ಅರ್ಚನೆ ಪೂಜನೆ ನೇಮವಲ್ಲ;
ಮಂತ್ರ ತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.
-ಸತ್ಯಕ್ಕ
ಲೋಕದಲ್ಲಿ ಭಗವದ್ಭಕ್ತಿ ಹಾಗೂ ಆ ಬಗೆಗಿನ ಪೂಜೆ, ಪುರಸ್ಕಾರ, ವ್ರತಾಚರಣೆಗಳು ಅವರವರ ಅಭಿರುಚಿ, ನಂಬಿಕೆ ಹಾಗೂ ಭಾವಗಳಿಗೆ ಅನುಗುಣವಾಗಿ ನೂರಾರು, ಸಾವಿರಾರು. ಪ್ರತಿಯೊಬ್ಬರಿಗೂ ತಮ್ಮದೇ ಸರಿ ಅಥವಾ ಸಮರ್ಪಕ. ಅನ್ಯರನ್ನು ಮೆಚ್ಚಿಸುವುದಕ್ಕೆ ಹತ್ತು ಹಲವು ವಿಧಾನಗಳು. ತಾನು ಭಕ್ತನೆಂದು ಬಿಂಬಿಸುವುದಕ್ಕೂ ನೂರಾರು ವೇಷಗಳು, ತಂತ್ರ, ಕುತಂತ್ರಗಳು. ಹಾಗಾಗಿಯೇ ಧಾರ್ಮಿಕ ವಿಷಯಗಳಲ್ಲಿ ಇಂದು ಸಾಕಷ್ಟು ಗೊಂದಲಗಳು. ಯಾವ ನೇಮ ಸರಿ? ಯಾವುದಲ್ಲ? ಎಂಬವು ಮುಂದಿರುವ ಪ್ರಶ್ನೆಗಳು. ಹನ್ನೆರಡನೆಯ ಶತಮಾನದ ವಚನಕಾರ್ತಿ ಸತ್ಯಕ್ಕ ‘ನಿತ್ಯನೇಮ’ ಎಂದರೇನೆಂಬುದಕ್ಕೆ ಒಂದು ವ್ಯಾಖ್ಯೆಯನ್ನೇ ನೀಡಿದ್ದಾಳೆ.
‘ನೇಮ’ ಎಂದರೆ ವ್ರತ ಎಂದರ್ಥ. ನಮ್ಮಲ್ಲಿ ಹಲವಾರು ವ್ರತಗಳು, ಏಕಾದಶಿ, ಶಿವರಾತ್ರಿ, ಸಂಕಷ್ಟಹರ ಚತುರ್ಥಿ ಇನ್ನೂ ನೂರಾರು. ಇವುಗಳಲ್ಲದೆ ತಮ್ಮತಮ್ಮ ಇಷ್ಟದೇವರನ್ನು ಅಲಂಕರಿಸುವುದು, ಅರ್ಚಿಸುವುದು, ಪೂಜಿಸುವುದು; ಮಂತ್ರಗಳ ಪಠನೆ, ತಾಂತ್ರಿಕ ವಿಧಿವಿಧಾನಗಳು; ಧೂಪಾರತಿ, ದೀಪಾರತಿಗಳು; ಷೋಡಷೋಪಚಾರ ಪೂಜೆಗಳು; ಭಕ್ಷ್ಯ-ನೈವೇದ್ಯಗಳು ಮೊದಲಾದ ಆಚರಣೆಗಳೂ ಹಲವಾರು. ದಿನದ ಬಹುತೇಕ ಸಮಯವನ್ನು ಅದರಲ್ಲಿಯೇ ಕಳೆಯುತ್ತ, ತಾವು ಶ್ರೇಷ್ಠಭಕ್ತರೆಂದೂ ಶ್ರೇಷ್ಠಸಮಾಜಸೇವಕರೆಂದೂ ತಾವೇ ಮೇಲೆಂದೂ ಉಳಿದವರು ಕೀಳೆಂದೂ ಭಾವಿಸಿ ಅನೈತಿಕತೆಯನ್ನು ಮೈಗೂಡಿಸಿಕೊಂಡವರನ್ನು ಹಾಗೂ ಹಾಗೆ ವರ್ತಿಸುತ್ತಿರುವುದನ್ನು ಸತ್ಯಕ್ಕ ಈ ವಚನದಲ್ಲಿ ವಿರೋಧಿಸುತ್ತಾಳೆ.
ಸತ್ಯಕ್ಕನ ಪ್ರಕಾರ, ಅರ್ಚನೆ ಹಾಗೂ ಪೂಜನೆಗಳು ವ್ರತಗಳಲ್ಲ. ಮಂತ್ರ ತಂತ್ರಗಳೂ ವ್ರತಗಳಲ್ಲ. ಧೂಪಾರತಿ, ದೀಪಾರತಿಗಳು ವ್ರತಗಳಲ್ಲ. ಇವೆಲ್ಲವೂ ಭಗವದ್ಭಕ್ತಿಯ ಆಚರಣೆಗಳಾದರೂ ಅವುಗಳ ಹಿಂದೆ ನಿಷ್ಕಲ್ಮಷವಾದ ಮನೋಭಾವವಾಗಲೀ ಸ್ವಭಾವವಾಗಲೀ ಲೋಕಸುಖವನ್ನು ಬಯಸುವ ಸಮಷ್ಟಿಪ್ರಜ್ಞೆಯಾಗಲೀ ಇರುವುದಿಲ್ಲ. ಇವೆಲ್ಲವೂ ಸ್ವಾರ್ಥಸಾಧಿತವಾದವು. ಕೇವಲ ಅನ್ಯರನ್ನು ಮೆಚ್ಚಿಸಿ ತಾನು ಸಭ್ಯ, ಹಿರಿಯ, ಶ್ರೇಷ್ಠನೆನಿಸಿಕೊಂಡು ಇತರರಿಂದ ಲಾಭಹೊಡೆಯುವುದಕ್ಕೆ ಇರುವ ಒಂದು ಮಾರ್ಗ ಅಷ್ಟೇ. ಈ ಮನೋಭಾವ ಇಲ್ಲದ ನಿಷ್ಕಲ್ಮಶರೂ ಸಾತ್ವಿಕರೂ ನೈತಿಕರೂ ಇದ್ದಾರೆ, ಅಂತಹವರ ಸಂಖ್ಯೆ ತೀರಾ ಕಡಿಮೆ.
ಸತ್ಯಕ್ಕನ ಪ್ರಕಾರ, ಪರಸ್ತ್ರೀ ಹಾಗೂ ಪರಧನಗಳಿಗೆ ಆಸೆಮಾಡದಿರುವುದು ಹಾಗೂ ಅವುಗಳನ್ನು ಹೊಂದದಿರುವುದೇ ನಿಜವಾದ ಹಾಗೂ ನಿತ್ಯ ಅನುಷ್ಠಾನಗೊಳಿಸಬೇಕಾದ ವ್ರತ. ವ್ಯಕ್ತಿ ಹಾಗೂ ಸಮಾಜದ ಹಿತದೃಷ್ಟಿಯಿಂದ ಪರಸ್ತ್ರೀ ಹಾಗೂ ಪರಧನಾಪೇಕ್ಷೆಗಳು ಬಹಳ ಅಪಾಯಕಾರಿ. ಭಾರತದಲ್ಲಿ ಪ್ರಾಚೀನಕಾಲದಿಂದಲೂ ಪರಸ್ತ್ರೀಯರನ್ನು ಅಪೇಕ್ಷಿಸುವುದು, ಅವರ ಸಂಗಕ್ಕೆ ಹಾತೊರೆಯುವುದು, ಪರರ ಹಣಕ್ಕೆ ಆಸೆಪಡುವುದು, ಅದನ್ನು ದೋಚುವುದು -ಇವೆಲ್ಲವೂ ಅವಗುಣಗಳು ಮಾತ್ರವಲ್ಲ, ಸಮಾಜವಿರೋಧಿ ಪ್ರವೃತ್ತಿಗಳು ಎನಿಸಿಕೊಂಡಿವೆ. ಇವುಗಳಿಂದ ಹಲವಾರು ಕುಟುಂಬಗಳ ನೆಮ್ಮದಿ ನಾಶವಾಗಿ ಕುಟುಂಬಗಳೇ ಅಳಿದುಹೋಗಿವೆ. ಪರಧನಾಪೇಕ್ಷೆಯೂ ಕಳವು, ದರೋಡೆ ಮೊದಲಾದ ಸಮಾಜವಿರೋಧಿ ಕೃತ್ಯಗಳಿಗೆ ದಾರಿಮಾಡಿಕೊಟ್ಟಿದೆ.
ಪರಸ್ತ್ರೀಸಂಗವೆಂಬುದು ಇನ್ನೊಂದರ್ಥದಲ್ಲಿ ಪರಪುರುಷಸಂಗವೂ ಹೌದು. ಇವೆರಡೂ ಅನೈತಿಕವಾದವುಗಳು. ಇಂತಹ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡು ಮಾಡುವ ಅರ್ಚನೆ, ಪೂಜನೆ, ಮಂತ್ರ, ತಂತ್ರ, ಧೂಪ, ದೀಪಾರತಿಗಳಿಗೆ ಯಾವುದೇ ಪ್ರತಿಫಲ ದೊರೆಯಲಾರದು. ಹಾಗೆಯೇ ಪರದೈವಗಳಿಗೆ ಶರಣಾಗುವುದೂ ವ್ರತವಲ್ಲ ಎಂಬುದು ಆಕೆಯ ನಿಲುವು. ವೀರಶೈವ ಪರಿಭಾಷೆಯ ಹಿನ್ನೆಲೆಯಲ್ಲಿ ಆಕೆ ಈ ಮಾತನ್ನು ಆಡಿದ್ದಾಳೆ. ಶಿವಾನುಗ್ರಹಕ್ಕೆ ಶುದ್ಧಮನಸ್ಸು, ಶುದ್ಧಪ್ರವೃತ್ತಿಗಳು, ಶುದ್ಧಚಾರಿತ್ರ್ಯ, ನಿಸ್ವಾರ್ಥ ಮನೋಭಾವ ಹಾಗೂ ಅವುಗಳಿಗೆ ಅನುಗುಣವಾದ ಅನುಷ್ಠಾನಗಳು ಅತ್ಯಂತ ಅಗತ್ಯವೆಂಬುದನ್ನು ಸತ್ಯಕ್ಕ ಸ್ಪಷ್ಟಪಡಿಸಿದ್ದಾಳೆ. ಅದಕ್ಕಾಗಿಯೇ ಡಾಂಬಿಕ ಪೂರ್ಜಾವಿಧಾನ, ಹಾಗೂ ವ್ರತಗಳನ್ನು ಖಂಡಿಸಿದ್ದಾಳೆ.
ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದಲ್ಲಿ ಈ ರೀತಿಯ ವೈರುಧ್ಯ ಕಾಣಿಸಿಕೊಳ್ಳುತ್ತಿತ್ತೆಂದು ತೋರುತ್ತದೆ. ಅದಕ್ಕಾಗಿಯೇ ಅಂತಹ ಅನೈತಿಕತೆಯನ್ನು ಸತ್ಯಕ್ಕ ಖಂಡಿಸಿದ್ದಾಳೆ. ಆದರೆ ಇಂದಿನ ಇಪ್ಪತ್ತೊಂದನೆಯ ಶತಮಾನದಲ್ಲಿ ಪರಸ್ತ್ರೀ ಹಾಗೂ ಪರಧನಕ್ಕೆ ಎರಗುವುದೇ ನಿತ್ಯನೇಮ ಎನಿಸಿಕೊಳ್ಳುತ್ತಿದೆ. ಅನೈತಿಕತೆಗಳನ್ನು ಮುಚ್ಚಿಹಾಕುವುದಕ್ಕೆ ನೈತಿಕತೆಯ ವೇಷ. ಏಕಾದಶೀ, ಸಂಕಷ್ಟಹರ ಚತುರ್ಥಿ, ಶಿವರಾತ್ರಿ, ಅನಂತವ್ರತ -ಹೀಗೆ ಹತ್ತಾರು ವ್ರತಗಳನ್ನು ಆಚರಿಸುತ್ತ, ಅವುಗಳಿಗೆ ಪೂರಕವಾಗಿ ವಿವಿಧ ಬಗೆಗಳಲ್ಲಿ ನಾಮಧಾರಣೆ, ಮುದ್ರಾಧಾರಣೆಗಳನ್ನು ಮಾಡಿ ಅಡಿಗಡಿಗೂ ದೇವರ ನಾಮಸ್ಮರಣೆ ಮಾಡಿಕೊಳ್ಳುತ್ತ; ಮನಸ್ಸಿನೊಳಗೆ ತಮಗಾಗದವರನ್ನು, ತಮ್ಮ ವಿರೋಧಿಗಳನ್ನು, ತಮ್ಮ ಪ್ರತಿಸ್ಪರ್ಧಿಗಳನ್ನು ಹಣಿಯಲು ಕುಟಿಲೋಪಾಯಗಳನ್ನು ಹೆಣೆಯುತ್ತ; ವಿವಿಧ ಬಗೆಗಳಿಂದ ಲಾಭಗಳನ್ನು ಗಳಿಸಲು ಹವಣಿಸುತ್ತ; ಜೀವನಮೌಲ್ಯಗಳ ಬಗ್ಗೆ ರಂಗುರಂಗಿನ ಕಥೆ-ಉಪಕಥೆಗಳನ್ನು ಹೆಣೆಯುತ್ತ ಪ್ರವಚನ ಮಾಡುತ್ತ; ಗೋಸುಂಬೆಗಳ ಹಾಗೆ ಕ್ಷಣಕ್ಷಣಕ್ಕೂ ವೇಷಗಳನ್ನು ಬದಲಾಯಿಸುತ್ತ ಬೇಳೆ ಬೇಯಿಸಿಕೊಳ್ಳುವ ಕುಟಿಲನೀತಿತಜ್ಞರು ಲೋಕದಲ್ಲೆಲ್ಲ ವಿರಾಜಮಾನರಾಗಿದ್ದಾರೆ. “ಇಂತಪ್ಪ ಡಾಂಬಿಕರ ನಡುವೆ ಸಭ್ಯರನ್ನು ಎಮಗೊಮ್ಮೆ ತೋರಾ ಶಂಭುಜಕ್ಕೇಶ್ವರಾ” ಎಂದು ನಾವಿಂದು ಭಗವಂತನಲ್ಲಿ ಬೇಡಿಕೊಳ್ಳಬೇಕಾಗಿದೆ.
***
ಈ ವಚನ ಸಾಹಿತ್ಯದಲ್ಲಿ ತುಂಬಾ ಹಿಡಿಸುವ ವಿಷಯವೇನೆಂದರೆ ವಚನಗಳು ಎಂದಿಗೂ ಕೂಡ ಸಮಾಜಕ್ಕೆ ಒಳ್ಳೆಯ ಮೌಲ್ಯಗಳನ್ನು ಮಾತ್ರವೇ ಸಾರುತ್ತದೆ. ಮನುಷ್ಯನ ಬದುಕಿನ ಚೌಕಟ್ಟು ಏನು? ಯಾವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು? ಒಂದು ಉತ್ತಮ ಸಮಾಜದ ನಿರ್ಮಾಣಕ್ಕೆ ಏನೆಲ್ಲಾ ಬದಲಾವಣೆ ತರಬೇಕು ಇವೆಲ್ಲವನ್ನು ಅಚ್ಚುಕಟ್ಟಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಹೇಳಿದ್ದಾರೆ. ಇನ್ನು ಈ ವಚನಗಳ ಇನ್ನೊಂದು ವಿಶೇಷವೆಂದರೆ ಹತ್ತು ಹನ್ನೆರಡು ಶತಮಾನದ ಹಿಂದೆ ಹೇಳಲ್ಪಟ್ಟಿರುವಂತಹ ವಚನಗಳು ಇಂದಿನ ಸಮಾಜಕ್ಕೆ ಕೂಡ ಸರಿಹೊಂದುವಂತೆ ಇದೆ…! ಹಾಗಾದರೆ ಇಷ್ಟು ದೀರ್ಘಾವಧಿಯಲ್ಲಿ ಮನುಷ್ಯ ತನ್ನನ್ನು ತಾನು ಬದಲಾಯಿಸಿಕೊಳ್ಳಲೇ ಇಲ್ಲವೇ?!
ನಿಜ ಹೇಳಬೇಕೆಂದರೆ ಹಿಂದೆಂದಿಗಿಂತಲೂ ಈಗಿನ ಸಮಾಜದಲ್ಲಿಯೇ ಅನ್ಯಾಯಗಳು, ಅಕ್ರಮಗಳು, ಅನೈತಿಕತೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದರೆ ತಪ್ಪಾಗಲಾರದು…
ಹಾಗಾದರೆ ಮನುಷ್ಯನ ಮನಸ್ಥಿತಿ ಹೀಗಾಗಲು ಕಾರಣ ಏನು?! ಈ ಸಮಾಜ ಅದೆಷ್ಟು ಸತ್ಪುರುಷರನ್ನು ಕಂಡಿದೆ. ಎಷ್ಟೊಂದು ಉತ್ತಮವಾದ ಮೌಲ್ಯಯುತವಾದ ವಿಚಾರಗಳನ್ನು ಅವರು ನಮಗೆ ಬಿಟ್ಟುಹೋಗಿದ್ದಾರೆ . ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಂತೂ ಯುಗ ಯುಗಗಳಿಂದಲೂ ಮನುಷ್ಯನಿಗೆ ಉತ್ತಮ ಬದುಕಿನ ಪಾಟವನ್ನು ಹೇಳಿಕೊಡುತ್ತಲೇ ಇದೆ…ಅಷ್ಟಾದರೂ ಮನುಷ್ಯ ತನ್ನನ್ನು ತಾನು ತಿದ್ದಿಕೊಳ್ಳಲು ಏಕೆ ಬಯಸುವುದಿಲ್ಲ?! ಒಂದು ಉತ್ತಮ ಸಮಾಜ , ಒಳ್ಳೆಯ ನಾಗರಿಕ ಸಮಾಜವನ್ನು ನಿರ್ಮಿಸಬೇಕಾಗಿದ್ದ ಮನುಷ್ಯ ಬರೀ ತನ್ನ ಸ್ವಾರ್ಥಕ್ಕೆ ಕಟ್ಟುಬಿದ್ದು ಅನ್ಯಾಯ, ಅನೀತಿ, ಅನೈತಿಕತೆಗಳ ದಾಸನಾಗಿ ತನ್ನ ಜೊತೆಗೆ ಸಮಾಜವನ್ನು ಕೂಡ ಅವನತಿಯೆಡೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದರೆ ಅದು ವಿಪರ್ಯಾಸವೇ ಸರಿ!
ಸತ್ಯಕ್ಕನ ಮನಮುಟ್ಟುವ ಈ ವಚನವನ್ನು ಸುಂದರವಾದ ವಿವರಣೆಯೊಂದಿಗೆ ಮನಸ್ಸಿಗೆ ನಾಟುವಂತೆ ಬರೆದಿದ್ದೀರಿ ಸರ್. ಧನ್ಯವಾದಗಳು 🙏
ಸತ್ಯಕ್ಕನ ವಚನದ ಬಗೆಗಿನ ನನ್ನ ವ್ಯಾಖ್ಯಾನಕ್ಕೆ ದೀರ್ಘವಾಗಿ ಪ್ರತಿಕ್ರಿಯಿಸಿದ್ದೀರಿ. ಕೃತಜ್ಞತೆಗಳು.
ಸತ್ಯಕ್ಕನ ಉಪಲಬ್ಧ ವಚನಗಳು ಕೆಲವೇ ಆದರೂ ಅವೆಲ್ಲವೂ ಬಹಳ ಅರ್ಥಪೂರ್ಣವಾಗಿವೆ. ಅನ್ಯಾಯ, ಮೋಸ, ವಂಚನೆ, ಅನೈತಿಕತೆ, ಡಾಂಬಿಕತೆ ಮೊದಲಾದ ಅಪಮೌಲ್ಯಗಳನ್ನು ನಿಷ್ಠುರವಾಗಿ ಖಂಡಿಸಿದವಳು. ಅವಳ ವಚನಗಳೂ ಇಂದಿನ ನಮ್ಮ ಬದುಕಿಗೆ ಅರ್ಥಪೂರ್ಣವಾಗಿ ತಾಳೆಯಾಗುತ್ತವೆ. ನಿಮ್ಮಲ್ಲಿಯೂ ಅವು ಸಮಾಜಮುಖಿ ಚಿಂತನೆಗಳನ್ನು ಹುಟ್ಟುಹಾಕುತ್ತಿವೆ ಎಂಬುದು ನಿಮ್ಮ ಪ್ರತಿಕ್ರಿಯೆಯಿಂದ ಸ್ಪಷ್ಟವಾಗುತ್ತಿದೆ. ಈ ಬ್ಲಾಗಿನ ಉಳಿದ ಲೇಖನವನ್ನು ಓದಿ ಪ್ರತಿಕ್ರಿಯಿಸುತ್ತಿರಿ. ನಿಮ್ಮ ಪ್ರತಿಕ್ರಿಯೆ ಉಳಿದವರಲ್ಲಿಯೂ ಹೊಸ ಚಿಂತನೆಗಳನ್ನು ಹುಟ್ಟುಹಾಕಲಿ. ಧನ್ಯವಾದಗಳು.🙏