ಸಾಹಿತ್ಯಾನುಸಂಧಾನ

heading1

ಸಾಹಸಗರ್ವಾಲಂಕೃತ ಧಾರ್ತರಾಷ್ಟ್ರ

ಪಂಪನ ಅನಂತರದ ಕವಿಗಳಲ್ಲಿ ಕವಿಚಕ್ರವರ್ತಿ ರನ್ನ ಪಂಪನ ಎತ್ತರಕ್ಕೆ ಏರಬಲ್ಲ, ಅವನ ಆಳಕ್ಕೆ ಇಳಿಯಬಲ್ಲ ಶ್ರೇಷ್ಠಕವಿ. ರನ್ನನ “ಸಾಹಸಭೀಮವಿಜಯಂ” ಒಂದು ನಾಟಕೀಯ ಕಾವ್ಯವಾಗಿದ್ದು ಅದರಲ್ಲಿ ಅತ್ಯಂತ ಧ್ವನಿಪೂರ್ಣವಾದ, ರಸಾತ್ಮಕವಾದ ಹಲವು ಪದ್ಯಗಳು ಕಾಣಿಸಿಕೊಳ್ಳುತ್ತವೆ. ಇವು ಮತ್ತೆ ಮತ್ತೆ ಸಹೃದಯರ ಗಮನವನ್ನು ಸೆಳೆದು ರಸಾಸ್ವಾದನೆಗೆ ಕಾರಣವಾಗುತ್ತವೆ. ಈ ಕೆಳಗಿನದು ಅಂತಹ ಪದ್ಯಗಳಲ್ಲಿ ಒಂದು.

 

ರಸೆಯಿಂ ಕಾಲಾಗ್ನಿರುದ್ರಂ ಪೊಱಮಡುವವೊಲಂತಾ ಸರೋಮಧ್ಯದಿಂ ಸಾ

ಹಸಗರ್ವಾಲಂಕೃತಂ ತೊಟ್ಟನೆ ಕೊಳೆ ಪೊಱಮಟ್ಟೆಲ್ಲಿದಂ ಭೀಮನೆಂದೆ

ಣ್ದೆಸೆಯಂ ನೋಡುತ್ತೆ ಮತ್ತದ್ಭುತನಟನಿಟಿಲಾಲೋಲ ಕೀಲಾಕ್ಷಿವೊಲ್ ದ

ಳ್ಳಿಸೆ ಕೋಪಾರಕ್ತನೇತ್ರಂ ನಿಜಭುಜಗದೆಯಂ ತೂಗಿದಂ ಧಾರ್ತರಾಷ್ಟ್ರಂ

 

ಇದು ಕವಿಚಕ್ರವರ್ತಿ ರನ್ನನ ’ಸಾಹಸಭೀಮವಿಜಯಂ’ ಕಾವ್ಯದ ಏಳನೆಯ ಆಶ್ವಾಸದಲ್ಲಿನ ಪದ್ಯ.  ಮಹಾಭಾರತ ಯುದ್ಧದ ಹದಿನೇಳು ದಿನಗಳ ಯುದ್ಧಮುಗಿದಾಗ ದುರ್ಯೋಧನ ಒಬ್ಬಂಟಿಗನಾಗುತ್ತಾನೆ. ಭೀಷ್ಮನ ಸಲಹೆಯಂತೆ ವೈಶಂಪಾಯನ ಸರೋವರದಲ್ಲಿ ಅಡಗಿಕೊಂಡು ಕಾಲಹರಣ ಮಾಡುತ್ತಿರುತ್ತಾನೆ. ಪಾಂಡವರು ಸೇನಾಸಮೇತರಾಗಿ ಬಂದು ಸರೋವರವನ್ನು ಮುತ್ತಿ, ದುರ್ಯೋಧನನನ್ನು ಹೊರಹೊರಡಿಸುವುದಕ್ಕೆ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೊನೆಗೆ ಭೀಮನ ಸಿಂಹಗರ್ಜನೆಯನ್ನು ಕೇಳಿ ನೀರೊಳಗಿರಲಾರದೆ ದುರ್ಯೋಧನ ಅಲ್ಲಿಂದ ಹೊರಹೊರಡುತ್ತಾನೆ. ಈ ಸನ್ನಿವೇಶವನ್ನು ರನ್ನ ಈ ಪದ್ಯದಲ್ಲಿ ವರ್ಣಿಸಿದ್ದಾನೆ.  ಇದು ರನ್ನನ ಕಾವ್ಯದಲ್ಲಿಯೇ ಅಧ್ಬುತವಾದ ಒಂದು ನಾಟಕೀಯ ಸನ್ನಿವೇಶ.

 

ಹಳೆಗನ್ನಡ ಕಾವ್ಯಗಳಲ್ಲಿ ಪದ್ಯವನ್ನು ಬಿಡಿಸಿಕೊಂಡು ಓದುವ ಸಂದರ್ಭದಲ್ಲಿ ಅದರ ಅರ್ಥ ನಿಷ್ಕೃಷ್ಟತೆಗಾಗಿ ಕೆಲವೊಮ್ಮೆ ಪದಗಳನ್ನು ಹಿಂದೆ ಮುಂದೆ ಮರುಜೋಡಿಸಬೇಕಾಗುತ್ತದೆ. ಹಾಗೆಯೇ ಈ ಪದ್ಯದಲ್ಲಿಯೂ ಪದ್ಯದ ಕೊನೆಯಲ್ಲಿರುವ ’ಧಾರ್ತರಾಷ್ಟ್ರಂ’ ಎಂಬ ಪದವನ್ನು ಅನ್ವಯ ಹಾಗೂ ಅರ್ಥಕ್ಕನುಗುಣವಾಗಿ ಸ್ಥಾನಾಂತರ ಮಾಡಿ ಓದಿಕೊಂಡಾಗ ಸ್ಪಷ್ಟವಾಗುತ್ತದೆ.

 

ರಸೆಯಿಂ ಕಾಲಾಗ್ನಿರುದ್ರಂ ಪೊಱಮಡುವವೊಲ್ ಅಂತಾ ಸಾಹಸಗರ್ವ ಅಲಂಕೃತಂ ಧಾರ್ತರಾಷ್ಟ್ರಂ ತೊಟ್ಟನೆ ಕೊಳೆ ಪೊಱಮಟ್ಟು ಎಲ್ಲಿದಂ ಭೀಮಂ ಎಂದು ಎಣ್ದೆಸೆಯಂ ನೋಡುತ್ತೆ ಮತ್ತೆ ಅದ್ಭುತ ನಟ ನಿಟಿಲ ಆಲೋಲ ಕೀಲಾಕ್ಷಿವೊಲ್ ದಳ್ಳಿಸೆ ಕೋಪ ಅರಕ್ತನೇತ್ರಂ ನಿಜ ಭುಜಗದೆಯಂ ತೂಗಿದಂ.

 

ರಸೆಯಿಂ-ರಸಾತಲದಿಂದ,  ಕಾಲಾಗಿರುದ್ರಂ-ಪ್ರಳಯಕಾಲದ ರುದ್ರನು, ಪೊಱಮಡುವವೊಲಂತೆ-(ಭೂಮಿಯನ್ನು ಭೇದಿಸಿ) ಹೊರಚಿಮ್ಮುವಂತೆ, ಆ ಸರೋಮಧ್ಯದಿಂ-(ವೈಶಂಪಾಯನ) ಸರೋವರದ  ಮಧ್ಯಭಾಗದಿಂದ, ಸಾಹಸಗರ್ವಾಲಂಕೃತಂ-ಸಾಹಸ ಹಾಗೂ ಗರ್ವಗಳಿಂದ ಅಲಂಕ್ರತನಾಗಿ, ಧಾರ್ತರಾಷ್ಟ್ರಂ-ಧೃತರಾಷ್ಟ್ರನ ಮಗನಾದ ದುರ್ಯೋಧನನು,  ತೊಟ್ಟನೆ-ಥಟ್ಟನೆ(ಒಮ್ಮಿಂದೊಮ್ಮೆಗೆ), ಕೊಳೆ-(ಭೀಮನನ್ನು) ಸೆರೆಹಿಡಿದುಕೊಳ್ಳಲು, ಪೊಱಮಟ್ಟು-(ಸರೋವರದಿಂದ) ಹೊರಹೊರಟು, ಎಲ್ಲಿದಂ ಭೀಮಂ-ಎಲ್ಲಿದ್ದಾನೆ ಭೀಮ?, ಎಂದು ಎಣ್ದೆಸೆಯಂ ನೋಡುತ್ತೆ-ಎಂದು ಎಂಟುದಿಕ್ಕುಗಳನ್ನು ನೋಡುತ್ತ, ಮತ್ತದ್ಭುತನಟ– ಮತ್ತೆ ಅದ್ಭುತನಟನ (ನಟರಾಜನ), ನಿಟಿಲಾಲೋಲ-ಹಣೆಯಲ್ಲಿ ಕ್ಷೋಭೆಗೊಂಡ, ಕೀಲಾಕ್ಷಿವೊಲ್-ಉರಿಗಣ್ಣಿನ ಹಾಗೆ, ಕೋಪಾರಕ್ತನೇತ್ರಂ-ಕೋಪದಿಂದ ಕೆಂಪಾದ ಕಣ್ಣುಗಳುಳ್ಳವನು, ದಳ್ಳಿಸೆ-ಜ್ವಲಿಸುತ್ತಿರಲು, ನಿಜಭುಜಗದೆಯಂ-ತನ್ನ ಭುಜದ ಮೇಲಿರುವ ಗದೆಯನ್ನು, ತೂಗಿದಂ-(ಭೀಕರವಾಗಿ) ಬೀಸಿದನು.

 

ಸಪ್ತಪಾತಾಳಗಳಲ್ಲಿ ಒಂದಾದ ರಸಾತಲದಿಂದ ಪ್ರಳಯಕಾಲದಲ್ಲಿ ತನ್ನ ಹಣೆಗಣ್ಣಿನ ಉರಿಯಿಂದ ಸಮಸ್ತವನ್ನೂ ಸುಟ್ಟುಹಾಕುವ ಕಾಲಾಗ್ನಿರುದ್ರನು ಭೂಮಿಯನ್ನು ಭೇದಿಸಿಕೊಂಡು ಹೊರಚಿಮ್ಮುವ ಹಾಗೆ, ಸಾಹಸ ಹಾಗೂ ಗರ್ವಗಳಿಂದ ಅಲಂಕೃತನಾಗಿ ಧಾರ್ತರಾಷ್ಟ್ರ ಎನಿಸಿಕೊಂಡಿರುವ ದುರ್ಯೋಧನನು ಆಜನ್ಮಶತ್ರುವೆನಿಸಿರುವ ಭೀಮಸೇನನ ಮೇಲೆಬಿದ್ದು ಸೆರೆಹಿಡಿಯಲೆಂದು, ಆ ವೈಶಂಪಾಯನ ಸರೋವರದ ಮಧ್ಯಭಾಗದಿಂದ ಒಮ್ಮಿಂದೊಮ್ಮೆಗೆ ಹೊರಚಿಮ್ಮಿ”ಎಲ್ಲಿದ್ದಾನೆ ಭೀಮ?” ಎಂದು ಸವಾಲೆಸೆಯುತ್ತಾ, ಸಮಸ್ತವನ್ನೂ ಸುಡುವ ಅದ್ಬುತನಟನಾದ ನಟರಾಜನ  ಹಣೆಗಣ್ಣ  ಉರಿಯಂತೆ, ಕೋಪದಿಂದ ಕೆಂಪಾದ ಕಣ್ಣುಗಳಿಂದ ದ್ವೇಷವನ್ನು ಜ್ವಲಿಸುತ್ತ ಎಂಟು ದಿಕ್ಕುಗಳನ್ನು ನೋಡುತ್ತ, ತನ್ನ ಭುಜದ ಮೇಲಿರುವ ಗದೆಯನ್ನು ರಭಸವಾಗಿ ಬೀಸಿದನು-ಇದು ಈ ಪದ್ಯದ ಒಟ್ಟಾರೆ ಅರ್ಥ. ಆದರೆ ಈ ಪದ್ಯದ ಅರ್ಥಪ್ರತೀತಿ ಅಷ್ಟಕ್ಕೇ ನಿಲ್ಲುವುದಿಲ್ಲ. ಅದು ಹಲವು ಅರ್ಥಪರಂಪರೆಗಳಿಗೆ ಅನುವು ಮಾಡಿಕೊಡುವುದನ್ನು ಗಮನಿಸಬೇಕು.

 

ರನ್ನನ ಅದ್ಭುತವಾದ ಪ್ರತಿಭೆ ಈ ಪದ್ಯದಲ್ಲಿ ಮೇಳೈಸಿದೆ. ರನ್ನ ಈ ಪದ್ಯದ ಮೂಲಕ ಒಂದು ಸುಂದರವಾದ ಹಾಗೂ ಅದ್ಭುತವಾದ ಸನ್ನಿವೇಶವೊಂದನ್ನು ಸೃಜಿಸಿದ್ದಾನೆ. ದುರ್ಯೋಧನ ಸರೋವರ ಮಧ್ಯದಿಂದ ಹೊರಹೊರಡುವ ಸನ್ನಿವೇಶವನ್ನು ಕಾಲಾಗ್ನಿರುದ್ರನು ರಸಾತಲದಿಂದ ಭೂಮಿಯನ್ನು ಸೀಳಿಕೊಂಡು ಹೊರಹೊರಡುವ ಸನ್ನಿವೇಶಕ್ಕೂ ಆತನ ಕೋಪದ ತೀವ್ರತೆಯನ್ನು ತಾಂಡವರುದ್ರನ ಹಣೆಗಣ್ಣಿನ ಭೀಕರವಾದ ಬೆಂಕಿಜ್ವಾಲೆಗೂ  ದುರ್ಯೋಧನನ ಯಥಾರ್ಥಸ್ತಿತಿಯನ್ನು ’ಧಾರ್ತರಾಷ್ಟ್ರ’ ಎಂದು ಧೃತರಾಷ್ಟ್ರನ ಕುರುಡುತನಕ್ಕೂ ಹೋಲಿಸಿ ಪ್ರಸ್ತುತ  ಸನ್ನಿವೇಶವನ್ನು  ಅರ್ಥಪೂರ್ಣವಾಗಿ ನಿರೂಪಿಸಿದ್ದಾನೆ.

 

ದುರ್ಯೋಧನ ಇಲ್ಲಿ ಎಲ್ಲವನ್ನೂ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿಯಾಗಿದ್ದಾನೆ. ಪರಾಕ್ರಮಿಯಾಗಿ ರಾಜಾಸ್ಥಾನದಲ್ಲಿ ಮೆರೆಯಬೇಕಾದವನು ಈಗ ಹೇಡಿಯಾಗಿ ನೀರಿನಲ್ಲಿ ಮುಳುಗಿಕೊಂಡಿದ್ದಾನೆ. (ಆ ಕಾಲದ ಯುದ್ಧ ನಿಯಮದ ಪ್ರಕಾರ ನೀರಲ್ಲಿ ಮುಳುಗಿಕೊಂಡಿರುವವನು ಹೇಡಿ ಎನಿಸಿಕೊಳ್ಳುತ್ತಾನೆ.) ಅವನು ಸಮಸ್ತ ಭೂಮಿಯನ್ನು ತಾನೊಬ್ಬನೇ ಆಳುತ್ತೇನೆ ಎಂದು ಹೊರಟವನು. ಧರ್ಮಿಷ್ಠರಾದ ಪಾಂಡವರನ್ನು ನಾಶಮಾಡಲು ಹತ್ತು ಹಲವು ತಂತ್ರ, ಕುತಂತ್ರಗಳನ್ನು ಹೆಣೆದವನು. ಯಾವುದರಲ್ಲಿಯೂ ಆತನಿಗೆ ಜಯ ಸಿಗಲಿಲ್ಲ. ಹಾಗಾಗಿ ಆತನನ್ನು ಕವಿ ’ಧಾರ್ತರಾಷ್ಟ್ರ’ ಎಂಬ ಹೆಸರಿನಿಂದ ಕರೆದಿದ್ದಾನೆ. ಧೃತರಾಷ್ಟ್ರ ಕಣ್ಣಿಲ್ಲದ ಕುರುಡ. ದುರ್ಯೋಧನ ಕಣ್ಣಿದ್ದೂ ಕುರುಡ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಸರೋವರದಿಂದ ಮೇಲೆ ಚಿಮ್ಮಿಎಂಡು ದಿಕ್ಕುಗಳನ್ನು ನೋಡುತ್ತ, ’ಎಲ್ಲಿದ್ದಾನೆ ಭೀಮ?’ ಎಂದು ಕೇಳುವ ಆತನ ಮಾತು ಆತನ ದುರಹಂಕಾರವನ್ನೂ ಹಾಗೂ ತನ್ನ ಬುದ್ಧಿಗೇಡಿತನದಿಂದ ಎಷ್ಟರಮಟ್ಟಿಗೆ ಕುರುಡನಾಗಿದ್ದಾನೆ ಎಂಬುದನ್ನೂ ಸೂಚಿಸುತ್ತದೆ. ಧೃತರಾಷ್ಟ್ರ ಬುದ್ಧಿಗುರುಡನಲ್ಲ, ಆದರೆ ದುರ್ಯೋಧನ ಬುದ್ಧಿಗುರುಡನೂ ಆಗಿದ್ದಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

 

ದುರ್ಯೋಧನ ಸರೋವರದ ಮಧ್ಯಭಾಗದಿಂದ ಹೊರಹೊರಡುವ ಸನ್ನಿವೇಶವನ್ನು ರನ್ನ ಔಚಿತ್ಯಪೂರ್ಣವಾಗಿ ಕಾಲಾಗ್ನಿರುದ್ರನು ರಸಾತಲದಿಂದ ಹೊರಹೊರಡುವ ಸನ್ನಿವೇಶಕ್ಕೆ ಹೋಲಿಸಿದ್ದಾನೆ. ಕಾಲಾಗ್ನಿರುದ್ರನ ರಭಸ, ಆವೇಶ, ಹಣೆಗಣ್ಣಿನಿಂದ ಬೆಂಕಿಯನ್ನು ಉಗುಳುವ ವಿಧಾನಗಳು ಭೀಕರವಾದವುಗಳು. ದುರ್ಯೋಧನನೂ ಅದೇ ರೀತಿ ತನಗಾದ ಸೋಲು, ಅವಮಾನ, ಅಸಹಾಯಕತೆ, ಹಿತವೆನಿಸದ ಹಿರಿಯರ ಉಪದೇಶಗಳಿಂದ ಅತ್ಯಂತ ಕ್ರೋಧಾವಿಷ್ಟನಾಗಿದ್ದಾನೆ. ತಾನು ಒಬ್ಬಂಟಿಗನಾದರೂ ಪಾಂಡವರೆಲ್ಲರನ್ನೂ ಸದೆಬಡಿದು ತನ್ನವರ ಸಾವಿಗೆ ಸೇಡುತೀರಿಸಿಕೊಳ್ಳಬೇಕೆಂಬ ಅಪರಿಮಿತ ಹಂಬಲವನ್ನು ತನ್ನ ಮನಸ್ಸು ಮಾತ್ರವಲ್ಲದೆ, ಮೈಯ ಕಣಕಣಗಳಲ್ಲಿಯೂ ತುಂಬಿಸಿಕೊಂಡವನು. ದ್ವೇಷದಿಂದ, ದುರಹಂಕಾರದಿಂದ ದುರ್ಯೋಧನ ವಿವೇಕಶೂನ್ಯನಾಗಿದ್ದಾನೆ. ಹಾಗಾಗಿಯೇ ಅತ್ಯಂತ ದುರಹಂಕಾರಿಯಂತೆ ಸರೋವರದಿಂದ ಹೊರಹೊಮ್ಮುತ್ತಾನೆ.

 

ಕವಿ ರನ್ನ, ದುರ್ಯೋಧನನ ಕಣ್ಣುಗಳಿಂದ ಹೊರಸೂಸುತ್ತಿರುವ ಸೇಡಿನ ಬೆಂಕಿಯನ್ನು ನಟರಾಜನ ಹಣೆಗಣ್ಣಿನ ಬೆಂಕಿಜ್ವಾಲೆಗೆ  ಹೋಲಿಸಿದ್ದಾನೆ. ನಟರಾಜನ ಹಣೆಗಣ್ಣಿನ ಜ್ವಾಲೆ ಎಲ್ಲವನ್ನು ಸುಟ್ಟು ನಾಶಮಾಡಬಲ್ಲುದು. ಹಾಗೆಯೇ ದುರ್ಯೋಧನ ತನಗಾದ ಸೋಲಿನ ಅವಮಾನದಿಂದ ಕುದಿಯುತ್ತ ಪಾಂಡವರನ್ನು ನಾಶಮಾಡಲು ಹಾತೊರೆಯುತ್ತಿದ್ದಾನೆ.  ಅದರ ಪ್ರಭಾವ ಆತನ ಕಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ದುರ್ಯೋಧನನ ಕಣ್ಣಿನ ಬೆಂಕಿಜ್ವಾಲೆ ನಟರಾಜನ ಹಣೆಗಣ್ಣಿನ ಬೆಂಕಿಜ್ವಾಲೆಗೆ ಸಮಾನವಲ್ಲದಿದ್ದರೂ ದುರ್ಯೋಧನನಲ್ಲಿರುವ ಸೇಡಿನ ಜ್ವಾಲೆ ಎಷ್ಟು ತೀವ್ರವಾಗಿದೆ ಮತ್ತು ಎಷ್ಟು ತೀಕ್ಷ್ಣವಾಗಿದೆ, ಆತ ಪಾಂಡವರನ್ನು ನಾಶಮಾಡುವುದಕ್ಕೆ ಎಷ್ಟರ ಮಟ್ಟಿಗೆ ಹಪಹಪಿಸುತ್ತಿದ್ದಾನೆ ಎಂಬುದು ಇದರಿಂದ ಅರಿವಾಗುತ್ತದೆ.

 

ಈ ಪದ್ಯದ ಮೂಲಕ ರನ್ನ ಇನ್ನೂ ಹಲವು ವಿಷಯಗಳನ್ನು ಧ್ವನಿಸುವಂತೆ ಮಾಡಿದ್ದಾನೆ. ದುರ್ಯೋಧನ ತನ್ನವರೆಲ್ಲರ ನಾಶಕ್ಕೆ ಹಾಗೂ ತನ್ನವರೆಲ್ಲರನ್ನೂ ಕಳೆದುಕೊಳ್ಳುವುದಕ್ಕೆ, ತಾನು ಹೇಡಿಯಂತೆ ನೀರಲ್ಲಿ ಮುಳುಗಿಕೊಳ್ಳುವುದಕ್ಕೆ, ಮುಂದೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದಕ್ಕೆ, ಒಂದು ವಂಶದ ನಾಶಕ್ಕೆ ಕಾರಣವಾಗುವುದಕ್ಕೆ, ತನಗಾಗಿ ಹೋರಾಡಿದ ಬೇರೆ ಬೇರೆ ದೇಶಗಳ ರಾಜರು ಹಾಗೂ ರಾಜಕುಮಾರರ  ಮಾತ್ರವಲ್ಲದೆ ಅಸಂಖ್ಯ ಸೈನಿಕರ ನಾಶಕ್ಕೆ ಕಾರಣರು ಯಾರು ಎಂಬುದನ್ನು ಈ ಪದ್ಯದಲ್ಲಿ ಬಳಸಿರುವ ’ಧಾರ್ತರಾಷ್ಟ್ರಂ’ ಎಂಬ ಪದವೇ  ಧ್ವನಿಸುತ್ತದೆ. ದುರ್ಯೋಧನ ಎಂಬರ್ಥದಲ್ಲಿ ಈ ಪದವನ್ನು ಕವಿ ಬಳಸಿರುವುದಾದರೂ ಅದರ ಅರ್ಥವೈಶಾಲ್ಯವನ್ನು ಗಮನಿಸಬೇಕು. ದುರ್ಯೋಧನನ ಈ ಸ್ಥಿತಿಗೆ  ಯಾರು ಕಾರಣರು? ಕೇವಲ ದುರ್ಯೋಧನ, ದುಶ್ಶಾಸನ, ಶಕುನಿಯರಲ್ಲ. ಅವರಿಗಿಂತಲೂ ಹೆಚ್ಚಾಗಿ ಧೃತರಾಷ್ಟ್ರ (ಗಾಂಧಾರಿ ಕೂಡಾ) ಕಾರಣ ಎಂಬುದನ್ನು ಈ ಪದ ಸೂಚಿಸುತ್ತದೆ.

 

ಚಿಕ್ಕಂದಿನಿಂದಲೂ ತಮ್ಮ ಮಕ್ಕಳು ತಪ್ಪುಮಾಡಿದಾಗ, ಅಕ್ಷಮ್ಯ ಅಪರಾಧಗಳನ್ನು ಎಸಗಿದಾಗ ಧೃತರಾಷ್ಟ್ರ (ಗಾಂಧಾರಿ ಕೂಡಾ) ಅವರನ್ನು ತಿದ್ದುವ ಪ್ರಯತ್ನವನ್ನೇ ಮಾಡಲಿಲ್ಲ. ಹಾಗಾಗಿಯೇ ದುರ್ಯೋಧನಾದಿಗಳು ಉಂಡಾಡಿಗಳಾಗಿಯೇ ಬೆಳೆದರು. ಶಕುನಿ, ದುರ್ಯೋಧನಾದಿಗಳ ಈ ದ್ವೇಷದ ಸ್ವಭಾವಗಳಿಗೆ ನೀರೆರೆದು ಪೋಷಿಸಿದ. ಆಗಲೂ ಧೃತರಾಷ್ಟ್ರ ಗಾಂಧಾರಿಯರು ಎಚ್ಚೆತ್ತುಕೊಳ್ಳಲಿಲ್ಲ. ಪಾಂಡವರನ್ನು ಪದೇಪದೇ ಕೊಲ್ಲುವ ಪ್ರಯತ್ನ, ರಾಜ್ಯವನ್ನು ಕಸಿಯುವ ಷಡ್ಯಂತ್ರ, ದ್ರೌಪದಿಯ ಮಾನಹಾನಿಯ ಪ್ರಯತ್ನಗಳೆಲ್ಲವೂ ಕುಟುಂಬದ್ರೋಹ, ಸಮಾಜದ್ರೋಹ ಮಾತ್ರವಲ್ಲದೆ ದೇಶದ್ರೋಹದ ಕೃತ್ಯಗಳು. ಅವೆಲ್ಲವುಗಳ ಫಲವೇ ಈಗ ದುರ್ಯೋಧನ ಅನುಭವಿಸುತ್ತಿರುವುದು. ಉಳಿದವರು ಈಗಾಗಲೇ ಬಲಿಯಾಗಿದ್ದಾರೆ. ಇದು ಕೇವಲ ದುರ್ಯೋಧನನ ಪ್ರಾರಬ್ಧಕರ್ಮ ಮಾತ್ರವಲ್ಲದೆ ಅದಕ್ಕಿಂತಲೂ ಹೆಚ್ಚಾಗಿ ಧೃತರಾಷ್ಟ್ರ ಹಾಗೂ ಗಾಂಧಾರಿಯರ ಪ್ರಾರಬ್ಧಕರ್ಮವೂ ಹೌದು.

 

ರನ್ನನ ಈ ಸನ್ನಿವೇಶ ಚಿತ್ರಣ ಹಾಗೂ ಅದರಲ್ಲಿನ ವಿಚಾರಗಳು ನಮ್ಮ ಆಧುನಿಕ ಸಮಾಜವ್ಯವಸ್ಥೆಯ ಮೇಲೂ ಬೆಳಕುಚೆಲ್ಲುತ್ತವೆ. ಇಂದು ಧೃತರಾಷ್ಟ್ರ ಗಾಂಧಾರಿಯರಂತಹವರು ಕೋಟಿಸಂಖ್ಯೆಯಲ್ಲಿದ್ದಾರೆ. ಮಕ್ಕಳು ತಪ್ಪುಮಾಡಿದಾಗಲೂ ತಿದ್ದದೆ ದುರ್ಯೋಧನ, ದುಶ್ಶಾಸನರಂತೆ ಸಮಾಜಘಾತುಕರಾಗಿ, ದೇಶದ್ರೋಹಿಗಳಾಗಿ ಬೆಳೆದು ಸಮಾಜ ಹಾಗೂ ದೇಶದ ನಾಶಕ್ಕೆ ಕಾರಣರಾಗುತ್ತಿದ್ದಾರೆ. ಆಧುನಿಕ ಕಾಲದ ದುರ್ಯೋಧನ, ದುಶ್ಶಾಸರು ಕೊಲೆ, ಸುಲಿಗೆ, ಸ್ತ್ರೀಮಾನಹಾನಿ, ಅತ್ಯಾಚಾರ, ಭಯೋತ್ಪಾದನೆ, ಭೂಗತ ಚಟುವಟಿಕೆ, ಆಕ್ರಮಣದಂತಹ ದುಷ್ಕೃತ್ಯಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತ, ಸಮಾಜದ್ರೋಹದ ಕೃತ್ಯಗಳನ್ನು ಎಸಗುತ್ತ, ಸಿಕ್ಕಸಿಕ್ಕವರನ್ನು ಕೊಲ್ಲುತ್ತ, ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತ, ದೇಶದ ಅಖಂಡತೆ ಹಾಗೂ ಶಾಂತಿಯನ್ನು ಕೆಡಿಸುತ್ತ ದುರ್ಯೋಧನನಂತೆ ಸಿಕ್ಕಸಿಕ್ಕಲ್ಲಿ ಅಡಗಿಕೊಳ್ಳುತ್ತಿದ್ದಾರೆ. ಆದರೂ ಆಧುನಿಕ ಧೃತರಾಷ್ಟ್ರ, ಗಾಂಧಾರಿಯರಿಗೆ ತಮ್ಮ ಮಕ್ಕಳು ಅಮಾಯಕರು, ನಿರಪರಾಧಿಗಳು, ಸಭ್ಯರು, ಯೋಗ್ಯರು, ದೇಶಭಕ್ತರಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇದು ವಿಪರ್ಯಾಸದ ಪರಮಾವಧಿ. ರನ್ನನ ಕಾವ್ಯದ ಕಥೆ ದ್ವಾಪರಯುಗಕ್ಕೆ ಸಂಬಂಧಿಸಿದುದು. ಅದನ್ನು ಕಾವ್ಯರೂಪದಲ್ಲಿ ಪ್ರಸ್ತುತಪಡಿಸಿದವನು ಹತ್ತನೆಯ ಶತಮಾನದ ಕವಿ ರನ್ನ. ಆತ  ತನ್ನ ಸಮಕಾಲೀನ ಸಾಮಾಜಿಕ, ರಾಜಕೀಯ ಧೋರಣೆಗಳನ್ನು ಪ್ರಸ್ತುತಪಡಿಸಿದ್ದರೂ ಅವು ಇಂದಿನ ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಗಳೊಂದಿಗೂ ಭಿನ್ನಭಿನ್ನ ನೆಲೆಗಳಲ್ಲಿ ವಿಭಿನ್ನ ರೀತಿಯಲ್ಲಿ ಅನುಸಂಧಾನವನ್ನು ಸಾಧಿಸುತ್ತಿರುವುದು, ಆಧುನಿಕ ಸಮಾಜ ಹಾಗೂ ರಾಜಕೀಯವ್ಯವಸ್ಥೆಗೆ ವಿಡಂಬನೆಯಾಗುತ್ತಿರುವುದು ಆಶ್ಚರ್ಯಕರ ಮಾತ್ರವಲ್ಲ, ಕುತೂಹಲಕಾರಿಯಾದ ವಿಚಾರವಾಗಿದ್ದು, ಕಾವ್ಯದ ಸಾರ್ವಕಾಲಿಕ ಔಚಿತ್ಯಕ್ಕೆ ಒಂದು ಸಮರ್ಥ ದೃಷ್ಟಾಂತವಾಗಿದೆ.

***

6 thoughts on “ಸಾಹಸಗರ್ವಾಲಂಕೃತ ಧಾರ್ತರಾಷ್ಟ್ರ

  1. ರನ್ನ ಕವಿಯ ಒಂದು ಪದ್ಯವನ್ನ ವಿವರಿಸಿ ಕೊನೆಯಲ್ಲಿ ಅದರ ಪ್ರಸ್ತುತತೆಯನ್ನೂ ತಿಳಿಸಿದ್ದಕ್ಕೆ ಧನ್ಯವಾದಗಳು.
    ಕಾವ್ಯಗಳು ಎಂದಿಗೂ ಹೊಸತೆ ಅಲ್ಲವೆ?

    1. ಒಂದು ಸಾವಿರ ವರ್ಷಗಳು ಸಂದರೂ ಇಂದಿಗೂ ಭಿನ್ನ ಭಿನ್ನ ನೆಲೆಯಲ್ಲಿ ನಮ್ಮ ಸಾಮಾಜಿಕ, ರಾಜಕೀಯ ಬದುಕಿನೊಂದಿಗೆ ಅನುಸಂಧಾನವನ್ನು ಸಾಧಿಸುತ್ತಿರುವುದೇ ಕಾವ್ಯಗಳ ಗಟ್ಟಿತನ ಹಾಗೂ ಪ್ರಸ್ತುತತೆಗೆ ಸಾಕ್ಷಿ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಓದಿ ಪ್ರತಿಕ್ರಿಯಿಸಿ. 🙏

      1. ಪ್ರಸ್ತುತ ಸಮಾಜವನ್ನು ಪ್ರಾಚೀನ ಕಾವ್ಯ ಸಂದರ್ಭಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪರಿ ಚೆನ್ನಾಗಿದೆ. ಸಾಹಿತ್ಯದ ಸಾರ್ವಕಾಲಿಕತೆಗೆ ಕನ್ನಡಿ ಹಿಡಿಯುತ್ತಿರುವುದಕ್ಕೆ ಅಭಿನಂದನೆಗಳು.

        1. ಅಕ್ಕ, ನಿಮ್ಮ ಮಾತುಗಳು ಅಕ್ಷರಶಃ ಸತ್ಯ. ಪ್ರಾಚೀನ ಕಾವ್ಯಗಳು ನಮ್ಮ ಆಧುನಿಕ ಬದುಕಿನೊಂದಿಗೆ ಅನುಸಂಧಾನವನ್ನು ಸಾಧಿಸುತ್ತಲೇ ಇವೆ. ನಾವು ಅರಿಯುವ ಪ್ರಯತ್ನವನ್ನೇ ಮಾಡಿಲ್ಲ. ನಿಮ್ಮ ಅನಿಸಿಕೆ ಸಹೃದಯರಿಗೆ ಈ ಬಗೆಗಿನ ಅರಿಯುವಿಕೆಗೆ ಪ್ರೇರಣೆಯಾಗಲಿ.
          ಧನ್ಯವಾದಗಳು. 🙏

  2. ತುಂಬಾ ಅರ್ಥವತ್ತಾಗಿ ಈ ಪದ್ಯವನ್ನು ವಿವರಿಸಿದ್ದೀರಿ ಸರ್. ಹಳೆಗನ್ನಡದ ಪದ್ಯಗಳನ್ನು ಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟವೇ.. ಆದರೆ ಅದು ಸಾಧ್ಯವಾಗುವುದು ಯಾವಾಗೆಂದರೆ ನಿಮ್ಮಂತೆ ಅದರ ಸಾರವನ್ನು ತುಂಬಾ ಸ್ವಾರಸ್ಯವಾಗಿ ಹೇಳಿದರೆ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವಂತ ನಮಗೆ ತುಂಬಾ ಅನುಕೂಲವಾಗುತ್ತದೆ. ನಾವೂ ಕೂಡ ಅದರ ಸ್ವಾದವನ್ನು ಆಸ್ವಾದಿಸಲು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೇ ಕೇವಲ ಪದ್ಯದ ಅರ್ಥವನ್ನು ಹೇಳುವುದಾದರೆ ನಿಮಗೂ ಸುಲಭವಾಗುತ್ತಿತ್ತೇನೋ, ಆದರೆ ತಾವು ಹಾಗೆ ಮಾಡದೇ ಅದನ್ನು ಎಲ್ಲಾ ದೃಷ್ಟಿಕೋನದಿಂದಲೂ ಯಾವೆಲ್ಲ ರೀತಿಯಾಗಿ ಈ ಪದ್ಯವನ್ನು ಅರ್ಥೈಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟು ಅದರ ಸ್ವಾದವನ್ನು ಮತ್ತಷ್ಟು ಆಹ್ಲಾದಿಸುವಂತೆ ಮಾಡಿದ್ದೀರಿ ತುಂಬಾ ಧನ್ಯವಾದಗಳು ಸರ್…
    ಇನ್ನು ತಾವು ವಿವರಿಸಿರುವಂತೆ ಈ ಪದ್ಯದ ವಿಷಯವಾಗಿ ಹೇಳುವುದಾದರೆ ‘ಧಾರ್ತರಾಷ್ಟ್ರ’ ಎಂಬ ಒಂದು ಪದವನ್ನು ಕವಿ ಯಾವೆಲ್ಲಾ ದೃಷ್ಟಿಕೋನ ವನ್ನಿಟ್ಟುಕೊಂಡು ಈ ಪದ್ಯದಲ್ಲಿ ಬಳಸಿದ್ದಾರೆ ಎಂಬುದನ್ನು ತುಂಬಾ ಸುಂದರವಾಗಿ ಸರಳವಾಗಿ ವಿವರಿಸಿದ್ದೀರಿ ಸರ್. ಪ್ರತಿ ಮನುಷ್ಯನು ಕೂಡ ತಾನು ಏನೇ ಮಾಡಿರಲಿ ಅದು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಹೇಗಾದರೂ ತಮ್ಮ ಹೆತ್ತವರಿಗೆ ಜೋಡಿಸಲ್ಪಟ್ಟಿರುತ್ತದೆ. ಒಬ್ಬ ಮನುಷ್ಯ ತನ್ನ ಯಶಸ್ಸಿನ ಉತ್ತುಂಗದಲ್ಲಿ ಇದ್ದರೂ ಅದರ ಹಿಂದೆ ಅವನ ಹೆತ್ತವರ ಶ್ರಮವಿರುತ್ತದೆ, ಅಥವಾ ಅವನು ಪಾತಾಳಕ್ಕೆ ಬಿದ್ದುಹೋದರೂ ಅದರ ಹಿಂದೆ ಅದೇ ಹೆತ್ತವರು ತಮ್ಮ ಮಕ್ಕಳ ಮೇಲೆ ಇರಿಸಿರುವ ಅಂಧ ವಿಶ್ವಾಸ ಮತ್ತು ಅತಿಯಾದ ಪ್ರೀತಿಯೇ ಕಾರಣವಾಗಿರುತ್ತದೆ. ಪ್ರತಿಯೊಬ್ಬ ಮಕ್ಕಳನ್ನು ಸಮಾಜಮುಖಿಯಾಗಿ ಸತ್ ಪ್ರಜೆಯಾಗಿ ರೂಪಿಸುವ ಜವಾಬ್ದಾರಿಯನ್ನು ಅವರವರ ಹೆತ್ತವರೇ ತೆಗೆದುಕೊಳ್ಳಬೇಕು, ಅದು ಅವರ ಕರ್ತವ್ಯ ಕೂಡ ಹೌದು. ಆದರೆ ಇಲ್ಲಿ ದುರ್ಯೋಧನ ತನ್ನ ಅನೀತಿ, ದುರ್ಗುಣಗಳಿಂದ ಪಾಂಡವರನ್ನು ಅನೇಕ ಬಾರಿ ಕೊಲ್ಲಲು ಪ್ರಯತ್ನಪಟ್ಟು, ಮೋಸದಿಂದ ಜೂಜಾಡಿ ಅವರ ಮೇಲೆ ಕಿಂಚಿತ್ತೂ ಕರುಣೆಯಿಲ್ಲದೆ ವನವಾಸಕ್ಕೆ ಮತ್ತು ಅಜ್ಞಾತವಾಸಕ್ಕೆ ಕಳುಹಿಸಿ, ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅವಮಾನಿಸಿ, ಕೊನೆಗೆ ಕುರುಕ್ಷೇತ್ರ ಯುದ್ಧ ನಡೆಯುವಂತೆ ಮಾಡಿ ತನ್ನವರೂ ಸೇರಿದಂತೆ ಸಹಸ್ರಾರು ಜನರ ಪ್ರಾಣಹರಣವಾಗುವಂತೆ ಮಾಡಿದ . ಮೇಲ್ನೋಟಕ್ಕೆ ಇವೆಲ್ಲವೂ ದುರ್ಯೋಧನನ ದುರ್ಗುಣಗಳನ್ನು ತೋರಿಸಿದರೂ ಕೂಡ ಅದರ ಹಿಂದೆ ಇರುವ ಪೋಷಣೆಯನ್ನು ಮಾತ್ರ ಯಾರೂ ಗುರುತಿಸುವುದಿಲ್ಲ. ದುರ್ಯೋಧನ ಇಷ್ಟೆಲ್ಲ ಅನ್ಯಾಯ ಮಾಡುತ್ತಿದ್ದರೂ ಕೂಡ ಅವನ ತಂದೆ ತಾಯಿಯರಾದ ಧೃತರಾಷ್ಟ್ರ ಮತ್ತು ಗಾಂಧಾರಿ ಯಾವುದೇ ರೀತಿಯಾಗಿ ತಡೆಯುವ ಪ್ರಯತ್ನ ಮಾಡಲಿಲ್ಲ…! ಧೃತರಾಷ್ಟ್ರ ಒಬ್ಬ ಕುರುಡನಾಗಿದ್ದರೂ , ಗಾಂಧಾರಿ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದರೂ ಅವರ ಬುದ್ಧಿಗೆ ಯಾವುದೇ ರೀತಿಯ ಕುರುಡುತನ ಆವರಿಸಿರಲಿಲ್ಲವಲ್ಲ. ಆದರೂ ಕೂಡ ತಮ್ಮ ಮಗ ದುರ್ಯೋದನನ್ನು ಮತಿಕುರುಡನನ್ನಾಗಿ ಮಾಡಲು ಅವರಿಬ್ಬರೂ ಸಹಾಯ ಮಾಡಿರುವುದು ಎದ್ದು ಕಾಣಿಸುತ್ತದೆ. ಹಾಗಾಗಿ ಅಂತಹ ಕುರುಡು ದಂಪತಿಗಳಿಗೆ ಇಂತಹ ಮತಿಕುರುಡು ಧೃತರಾಷ್ಟ್ರ ಮಗನಾಗಿ ಹುಟ್ಟಿದ ಕ್ಕಾಗಿ ಅವನನ್ನು ಧಾರ್ತರಾಷ್ಟ್ರ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ…
    ಅದರಂತೆಯೇ ನಮ್ಮ ಇಂದಿನ ಸಮಾಜದಲ್ಲಿ ದುರ್ಯೋದನನಂತಹ ಧಾರ್ತರಾಷ್ಟ್ರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.. ಅಂತಹ ದುರ್ಯೋಧನರ ಕುರುಡು ತಂದೆತಾಯಿಗಳು ಎಂದಾದರೂ ಎಚ್ಚೆತ್ತುಕೊಂಡು ತಮ್ಮ ತಮ್ಮ ಮಕ್ಕಳ ಬುದ್ಧಿಗೆ ಕವಿದಿರುವ ಕುರುಡುತನವನ್ನು ಹೋಗಲಾಡಿಸಿದರೆ ಒಂದು ಸ್ವಾಸ್ತ್ಯವಾದ ಸಮಾಜ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ….

    1. ನಿಮ್ಮ ದೀರ್ಘವಾದ ಪ್ರತಿಕ್ರಿಯೆ ಓದಿ ಬಹಳ ಸಂತೋಷವಾಯಿತು. ಕೃತಜ್ಞತೆಗಳು. ಮಹಾಭಾರತ ಮುಗಿಯದೆ ಇನ್ನೂ ಮುಂದುವರಿಯುತ್ತಲೇ ಇದೆ. ರಾಮಾಯಣ, ಮಹಾಭಾರತಗಳು ಕೇವಲ ಪುರಾಣಗಳಲ್ಲ. ಅವು ಸಮಾಜಕ್ಕೆ, ರಾಜಕೀಯಕ್ಕೆ ಮಾಡಿದ ಸೊಗಸಾದ ಹಾಗೂ ಅರ್ಥಪೂರ್ಣ ವ್ಯಾಖ್ಯಾನ. ಬಹುತೇಕ ಭಾರತೀಯರು ಇದನ್ನು ಅರ್ಥಮಾಡಿಕೊಂಡಿಲ್ಲ.ಹಾಗಾಗಿಯೇ ಭಾರತದೊಳಗೆ ಮಹಾಭಾರತ ಮುಂದುವರಿದುಕೊಂಡು ಬಂದಿದೆ.
      ನೀವೂ ನನ್ನ ವ್ಯಾಖ್ಯಾನದ ಮೂಲಕ ಬಹಳಷ್ಟನ್ನು ಗ್ರಹಿಸಿದ್ದಿರಿ. ಅದೆಲ್ಲವೂ ಹೊಸ ಚಿಂತನೆಗಳಿಗೆ, ಹೊಸ ಬದುಕಿಗೆ ದಾರಿಮಾಡಿಕೊಡಲಿ ಎಂದು ಹಾರೈಸುತ್ತೇನೆ. ನಿರಂತರ ಓದಿ ಪ್ರತಿಕ್ರಿಯಿಸುತ್ತಿರಿ. ನಿಮ್ಮ ಪ್ರತಿಕ್ರಿಯೆ ಉಳಿದವರಿಗೂ ಸ್ಫೂರ್ತಿಯಾಗಲಿ.
      ಧನ್ಯವಾದಗಳು.🙏

Leave a Reply

Your email address will not be published. Required fields are marked *