ಸಾಹಿತ್ಯಾನುಸಂಧಾನ

heading1

’ಸಾಹಿತ್ಯಾನುಸಂಧಾನ’ ಬ್ಲಾಗನ್ನು ಕುರಿತು…

ಆತ್ಮೀಯ ಕನ್ನಡ ಬಂಧುಗಳಿಗೆ  ನಮಸ್ಕಾರಗಳು.

ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಹೊಸಕ್ರಾಂತಿಯನ್ನೇ ಉಂಟುಮಾಡಿದೆ. ಭಾಷೆ, ಸಾಹಿತ್ಯಕ್ಷೇತ್ರಗಳೂ ಇದಕ್ಕೆ ಹೊರತಾಗಿಲ್ಲ. ಹಿಂದೆ ಸಾಹಿತ್ಯದ ಅಭಿವ್ಯಕ್ತಿಗೆ ಮತ್ತು ಪ್ರಕಟಣೆಗೆ ಒಂದು ಸೀಮಿತವಾದ ಪರಿಧಿ ಇತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅದು ಆ ಪರಿಧಿಯನ್ನು ಮೀರಿ ಬೆಳೆಯುತ್ತಿದೆ. ಹಾಗೆಂದು ನಾವಿಂದು ಅದಕ್ಕಾಗಿ ತುಂಬಾ ಸಂತೋಷಪಡಬೇಕಾಗಿಲ್ಲ. ಏಕೆಂದರೆ ಆಡಿದ್ದೆಲ್ಲವೂ ಭಾಷೆಯಾಗುತ್ತದೆ, ರಚಿಸಿದ್ದೆಲ್ಲವೂ ಸಾಹಿತ್ಯವಾಗುತ್ತದೆ, ಪ್ರದರ್ಶಿಸಿದ್ದೆಲ್ಲವೂ ಅಭಿವ್ಯಕ್ತಿಯಾಗುತ್ತದೆ ಎಂಬ ಭ್ರಮೆ ಎಲ್ಲೆಡೆ ಆವರಿಸಿಕೊಂಡಿದೆ. ಹಿಂದೆ ಭಾಷೆ ಹಾಗೂ ಸಾಹಿತ್ಯಕ್ಕಾಗಿ ದುಡಿದವರಿಗೆ ಅದು ಹೇಗಿರಬೇಕೆಂಬ ಕಲ್ಪನೆಯೊಂದಿಗೆ ಅದರ ಭವಿಷ್ಯದ ಬಗ್ಗೆಯೇ ಚಿಂತೆ, ಚಿಂತನೆಗಳಿದ್ದವು. ಹಾಗಾಗಿಯೇ ಅಂದಿನ ಭಾಷೆಯ ಹಾಗೂ ಸಾಹಿತ್ಯದ ಕುರಿತ ಚಿಂತನೆಗಳು, ರಚನೆಗಳು ನಿರಂತರವಾಗಿ ಉಳಿದು ಕಾಲಕಾಲಕ್ಕೆ ಹೊಸಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತ ಅಚ್ಚಳಿಯದೆ ಉಳಿದುಕೊಂಡು ಬಂದಿವೆ. ಇನ್ನೊಂದು ಕಡೆಯಲ್ಲಿ ಇಂದು ಆಧುನಿಕ ತಂತ್ರಜ್ಞಾನದ ಫಲಶ್ರುತಿಯಾಗಿ  ಬ್ಲಾಗ್ ಬರವಣಿಗೆ ಕನ್ನಡದಲ್ಲಿ ಬೆಳೆಯುತ್ತಿದೆ. ಹೊಸರೀತಿಯ ಸಾಹಿತ್ಯ ರೂಪುಗೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ಭಾಷೆಯೂ ಬದಲಾಗುತ್ತಿದೆ.

ಸುಮಾರು ಹನ್ನೆರಡು ವರ್ಷಗಳ ಹಿಂದೆ ನನ್ನ ಹಿರಿಯ ಸಹೋದ್ಯೋಗಿ ಮಿತ್ರರು ಬ್ಲಾಗ್ ಬರವಣಿಗೆಯ ಬಗ್ಗೆ ಒಂದಷ್ಟು ಸಲಹೆ ಸೂಚನೆಗಳನ್ನು ಪ್ರಸ್ತಾಪಿಸಿದ್ದರು. ಆದರೆ ಆ ಸಮಯದಲ್ಲಿ ನನಗೆ ಬ್ಲಾಗ್ ಬರವಣಿಗೆಯ ಬಗ್ಗೆ ಸರಿಯಾದ ಜ್ಞಾನವಾಗಲೀ ಸ್ಪಷ್ಟ ಆಲೋಚನೆಗಳಾಗಲೀ ಇರಲಿಲ್ಲ. ಅದರ ಜೊತೆಗೆ ಆ ಬಗೆಗಿನ ತಾಂತ್ರಿಕಪರಿಣತಿಯೂ ಇರಲಿಲ್ಲ. ಇದಲ್ಲದೆ ಇನ್ನೂ  ಹಲವಾರು ಅನಿರೀಕ್ಷಿತ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಅಂದು ಹಿರಿಯ ಸ್ನೇಹಿತರು ನೀಡಿದ ಪ್ರೇರಣೆ ಈಗ “ಸಾಹಿತ್ಯಾನುಸಂಧಾನ” ಎಂಬ ಹೆಸರಿನ ಬ್ಲಾಗ್ ರೂಪದಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ.

ಕಳೆದ ಮೂವತ್ತು ವರ್ಷಗಳಿಂದ ಕೆಲವು ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಅಧ್ಯಾಪನದ ಸಂದರ್ಭಗಳಲ್ಲಿ ವೈವಿಧ್ಯಮಯ ವಿಚಾರಗಳನ್ನು ಕಂಡುಕೊಂಡಿದ್ದೇನೆ. ಅವೆಲ್ಲವುಗಳನ್ನು ಸಾಹಿತ್ಯರೂಪದಲ್ಲಿ ಅಭಿವ್ಯಕ್ತಗೊಳಿಸಬೇಕೆಂಬ ಆಲೋಚನೆಗಳಿದ್ದರೂ ಬೇರೆ ಬೇರೆ ಕಾರಣಗಳಿಂದ ನನ್ನ ಸಾಹಿತ್ಯಚಟುವಟಿಕೆಗಳಿಗೆ, ಆಲೋಚನೆಗಳಿಗೆ, ಚಿಂತನೆಗಳಿಗೆ, ಅಭಿವ್ಯಕ್ತಿಗೆ ಸ್ಪಷ್ಟರೂಪವನ್ನು ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ.  ಇಲ್ಲಿ ಅವೆಲ್ಲವುಗಳಿಗೆ ಸ್ಪಷ್ಟ ಹಾಗೂ ಹೊಸರೂಪವನ್ನು ಕೊಡಲು ಪ್ರಯತ್ನಿಸಿದ್ದೇನೆ. ಅದಕ್ಕಾಗಿಯೇ ಈ ಬ್ಲಾಗನ್ನು “ಸಾಹಿತ್ಯಾನುಸಂಧಾನ” ಎಂದು ಹೆಸರಿಸಿದ್ದೇನೆ. ಅಂತರ್ಜಾಲ ಬಹಳ ಬೇಗ ಜನಸಮೂಹವನ್ನು ತಲುಪುವುದರಿಂದ ನನ್ನ ಸಾಹಿತ್ಯಸಂಬಂಧಿ ಅಭಿವ್ಯಕ್ತಿಗೆ ಇದೇ ಸರಿಯಾದ ಮಾಧ್ಯಮವೆಂದುಕೊಂಡಿದ್ದೇನೆ. ಇದು ಚೊಚ್ಚಲ ಪ್ರಯತ್ನವಾದುದರಿಂದ ಲೋಪದೋಷಗಳು ಸಹಜವಾಗಿ ಅಲ್ಲಲ್ಲಿ ನುಸುಳಿರಬಹುದು. ಬ್ಲಾಗಿನ ವ್ಯಾಪ್ತಿಯೂ ಸೀಮಿತವಾಗಿರಬಹುದು. ಮುಂದಿನ ದಿನಗಳಲ್ಲಿ ಸಹೃದಯರ ಅಭಿಪ್ರಾಯ, ಸೂಚನೆ, ಮಾರ್ಗದರ್ಶನಗಳ ಆಧಾರದ ಮೇಲೆ ಅವೆಲ್ಲವನ್ನೂ ಪರಿಷ್ಕರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಕೆಲವು ವರ್ಷಗಳ ಹಿಂದೆ ಕನ್ನಡದ ಒಬ್ಬ ಮಹನೀಯರು ಒಂದು ವಿಚಾರಸಂಕಿರಣದಲ್ಲಿ, ’ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯ ಓದುವುದೂ ಕಷ್ಟ, ಅರ್ಥೈಸಿಕೊಳ್ಳುವುದೂ ಕಷ್ಟ, ಆ ಭಾಷೆಯೂ ಇಂದಿಗೆ ಅಪ್ರಸ್ತುತ, ಹಾಗಾಗಿ ನಮ್ಮ ಪಠ್ಯಪುಸ್ತಕಗಳಿಂದ ಅದನ್ನು ಕಿತ್ತುಹಾಕಬೇಕು’ ಎಂಬರ್ಥದಲ್ಲಿ ಒಂದು ಹೇಳಿಕೆಯನ್ನೇ ನೀಡಿದರು. ಓದುವುದು, ಅರ್ಥೈಸುವುದು ಅವರವರ  ವೈಯಕ್ತಿಕ ಸಮಸ್ಯೆ. ಅದನ್ನು ಅವರವರೇ ಪರಿಹರಿಸಿಕೊಳ್ಳಬೇಕು. ಹಳೆಯ ಸಾಹಿತ್ಯದ ನೆಲೆಗಟ್ಟಿನ ಮೇಲೆಯೇ ಕಾಲಕಾಲಕ್ಕೆ ಹೊಸ ಸಾಹಿತ್ಯ ರೂಪುಗೊಂಡಿದೆಯಲ್ಲ! ಹತ್ತು ಹಲವು ಪ್ರಕಾರಗಳಿಗೆ ಜನ್ಮನೀಡಿದೆಯಲ್ಲ!  ಹಳೆಯ ಸಾಹಿತ್ಯವೆಲ್ಲವೂ ಮತ್ತೆ ಮತ್ತೆ ಹೊಸ ಹೊಸ ಚಿಂತನೆಗಳಿಗೆ ಒಳಪಡುತ್ತಿದೆಯಲ್ಲ!. ಕಾಲಕಾಲಕ್ಕೆ  ಹೊಸಸಾಹಿತ್ಯವನ್ನು ರೂಪುಗೊಳಿಸುತ್ತಿದೆಯಲ್ಲ!. ವರ್ತಮಾನದ ಬದುಕಿನೊಂದಿಗೆ ಆಶ್ಚರ್ಯಕರ ರೀತಿಯಲ್ಲಿ ಅನುಸಂಧಾನವನ್ನು ಸಾಧಿಸುತ್ತಲೇ ಇದೆಯಲ್ಲ!. ಹಾಗಿರುವಾಗ, ಯಾವುದು ಅಪ್ರಸ್ತುತ?! ಯಾವುದು ಪ್ರಸ್ತುತ?! ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳ ಮೇಲಿನ ಅಭಿಮಾನಿಗಳಾದ ನಾವಿಂದು ಈ ಬಗ್ಗೆ ಗಂಭೀರವಾಗಿಯೇ ಚಿಂತಿಸಬೇಕಾಗಿದೆ.

“ಹಳೆಬೇರು, ಹೊಸಚಿಗುರು ಕೂಡಿರಲು ಮರ ಸೊಬಗು” ಎಂಬ ಡಿವಿಜಿಯವರ ಕಗ್ಗೋಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಅದರ ಹಿನ್ನೆಲೆಯಲ್ಲಿಯೇ ನನ್ನ ಆಲೋಚನೆ, ಚಿಂತನೆ, ಅಧ್ಯಯನಗಳನ್ನು ನಿಗದಿತರೂಪದಲ್ಲಿ ಪ್ರಸ್ತುತಪಡಿಸುವುದಕ್ಕೆ ಪ್ರಯತ್ನಿಸಿದ್ದೇನೆ. ನನ್ನ ಈ ಬರವಣಿಗೆ ಹಾಗೂ ಅದರಲ್ಲಿ ಪ್ರಸ್ತಾಪಿತವಾಗಿರುವ ವಿಚಾರಗಳು ನಿಷ್ಕೃಷ್ಟವೆಂದು ಯಾವತ್ತೂ ಹೇಳಲಾರೆ. ಇವು ನನ್ನ ಅಭಿಪ್ರಾಯಗಳ ಮಂಡನೆ ಮಾತ್ರ. ಪರಿಶೀಲನೆ, ಪರಾಮರ್ಶೆ, ಪರಿಷ್ಕರಣಕ್ಕೆ ಅವಕಾಶಗಳು ಇದ್ದೇ ಇವೆ.  ಇಲ್ಲಿನ ಎಲ್ಲಾ ಬರವಣಿಗೆಗಳು ವಸ್ತುನಿಷ್ಠವೇ ವಿನಾ ತತ್ತ್ವನಿಷ್ಠವಲ್ಲ . ಮುಂದಿನ ದಿನಗಳಲ್ಲಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ನನ್ನ ಬರವಣಿಗೆಯನ್ನು ದಾಖಲಿಸುವ ಅಲೋಚನೆಯೂ ಇದೆ.

’ಸಾಹಿತ್ಯಾನುಸಂಧಾನ’ ಎಂಬ ಬ್ಲಾಗಿನ  ಶೀರ್ಷಿಕೆಯ ಬಗ್ಗೆ ಹೆಚ್ಚಿನವರಿಗೆ ಕುತೂಹಲವಿರಬಹುದು. ಈ ಬ್ಲಾಗಿನ ಎಲ್ಲಾ ಹೆಚ್ಚಿನ ಬರಹಗಳು  ಹೊಸಬದುಕಿನೊಂದಿಗೆ ಸಾಹಿತ್ಯದ ಅನುಸಂಧಾನವನ್ನು ಸಾಧಿಸುವ  ಉದ್ದೇಶವನ್ನು ಹೊಂದಿವೆ. ನನ್ನ ತಿಳಿವಳಿಕೆಯ ಪ್ರಕಾರ, ಸಾಹಿತ್ಯಕ್ಕೆ ಅಪ್ರಸ್ತುತತೆ ಎಂಬುದಿಲ್ಲ. ಅದು ಕಾಲಕಾಲಕ್ಕೆ ವಿವಿಧ ಕ್ಷೇತ್ರಗಳಲ್ಲಿ ವರ್ತಮಾನದೊಂದಿಗೆ ಅನುಸಂಧಾನವನ್ನು ಸಾಧಿಸುತ್ತಲೇ ಇರುತ್ತದೆ. ಇನ್ನೊಂದರ್ಥದಲ್ಲಿ ಹೊಸಬದುಕಿಗೆ, ಹೊಸ ವ್ಯವಸ್ಥೆಗೆ ಬೆಳಕನ್ನು ಚೆಲ್ಲುತ್ತ ಹೊಸಸಾಹಿತ್ಯದ ಅಭಿವ್ಯಕ್ತಿಗೆ ಪ್ರೇರಣೆಗಳನ್ನು ಒದಗಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿನ ಲೇಖನಗಳು ಮೂಡಿಬಂದಿವೆ. ಈ ಅನುಸಂಧಾನದ ಜೊತೆಗೆ ಮುಂದಿನ ದಿನಗಳಲ್ಲಿ ಕೆಲವು ಹೊಸ ಸೇರ್ಪಡೆಯೂ ನಡೆಯಲಿದೆ.

ಈ ಬ್ಲಾಗ್ ಕೇವಲ ಸಾಹಿತ್ಯಾಸಕ್ತರಿಗೆ ಮಾತ್ರ ಸೀಮಿತವಾಗಿರದೆ ನನ್ನಂತಹ ಅಧ್ಯಾಪಕರಿಗೂ ವಿದ್ಯಾರ್ಥಿ ಸಮುದಾಯಕ್ಕೂ ಪ್ರಯೋಜನವಾಗಬೇಕೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಒಂದು ಪ್ರತ್ಯೇಕ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಪದವಿ ತರಗತಿಗಳ ಆಯ್ದ ಪಠ್ಯಭಾಗಗಳನ್ನು ವ್ಯಾಖ್ಯಾನಕ್ಕೆ, ವಿಮರ್ಶೆಗೆ ಒಳಪಡಿಸುವ ಆಲೋಚನೆಯೂ ಇದೆ. ಈ ರೀತಿಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಳ್ಳುವುದರಿಂದ ನನ್ನಂತಹ ಅಧ್ಯಾಪಕ ಬಂಧುಗಳಿಗೂ ವಿದ್ಯಾರ್ಥಿ ಸಮುದಾಯಕ್ಕೂ ಅನುಕೂಲವಾಗಲಿ, ಮಾತ್ರವಲ್ಲದೆ ಎಲ್ಲಾ ವರ್ಗದ ಸಹೃದಯರಿಗೂ ಈ ಬ್ಲಾಗಿನ ಬರಹಗಳು ತಲುಪಲಿ ಎಂಬ ನಂಬಿಕೆ ನನ್ನದು.

“ಕಟ್ಟಿಯುಮೇನೋ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ!” ಎಂಬ ಹಳೆಗನ್ನಡ ಕವಿ ಜನ್ನನ ಮಾತಿನಂತೆ, ಯಾವುದೇ ಸಾಹಿತ್ಯ ಅಥವಾ ಕಲೆಗಳ ಸಾರ್ಥಕ್ಯಕ್ಕೆ ಓದುಗರು ಅಥವಾ ಸಹೃದಯರು ಬಹಳ ಮುಖ್ಯ. ನಾನು ಸೃಜಿಸಿದ ಈ ’ಸಾಹಿತ್ಯಾನುಸಂಧಾನ’ ಎಂಬ ಹೊಸಮಾಲೆ ಬಾಡಿಹೋಗದಂತೆ ಸಹೃದಯ ಕನ್ನಡಿಗರು ಈ ಬ್ಲಾಗನ್ನು ನಿರಂತರ ಓದುತ್ತ, ಕಾಮೆಂಟ್ ಬಾಕ್ಸ್ನಲ್ಲಿ ತಮ್ಮ ಅನಿಸಿಕೆಗಳನ್ನು ದಾಖಲಿಸುತ್ತ, ಸಲಹೆ ಸೂಚನೆಗಳ ಮೂಲಕ ಪ್ರೋತ್ಸಾಹಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

-ಡಾ. ವಸಂತ ಕುಮಾರ್

Leave a Reply

Your email address will not be published. Required fields are marked *