ಗುರುವೆಂಬೆನೆ ಹಲಬರ ಮಗ!
ಲಿಂಗವೆಂಬೆನೆ ಕಲ್ಲುಕುಟಿಗರ ಮಗ!
ಪ್ರಸಾದವೆಂಬೆನೆ ಒಕ್ಕಲಿಗರ ಮಗ!
ಪಾದೋದಕವೆಂಬೆನೆ ದೇವೇಂದ್ರನ ಮಗ!
ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ
ತನ್ನೊಳಗ ನೋಡೆಂದನಂಬಿಗರ ಚೌಡಯ್ಯ
ವಚನದ ಅನ್ವಯಕ್ರಮ:
’ಗುರು’ ಎಂಬೆನೆ ಹಲವರ ಮಗ, ’ಲಿಂಗ’ ಎಂಬೆನೆ ಕಲ್ಲುಕುಟಿಗರ ಮಗ, ’ಪ್ರಸಾದ’ ಎಂಬೆನೆ ಒಕ್ಕಲಿಗರ ಮಗ, ’ಪಾದೋದಕ’ ಎಂಬೆನೆ ದೇವೇಂದ್ರನ ಮಗ, ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ, ತನ್ನ ಒಳಗ ನೋಡು ಎಂದನ್ ಅಂಬಿಗರ ಚೌಡಯ್ಯ.
ಪದ-ಅರ್ಥ:
ಹಲವರ ಮಗ-ಹಲವು ಮಂದಿಯ ಅನುಗ್ರಹದಿಂದ ಬೆಳೆದವನು, ಹಲವು ಮಂದಿಗಳ ಜ್ಞಾನವನ್ನು ಪಡೆದು ಜ್ಞಾನಿ ಎನಿಸಿಕೊಂಡವನು; ಕಲ್ಲುಕುಟಿಗ-ಒಡ್ಡ, ಕಲ್ಲಿನ ಕೆಲಸ ಮಾಡುವವನು; ಶಿವಲಿಂಗ, ದೇವರ ಬಿಂಬ ಮೊದಲಾದವುಗಳನ್ನು ಕೆತ್ತಿರೂಪುಗೊಳಿಸುವವನು; ಪ್ರಸಾದ-ದಾಸೋಹ, ಹಸಿದು ಬಂದವನಿಗೆ ಉಣಬಡಿಸುವ ಆಹಾರ; ಒಕ್ಕಲಿಗ-ರೈತ, ಭೂಮಿಯ ಒಡೆಯ, ಜಮೀನ್ದಾರ; ಪಾದೋದಕ-ಪಾದ ತೊಳೆದ ನೀರು, ಗಂಗೆ; ದೇವೇಂದ್ರ-ಸ್ವರ್ಗದ ಒಡೆಯ, ಮಳೆಯನ್ನು ಸುರಿಸುವವನು; ಈಸುವ-ಇಷ್ಟನ್ನೂ; ತನ್ನೊಳಗ-ತನ್ನ ಅಂತರಂಗ
ಭಕ್ತನಾದವನು ಅಥವಾ ಭಕ್ತನೆನಿಸಿಕೊಳ್ಳಬೇಕು ಎಂದು ಭಾವಿಸುವವನು ಮೊದಲು ತನ್ನ ಮನಸ್ಸನ್ನು ತಾನು ಅರಿತಿರಬೇಕು ಎಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ನಾಲ್ಕು ದೃಷ್ಟಾಂತಗಳ ಮೂಲಕ ಸ್ಪಷ್ಟಪಡಿಸಿದ್ದಾನೆ.
ಮೊದಲನೆಯದು ಗುರು ಮತ್ತು ಆತನ ಸ್ಥಾನಮಾನ. ’ಗುರು’ ಎಂಬುದು ಒಂದು ಮಹತ್ತರವಾದ ಸ್ಥಾನಮಾನ. ಆ ಸ್ಥಾನಮಾನವನ್ನು ಗಳಿಸಿಕೊಳ್ಳಬೇಕಾದರೆ ಹಲವು ಪ್ರಕ್ರಿಯೆಗಳನ್ನು, ಹಲವು ಹಂತಗಳನ್ನು ದಾಟಬೇಕು. ಹಾಗೆ ಗಳಿಸಿಕೊಂಡವನು ’ಗುರು’ ಎನಿಸಿಕೊಳ್ಳುತ್ತಾನೆ. ಹಾಗಾಗಿ ’ಗುರು’ ಸ್ಥಾನವನ್ನು ಪಡೆದುಕೊಂಡವನು ಆ ಸ್ಥಾನವನ್ನು ಪಡೆಯುವುದಕ್ಕಿಂತ ಮೊದಲು ಹಲವು ಹಂತಗಳಲ್ಲಿ ಹಲವು ಮಂದಿಯಿಂದ ಜ್ಞಾನವನ್ನು ಪಡೆದುಕೊಂಡಿರುವುದರಿಂದ, ಹಾಗೂ ಅವರೆಲ್ಲರೂ ನೀಡಿದ ಜ್ಞಾನದಿಂದ ಆತನಿಗೆ ಹೊಸಜನ್ಮ ದೊರೆತಿರುವುದರಿಂದ ಆತ ಹಲವು ಮಂದಿಯ ’ಮಗ’ ಎನಿಸಿಕೊಳ್ಳುತ್ತಾನೆ.
ಎರಡನೆಯದು, ಲಿಂಗ ಅಥವಾ ಶಿವಲಿಂಗದ ಆವಿರ್ಭವ. ’ಲಿಂಗ’ ಎಂಬುದು ತನ್ನಿಂದ ತಾನೇ ಆವಿರ್ಭವಿಸಿದ್ದಲ್ಲ. ಅದನ್ನು ಕಲ್ಲುಕುಟಿಗ ಕಲ್ಲನ್ನು ಕೆತ್ತಿ ಸಿದ್ಧಪಡಿಸಿದ್ದು. ಎಲ್ಲಾ ಕಲ್ಲುಗಳಿಂದ ಶಿವಲಿಂಗವನ್ನಾಗಲೀ ದೇವರ ಪ್ರತಿಮೆಯನ್ನಾಗಲೀ ಕೆತ್ತಲು ಅಸಾಧ್ಯ. ಅದಕ್ಕೆ ಸೂಕ್ತವಾದುದನ್ನು ಆರಿಸಿಕೊಳ್ಳಬೇಕು. ಯಾವುದೋ ರೂಪದಲ್ಲಿರುವ ಕಲ್ಲೊಂದು ಕಲ್ಲುಕುಟಿಗನ ಅಥವಾ ಶಿಲ್ಪಿಯ ಕೌಶಲ್ಯದಿಂದ, ಪ್ರತಿಭೆಯಿಂದ, ಶಿಲ್ಪಕಲಾ ಜ್ಞಾನದಿಂದ ಲಿಂಗರೂಪವನ್ನೋ ಪ್ರತಿಮೆಯ ರೂಪವನ್ನೋ ತಾಳಿಕೊಳ್ಳುತ್ತದೆ. ಹೀಗೆ ಕಲ್ಲೊಂದು ಶಿವಲಿಂಗದ ರೂಪದಲ್ಲಿ ಆವಿರ್ಭವಿಸುವುದರಿಂದ ಲಿಂಗ ಎಂಬುದು ಕಲ್ಲುಕಟಿಗರ ’ಮಗ’ ಎನಿಸಿಕೊಳ್ಳುತ್ತದೆ.
ಮೂರನೆಯದು ಪ್ರಸಾದ ಅಥವಾ ಅದರ ಮಹತ್ವ. ’ಪ್ರಸಾದ’ಕ್ಕೆ ಬೇಕಾದುದು ಹಲವು ಬಗೆಯ ಧಾನ್ಯಗಳು, ಸೊಪ್ಪು ತರಕಾರಿಗಳು ಇತ್ಯಾದಿ. ಅವುಗಳನ್ನು ನಾಡಿನ ಎಲ್ಲರಿಗೂ ಬೆಳೆಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ರೈತರು, ಒಕ್ಕಲಿಗರು ಬೆಳೆಸಿದ್ದು. ಇನ್ನೊಂದರ್ಥದಲ್ಲಿ ರೈತರ ಅಥವಾ ಒಕ್ಕಲಿಗರ ಮೂಲಕ ಆವಿರ್ಭವಿಸಿದ್ದು. ಹಾಗಾಗಿ ’ಪ್ರಸಾದ’ ಎಂಬುದು ದಾಸೋಹದ ಒಂದು ರೂಪವಾದರೂ ಅದರಲ್ಲಿ ಬಳಸುವ ಧಾನ್ಯಗಳನ್ನುಎಲ್ಲಾ ದಾಸೋಹಿಗಳು ಸ್ವಂತವಾಗಿ(ಕೆಲವರು ಬೆಳೆಸಿರಬಹುದು) ಬೆಳೆಸಿದ್ದಲ್ಲ. ಅವರು ಬೆಳೆಸದೇ ಇದ್ದರೆ ದಾಸೋಹಕ್ಕೆ ಮೂಲದ್ರವ್ಯಗಳೂ ಇರುವುದಿಲ್ಲ, ಪ್ರಸಾದ, ದಾಸೋಹವೂ ಸಾಧ್ಯವಿಲ್ಲ. ಹಾಗಾಗಿ ’ಪ್ರಸಾದ’ವೆಂಬುದು ಒಕ್ಕಲಿಗರ ಅಥವಾ ರೈತರ ’ಮಗ’ ಎನಿಸಿಕೊಳ್ಳುತ್ತದೆ.
ನಾಲ್ಕನೆಯದು ’ಪಾದೋದಕ’ ಅಥವಾ ’ನೀರು’. ’ಪಾದೋದಕ’ವೆಂಬುದು ಅತಿಥಿ ಸತ್ಕಾರದಲ್ಲಿ, ದೈನಂದಿನ ಬದುಕಿನಲ್ಲಿ ಬಹುಮುಖ್ಯವಾದರೂ ಅಲ್ಲಿ ಬಳಸುವ ನೀರು ದೇವೇಂದ್ರನಿಂದ ಮಳೆಯ ರೂಪದಲ್ಲಿ ಲಭ್ಯವಾದುದು. ಆತನಿಂದ ಆವಿರ್ಭವಿಸಿದ್ದು. ಆದುದರಿಂದ ಅದು ದೇವೇಂದ್ರನ ಮಗ. ಪಾದೋದಕ ಅಥವಾ ನೀರು ಇಲ್ಲದಿದ್ದರೆ ಏನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಬದುಕುವುದಕ್ಕೂ ಕೂಡಾ. ದೇವೇಂದ್ರ ನೀರಿನ ರೂಪದಲ್ಲಿ ಮಳೆಯನ್ನು ಅನುಗ್ರಹಿಸಿರುವುದರಿಂದ ಅದು ಭಕ್ತರ ಅನುಷ್ಠಾನಗಳಿಗೆ ಪೂರಕವಾಗಿದೆ. ಅದೇನಿದ್ದರೂ ದೇವೇಂದ್ರನಿಂದ ಬಂದಿರುವುದರಿಂದ ಅದು ದೇವೇಂದ್ರ”ಮಗ’ ಎನಿಸಿಕೊಳ್ಳುತ್ತದೆ.
ಮೇಲಿನ ನಾಲ್ಕು ದೃಷ್ಟಾಂತಗಳ ಮೂಲಕ ಅರಿತುಕೊಳ್ಳಬಹುದಾದ ವಿಚಾರವೆಂದರೆ, ಶಿವಭಕ್ತನಾದವನು ತನ್ನ ದೈನಂದಿನ ಅನುಷ್ಠಾನಗಳಲ್ಲಿ ಗೌರವಿಸುವ ಮತ್ತು ಬಳಸುವ ಗುರು, ಲಿಂಗ, ಪ್ರಸಾದ ಹಾಗೂ ಪಾದೋದಕಗಳಾವುವೂ ಆತನ ಸ್ವಂತದ್ದಲ್ಲ. ಅನ್ಯರಿಂದ ಪಡೆದಿರುವಂತಹವು. ಅನ್ಯರಿಂದ ಅನಾಯಾಸವಾಗಿ ಪಡೆದಿರುವುದನ್ನು ಸ್ವಂತದ್ದೆಂದು ಭಾವಿಸಿಕೊಳ್ಳುವುದು, ಅವುಗಳನ್ನು ಭಕ್ತಿಯ ಅನುಷ್ಠಾನಗಳಲ್ಲಿ ಬಳಸಿಕೊಂಡು ಅಥವಾ ಇತರರಿಗೆ ದಾನಮಾಡಿ ಭಕ್ತನೆನಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಡಾಂಬಿಕತೆಯೇ ವಿನಾ ಸದ್ಭಕ್ತಿ ಎನಿಸಿಕೊಳ್ಳಲಾರದು, ಯಾರದ್ದೋ ಅನುಗ್ರಹವನ್ನು ತನ್ನದೆಂದು ನೆಚ್ಚಿಕೊಂಡು ಮೆರೆಯಬಾರದು, ಯಾರಿಂದಲೋ ಪಡೆದುದನ್ನು ತನ್ನದೆಂದು ಸಾಧಿಸಿಕೊಳ್ಳಬಾರದು ಎಂಬುದು ಅಂಬಿಗರ ಚೌಡಯ್ಯನ ವಾದ.
ಹಾಗಾದರೆ ಗುರುವನ್ನು ಮೀರಿ ಬದುಕು ಹೇಗೆ? ಲಿಂಗಪೂಜೆಯಿಲ್ಲದೆ ಭಕ್ತಿ ಹೇಗೆ? ಪ್ರಸಾದ, ಪಾದೋದಕಗಳಿಲ್ಲದೆ ಅನುಷ್ಠಾನಗಳು ಹೇಗೆ? ಚೌಡಯ್ಯನ ಪ್ರಕಾರ, ಭಕ್ತಿಯ ಹಾಗೂ ಅದರ ಅನುಷ್ಠಾನದ ಸಂದರ್ಭಗಳಲ್ಲಿ ಭಕ್ತನೊಬ್ಬ ಯಾವೊಂದಕ್ಕೂ ಅಂಟಿದಂತಿದ್ದರೂ ಅಂಟದಂತಿರಬೇಕು. ಹಿಡಿದಂತಿದ್ದರೂ ಹಿಡಿಯದಂತಿರಬೇಕು. ಆತನ ಪ್ರಕಾರ, ದೈನಂದಿನ ಅನುಷ್ಠಾನಗಳಲ್ಲಿ ಒಂದಿಷ್ಟನ್ನು ಸ್ವೀಕರಿಸಲೂಬಾರದು, ಒಂದಿಷ್ಟನ್ನು ಬಿಡಲೂಬಾರದು ಎನ್ನುವಂತಾದರೆ ಅದುವೇ ನಿಜವಾದ ಭಕ್ತಿಯೆನಿಸಿಕೊಳ್ಳುತ್ತದೆ. ಯಾವುದಕ್ಕೂ ಅಂಟಿಯೂ ಅಂಟದಂತಿರಬೇಕು ಎಂಬ ಸ್ಥಿತಿ. ಇದನ್ನು ಸಾಧಿಸಬೇಕಾದರೆ ಭಕ್ತನಾದವನು ಅಥವಾ ಭಕ್ತನಾಗಬಯಸುವವನು ಮೊದಲು ತನ್ನ ಇತಿಮಿತಿಗಳನ್ನು, ಮನಸ್ಸನ್ನು ಹಾಗೂ ಅದರ ಅಂತರಾಳವನ್ನು ಅರಿತಿರಬೇಕು. ಇಲ್ಲದಿದ್ದರೆ ಎಲ್ಲವೂ ಬೂಟಾಟಿಕೆ, ಡಾಂಬಿಕತೆ, ಸೋಗು ಎನಿಸಿಕೊಳ್ಳುತ್ತದೆ ಎಂಬುದು ಭಕ್ತರಿಗೆ ಅಂಬಿಗರ ಚೌಡಯ್ಯನ ಕಿವಿಮಾತು.
ಹನ್ನೆರಡೆಯ ಶತಮಾನದಲ್ಲಿಯೇ ಭಕ್ತಿ ಹಾಗೂ ಭಕ್ತನ ಹೆಸರಿನಲ್ಲಿ ಸಾಕಷ್ಟು ಬೂಟಾಟಿಕೆ ಹಾಗೂ ಡಾಂಬಿಕತೆಗಳು ತುಂಬಿಕೊಂಡಿದ್ದವು ಎಂದು ತೋರುತ್ತದೆ. ಅದಕ್ಕಾಗಿಯೇ ಅಂಬಿಗರ ಚೌಡಯ್ಯ ಈ ಸೋಗಲಾಡಿಕೆಯ ವರ್ತನೆಯನ್ನು ಖಂಡಿಸುತ್ತಾನೆ. ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಎಲ್ಲವನ್ನೂ ಅನ್ಯರಿಂದ ತೆಗೆದುಕೊಂಡು, ಎರವಲು ಪಡೆದುಕೊಂಡೋ ಅಥವಾ ಎಗರಿಸಿಕೊಂಡೋ ಕೊಳ್ಳೆಹೊಡೆದೋ ಅನ್ಯರಿಗೆ ದಾನಮಾಡಿ, ಊಟಹಾಕಿಸಿ, ಜನರನ್ನು ಮೆಚ್ಚಿಸಿ ದಾಸೋಹಿಯಾಗುವ, ದಾನಿಯೆನಿಸಿಕೊಳ್ಳುವ, ದೊಡ್ಡಮನುಷ್ಯರಾಗುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಲೋಕದ ಜನ ಅದನ್ನೇ ಸರಿಯೆಂದೂ ವಾಸ್ತವವಾದುದನ್ನು ಸುಳ್ಳೆಂದೂ ಭಾವಿಸಿಕೊಳ್ಳುತ್ತಲೇ ಸಾಧ್ಯವಾದಷ್ಟು ತಾವೂ ಜೇಬಿಗಿಳಿಸಿ, ಹೊಟ್ಟೆಗಿಳಿಸಿ ಮೆಚ್ಚಿಕೊಳ್ಳುತ್ತಲೇ ಇದ್ದಾರೆ. ಅಂಬಿಗರ ಚೌಡಯ್ಯನ ಈ ವಚನ ಅಂದಿಗಿಂತ ಇಂದಿನ ಪರಿಸ್ಥಿತಿಯನ್ನು ಹೆಚ್ಚು ಅರ್ಥಪೂರ್ಣವಾಗಿ ವಿಡಂಬಿಸುತ್ತದೆ ಎಂದೆನಿಸುತ್ತದೆ.
ಡಾ. ವಸಂತ್ ಕುಮಾರ್, ಉಡುಪಿ.
******
ವಚನಗಳ ನಿಜ ಅರ್ಥ ತಿಳಿಯುವುದು ವಿವರಣೆಯಿಂದಲೆ.ಅದೂ ಚೌಡಯ್ಯನದು
OMG…what an excellent explanation 👍👌
ವ್ಯಾಖ್ಯಾನ ಸೊಗಸಾಗಿದೆ 👌