ ಹಾಗೂ ಅವರ ಗುಣಸ್ವಭಾವಗಲ ಬಗ್ಗೆಯೂ ಕೂಲಂಕಷವಾಗಿ ಪರಿಶೀಲಿಸಬೇಕೆಂಬುದನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಯಲ್ಲಿ ಚೆನ್ನಾಗಿ ಸಂತೋಷದಿಂದ ಬಾಳಬೇಕು ಎಂದಾದರೆ ಕೇವಲ ಮದುವೆಮಾಡಿಕೊಳ್ಳುವ ಹುಡುಗನ ಗುಣನಡತೆ ಮಾತ್ರ ಮುಖ್ಯವಾಗುವುದಿಲ್ಲ. ಅದರೊಂದಿಗೆ ಹುಡುಗನ ಮನೆತನ ಹಾಗೂ ಅದರ ಘನತೆ, ಗೌರವಗಳೂ ಮುಖ್ಯವೆನಿಸುತ್ತವೆ. ಹುಡುಗ ಚೆಲುವನಾಗಿದ್ದು, ಮನೆತನ ಚೆನ್ನಾಗಿಲ್ಲ ಎಂದಾದರೆ ಏನು ಪ್ರಯೋಜನ? ಹಾಗೆಯೇ ಮನೆತನ ಚೆನ್ನಾಗಿದ್ದು, ಹುಡುಗ ಚೆಲುವನಾಗಿಲ್ಲ ಎಂದಾದರೆ ಏನು ಪ್ರಯೋಜನ? ಮಗಳ ನೆಮ್ಮದಿಯು ಗಂಡನ ಮನೆಯ ಒಳಿತನ್ನು ನಂಬಿಕೊಂಡಿರುವಾಗ ಅದಕ್ಕೆ ಪೂರಕವಾದ ವಾತಾವರಣ ಅಲ್ಲಿ ಇರಬೇಕಾಗುತ್ತದೆ. ಸೊಸೆಯ ಮೇಲೆ ಪ್ರೀತಿ, ವಾತ್ಸಲ್ಯ, ಮಮತೆಯನ್ನು ತೋರಿ ಮನೆಮಗಳಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ಸೊಸೆಯನ್ನು ಹೆಜ್ಜೆಹೆಜ್ಜೆಗೂ ದೈಹಿಕವಾಗಿ ಅಥವಾ ಮಾನಸಿಕವಾಗಿ ಹಿಂಸೆಗೆ ಒಳಪಡಿಸುವ, ಅವಮಾನಿಸುವ, ವೈರಿಯೆಂತೆ ನೋಡುವ, ಅನಗತ್ಯವಾಗಿ ನಿಂದಿಸುವ, ಕೊಲೆಮಾಡಲೂ ಹೇಸದ, ಬೈಗುಳಗಳಿಂದ ತೊಂದರೆ ಪಡಿಸುವ ಮನೆತನವೆಂದಾದರೆ ಅಂತಹ ಮನೆಯಲ್ಲಿ ಹೆಣ್ಣುಮಗಳು ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ ಎಂಬುದು ಹೊನ್ನಮ್ಮನ ಅಭಿಪ್ರಾಯ.)
ಪಣದಾಸೆ ನಂಟುತನದ ಪತ್ತುಗೆ ನೇಹ
ದೆಣಿಕೆಗಳಿಂದೆದೆಗರಗಿ
ಗುಣ ಜವ್ವನ ಕುಲ ರೂಪುಗುಂದಿದ ನಡೆ
ವೆಣಕೀಯಲಾಗದು ಪೆಣ್ಣ. ೧೫
(ಪಣದಾಸೆ, ನಂಟುತನ, ಪತ್ತುಗೆ, ನೇಹದ ಎಣಿಕೆಗಳಿಂದ ಎದೆ ಕರಗಿ ಗುಣ, ಜವ್ವನ ಕುಲ, ರೂಪು ಕುಂದಿದ ನಡೆವೆಣಕೆ ಪೆಣ್ಣ ಈಯಲಾಗದು)
ಹೆಣ್ಣನ್ನು ಮದುವೆ ಮಾಡಿಕೊಡುವಾಗ ಹಣದಾಸೆಗೆ, ನೆಂಟಸ್ತಿಕೆಯ ಸಂಬಂಧಕ್ಕೆ, ಸ್ನೇಹದ ಲೆಕ್ಕಾಚಾರಗಳಿಗೆ ಹೆತ್ತವರು ತಮ್ಮ ಮನಸ್ಸನ್ನು ಬಲಿಕೊಟ್ಟು ಗುಣವಿಲ್ಲದ, ಯೌವನವಿಲ್ಲದ, ಕುಲಮರ್ಯಾದೆ ಇಲ್ಲದ, ರೂಪವಿಲ್ಲದ, ನಡೆದಾಡುವ ಹೆಣದಂತಿರುವ ವ್ಯಕ್ತಿಗೆ ಹೆಣ್ಣನ್ನು ಮದುವೆಮಾಡಿ ಕೊಡಬಾರದು.
(ಮದುವೆಯ ಸಂದರ್ಭದಲ್ಲಿನ ಹೆತ್ತವರ ಕೆಲವು ಲೆಕ್ಕಾಚಾರಗಳು ಹೆಣ್ಣಿನ ಬದುಕನ್ನು ಹಾಳು ಮಾಡಬಹುದು ಎಂಬುದನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಹೆಣ್ಣನ್ನು ಮದುವೆಮಾಡಿ ಕೊಡುವಾಗ ಹಲವು ರೀತಿಯ ಲೆಕ್ಕಾಚಾರಗಳು ಅಗತ್ಯ. ಆದರೆ ಈ ಲೆಕ್ಕಾಚಾರಗಳು ಹುಡುಗಿಯ ಬದುಕಿಗೆ ಪೂರಕವಾಗಿರಬೇಕೆಂಬುದು ಹೊನ್ನಮ್ಮನ ಅಭಿಪ್ರಾಯ. ಎಷ್ಟೋ ಸಂದರ್ಭಗಳಲ್ಲಿ ಹೆಣ್ಣು ಹೆತ್ತವರು ಹುಡುಗನಲ್ಲಿರುವ ಹಣದಾಸೆಗೆ, ನೆಂಟಸ್ತಿಕೆಯ ಸಂಬಂಧಕ್ಕೆ, ಸ್ನೇಹದ ಲೆಕ್ಕಾಚಾರಗಳಿಗೆ ಬಲಿಯಾಗುತ್ತಾರೆ. ಹುಡುಗನಲ್ಲಿ ಸಾಕಷ್ಟು ಆಸ್ತಿ ಇದೆ ಎಂದೋ, ಹಣವಿದೆ ಎಂದೋ, ತಮ್ಮ ಸ್ನೇಹ ಮುಂದುವರಿಯುತ್ತದೆ ಎಂದೋ ಲೆಕ್ಕಾಚಾರ ಮಾಡಿ ಮಗಳನ್ನು ಮದುವೆಮಾಡಿಕೊಡಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ತಮ್ಮ ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗದು ಎಂಬುದನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕು. ಮಗಳನ್ನು ಮದುವೆಮಾಡಿ ಕೊಟ್ಟಮೇಲೆ ಆಕೆ ಗಂಡನೊಂದಿಗೆ ನೆಮ್ಮದಿಯಿಂದ, ಹೆಮ್ಮೆಯಿಂದ, ಸಂತೋಷದಿಂದ ಬಾಳಲು ಅವಕಾಶ ಕಲ್ಪಿಸಿಕೊಡಬೇಕು. ಆದರೆ, ಒಳ್ಳೆಯ ಗುಣವಿಲ್ಲದ, ಯೌವನವೂ ಇಲ್ಲದ, ಕುಲಮರ್ಯಾದೆಗಳಿಲ್ಲದ, ನೋಡುವುದಕ್ಕೆ ಚೆನ್ನಾಗಿಲ್ಲದ, ಯಾವ ಜೀವಕಳೆಯೂ ಇಲ್ಲದೆ ನಡೆದಾಡುವ ಹೆಣದಂತಿರುವ ವ್ಯಕ್ತಿಗೆ ಮಗಳನ್ನು ಮದುವೆಮಾಡಿಕೊಟ್ಟರೆ ಆಕೆ ಅಂತಹ ವ್ಯಕ್ತಿಯೊಂದಿಗೆ ಹೇಗೆ ಬದುಕಿಯಾಳು? ಏನು ಸಂತೋಷಪಟ್ಟಾಳು? ಜೀವಮಾನವಿಡೀ ಅವಮಾನದಲ್ಲಿಯೇ ಬಾಳಬೇಕಾಗುತ್ತದೆ. ಹಾಗಾಗಿ ಇಂತಹ ಅಸಹಜ ದಾಂಪತ್ಯಕ್ಕೆ ಅವಕಾಶ ಕಲ್ಪಿಸಬಾರದು ಎಂಬುದು ಹೊನ್ನಮ್ಮನ ಅಭಿಪ್ರಾಯ.)
ಬಾಳಿ ಬದುಕಿ ತಣಿವಿಲ್ಲದ ತಮ್ಮಂತೆ
ಬಾಳಲೆಳಸುವ ಬಾಲಕಿಯ
ಬೀಳುಗುವರನಿಗೆ ಬೆಲೆಗೈದರೆಂಬುದ
ಕೇಳಿ ಕಿವಿಯ ಮುಚ್ಚುವುದು ೧೬
(ಬಾಳಿ ಬದುಕಿ ತಣಿವಿಲ್ಲದ ತಮ್ಮಂತೆ ಬಾಳಲ್ ಎಳಸುವ ಬಾಲಕಿಯ ಬೀಳು ಕುವರನಿಗೆ ಬೆಲೆಗೈದರ್ ಎಂಬುದ ಕೇಳಿ ಕಿವಿಯ ಮುಚ್ಚುವುದು)
ತಂದೆ-ತಾಯಂದಿರ ಬದುಕನ್ನು, ಅವರ ಮನೆನಿರ್ವಹಣೆಯ ರೀತಿಯನ್ನು ನೋಡಿ, ಅವರಂತೆಯೇ ತಾನೂ ಬಾಳಬೇಕೆಂದು ಬಯಸುವ ಹುಣ್ಣುಮಕ್ಕಳನ್ನು ಮನೆಯ ಜವಾಬ್ದಾರಿ ಇಲ್ಲದ ಅಯೋಗ್ಯನಾದ ಹುಡುಗನಿಗೆ ಹೆಣ್ಣುಹೆತ್ತವರು ದುಡ್ಡಿನಾಸೆಗಾಗಿ ಕನ್ಯಾಶುಲ್ಕವನ್ನು(ವಧುದಕ್ಷಿಣೆ) ಪಡೆದು ಮದುವೆಮಾಡಿಕೊಟ್ಟ ಸುದ್ಧಿಯನ್ನು ಕೇಳಲೇಬಾರದು.
(ಹೆಣ್ಣುಹೆತ್ತವರು ತಮ್ಮ ಮಗಳ ಮದುವೆಯ ಸಂದರ್ಭದಲ್ಲಿ ದುಡ್ಡಿನಾಸೆಗೆ ಬಲಿಯಾಗುವ ಪ್ರಸಂಗವೊಂದನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಹೆಣ್ಣುಮಕ್ಕಳು ತಾವು ಮದುವೆಯ ಹಂತಕ್ಕೆ ಬರುವಲ್ಲಿಯವರೆಗೆ ತಮ್ಮ ತಂದೆ-ತಾಯಿಗಳು ದುಡಿಯುವ ಕ್ರಮವನ್ನು, ಮನೆಯನ್ನು ನಿರ್ವಹಿಸುವ ರೀತಿಯನ್ನು, ಮನೆಮಂದಿಯೊಂದಿಗಿನ ಹೊಂದಾಣಿಕೆಯನ್ನು ನೋಡಿಕೊಂಡು ಬೆಳೆದು, ಹೆತ್ತವರಿಂದ ಬದುಕಿನ ಇತಿಮಿತಿ, ಬದುಕಿನ ಸಾಂಘಿಕತೆಗಳನ್ನು ಅರಿತುಕೊಂಡು ತಾವೂ ಅವರಂತೆಯೇ ಬಾಳಬೇಕು ಎಂದು ಬಯಸುತ್ತಾರೆ. ಅಂತಹ ಹೆಣ್ಣುಮಕ್ಕಳನ್ನು ಹೆತ್ತವರು ಯೋಗ್ಯನಾದ ಹುಡುಗನಿಗೆ ಮದುವೆಮಾಡಿಕೊಡಬೇಕು. ಹಾಗೆ ಮಾಡದೆ ಹೆಂಡತಿಯನ್ನು ಬಾಳಿಸುವ, ಚೆನ್ನಾಗಿ ನಡೆಸಿಕೊಳ್ಳುವ ಯೋಗ್ಯತೆ ಇಲ್ಲದ, ಸಂಸಾರದ ಬಗ್ಗೆ ಯಾವ ಕಾಳಜಿಯೂ ಇಲ್ಲದ ಅಯೋಗ್ಯ ಹುಡುಗನಿಗೆ, ದುಡ್ಡಿನಾಸೆಗಾಗಿ ಅವನು ಕೊಡುವ ಕನ್ಯಾಶುಲ್ಕಕ್ಕೆ ಆಸೆಪಟ್ಟುಕೊಂಡು ಮದುವೆಮಾಡಿಕೊಡುವುದು, ಆ ಮೂಲಕ ತಮ್ಮ ಮಗಳ ಭವಿಷ್ಯವನ್ನು ಹಾಳುಗೆಡಹುವುದು ಸಮಾಜಘಾತುಕವಾದ ವಿಚಾರಗಳು. ಇಂತಹ ವಿಚಾರಗಳನ್ನು ಕೇಳಿಸಿಕೊಳ್ಳುವುದಕ್ಕೆ ಯಾರೊಬ್ಬರೂ ಪ್ರಯತ್ನಿಸಬಾರದು. ಇದು ಒಂದು ಆರೋಗ್ಯಪೂರ್ಣ ಕುಟುಂಬವ್ಯವಸ್ಥೆಯಲ್ಲಿ ಹಿತವೆನಿಸುವ ವಿಚಾರವಲ್ಲ ಎಂಬುದು ಹೊನ್ನಮ್ಮನ ನಿಲುವು. ಆಕೆ ಕೇವಲ ಅಯೋಗ್ಯ ಹುಡುಗರನ್ನು ಮಾತ್ರ ಖಂಡಿಸದೆ, ಹೆತ್ತವರ ಅಯೋಗ್ಯತನವನ್ನೂ ಆಸೆಬುರುಕುತನವನ್ನೂ ಖಂಡಿಸುತ್ತಾಳೆ. ಈ ಪ್ರವೃತ್ತಿ ಎರಡೂ ಕುಟುಂಬಗಳ ನೆಮ್ಮದಿಯನ್ನೂ ಕಳೆಯುತ್ತದೆ ಎಂಬುದು ಅವಳ ಅಭಿಪ್ರಾಯ.)
ತನ್ನ ಮನೆಯೊಳುಂಡು ತವರುಮನೆಯ ಸಂ
ಪನ್ನವಕ್ಕೆಂಬ ಪೆಣ್ಗಳಿಗೆ
ಪೊನ್ನ ತೊಡಿಗೆ ಪೊಸದುಗುಲಂಗಳನಿತ್ತು
ಮನ್ನಿಸುವುದು ಮನವರಿತು. ೧೭
(ತನ್ನ ಮನೆಯೊಳು ಉಂಡು, ತವರುಮನೆಯ ಸಂಪನ್ನವು ಅಕ್ಕೆ ಎಂಬ ಪೆಣ್ಗಳಿಗೆ ಪೊನ್ನ ತೊಡಿಗೆ ಪೊಸ ದುಗುಲಂಗಳನ್ ಇತ್ತು ಮನವರಿತು ಮನ್ನಿಸುವುದು)
ಗಂಡನ ಮನೆಯಲ್ಲಿ ನೆಮ್ಮದಿಯಿಂದ ಸಂಸಾರಮಾಡುತ್ತಿರುವ ಹೆಣ್ಣುಮಕ್ಕಳು ತಮ್ಮ ಮನೆಯ ಹಾಗೆಯೇ ತವರು ಮನೆಯ ಸಂಪತ್ತೂ ವೃದ್ಧಿಹೊಂದಲಿ ಎಂದು ಬಯಸುವ, ತವರುಮನೆಗೆ ಒಳಿತನ್ನೇ ಹಾರೈಸುತ್ತಾರೆ. ಅಂತಹ ಹೆಣ್ಣುಮಕ್ಕಳಿಗೆ ಹೆತ್ತವರು ಚಿನ್ನದ ತೊಡಿಗೆ, ಹೊಸ ರೇಷ್ಮೆವಸ್ತ್ರಗಳನ್ನು ಮನಃಪೂರ್ವಕವಾಗಿ ಕೊಟ್ಟು ಮನ್ನಿಸಬೇಕು.
(ತವರುಮನೆ ಹಾಗೂ ಗಂಡನಮನೆ ಇವೆರಡರ ಏಳಿಗೆಯನ್ನು ಬಯಸುವ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕೆಂಬುದನ್ನು ಹೊನ್ನಮ್ಮ ಈ ಪದ್ಯದಲ್ಲಿ ಸ್ಪಷ್ಟಪಡಿಸಿದ್ದಾಳೆ. ಮದುವೆಯಾಗುವವರೆಗೂ ತವರುಮನೆಯ ಸ್ತಿತಿಗತಿಗಳನ್ನು ಅರಿತ ಹೆಣ್ಣುಮಕ್ಕಳು ಮದುವೆಯಾದ ಮೇಲೆ ಗಂಡನಮನೆಯಲ್ಲಿ ನೆಲೆಸಿ ತನ್ನ ಮನೆ ಸದಾ ಏಳಿಗೆಯನ್ನು ಹೊಂದಬೇಕೆಂದು ಬಯಸುವುದು ಸಹಜ. ಹಾಗೆಯೇ ಎಷ್ಟೋ ಹೆಣ್ಣುಮಕ್ಕಳು ತನ್ನ ಮನೆ ಚೆನ್ನಾಗಿರಬೇಕೆಂದು ಬಯಸುವುದರ ಜೊತೆಗೆ ತಾನು ಹುಟ್ಟಿ ಬೆಳೆದ, ತನಗೆ ಬದುಕುವುದನ್ನು ಹೇಳಿಕೊಟ್ಟ, ಯೋಗ್ಯ ಹುಡುಗನಿಗೆ ಮದುವೆಮಾಡಿ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ಅವಕಾಶಕೊಟ್ಟ ಹೆತ್ತವರಿಗೆ, ತವರುಮನೆಗೆ ಒಳಿತನ್ನು ಹಾರೈಸುತ್ತಾರೆ. ಅಂತಹ ಹೆಣ್ಣುಮಕ್ಕಳು ತಮ್ಮ ಮನೆ ಬೆಳಗಬೇಕೆಂದು ಬಯಸುವ ಜೊತೆಗೆ ತಮ್ಮ ತವರುಮನೆಯೂ ಬೆಳಗಬೇಕೆಂದು ಬಯಸುತ್ತಾರೆ. ಇಂತಹ ಮನೋಭಾವ ಬಹಳ ಮಂದಿ ಹೆಣ್ಣುಮಕ್ಕಳಲ್ಲಿ ಇರುವುದಿಲ್ಲ. ಇಂತಹ ಹೆಣ್ಣುಮಕ್ಕಳಿಗೆ ಚಿನ್ನ, ರೇಷ್ಮೆವಸ್ತ್ರ ಮೊದಲಾದ ವಸ್ತುಗಳನ್ನು ಮನಃಪೂರ್ವಕವಾಗಿ ಉಡುಗೊರೆಯಾಗಿ ಕೊಟ್ಟು ಮನ್ನಿಸಬೇಕಾದುದು ಹೆತ್ತವರ ಕರ್ತವ್ಯ ಎಂಬುದನ್ನು ಹೊನ್ನಮ್ಮ ಸ್ಪಷ್ಟಪಡಿಸುತ್ತಾಳೆ.)
ತನ್ನ ತವರುಮನೆಯವರಿತ್ತ ಪಿತ್ತಳೆ
ಪೊನ್ನೆಂದು ಬಗೆದು ಪೂಜಿಸುವ
ಕನ್ನೆಯರೊಳು ಕಡುಗೂರ್ಮೆಯನೊಡರಿಸಿ
ಪೊನ್ನು ರನ್ನದೊಳು ಪೂಜುವುದು ೧೮
(ತನ್ನ ತವರುಮನೆಯವರು ಇತ್ತ ಪಿತ್ತಳೆ ಪೊನ್ನೆಂದು ಬಗೆದು ಪೂಜಿಸುವ ಕನ್ನೆಯರೊಳು ಕಡು ಕೂರ್ಮೆಯನ್ ಒಡರಿಸಿ ಪೊನ್ನು ರನ್ನದೊಳು ಪೂಜುವುದು)
ಗಂಡನ ಮನೆಗೆ ಹೋಗುವಾಗ, ಅಥವಾ ಅನಂತರದ ಕಾಲದಲ್ಲಿ ತನ್ನ ತವರುಮನೆಯವರು ಉಡುಗೊರೆಯಾಗಿ ನೀಡಿದ ಹಿತ್ತಾಳೆಯನ್ನೇ ಚಿನ್ನವೆಂದು ತಿಳಿದುಕೊಂಡು ಗೌರವಿಸುವ ಹೆಣ್ಣುಮಕ್ಕಳ ಮೇಲೆ ಹೆತ್ತವರು ಅಧಿಕ ಪ್ರಿತಿಯನ್ನು ತೋರಿಸಿ ಆಕೆಯನ್ನು ಚಿನ್ನ, ರನ್ನಗಳಿಂದ ಗೌರವಿಸಬೇಕು.
(ಹೆಣ್ಣುಮಕ್ಕಳಿಗೆ ಉಡುಗೊರೆ ಕೊಡುವ, ಅಥವಾ ಹೆತ್ತವರಿಂದ ಉಡುಗೊರೆಗಳನ್ನು ಸ್ವೀಕರಿಸುವ ಸಂದರ್ಭಗಳಲ್ಲಿ ಗಮನಿಸಬೇಕಾದ ಕೆಲವು ವಿಚಾರಗಳನ್ನು ಹೊನ್ನಮ್ಮ ವಿವರಿಸಿದ್ದಾಳೆ. ತವರುಮನೆಯವರು ಮದುವೆಯಾಗಿ ಗಂಡನ ಮನೆಗೆ ಹೊರಡುವ ಸಂದರ್ಭದಲ್ಲಿ ಮತ್ತು ಹೋದ ಅನಂತರವೂ ಬೇರೆಬೇರೆ ಸಂದರ್ಭಗಳಲ್ಲಿ ಹೆಣ್ಣುಮಕ್ಕಳಿಗೆ ಉಡುಗೊರೆಗಳನ್ನು ಕೊಡುವುದು ಪರಿಪಾಠ. ಹಾಗೇ ನೀಡಿದ ಉಡುಗೊರೆಗಳ ಹಿಂದೆ ಹೆತ್ತವರ, ಒಡಹುಟ್ಟಿದವರ, ತವರಿನ ಹಿರಿಯರ ಪ್ರೀತಿ, ವಿಶ್ವಾಸ, ಅಭಿಮಾನಗಳಿರುತ್ತವೆ. ಹೆಣ್ಣುಮಕ್ಕಳು ಹೆತ್ತವರು ಕೊಡುವ ಅಂತಹ ಉಡುಗೊರೆಗಳಿಗೆ ಬೆಲೆಕಟ್ಟುವ ಕೆಲಸ ಮಾಡಬಾರದು. ಅವರು ಉಡುಗೊರೆಯಾಗಿ ನೀಡಿದ್ದು ಹಿತ್ತಾಳೆಯೇ ಅದರೂ ಅದರ ಹಿಂದೆ ಹೆತ್ತವರ ಪ್ರೀತಿ, ವಾತ್ಸಲ್ಯಗಳಿರುತ್ತವೆ. ಅಲ್ಲದೆ, ಹೆತ್ತವರು ತಮ್ಮ ಯೋಗ್ಯತಾನುಸಾರ ಅದನ್ನು ನೀಡಿರುವಾಗ ಅದಕ್ಕೆ ಹಣದ ರೂಪದಲ್ಲಾಗಲೀ ಮೌಲ್ಯದ ರೂಪದಲ್ಲಾಗಲೀ ಬೆಲೆಕಟ್ಟಲಾಗದು. ಎಷ್ಟೋ ಹೆಣ್ಣುಮಕ್ಕಳು ಅಂತಹ ಹಿತ್ತಾಳೆಯನ್ನೇ ಚಿನ್ನವೆಂದು ಭಾವಿಸಿ ಗೌರವಿಸುತ್ತಾರೆ. ಹೀಗೆ ಭಾವಿಸಿ ಗೌರವಿಸುವ ಹೆಣ್ಣುಮಕ್ಕಳ ಮೇಲೆ ಹೆತ್ತವರು, ಹಿರಿಯರು ಅಧಿಕ ಪ್ರೀತಿ, ವಿಶ್ವಾಸಗಳನ್ನು ತೋರಿಸಿ, ಚಿನ್ನ, ರನ್ನಗಳಿಂದ ಗೌರವಿಸಬೇಕೆಂದು ಹೊನ್ನಮ್ಮ ಸ್ಪಷ್ಟಪಡಿಸುತ್ತಾಳೆ.)
ಬೇಡಿ ಬೇಡಿದ ವಸ್ತುವ ಪೆಣ್ಮಗುವಿಗೆ
ನೀಡುವ ನೇಮಗಾರರಿಗೆ
ಷೋಡಶದಾನದ ಫಲ ಸುಲಭದೊಳು ಕೈ
ಗೂಡುವುದೆಂಬರುತ್ತಮರು ೧೯
(ಉತ್ತಮರು, ಬೇಡಿ ಬೇಡಿದ ವಸ್ತುವ ಪೆಣ್ಮಗುವಿಗೆ ನೀಡುವ ನೇಮಗಾರರಿಗೆ ಷೋಡಶದಾನದ ಫಲ ಸುಲಭದೊಳು ಕೈಗೂಡುವುದು ಎಂಬರ್.)
ಹಿರಿಯರ ಹಾಗೂ ಉತ್ತಮರ ಪ್ರಕಾರ, ಹೆಣ್ಣುಮಕ್ಕಳು ಆಸೆಯಿಂದ ಬೇಡುವ ವಸ್ತುಗಳನ್ನು ಮನಸಾ ನೀಡುವ, ಸಾಂಸಾರಿಕ ಹಾಗೂ ಕೌಟುಂಬಿಕ ಸ್ಥಿತಿಗತಿಗಳನ್ನು ಬಲ್ಲವರಿಗೆ (ತಂದೆ-ತಾಯಿಗಳು, ಮನೆಯ ಹಿರಿಯರು) ಹದಿನಾರು ಬಗೆಯ ದಾನಗಳನ್ನು ನೀಡುವುದರಿಂದ ದೊರೆಯುವ ಫಲ ಸುಲಭವಾಗಿ, ನಿರಾಯಾಸವಾಗಿ ದೊರೆಯುತ್ತದೆ.
(ಹೆಣ್ಣುಮಕ್ಕಳಿಗೆ ಕೊಡುವ ಉಡುಗೊರೆಗಳ ಮಹತ್ವ ಹಾಗೂ ಅದರಿಂದ ಒದಗುವ ಫಲಗಳನ್ನು ಹೊನ್ನಮ್ಮ ಈ ಪದ್ಯದಲ್ಲಿ ವಿವರಿಸಿದ್ದಾಳೆ. ಹೆಣ್ಣುಮಕ್ಕಳನ್ನು ಮದುವೆಮಾಡಿ ಕೊಡುವ ಸಂದರ್ಭದಲ್ಲಿ ಅವರು ಬಯಸುವ ವಸ್ತುಗಳನ್ನು ಉಡುಗೊರೆಯ ರೂಪದಲ್ಲಿ ಕೊಡುವುದು ಒಂದು ಪರಿಪಾಠ. ಇನ್ನೆಷ್ಟೋ ಸಂದರ್ಭಗಳಲ್ಲಿ ಕೆಲವು ಹೆಣ್ಣುಮಕ್ಕಳು ತಮಗಿಷ್ಟದ ವಸ್ತುಗಳನ್ನು ಬೇಡಬಹುದು. ಹಾಗೆ ಬೇಡಿದಾಗ ಹಿರಿಯರು, ಹೆತ್ತವರು, ಒಡಹುಟ್ಟಿದವರು ಅವುಗಳನ್ನು ಮನಃಪೂರ್ವಕವಾಗಿ ನೀಡಿ ಹೆಣ್ಣುಮಕ್ಕಳ ಮನಸ್ಸನ್ನು ತೃಪ್ತಿಪಡಿಸುವುದು ಒಂದು ಕರ್ತವ್ಯ ಎನಿಸಿಕೊಳ್ಳುತ್ತದೆ. ತಾವು ತಮ್ಮ ಹೆಣ್ಣುಮಕ್ಕಳನ್ನು ಮದುವೆಮಾಡಿ ಕೊಡುವ ಕುಟುಂಬದ ಸ್ಥಿತಿಗತಿಗಳನ್ನು ಬಲ್ಲವರಿಗೆ, ಅಥವಾ ತಮ್ಮದೇ ಕುಟುಂಬದ ಸ್ಥಿತಿಗತಿಗಳನ್ನು ಬಲ್ಲವರಿಗೆ ತಮ್ಮ ಹೆಣ್ಣುಮಕ್ಕಳು ಮದುವೆಯಾದ ಮೇಲೂ ಅವರಿಗೆ ಸಹಾಯ, ಸಹಕಾರ ನೀಡಿ ಕುಟುಂಬಕ್ಕೆ ಆಧಾರವಾಗಿರಬೇಕು ಅನ್ನಿಸುತ್ತದೆ. ಇಂತಹ ಹಿರಿಯರಿಗೆ,ಅಥವಾ ಹೆತ್ತವರಿಗೆ ತಾವು ನೀಡುವ ಉಡುಗೊರೆಗಳಿಂದಾಗಿ ಹದಿನಾರು ಬಗೆಯ ದಾನಗಳನ್ನು ನೀಡುವುದರಿಂದ ಸಿಗುವ ಫಲಗಳು ದೊರೆಯುತ್ತವೆ. ಅಂದರೆ ಹದಿನಾರು ಬಗೆಯ ದಾನಗಳು ಹೆಣ್ಣುಮಕ್ಕಳಿಗೆ ನೀಡುವ ಒಂದೆರಡು ಉಡುಗೊರೆಗಳಿಗೆ ಸಮಾನವಾಗುತ್ತವೆ ಎಂಬುದು ಹೊನ್ನಮ್ಮನ ಅಭಿಪ್ರಾಯ.)
ಅಣ್ಣತಮ್ಮಂದಿರನಿಬರೊಡವುಟ್ಟಿದ
ಪೆಣ್ಣನು ಪೆರ್ಮೆಗೊಳಿಸಿ
ಬಣ್ಣಬಂಗಾರವ ಬಗೆ ಬಗೆಯಿಂದಿತ್ತು
ತಣ್ಣನೆ ತಣಿಸಿ ಬಾಳುವುದು. ೨೦
(ಅಣ್ಣ, ತಮ್ಮಂದಿರ್ ಅನಿಬರ ಒಡನೆ ಹುಟ್ಟಿದ ಪೆಣ್ಣನು ಪೆರ್ಮೆಗೊಳಿಸಿ ಬಣ್ಣ ಬಂಗಾರವ ಬಗೆ ಬಗೆಯಿಂದ ಇತ್ತು ತಣ್ಣನೆ ತಣಿಸಿ ಬಾಳುವುದು)
ಅಣ್ಣ, ತಮ್ಮಂದಿರು ತಮ್ಮೊಂದಿಗೆ ಹುಟ್ಟಿರುವ ಹೆಣ್ಣುಮಕ್ಕಳನ್ನು ಕೀಳಾಗಿ ಭಾವಿಸದೆ, ಹೆಮ್ಮೆಪಟ್ಟುಕೊಳ್ಳುವಂತೆ ಬಣ್ಣಬಣ್ಣದ ವಸ್ತ್ರಗಳನ್ನು, ಹೆಣ್ಣುಮಕ್ಕಳು ವಿವಿಧ ರೂಪಗಳಲ್ಲಿ ಬಯಸುವ ಬಂಗಾರವನ್ಜು ಉಡುಗೊರೆಯಾಗಿ ಕೊಟ್ಟು ಅವರ ಮನಸ್ಸನ್ನು ಸಂತುಷ್ಟಗೊಳಿಸಿ, ಅವರನ್ನೂ ಬಾಳಿಸಿ, ತಾವೂ ಬಾಳಬೇಕು.
(ಒಡಹುಟ್ಟಿದ ಅಣ್ಣ ತಮ್ಮಂದಿರು ತಮ್ಮ ಅಕ್ಕ, ತಂಗಿಯರನ್ನು ನೋಡಿಕೊಳ್ಳಬೇಕಾದ ರೀತಿನೀತಿಗಳನ್ನು ಹೊನ್ನಮ್ಮ ಈ ಪದ್ಯದಲ್ಲಿ ಹೇಳಿದ್ದಾಳೆ. ಹೆಣ್ಣುಮಗಳು ತವರುಮನೆಯಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿಯರೊಂದಿಗೆ ಹುಟ್ಟಿ ಬೆಳೆಯುತ್ತಾಳೆ. ಹೆತ್ತವರಂತೆಯೇ ಅಣ್ಣ, ತಮ್ಮಂದಿರಿಗೂ ಅಕ್ಕ, ತಂಗಿಯರ ಮೇಲಿನ ಜವಾಬ್ದಾರಿ ಇರುತ್ತದೆ. ಹೆತ್ತವರು ತಮ್ಮ ಮಗಳಿಗೆ ಉಡುಗೊರೆಗಳನ್ನು ಕೊಡುವಂತೆಯೇ ಅಣ್ಣ, ತಮ್ಮಂದಿರೂ ತಮ್ಮ ಅಕ್ಕ, ತಂಗಿಯರಿಗೆ ತಮ್ಮ ಯೋಗ್ಯತೆಗೆ ಅನುಗುಣವಾದ ಹಾಗೂ ಅಕ್ಕ, ತಂಗಿಯರಿಗೆ ಇಷ್ಟವಾದ ಉಡುಗೊರೆಗಳನ್ನು ನಿಷ್ಕಲ್ಮಷ ಮನಸ್ಸಿನಿಂದ ಕೊಟ್ಟು, ಅದರಿಂದ ಅಕ್ಕ, ತಂಗಿಯರು ಸಂಭ್ರಮಪಟ್ಟುಕೊಳ್ಳುವಂತೆ ಪ್ರಯತ್ನಿಸಬೇಕು. ಹೀಗೆ ಒಡಹುಟ್ಟಿದ ಅಣ್ಣ, ತಮ್ಮಂದಿರು ಉಡುಗೊರೆಗಳನ್ನು ನೀಡಿದಾಗ ಅಕ್ಕ, ತಂಗಿಯರಿಗೂ ತಮ್ಮ ಅಣ್ಣ, ತಮ್ಮಂದಿರ ಬಗ್ಗೆ ಪ್ರೀತಿ, ಒಲವು ಮುಂದುವರಿಯುತ್ತದೆ. ಅಲ್ಲದೆ, ಅಣ್ಣ, ತಮ್ಮಂದಿರಿಗೂ ತಮ್ಮ ಅಕ್ಕ, ತಂಗಿಯರ ಮೇಲೆ ಪ್ರೀತಿ, ವಿಶ್ವಾಸಗಳು ಮುಂದುವರಿಯುತ್ತವೆ. ಒಳ್ಳೆಯ ಬಾಂಧವ್ಯವೂ ಬೆಸೆಯುವಂತಾಗುತ್ತದೆ. ಇದರಿಂದ ಎರಡೂ ಕುಟುಂಬಗಳೂ ಪರಸ್ಪರ ಹೊಂದಾಣಿಕೆಯಿಂದ ಬಾಳುವುದಕ್ಕೆ ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ಒಂದು ಆರೋಗ್ಯಪೂರ್ಣ ಸಮಾಜವ್ಯವಸ್ಥೆ ರೂಢಿಯಾಗುತ್ತದೆ ಎಂಬುದು ಹೊನ್ನಮ್ಮನ ನಿಲುವು.)
***
ಅನುವಾದ ಮತ್ತು ವಿಮರ್ಶೆ ಸೊಗಸಾಗಿ ಮೂಡಿ ಬಂದಿದೆ.ವಿದ್ಶಾರ್ಥಿಗಳಿಗೆ ಬಹಳ ಉಪಯುಕ್ತ ಮಾಹಿತಿ ಇದೆ.ಧನ್ಶವಾದಗಳು ಸರ್.
ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.
ಸಮಾನಮನಸ್ಕ ಸ್ನೇಹಿತರಿಗೆ ಈ ಬ್ಲಾಗಿನ ಲಿಂಕನ್ನು ಶೇರ್ ಮಾಡಿ. 🙏