ಸಾಹಿತ್ಯಾನುಸಂಧಾನ

heading1

ಮುಳ್ಳಿಡಿದ ಮರವೇರಿದಂತಾದುದು-ಲಕ್ಷ್ಮೀಶ-ಭಾಗ-೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ-(ಭಾಗ-೨)

 

ಆಲಿಸಲರ್ಜುನ ಮುನ್ನ ವಿಪ್ರನುಂಟೋರ್ವನು

ದ್ದಾಲಕಾಖ್ಯಂ ತಿಳಿದನಖಿಳ ಶಾಸ್ತ್ರಂಗಳಂ

ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂಬಾಕೆ ಬಳಿಕ

ಕಾಲಕಾಲದ ಜಪಾನುಷ್ಠಾನ ಪೂಜೆಗಳಿ

ಗಾಲಸ್ಯವಂ ಮಾಡದೆನ್ನ ಪರಿಚರ್ಯೆಗನು

ಕೂಲೆಯಾಗಿರ್ದು ಮನೆವಾರ್ತೆಯಂ ಸಾಗಿಪುದು ನೀನೆಂದೊಡಿಂತೆಂದಳು  ೯

ಪದ್ಯದ ಅನ್ವಯಕ್ರಮ:

ಅರ್ಜುನ ಆಲಿಸಲ್, ಮುನ್ನ ಒರ್ವನು ವಿಪ್ರನ್ ಉಂಟು, ಉದ್ದಾಲಕ ಆಖ್ಯಂ, ಅಖಿಳ ಶಾಸ್ತ್ರಂಗಳಂ ತಿಳಿದನ್, ಮೇಲೆ ಆತಂಗೆ ವೈವಾಹದೊಳ್ ಚಂಡಿ ಎಂಬಾಕೆ ವಧುವಾದಳ್, ಬಳಿಕ ಕಾಲಕಾಲದ ಜಪ ಅನುಷ್ಠಾನ ಪೂಜೆಗಳಿಗೆ ಆಲಸ್ಯವಂ ಮಾಡದೆ ನೀನು ಎನ್ನ ಪರಿಚರ್ಯೆಗೆ ಅನುಕೂಲೆಯಾಗಿ ಇರ್ದು ಮನೆವಾರ್ತೆಯಂ ಸಾಗಿಪುದು ಎಂದೊಡೆ, ಇಂತು ಎಂದಳ್.

ಪದ-ಅರ್ಥ:

ಆಲಿಸಲ್-ಕೇಳಲು;  ಮುನ್ನ-ಮೊದಲು;  ವಿಪ್ರ-ಬ್ರಾಹ್ಮಣ;  ಉಂಟು-ಇದ್ದಾನೆ;  ಉದ್ದಾಲಕಾಖ್ಯಂ-ಉದ್ದಾಲಕನೆಂದು ಹೆಸರು;  ಅಖಿಳ-ಸಮಸ್ತ;  ವೈವಾಹ-ವಿವಾಹ;  ವಧು-ಹೆಂಡತಿ;  ಜಪಾನುನುಷ್ಠಾನ-ಮುನಿಗಳ ನಿತ್ಯಕರ್ಮಗಳ;  ಆಲಸ್ಯ-ಉದಾಸೀನ;  ಪರಿಚರ್ಯೆ-ಸೇವೆ;  ಅನುಕೂಲೆ-ಹೊಂದಿಕೊಳ್ಳುವವಳು;  ಮನೆವಾರ್ತೆ-ಗೃಹಕೃತ್ಯ, ಮನೆಗೆಲಸ.

ಸೌಭರಿಮುನಿಯ ಮಾತುಗಳನ್ನು ಅರ್ಜುನ ಆಲಿಸತೊಡಗಿದನು. ಹಿಂದೆ ಉದ್ದಾಲಕನೆಂಬ ಹೆಸರಿನ ಒಬ್ಬ ಬ್ರಾಹ್ಮಣನಿದ್ದನು. ಅವನು ಸಕಲ ಶಾಸ್ತ್ರಗಳನ್ನು ತಿಳಿದವನು. ಕಾಲಕ್ರಮೇಣ ಆತನಿಗೆ ಚಂಡಿ ಎಂಬಾಕೆಯೊಂದಿಗೆ ಮದುವೆಯಾಯಿತು. ಹಾಗೆ ಚಂಡಿಯು ಹೆಂಡತಿಯಾಗಿ ಬಂದ ಮೇಲೆ ಉದ್ದಾಲಕನು ಅಕೆಯಲ್ಲಿ, ತಾನು ಇದುವರೆಗೂ ಕಾಲಕಾಲಕ್ಕೆ ಜಪ, ತಪ, ಅನುಷ್ಠಾನ, ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ನೀನೂ ಆಲಸ್ಯವನ್ನು ಮಾಡದೆ ನನ್ನ ಈ ಎಲ್ಲಾ ವೈದಿಕಕಾರ್ಯಗಳಲ್ಲಿ ನನ್ನ ಪರಿಚರ್ಯೆಗೆ ಹೊಂದಿಕೊಂಡು ಗೃಹಕೃತ್ಯಗಳನ್ನು ಚೆನ್ನಾಗಿ ಸಾಗಿಸಿಕೊಂಡುಹೋಗಬೇಕು ಎಂದನು. ಆಗ ಆಕೆ ಹೀಗೆಂದಳು.

(ಅಲ್ಲಿನ ಸ್ಥಳದ ಮಹತ್ವವನ್ನು ಅರಿತುಕೊಳ್ಳುವುದಕ್ಕೆ ಅರ್ಜುನನಿಗೂ ಅತ್ಯಂತ ಕುತೂಹಲವಿತ್ತು. ಹಾಗಾಗಿ ಅವನು ಸೌಭರಿಮುನಿಯ ಮಾತುಗಳನ್ನು ಆಲಿಸತೊಡಗಿದನು. ಹಿಂದೆ ಉದ್ದಾಲಕ ಎಂಬ ಹೆಸರಿನ ಒಬ್ಬ ಬ್ರಾಹ್ಮಣನಿದ್ದನು. ಅವನು ಸಕಲಶಾಸ್ತ್ರಗಳನ್ನು ಅಧ್ಯಯನ ಮಾಡಿ ಮೇಧಾವಿ ಎನಿಸಿಕೊಂಡಿದ್ದನು. ಅಧ್ಯಯನಕ್ಕೆ ಅನುಗುಣವಾಗಿ ಜಪ, ತಪ, ಧ್ಯಾನ, ಪೂಜೆಗಳೆಂಬ ನಿತ್ಯಾನುಷ್ಠಾನ ಮೊದಲಾದ ಕರ್ಮಗಳನ್ನು ಪ್ರತಿನಿತ್ಯ ಆಚರಿಸಿಕೊಂಡು ಬರುತ್ತಿದ್ದನು. ಕಾಲಕ್ರಮೇಣ ಹರೆಯಕ್ಕೆ ಬಂದ ಮೇಲೆ ಆತನಿಗೆ ಚಂಡಿ ಎಂಬಾಕೆಯೊಂದಿಗೆ ಮದುವೆಯಾಯಿತು. ಗೃಹಿಣಿಯಾಗಿ ಉದ್ದಾಲಕನ ಮನೆಗೆ ಕಾಲಿರಿಸಿದ ತರುವಾಯ ಉದ್ದಾಲಕನು ಚಂಡಿಯಲ್ಲಿ, ’ನಾನು ಹಲವು ವರ್ಷಗಳಿಂದ ಜಪ, ತಪ, ಧ್ಯಾನ, ಅನುಷ್ಠಾನ, ಪೂಜೆ ಮೊದಲಾದವುಗಳನ್ನು ಕಾಲಕಾಲಕ್ಕೆ ನಡೆಸಿಕೊಂಡು ಬರುತ್ತಿದ್ದೇನೆ. ಒಂದು ದಿನವೂ ಅವುಗಳನ್ನು ತಪ್ಪಿಸಿಲ್ಲ. ಇನ್ನು ಮುಂದೆಯೂ ಅವುಗಳನ್ನು ಮುನ್ನಡೆಸಿಕೊಂಡು ಬರಬೇಕಾಗಿದೆ. ಹಾಗಾಗಿ ನೀನು ಅವುಗಳ ವಿಚಾರದಲ್ಲಿ ಯಾವುದೇ ರೀತಿಯಿಂದ ಆಲಸ್ಯಮಾಡದೆ ನನಗೆ ಅನುಕೂಲೆಯಾಗಿದ್ದು ಸೇವೆಮಾಡುತ್ತ ಗೃಹಕೃತ್ಯಗಳನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ವಿಶ್ವಾಸಪೂರ್ವಕವಾಗಿ ಹೇಳಿದನು.)

 

ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ

ಗೊಳ್ಳದಿರ್ ಪರಿಚರ್ಯೆ ಮನೆವಾರ್ತೆಯೆಂದೆಂಬ

ತಳ್ಳಿಯವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಗೊಳಲು

ಮುಳ್ಳಿಡಿದ ಮರವೇರಿದಂತಾದುದಿಹಪರಕಿ

ದೊಳ್ಳಿತಾದಪುದೆ ಬಂದುದು ತಪೋಹಾನಿಯೆಂ

ದಳ್ಳೆಯೊಳ್ ಕೋಲ್ಗೊಂಡ ತೆರದೊಳುದ್ದಾಲಕಂ ಚಿಂತಿಪಂ ಪ್ರತಿದಿನದೊಳು  ೧೦

ಪದ್ಯದ ಅನ್ವಯಕ್ರಮ:

ನಿನ್ನ ಮಾತಂ ಎಳ್ಳನಿತು ಕೇಳ್ವಳ್ ಎಂದು ಎಣಿಕೆಗೊಳ್ಳದಿರ್, ಪರಿಚರ್ಯೆ ಮನೆವಾರ್ತೆ ಎಂದೆಂಬ ತಳ್ಳಿಯವಳಲ್ಲ, ನೀನ್ ಎಂದುದಂ ಮಾಡೆನ್ ಎಂದು ಆ ಚಂಡಿ ಚಂಡಿಗೊಳಲು, ಮುಳ್ಳು ಹಿಡಿದ ಮರವನ್ ಏರಿದಂತೆ  ಆದುದು, ಇಹ ಪರಕೆ ಇದು ಒಳ್ಳಿತು ಆದಪುದೆ? ತಪೋಹಾನಿ ಬಂದುದು ಎಂದು ಅಳ್ಳೆಯೊಳ್ ಕೋಲ್ ಕೊಂಡ ತೆರದೊಳ್ ಪ್ರತಿದಿನದೊಳು ಉದ್ದಾಲಕಂ ಚಿಂತಿಪಂ.

ಪದ-ಅರ್ಥ:

ಎಳ್ಳನಿತು-ಎಳ್ಳಿನಷ್ಟು, ಸ್ವಲ್ಪವೂ;  ಎಣಿಕೆಗೊಳ್ಳದಿರ್-ಲೆಕ್ಕಹಾಕಬೇಡ;  ಪರಿಚರ್ಯೆ-ಸೇವೆ; ಚಾಕರಿ;  ಮನೆವಾರ್ತೆ-ಗೃಹಕೃತ್ಯ, ಮನೆಗೆಲಸ;  ತಳ್ಳಿಯವಳಲ್ಲ-ಗೊಡವೆಯವಳಲ್ಲ, ಉಸಾಬರಿಯವಳಲ್ಲ;  ನೀನೆಂದುದಂ-ನೀನು ಹೇಳಿದುದನ್ನು;  ಮಾಡೆನ್-ಮಾಡಲಾರೆ;  ಚಂಡಿಗೊಳಲು-ಹಠಮಾರಿಯಾಗಲು;  ಮುಳ್ಳಿಡಿದ-ಮುಳ್ಳನ್ನು ಹೊಂದಿದ;  ಇಹಪರಕೆ-ಈ ಲೋಕಕ್ಕೆ ಮತ್ತು ಪರಲೋಕಕ್ಕೆ;  ಒಳ್ಳಿತಾದಪುದೆ-ಒಳಿತಾಗುವುದೆ;  ತಪೋಹಾನಿ-ತಪಸ್ಸಿಗೆ ಕೇಡು;  ಅಳ್ಳೆ– ಪಕ್ಕೆ, ಹೊಟ್ಟೆಯ ಒಂದು ಪಕ್ಕ;  ಕೋಲ್ಗೊಂಡ-ಬಾಣ ಚುಚ್ಚಿಸಿಕೊಂಡ;  ತೆರದೊಳು-ರೀತಿಯಲ್ಲಿ.

 

ಉದ್ದಲಕನ  ಮಾತಿಗೆ ಚಂಡಿಯು, ’ನಾನು ನಿನ್ನ ಮಾತುಗಳನ್ನು ಎಳ್ಳಷ್ಟೂ ಕೇಳುವವಳೆಂದು ನೀನು ಭಾವಿಸಬೇಡ. ಈ ಸೇವೆ, ಗೃಹಕೃತ್ಯಗಳೆಂಬ ಗೊಡವೆಗೆ ಸಿಕ್ಕಿಹಾಕಿಕೊಳ್ಳುವವಳಲ್ಲ. ನೀನು ಏನನ್ನು ಹೇಳುವೆಯೋ ಅದಾವುದನ್ನೂ ನಾನು ಮಾಡಲಾರೆ’ ಎಂದು ಹಠಮಾರಿಯಂತೆ ವರ್ತಿಸತೊಡಗಿದಾಗ ಉದ್ದಾಲಕನಿಗೆ ಮುಳ್ಳಿನ ಮರವನ್ನೇರಿದಂತಾಯಿತು. ಈ ರೀತಿಯ ಸಂಸಾರ ಇನ್ನು ಮುಂದೆ ಈ ಲೋಕಕ್ಕೆ ಮಾತ್ರವಲ್ಲದೆ ಪರಲೋಕಕ್ಕೂ ಒಳಿತನ್ನು ಉಂಟುಮಾಡಲು ಸಾಧ್ಯವೆ? ತನ್ನ ತಪಸ್ಸಿಗೆ ಕೇಡು ಒದಗಿತಲ್ಲ ಎಂದುಕೊಂಡನು. ಉದ್ದಾಲಕನ ಬದುಕು ಪಕ್ಕೆಯಲ್ಲಿ ಬಾಣಚುಚ್ಚಿಸಿಕೊಂಡ ರೀತಿಯಂತಾಯಿತು.  

(ಉದ್ದಾಲಕ ತನ್ನ ಮಾತಿಗೆ ಚಂಡಿಯು ಎದುರಾಡುವವಳೆಂದು, ಹಠಮಾರಿಯಾದ ಹೆಣ್ಣೆಂದು ಯಾವತ್ತೂ ಭಾವಿಸಿಕೊಂಡಿರಲಿಲ್ಲ. ಅವಳು ಗಂಡನ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸಿದಳು. ’ನಾನು ನಿನ್ನ ಮಾತುಗಳನ್ನು ಎಳ್ಳಷ್ಟೂ ಕೇಳುವವಳಲ್ಲ, ನಿನ್ನ ಸೇವೆಮಾಡಲು ಸಿದ್ಧಳಿದ್ದೇನೆ ಎಂದೂ ಭಾವಿಸಬೇಡ. ಈ ರೀತಿಯಲ್ಲಿ ಗಂಡನ ಸೇವೆ, ಗೃಹಕೃತ್ಯಗಳೆಂಬ ಸಲ್ಲದ ಗೊಡವೆಗಳಿಗೆ ಬಲಿಯಾಗುವುದು ನನಗೆ ಬೇಕಿಲ್ಲ. ಅವುಗಳಲ್ಲಿ ನನಗೆ ಯಾವ ಆಸ್ಥೆಯೂ ಇಲ್ಲ. ನೀನು ಏನನ್ನು ಹೇಳುವೆಯೋ ಅದಾವುದನ್ನೂ ನಾನು ಮಾಡಲಾರೆ’ ಎಂದು ಹಠಮಾರಿಯಾಗಿ, ನಿರ್ದಾಕ್ಷಿಣ್ಯವಾಗಿ ಉದ್ದಾಲಕನನ್ನೇ ವಿರೋಧಿಸತೊಡಗಿದಾಗ ಉದ್ದಾಲಕ ಅಸಹಾಯಕನಾದ. ತನ್ನ ದೈನಂದಿನ ಜಪ, ತಪ, ಧ್ಯಾನ, ಪೂಜೆ ಮೊದಲಾದ  ಅನುಷ್ಠಾನಗಳಿಗೆ ಪದೇ ಪದೇ ಚಂಡಿಯಿಂದ ವಿರೋಧ ವ್ಯಕ್ತವಾಗತೊಡಗಿದಾಗ ಉದ್ದಾಲಕನಿಗೆ ಮುಳ್ಳಿನ ಮರವನ್ನು ಏರಿದಂತಾಯಿತು. ಮುಳ್ಳಿನ ಮರದ ಯಾವ ಕೊಂಬೆ ರೆಂಬೆಯ ಮೇಲೆ ಕಾಲಿರಿಸಿದರೂ ಮುಳ್ಳುಗಳು ಚುಚ್ಚುತ್ತಲೇ ಇರುತ್ತವೆ. ಈಗ ಚಂಡಿಯಿಂದಾಗಿ ತನ್ನ ಸಂಸಾರವೆಂಬುದು ಮುಳ್ಳಿನ ಮರದಂತಾಯಿತು. ಒಪ್ಪಿಕೊಳ್ಳಲೂ ಸಾಧ್ಯವಿಲ್ಲ, ಬಿಟ್ಟುಬಿಡಲೂ ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿಯಾಯಿತು. ಸುಖ, ಸಂತೋಷ, ನೆಮ್ಮದಿಗಳಿಲ್ಲದ ಈ ಸಂಸಾರದಿಂದಾಗಿ ಇಹದಲ್ಲೂ ಸುಖವಿಲ್ಲ, ಪರದಲ್ಲೂ ಸಾಧ್ಯವಿಲ್ಲ ಎಂಬಂತಾಯಿತಲ್ಲ ಎಂದು ಉದ್ದಾಲಕ ನೊಂಡುಕೊಂಡನು. ಇದುವರೆಗಿನ ತನ್ನ ನಿಷ್ಠೆ, ಜಪ, ತಪಗಳಿಗೆ ಹಾಗೂ ಅವುಗಳಿಂದ ಸಂಪಾದಿಸಿದ ಯಶಸ್ಸಿಗೆ ಕೇಡು ಒದಗಿತಲ್ಲ! ಎಂದುಕೊಂಡನು. ಆತನ ಬದುಕು ಪಕ್ಕೆಯಲ್ಲಿ ಬಾಣವನ್ನು ಚುಚ್ಚಿಸಿಕೊಂಡಂತಾಯಿತು.  ಚುಚ್ಚಿಕೊಂಡ ಬಾಣದಿಂದ ನಿರಂತರ ಅಸಾಧ್ಯವಾದ ನೋವು, ಹಿಂಸೆಗಳನ್ನು ಅನುಭವಿಸುವಂತೆ ಚಂಡಿಯೆಂಬ ಬಾಣ ಚುಚ್ಚಿದ್ದರಿಂದ ಸಂಸಾರದಲ್ಲಿ ಅಸಾಧ್ಯವಾದ ನೋವನ್ನು, ಹಿಂಸೆಯನ್ನು ಅನುಭವಿಸತೊಡಗಿದನು.)

   

ಇಂತಿರುತಿರಲ್ಕೆ ಕೌಂಡಿನ್ಯನೆಂಬೊರ್ವ ಮುನಿ

ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ

ಚಿಂತೆವೆತ್ತಿರಲವನಿದೇನೆಂದು ಬೆಸಗೊಂಡೊಡವಳ ಪ್ರತಿಕೂಲತೆಯನು

ಅಂತರಿಸದೆಲ್ಲಮಂ ಪೇಳ್ದೊಡವನಿದಕೆ ನೀಂ

ಮುಂತೆ ವಿಪರೀತಮಂ ಮಾಡಲಾಪುದೆಂದು

ಸಂತಾಪಮಂ ಬಿಡಿಸಿ ಬೀಳ್ಕೊಂಡವಂ ತೀರ್ಥಯಾತ್ರೆಗೈದಿದನಿತ್ತಲು  ೧೧

ಪದ್ಯದ ಅನ್ವಯಕ್ರಮ:

ಇಂತು ಇರುತಿರಲ್ಕೆ ಕೌಂಡಿನ್ಯನ್ ಎಂಬ ಒರ್ವ ಮುನಿಪಂ ತನ್ನ ಮನೆಗೆ ಬರಲ್, ಆತನಂ ಸತ್ಕರಿಸಿ ಚಿಂತೆವೆತ್ತು ಇರಲ್, ಅವನ್ ಇದೇನ್ ಎಂದು ಬೆಸಗೊಂಡೊಡೆ, ಅವಳ ಪ್ರತಿಕೂಲತೆಯನು ಅಂತರಿಸದೆ ಎಲ್ಲಮಂ ಪೇಳ್ದೊಡೆ, ಅವನ್ ಇದಕೆ ನೀಂ ಮುಂತೆ ವಿಪರೀತಮಂ ಮಾಡಲ್ ಆಪುದು ಎಂದು ಸಂತಾಪಂ ಬಿಡಿಸಿ ಬೀಳ್ಕೊಂಡು ಅವನ್ ತೀರ್ಥಯಾತ್ರೆಗೆ ಅಯ್ದಿದನ್, ಇತ್ತಲು-

ಪದ-ಅರ್ಥ:

ಇಂತು-ಹೀಗೆ;  ಇರುತಿರಲ್ಕೆ– ದಿನಗಳೆಯುತ್ತಿರಲು;  ಚಿಂತೆವೆತ್ತಿರಲ್-ಚಿಂತೆಯಲ್ಲಿ ಮುಳುಗಿದ್ದಾಗ, ಚಿಂತಿತನಾಗಿದ್ದಾಗ;  ಬೆಸಗೊಂಡೊಡೆ-ವಿಚಾರಿಸಿದಾಗ;  ಅವಳ-ಚಂಡಿಯ;  ಪ್ರತಿಕೂಲತೆ-ವ್ಯತಿರಿಕ್ತತೆ, ವಿರುದ್ಧವಾಗಿರುವಿಕೆ;  ಅಂತರಿಸದೆ-ಮುಚ್ಚಿಡದೆ, ಮರೆಮಾಚದೆ;  ಪೇಳ್ದೊಡೆ-ಹೇಳಿದಾಗ;  ಮುಂತೆ-ಮೊದಲು;  ವಿಪರೀತಮಂ-ವಿರುದ್ಧವಾದುದನ್ನು, ವ್ಯತಿರಿಕ್ತವಾದುದನ್ನು;  ಮಾಡಲಾಪುದು-ಮಾಡಬೇಕು;  ಸಂತಾಪಂ-ಬೇಸರವನ್ನು;  ಬಿಡಿಸಿ-ಪರಿಹರಿಸಿ;  ಅಯ್ದಿದನ್-ಹೊರಟುಹೋದನು.

ಉದ್ದಾಲಕನ ಸಂಸಾರ ಹೀಗೆಯೇ ಮುಂದುವರಿಯುತ್ತಿರಲು, ಒಂದು ದಿನ ಕೌಂಡಿನ್ಯನೆಂಬ ಒಬ್ಬ ಮುನಿಯು ಉದ್ದಾಲಕನ ಮನೆಗೆ ಬಂದನು. ಉದ್ದಾಲಕನು ಆತನನ್ನು ಬಗೆಬಗೆಯಾಗಿ ಸತ್ಕರಿಸಿ, ಚಿಂತಿತನಾಗಿ ಕುಳಿತ್ತಿದ್ದಾಗ, ಕೌಂಡಿನ್ಯನು ಏಕೆ ಚಿಂತಿತನಾಗಿರುವೆ? ಎಂದು ಕೇಳಿದಾಗ, ಉದ್ದಾಲಕನು ತನ್ನ ಹೆಂಡತಿಯಾದ ಚಂಡಿಯ ವ್ಯತಿರಿಕ್ತತೆಯ ಸ್ವಭಾವವನ್ನು ಒಂದಿಷ್ಟೂ ಮುಚ್ಚಿಡದೆ ಎಲ್ಲವನ್ನೂ  ವಿವರಿಸಿದನು. ಅದಕ್ಕೆ ಕೌಂಡಿನ್ಯನು ನೀನು ಇನ್ನು ಮುಂದೆ ಪ್ರತಿಯೊಂದು ಕೆಲಸದ ಸಂದರ್ಭದಲ್ಲಿಯೂ ಆಕೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕು. ಆಗ ಎಲ್ಲವೂ ಸರಿಯಾಗುತ್ತದೆ ಎಂದು ಸಮಾಧಾನವನ್ನು ಹೇಳಿ ತೀರ್ಥಯಾತ್ರೆಗೆ ಹೊರಟುಹೋದನು.

(ಉದ್ದಾಲಕನ ಪ್ರತಿಯೊಂದು ಕೆಲಸಗಳಿಗೂ ಚಂಡಿಯ ವಿರೋಧ ಮುಂದುವರಿದಿತ್ತು. ಉದ್ದಾಲಕ ಚಂಡಿಯಿಂದಾಗಿ ಸಂಸಾರದ ನೆಮ್ಮದಿಯನ್ನು ಕಳೆದುಕೊಂಡಿದ್ದನು.  ಒಂದು ದಿನ ತೀರ್ಥಯಾತ್ರೆಗೆ ಹೊರಟ ಕೌಂಡಿನ್ಯನೆಂಬ ಒಬ್ಬ ಮುನಿಯು  ಆ ದಾರಿಯಾಗಿ ಉದ್ದಾಲಕನ ಆಶ್ರಮಕ್ಕೆ  ಬಂದನು. ಬಂದ ಅತಿಥಿಯನ್ನು ಉದ್ದಾಲಕ ಬಗೆಬಗೆಯಾಗಿ ಸತ್ಕರಿಸಿದನು. ಉದ್ದಾಲಕನ ಉಪಚಾರ, ಆತಿಥ್ಯದಿಂದ ಕೌಂಡಿನ್ಯನು ಸಂತಸಗೊಂಡರೂ ಉದ್ದಾಲಕನ ಮುಖದಲ್ಲಿನ ಬೇಸರ, ನೋವನ್ನು ಗುರುತಿಸಿಕೊಂಡು ವಿಚಾರಿಸಿದಾಗ, ಉದ್ದಾಲಕನು ತಾನು ತನ್ನ ಹೆಂಡತಿ ಚಂಡಿಯಿಂದ ಅನುಭವಿಸುತ್ತಿರುವ ಹಿಂಸೆ, ನೋವನ್ನು ಆದ್ಯಂತವಾಗಿ ವಿವರಿಸಿದನು. ಉದ್ದಾಲಕನ ಸ್ಥಿತಿಗತಿಗಳನ್ನು ಕೇಳಿದಾಗ, ಆತನ ಬೇಸರವನ್ನು ನೋಡಿದಾಗ ಕೌಂಡಿನ್ಯನಿಗೆ  ಚಂಡಿಯ ಮನಃಸ್ಥಿತಿಯೆಲ್ಲವೂ ಅರ್ಥವಾಯಿತು. ಆಕೆಗೆ ಏನನ್ನು ಹೇಳಿದರೂ ಆಕೆ ಅದಕ್ಕೆ ವಿರುದ್ಧವಾದುದನ್ನು ಮಾಡುತ್ತಿದ್ದಳು. ಹಾಗಾಗಿ ಆಕೆಗೆ ಏನು ಹೇಳಬೇಕಿದ್ದರೂ ಅದನ್ನು ವಿರುದ್ಧವಾಗಿಯೇ ಹೇಳಬೇಕು, ಬೇಕಿದ್ದುದನ್ನು ಬೇಡ ಎನ್ನಬೇಕು, ಬೇಡವಾದುದನ್ನು ಬೇಕು ಎನ್ನಬೇಕು, ಆಗ ಮಾತ್ರ ಆಕೆ ನಿನ್ನೊಂದಿಗೆ ಹೊಂದಿಕೊಳ್ಳುತ್ತಾಳೆ ಎಂದು ಸಲಹೆಯನ್ನು ಕೊಟ್ಟು, ಇನ್ನು ಮುಂದೆ ಹಾಗೆಯೇ ನಡೆದುಕೊಳ್ಳಬೇಕೆಂದು ಸೂಚಿಸಿ ತಾನು ತೀರ್ಥಯಾತ್ರೆಗೆ ಹೊರಟುಹೋದನು. ಈ ತಂತ್ರಗಾರಿಕೆ ಉದ್ದಾಲಕನಿಗೆ ಅದುವರೆಗೂ ಹೊಳೆದಿರಲೇ ಇಲ್ಲ. ಕೌಂಡಿನ್ಯನ ಸಲಹೆ, ಸೂಚನೆಯ ಮಾತುಗಳನ್ನು ಉದ್ದಾಲಕ ಕಾರ್ಯರೂಪಕ್ಕೆ ತರಲು ನಿರ್ಧರಿಸಿದನು.)

 

ಉದ್ಧಾಲಕಂ ಬಳಿಕ ಮಂದಿರದೊಳಿರು

ತಿದ್ದ ಸಮಯಕೆ ಪಿತೃಶ್ರಾದ್ಧಾದಿವಸಂ ಬಂದೊ

ಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು

ಕದ್ದುತಹೆನಧಮ ಧಾನ್ಯವ್ರೀಹಿಶಾಕಮಂ

ಪೊದ್ದಲೀಯೆಂ ಶುದ್ಧ ವಸ್ತುಗಳನೊಂದುಮಂ

ತದ್ದಿನಕೆ ಮರುದಿವಸದೊಳ್ ಪೇಳ್ದು ಬಹೆನಪಾತ್ರಂಗೆಂದೊಡಿಂತೆಂದಳು  ೧೨

ಪದ್ಯದ ಅನ್ವಯಕ್ರಮ:

ಬಳಿಕ ಉದ್ದಾಲಕಂ ಮಂದಿರದೊಳ್ ಇರುತಿದ್ದ ಸಮಯಕೆ ಪಿತೃ ಶ್ರಾದ್ಧಾ ದಿವಸಂ ಬಂದೊಡೆ ಎದ್ದು ಚಂಡಿಯೊಳ್, ’ಎಲಗೆ ನಾಳೆ ಪೈತೃಕಂ, ಅದಂ ನಾಡಿದಲ್ಲದೆ ಮಾಣೆನು, ಅಧಮ ಧಾನ್ಯ ವ್ರೀಹಿ ಶಾಕಮಂ ಕದ್ದು ತಹೆನ್, ಶುದ್ಧ ವಸ್ತುಗಳನ್ ಒಂದುಮಂ ಪೊದ್ದಲ್ ಈಯೆಂ, ತತ್ ದಿನಕೆ ಮರುದಿವಸದೊಳ್ ಅಪಾತ್ರಂಗೆ ಪೇಳ್ದು ಬಹೆನ್, ಎಂದೊಡೆ ಇಂತು ಎಂದಳು.  

ಪದ-ಅರ್ಥ:

ಬಳಿಕ-ಅನಂತರ;  ಮಂದಿರದೊಳ್-ಆಶ್ರಮದಲ್ಲಿ;  ಇರುತಿದ್ದ-ವಾಸಿಸುತ್ತಿದ್ದ;  ಪಿತೃಶ್ರಾದ್ಧ-ಗತಿಸಿದ ಹಿರಿಯರಿಗೆ ಅವರು ಗತಿಸಿದ ತಿಥಿಯಂದು ಕೈಗೊಳ್ಳುವ ವೈದಿಕ ಕರ್ಮ;  ಎಲಗೆ-ಎಲೈ;  ಪೈತೃಕಂ-ಪಿತೃಶ್ರಾದ್ಧ; ನಾಡಿದಲ್ಲದೆ-ನಾಳೆಯ ಮರುದಿನವಲ್ಲದೆ;  ಮಾಡೆನು-ಮಾಡಲಾರೆ, ಕೈಗೊಳ್ಳಲಾರೆ;  ಕದ್ದುತಹೆನ್-ಕಳವುಮಾಡಿ ತರುತ್ತೇನೆ;  ಅಧಮ-ನಿಕೃಷ್ಟವಾದ, ಕಳಪೆಯಾದ;  ವ್ರೀಹಿ-ಬತ್ತ;  ಶಾಕ-ತರಕಾರಿ;  ಪೊದ್ದಲೀಯೆಂ-ಹೊಂದಲು ಅವಕಾಶ ಕೊಡಲಾರೆನು;  ಶುದ್ಧವಸ್ತುಗಳನ್-ಪ್ರಶಸ್ತವಾದ ವಸ್ತುಗಳು, ಒಳ್ಳೆಯ ವಸ್ತುಗಳು;  ತದ್ದಿನಕೆ(ತತ್+ದಿನಕೆ)-ಆ ದಿನಕ್ಕೆ;  ಮರುದಿವಸದೊಳ್-,ಮಾರನೆಯ ದಿನದಲ್ಲಿ;  ಪೇಳ್ದು-ಹೇಳಿಕೆ ಕೊಟ್ಟು;  ಬಹೆನ್-ಬರುತ್ತೇನೆ;  ಅಪಾತ್ರಂಗೆ-ಯೋಗ್ಯತೆಯಿಲ್ಲದವನಿಗೆ, ನಿಕೃಷ್ಟನಾದವನಿಗೆ.

ಹೀಗೆ ಉದ್ದಾಲಕನು ಆಶ್ರಮದಲ್ಲಿ ದಿನಗಳನ್ನು ಕಳೆಯುತ್ತಿರಲು,  ಉದ್ದಾಲಕನ ಪಿತೃಶ್ರಾದ್ಧದ ತಿಥಿಯು ಬಂದೊದಗಿತು. ಉದ್ದಾಲಕನು ತನ್ನ ಹೆಂಡತಿ ಚಂಡಿಯನ್ನು ಕರೆದು, ಎಲೈ ಚಂಡಿಯೇ, ನಾಳೆ ನನ್ನ ಪಿತೃಗಳ ಶ್ರಾದ್ಧದ ದಿನ. ಅದನ್ನು ನಾನು ನಾಳೆ ಆಚರಿಸದೆ ನಾಡಿದ್ದು ಆಚರಿಸುತ್ತೇನೆ. ಅಲ್ಲದೆ, ಅಂದಿನ ಶ್ರಾದ್ಧ ಹಾಗೂ ಭೋಜನಕ್ಕೆ ಬತ್ತ, ಕಾಳು, ತರಕಾರಿ, ಧಾನ್ಯ ಮೊದಲಾದವುಗಳನ್ನು ಕದ್ದುತರುತ್ತೇನೆ. ಮಾತ್ರವಲ್ಲ, ಶ್ರಾದ್ಧಕ್ಕೆ  ಶ್ರಾದ್ಧದ ಮರುದಿನ ಅಯೋಗ್ಯರನ್ನು ಆಮಂತ್ರಿಸಿ ಬರುತ್ತೇನೆ ಎಂದನು. ಉದ್ದಾಲಕನ ಈ ಮಾತಿಗೆ ಚಂಡಿ ಹೀಗೆಂದಳು.

(ಕೌಂಡಿನ್ಯ ಮುನಿ ಉದ್ದಾಲಕನ ಆತಿಥ್ಯವನ್ನು ಸ್ವೀಕರಿಸಿ ಹೋದ ಮೇಲೆ ಉದ್ದಾಲಕನು ಆತನ ಸಲಹೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದನು. ಒಂದು ದಿನ ಆತನ ಪಿತೃಗಳ ಶ್ರಾದ್ಧದ ತಿಥಿಯು ಬಂದೊದಗಿತು. ಸಹಜವಾಗಿ ಅಂದು ಪಿತೃಗಳಿಗೆ ಪಿಂಡಪ್ರದಾನ ಮಾಡಬೇಕಾದ ಕರ್ತವ್ಯ. ಚಂಡಿ ತನ್ನ ಮಾತುಗಳಿಗೆ ವ್ಯತಿರಿಕ್ತವಾಗಿಯೇ ನಡೆದುಕೊಳ್ಳುವವಳು. ಹಾಗಾಗಿ ಉದ್ದಾಲಕನು ಕೌಂಡಿನ್ಯ ಮುನಿಯ ಮಾತುಗಳನ್ನು ನೆನಪಿಸಿಕೊಂಡು ತಾನೀಗ ವಾಸ್ತವವಾದುದಕ್ಕೆ ವಿರುದ್ಧವಾಗಿಯೇ ನುಡಿಯಬೇಕು, ಹಾಗೂ ಕ್ರಮಕೈಗೊಳ್ಳಬೇಕು ಎಂದು ಭಾವಿಸಿ, ಚಂಡಿಯನ್ನು ಕರೆದು, ಎಲೈ ಚಂಡಿಯೇ, ನಾಳೆ ನನ್ನ ಪಿತೃಗಳ ಶ್ರಾದ್ಧದ  ತಿಥಿ. ಆದರೆ ನಾನದನ್ನು ನಾಳೆ ಆಚರಿಸದೆ ನಾಡಿದ್ದು ಆಚರಿಸುತ್ತೇನೆ. ಮಾತ್ರವಲ್ಲ, ಅಂದು ಪಿಂಡಪ್ರದಾನಕ್ಕೆ ಮತ್ತು ಆಮಂತ್ರಿಸಿದ ಅತಿಥಿಗಳಿಗೆ ಭೋಜನದ ವ್ಯವಸ್ಥೆ ಆಗಬೇಕಾಗಿರುವುದರಿಂದ ಅದಕ್ಕೆ ನಾನು ಧಾನ್ಯಗಳನ್ನಾಗಲೀ, ತರಕಾರಿಗಳನ್ನಾಗಲೀ ಕೊಂಡು ತರಲಾರೆನು. ಎಲ್ಲಿಂದಲಾದರೂ ಧಾನ್ಯಗಳನ್ನು, ತರಕಾರಿಗಳನ್ನು ಕದ್ದುತರುತ್ತೇನೆ. ಅಲ್ಲದೆ, ಶ್ರಾದ್ಧಕ್ಕೆ ಅಕ್ಕಪಕ್ಕದ ಯೋಗ್ಯ ಬ್ರಾಹ್ಮಣರನ್ನು ಕರೆಯುವ ಬದಲು ಅಯೋಗ್ಯರನ್ನು ಮಾತ್ರ ಆಮಂತ್ರಿಸುತ್ತೇನೆ. ಅದೂ ಶ್ರಾದ್ಧದ ಮರುದಿನದಂದು ಆಮಂತ್ರಿಸುತ್ತೇನೆ ಎಂದನು. ಶ್ರಾದ್ಧವನ್ನು ಯಾವ ದಿನದಂದು ಆಚರಿಸಬೇಕು? ಯಾವ ತರಕಾರಿ, ಧಾನ್ಯಗಳನ್ನು ಎಲ್ಲಿಂದ ಹೇಗೆ ಕೊಂಡುತರಬೇಕು? ಶ್ರಾದ್ಧಕ್ಕೆ ಯಾರನ್ನು ಯಾವಾಗ ಆಮಂತ್ರಿಸಬೇಕು? ಎಂಬುದು ಚಂಡಿಗೂ ಗೊತ್ತು. ಆದರೆ ಗಂಡ ಈ ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುತ್ತಿದ್ದಾನೆ ಎನ್ನಿಸಿತು.)

 

ನಾಳೆ ಮಾಡಿಸುವೆನಾ ಪೈತೃಕಮನುತ್ತಮದ

ಶಾಲಿಧಾನ್ಯವ್ರೀಹಿ ಶಾಕಮಂ ಕೊಂಡುಬಹೆ

ನಾಲಯವನತಿಶುದ್ಧವಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ

ಪೇಳಿಸುವೆನಂದಿನ ದಿನದ ಮೊದಲ ರಾತ್ರಿಯೆ ವಿ

ಶಾಲಗುಣಸಂಪನ್ನ ವೇದಪಾರಂಗತ ಸು

ಶೀಲರಹ ಸತ್ಪಾತ್ರದವನಿಯಮರರ್ಗೆನಲ್ ಚಂಡಿಗವನಿಂತೆಂದನು  ೧೩

ಪದ್ಯದ ಅನ್ವಯಕ್ರಮ:

ಆ ಪೈತ್ರಕಮನ್ ನಾಳೆ ಮಾಡಿಸುವೆನ್, ಉತ್ತಮದ ಶಾಲಿ ಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆನ್, ಅತಿಶುದ್ಧವಾದ ವಸ್ತುಗಳಿನ್ ಅಲ್ಲದೆ ಆಲಯವನ್ ಕೂಡೆನ್, ಅಂದಿನ ದಿನದ ಮೊದಲ ರಾತ್ರಿಯೆ ವಿಶಾಲ ಗುಣಸಂಪನ್ನ ವೇದ ಪಾರಂಗತ ಸುಶೀಲರಹ ಸತ್ಪಾತ್ರದ ಅವನಿಯ ಅಮರರ್ಗೆ ಅಳ್ತಿಯಿಂದೆ ಪೇಳಿಸುವೆನ್ ಎನಲ್, ಅವನ್ ಚಂಡಿಗೆ ಇಂತು ಎಂದನು.

ಪದ-ಅರ್ಥ:

ಪೈತೃಕ-ಪಿತೃಶ್ರಾದ್ಧ;  ಉತ್ತಮದ-ಯೋಗ್ಯವಾದ, ಪ್ರಶಸ್ತವಾದ;  ಶಾಲಿ-ಬತ್ತ, ನೆಲ್ಲು;  ವ್ರೀಹಿ-ಬತ್ತ, ನೆಲ್ಲು;  ಶಾಕ-ತರಕಾರಿ;  ಕೊಂಡುಬಹೆನ್-ಕೊಂಡುತರುತ್ತೇನೆ; ಆಲಯವನ್-ಮನೆಯನ್ನು, ಆಶ್ರಮವನ್ನು;    ಅಳ್ತಿಯೊಳ್-ಪ್ರೀತಿಯಿಂದ, ಗೌರವದಿಂದ;  ಕೂಡೆನ್-ಸೇರಿಕೊಳ್ಳಲಾರೆ;  ಅಂದಿನ ದಿನ-ಶ್ರಾದ್ಧದ ದಿನ;  ವಿಶಾಲಗುಣಸಂಪನ್ನ-ವಿಶೇಷವಾದ ಗುಣಗಳಿಂದ ಕೂಡಿದ;  ವೇದಪಾರಂಗತ-ವೇದಗಳನ್ನು ತಿಳಿದಿರುವ, ವೇದಾಧ್ಯಯನ ಮಾಡಿರುವ;  ಸುಶೀಲರಹ-ಒಳ್ಳೆಯ ಗುಣವಂತರಾದ;  ಸತ್ಪಾತ್ರದ-ಯೋಗ್ಯರಾದ;  ಅವನಿಯಮರರ್ಗೆ-ಭೂಸುರರಿಗೆ, ಬ್ರಾಹ್ಮಣರಿಗೆ.  

ಆ ಪಿತೃಶ್ರಾದ್ಧವನ್ನು ನಾನು ನಾಳೆಯೇ ಮಾಡಿಸುತ್ತೇನೆ. ಉತ್ತಮವಾದ ಬತ್ತ, ಧಾನ್ಯ, ತರಕಾರಿಗಳನ್ನು ಸಂಪಾದಿಸಿಕೊಂಡೇ ಆಶ್ರಮಕ್ಕೆ ಬರುತ್ತೇನೆ. ಉತ್ತಮವಾದ ವಸ್ತುಗಳಿಂದಲ್ಲದೆ ಅಯೋಗ್ಯವಾದ ಧಾನ್ಯ, ತರಕಾರಿಗಳನ್ನು ಕದ್ದುತರುವುದಕ್ಕೆ ನಾನು ಅವಕಾಶವನ್ನೇ ಕೊಡಲಾರೆ. ಶ್ರಾದ್ಧದ ಹಿಂದಿನ ರಾತ್ರಿಯೇ ಅಕ್ಕಪಕ್ಕದ ವಿಶಾಲಗುಣಸಂಪನ್ನರಾದ, ವೇದ ಪಾರಂಗತರಾದ ಬ್ರಾಹ್ಮಣರಿಗೆ ಪ್ರೀತಿ, ಗೌರವಗಳಿಂದ ಹೇಳಿಕೆಯನ್ನು ಕೊಡುವಂತೆ ಪ್ರಯತ್ನಿಸುತ್ತೇನೆ ಎಂದಳು. ಆಗ ಉದ್ದಾಲಕನು ಹೀಗೆಂದನು.

(ಉದ್ದಾಲಕನ ಮಾತಿಗೆ ಚಂಡಿ ವಿರುದ್ದವಾಗಿ ಮಾತನ್ನಾಡತೊಡಗಿದಳು. ಕೌಂಡಿನ್ಯ ಮುನಿಯ ಸಲಹೆ ಇಲ್ಲಿ ಫಲಿಸತೊಡಗಿರುವುದನ್ನು ಉದ್ದಾಲಕ ಅರ್ಥಮಾಡಿಕೊಂಡನು. ನಾಳೆಯ ಪಿತೃಶ್ರಾದ್ಧವನ್ನು ನಾನು ನಾಳೆಯೇ ಮಾಡಿಸುತ್ತೇನಲ್ಲದೆ ನಾಡಿದ್ದು ಮಾಡಲು ಬಿಡಲಾರೆ ಎಂದಳು. ಶ್ರಾದ್ಧಕ್ಕೆ ಎಲ್ಲಿಂದಲೋ ಧಾನ್ಯ, ತರಕಾರಿಗಳನ್ನು ಕದ್ದುತರಲು ಅವಕಾಶವನ್ನೇ ಕೊಡದೆ ಉತ್ತಮವಾದ ಧಾನ್ಯ, ತರಕಾರಿಗಳನ್ನು ಕೊಂಡುತರುತ್ತೇನೆ ಎಂದಳು. ಶ್ರಾದ್ಧಕ್ಕೆ ಅಯೋಗ್ಯರಾದವರಿಗೆ ಆಮಂತ್ರಣವನ್ನು ಕೊಡಲು ಬಿಡಲಾರೆ, ಮಾತ್ರವಲ್ಲ, ಶ್ರಾದ್ಧದ ಅನಂತರದ ದಿನ ಆಮಂತ್ರಣವನ್ನು ಕೊಡಲೂ ಬಿಡಲಾರೆ ಎಂದಳು. ಅಲ್ಲದೆ, ಶ್ರಾದ್ಧಕ್ಕೆ ಅಯೋಗ್ಯರಿಗೆ, ಗುಣಹೀನರಿಗೆ, ಅಧಮರಿಗೆ ಆಮಂತ್ರಣ ಕೊಡುವುದಕ್ಕೂ ಬಿಡಲಾರೆ. ಅದರ ಬದಲು  ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಯೋಗ್ಯರಾದ, ಸಕಲಗುಣಸಂಪನ್ನರಾದ, ವೇದ ಪಾರಂಗತರಾದ ಬ್ರಾಹ್ಮಣರಿಗೆ ಆಮಂತ್ರಣವನ್ನು ಕೊಡಿಸುವುದಕ್ಕೆ ನಾನೇ ಪ್ರಯತ್ನಿಸುತ್ತೇನೆ. ಮಾತ್ರವಲ್ಲದೆ, ಶ್ರಾದ್ಧವು ಯಶಸ್ವಿಯಾಗಿ ನಡೆಯುವಂತೆ, ಅತಿಥಿಗಳು ಉಂಡು ತೃಪ್ತರಾಗುವಂತೆ, ನಮ್ಮನ್ನು ಹರಸುವಂತೆ ಪ್ರಯತ್ನಿಸುತ್ತೇನೆ ಎಂದಳು. ಉದ್ದಾಲಕನ ಪ್ರತಿಯೊಂದು ಮಾತನ್ನೂ ವಿರುದ್ಧವಾಗಿ ಸ್ವೀಕರಿಸುವ ಆಕೆ ಉದ್ದಾಲಕ ಆಡಿದ ಶ್ರಾದ್ಧದ ಬಗೆಗಿನ ಮಾತುಗಳಿಗೆ ಆಕೆ ವಿರುದ್ಧವಾಗಿ ಮಾತಾಡಿದಾಗ ಉದ್ದಾಲಕನಿಗೂ ತನ್ನ ತಂತ್ರ ಫಲಿಸುತ್ತಿದೆ ಅನ್ನಿಸಿತು.)

 

ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ

ಳಾದರಿಸೆನಾಂ ಬಂದ ವಿಪ್ರರಂ ಪಾಕದ ನ

ವೋದನ ಸುಪಾಯಸ  ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನು

ಸ್ವಾದುಫಲ ಶರ್ಕರ ವಿನುತ ಶಾಕ ನಿರ್ಮಲ ಪ

ಯೋದಧಿಗಳಂ ಸಕುತ್ಸಿತಮಾಗದಂತೆ ಸಂ

ಪಾದಿಸಿ ಪಿತೃಶ್ರಾದ್ಧಮಂ  ಮಾಡಿ ವಸ್ತ್ರದಕ್ಷಿಣೆಗಳಂ  ಕೊಡೆನೆಂದನು  ೧೪

ಪದ್ಯದ ಅನ್ವಯಕ್ರಮ:

ಆದೊಡೆ ಕುತುಪ ಕಾಲಮಂ ಬಿಡುವೆನ್, ಆಂ ಬಂದ ವಿಪ್ರರಂ ಅರ್ಚನೆಯೊಳ್ ಆದರಿಸೆನ್, ಸುಪಾಯಸ ಗುಡಾಜ್ಯ ಮಧು ತೈಲ ಮೃದು ಭಕ್ಷ್ಯ ಭೋಜ್ಯಾದಿ ಪಾಕದ ನವೋದನಗಳನು ಸ್ವಾದುಫಲ ಶರ್ಕರ ವಿನುತ ಶಾಕ ನಿರ್ಮಲ ಪಯೋ ದಧಿಗಳಂ ಸಕುತ್ಸಿತಂ ಆಗದಂತೆ ಸಂಪಾದಿಸಿ ಪಿತೃಶ್ರಾದ್ಧಮಂ ಮಾಡಿ ವಸ್ತ್ರ ದಕ್ಷಿಣೆಗಳಂ ಕೊಡೆನ್ ಎಂದನು.

ಪದ-ಅರ್ಥ:

ಆದೊಡೆ-ಹಾಗಾದರೆ;  ಕುತುಪಕಾಲ-ಪಿತೃಗಳಿಗೆ ತರ್ಪಣ ಕೊಡುವ ಯೋಗ್ಯವಾದ ಕಾಲ; ಬಿಡುವೆನ್-ತ್ಯಜಿಸುತ್ತೇನೆ;  ಅರ್ಚನೆ-ಸತ್ಕಾರ; ಆದರಿಸೆನ್-ಗೌರವಿಸಲಾರೆ;  ವಿಪ್ರರಂ-ಬ್ರಾಹ್ಮಣರನ್ನು;  ಪಾಕದ-ಅಡುಗೆಯ;  ನವೋದನ– ಒಂಬತ್ತು ಬಗೆಯ;  ಗುಡಾಜ್ಯ-ಬೆಲ್ಲ;  ಮಧು-ಜೇನು;  ಮೃದುಭಕ್ಷ್ಯ-ಸಿಹಿತಿಂಡಿ;  ಭೋಜ್ಯಾದಿ– ಉಣ್ಣಲು ಯೋಗ್ಯವಾದವುಗಳು; ಸ್ವಾದುಫಲ-ಸ್ವಾದಿಷ್ಟವಾದ ಹಣ್ಣು, ಸಿಹಿಯಾದ ಹಣ್ಣು;  ಶರ್ಕರ-ಸಕ್ಕರೆ;  ವಿನುತ-ಹೊಸದಾದ;  ಶಾಕ-ತರಕಾರಿ;  ನಿರ್ಮಲ-ಪರಿಶುದ್ಧ;  ಪಯ-ಹಾಲು;  ದಧಿ-ಮೊಸರು;  ಸಕುತ್ಸಿತಮಾಗದಂತೆ(ಸಕುತ್ಸಿತಂ+ಆಗದಂತೆ)- ಕೆಡುಕಿನಿಂದ ಕೂಡಿರದ ರೀತಿಯಲ್ಲಿ;  ಕೊಡೆನ್-ಕೊಡಲಾರೆ.

ಹಾಗಾದರೆ ಪಿತೃಗಳಿಗೆ ತರ್ಪಣ ಕೊಡುವ ಯೋಗ್ಯವಾದ ಕಾಲವನ್ನು ಬಿಟ್ಟುಬಿಡುತ್ತೇನೆ. ಶ್ರಾದ್ಧಕ್ಕೆ ಬಂದ ಬ್ರಾಹ್ಮಣರನ್ನು, ಅತಿಥಿಗಳನ್ನು ಯಾವುದೇ ರೀತಿಯಿಂದಲೂ ಸತ್ಕರಿಸಲಾರೆ, ಗೌರವಿಸಲಾರೆ. ಉಣ್ಣಲು ಯೋಗ್ಯವೆನಿಸಿರುವ ಅಡುಗೆಯ ಒಂಬತ್ತು ಬಗೆಯ ಭಕ್ಷ್ಯವನ್ನು ಬೆಲ್ಲ, ಜೇನು, ಸಿಹಿತಿಂಡಿ, ಸಕ್ಕರೆ, ತರಕಾರಿ, ಪರಿಶುದ್ಧವಾದ ಹಾಲು, ಮೊಸರು, ಸ್ವಾದಿಷ್ಟವಾದ ಹಣ್ಣುಗಳು ಯಾವುದನ್ನೂ ಕೆಡಿಕಿನಿಂದ ಕೂಡಿರದ ರೀತಿಯಲ್ಲಿ ಸಂಪಾದಿಸಿಕೊಂಡು ಪಿತೃಶ್ರಾದ್ಧವನ್ನು ಮಾಡುತ್ತೇನೆ. ಆದರೆ ಬ್ರಾಹ್ಮಣರಿಗೆ ವಸ್ತ್ರದಕ್ಷಿಣೆಯನ್ನು ಕೊಡಲಾರೆ ಎಂದನು.

(ಉದ್ದಾಲಕ ಸಂಪ್ರದಾಯಕ್ಕೆ ವಿರುದ್ಧವಾಗಿ ಪಿತೃಶ್ರಾದ್ಧವನ್ನು ಆಚರಿಸುತ್ತೇನೆ ಎಂದು ಹೇಳಿದಾಗ ಆಕೆ ಒಪ್ಪದೆ ತಾನೆಲ್ಲವನ್ನೂ ಸಂಪ್ರದಾಯಬದ್ಧವಾಗಿಯೇ ಆಚರಿಸುವಂತೆ ನೋಡಿಕೊಳ್ಳುತ್ತೇನೆ ಎಂದಳು. ಆದರೆ ತಾನು ಹೆಂಡತಿಯ ಮಾತುಗಳಿಗೆ ವಿರುದ್ಧವಾಗಿಯೇ ಆಡಬೇಕೆಂಬುದನ್ನು ಮನಗಂಡ ಉದ್ದಾಲಕನು ತಾನು ಪಿತೃಗಳಿಗೆ ತರ್ಪಣವನ್ನು ಕೊಡಬೇಕಾದಾಗ ಯೋಗ್ಯವಾದ ಕಾಲಕ್ಕಾಗಿ ಕಾಯಲಾರೆ. ಅದನ್ನು ಮೀರಿಯೇ ತರ್ಪಣವನ್ನು ಕೊಡುತ್ತೇನೆ, ಮಾತ್ರವಲ್ಲದೆ, ನೀನು ಶ್ರಾದ್ಧಕ್ಕೆ ಕರೆದಿರುವ ಸಕಲ ಬ್ರಾಹ್ಮಣರನ್ನು, ಅತಿಥಿಗಳನ್ನು ಯಾವುದೇ ರೀತಿಯಿಂದಲೂ ಸತ್ಕರಿಸಲಾರೆ, ಗೌರವಿಸಲಾರೆ. ಇನ್ನು ನೀನು ಸಂಪಾದಿಸಿಕೊಂಡು ತಂದಿರುವ ಧಾನ್ಯ, ತರಕಾರಿಗಳು ಮತ್ತು ಅವುಗಳಿಂದ ತಯಾರಿಸಿರುವ ವಿವಿಧ ಭಕ್ಷ್ಯಗಳು, ಬೆಲ್ಲ, ಜೇನು, ಸಿಹಿತಿಂಡಿಗಳು, ಸಕ್ಕರೆ, ಮೊಸರು, ಹಾಲು ಮೊದಲಾದವುಗಳನ್ನು ಉಪಯೋಗಿಸಿಕೊಂಡರೂ ಅವುಗಳನ್ನು ಕೆಡುಕಾಗದ ರೀತಿಯಲ್ಲಿ ಬಳಸಿಕೊಳ್ಳಬಹುದಾದರೂ ಕೊನೆಯಲ್ಲಿ ಬ್ರಾಹ್ಮಣರಿಗೆ ಕೊಡಬೇಕಾದ ವಸ್ತ್ರದಕ್ಷಿಣೆಯನ್ನು ಮಾತ್ರ ಕೊಡಲಾರೆ ಎಂದು ಸ್ಪಷ್ಟವಾಗಿ ಹೇಳುತ್ತಾನೆ. ಧಾನ್ಯ, ತರಕಾರಿ ಮೊದಲಾದವುಗಳನ್ನು ಉದ್ದಾಲಕನ ಹೆಂಡತಿಯು ಸಂಪಾದಿಸಿ ತರುವವಳಾದುದರಿಂದ ಉದ್ದಾಲಕನಿಗೆ ಅವುಗಳನ್ನು ಒಪ್ಪದೆ ವಿಧಿಯಿಲ್ಲ. ಹಾಗಾಗಿ ಅವುಗಳನ್ನು, ಹಾಗೂ ಅವುಗಳನ್ನು ಉಪಯೋಗಿಸಿಕೊಂಡು ಆಕೆ ಸಿದ್ಧಪಡಿಸಬಹುದಾದ ವಿವಿಧ ಭಕ್ಷ್ಯಗಳು, ಅಡುಗೆ ಮೊದಲಾದವುಗಳನ್ನು ಒಪ್ಪಲೇ ಬೇಕಾಗುತ್ತದೆ. ಆದರೆ ಬ್ರಾಹ್ಮಣರನ್ನು ಆದರಿಸುವುದು, ಅವರಿಗೆ ವಸ್ತ್ರದಕ್ಷಿಣೆಗಳನ್ನು ನೀಡುವುದು ತನ್ನ ಇಚ್ಛೆಗೆ ಸೇರಿದ್ದು. ಹಾಗಾಗಿ ಉದ್ದಾಲಕ ಅದನ್ನು ತನ್ನಿಚ್ಛೆಯಂತೆ ನೆರವೇರಿಸುತ್ತೇನೆ ಎಂಬ ತನ್ನ  ತೀರ್ಮಾನವನ್ನು ತಿಳಿಸುತ್ತಾನೆ.)

 

ಎಂದೊಡೆ ಕುತುಪಕಾಲಂ  ಮೀರಲೀಯೆನಾಂ

ಬಂದ ವಿಪ್ರರನಾದರಿಸಿ ಪೂಜೆಗೈಸದಿರೆ

ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾಣೆನು

ತಂದಮಲವಸ್ತ್ರ ತಾಂಬೂಲ ವರದಕ್ಷಿಣೆಗ

ಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನೆನುತ ನಲ

ವಿಂದೊದವಿಸಿದಖಿಳ ಸದ್ರವ್ಯಮಂ  ಬಳಿಕ ಚಂಡಿ ಪಾಕಂಗೈದಳು  ೧೫

ಪದ್ಯದ ಅನ್ವಯಕ್ರಮ:

ಎಂದೊಡೆ ಕುತುಪಕಾಲಂ ಮೀರಲ್ ಈಯೆನ್ ಆಂ, ಬಂದ ವಿಪ್ರರನ್ ಆದರಿಸಿ ಪೂಜೆಗೈಸದೆ ಇರೆನ್ ಎಂದು, ಒಲ್ಲೆನ್ ಎಂದು ಒಕ್ಕಣಿಸಿದ ಇನಿತೆಲ್ಲಮಂ ಸಂಪಾದಿಸದೆ ಮಾಣೆನು, ತಂದ ಅಮಲ ವಸ್ತ್ರ ತಾಂಬೂಲ ವರ ದಕ್ಷಿಣೆಗಳಿಂದೆ ಸತ್ಕರಿಸಿ ಕಳುಹಿಸದೆ ಬಿಡೆನ್ ಎನುತ ನಲವಿಂದ ಒದವಿಸಿದ ಅಖಿಳ ಸದ್ರವ್ಯಮಂ ಬಳಿಕ ಚಂಡಿ ಪಾಕಂ ಗೈದಳು.

ಪದ-ಅರ್ಥ:

ಕತುಪಕಾಲ-ಪಿತೃಗಳಿಗೆ ತರ್ಪಣಕೊಡುವ ಯೋಗ್ಯವಾದ ಕಾಲ; ಮೀರಲೀಯೆಂ-ಮೀರುವುದಕ್ಕೆ ಅವಕಾಶ ಕೊಡಲಾರೆ;  ಬಂದ ವಿಪ್ರರಂ-ಆಗಮಿಸಿದ ಬ್ರಾಹ್ಮಣರನ್ನು;  ಆದರಿಸಿ-ಗೌರವಿಸಿ;  ಪೂಜೆಗೈಸದಿರನ್-ಪೂಜೆ ಮಾಡಿಸದೆ ಇರಲಾರೆ;  ಇಂದು-ಈದಿನ;  ಒಲ್ಲೆನ್-ಒಪ್ಪಲಾರೆ;  ಒಕ್ಕಣಿಸಿದ-ತಿಳಿಸಿದ, ಪ್ರಸ್ತಾಪಿಸಿದ;  ಇನಿತೆಲ್ಲಮಂ-ಇಷ್ಟೆಲ್ಲವನ್ನೂ;  ಮಾಣೆನು-ಬಿಡಲಾರೆ;  ಅಮಲ-ಪರಿಶುದ್ಧ;  ವರದಕ್ಷಿಣೆ-ಶ್ರೇಷ್ಠವಾದ ದಕ್ಷಿಣೆ;  ನಲವಿಂದ-ಸಂತೋಷದಿಂದ;  ಒದವಿಸಿದ-ಪ್ರಾಪ್ತಿಯಾದ;  ಅಖಿಳ-ಸಮಸ್ತ;  ಸದ್ರವ್ಯ-ವಸ್ತು ಸಮೇತ; ಪಾಕಂಗೈದಳು-ಅಡುಗೆಮಾಡಿದಳು.

ಎಂದು ಉದ್ದಾಲಕ ಹೇಳಿದಾಗ ಚಂಡಿಯು ಪಿತೃಗಳಿಗೆ ತರ್ಪಣಕೊಡುವ ಯೋಗ್ಯವಾದ ಕಾಲವನ್ನು ಮೀರುವುದಕ್ಕೆ ನಾನು ಬಿಡಲಾರೆ. ಮಾತ್ರವಲ್ಲ ಆಗಮಿಸಿದ ಬ್ರಾಹ್ಮಣರನ್ನು ಗೌರವಿಸದೆ, ಸತ್ಕರಿಸದೆ ಇರಲಾರೆ ಎಂದಿರುವ, ನೀನು ನಿರಾಕರಿಸಿದ ಇಷ್ಟೆಲ್ಲವನ್ನೂ ಸಂಪಾದಿಸದೆ ಇರಲಾರೆ, ಅಲ್ಲದೆ, ಪರಿಶುದ್ಧವಾದ ವಸ್ತ್ರ, ತಾಂಬೂಲ, ಶ್ರೇಷ್ಠವಾದ ದಕ್ಷಿಣೆಗಳಿಂದ ಬ್ರಾಹ್ಮಣರನ್ನು ಸತ್ಕರಿಸಿ ಕಳುಹಿಸದೆ ಬಿಡಲಾರೆ ಎನ್ನುತ್ತ ಪ್ರಾಪ್ತಿಯಾಗಿರುವ (ತಾನು ಸಂಪಾದಿಸಿ ತಂದಿರುವ) ಸಮಸ್ತ ವಸ್ತುಗಳನ್ನು ಬಳಸಿಕೊಂಡು ಚಂಡಿಯು ಅಡುಗೆಮಾಡತೊಡಗಿದಳು.

(ಶ್ರಾದ್ಧಕ್ಕೆ ಆಗಮಿಸಿರುವ ಬ್ರಾಹ್ಮಣರನ್ನು ಆದರಿಸುವುದು, ವಸ್ತ್ರಾದಿ ದಕ್ಷಿಣೆಗಳನ್ನು ನೀಡುವುದು ಉದ್ದಾಲಕನಿಗೆ ಸೇರಿದ ಕರ್ತವ್ಯವಾದರೂ ತಾನು ಆತನ ಇಷ್ಟದಂತೆ ನಡೆದುಕೊಳ್ಳಲು ಬಿಡಲಾರೆ ಎಂಬುದು ಚಂಡಿಯ ತೀರ್ಮಾನ. ಮೊದಲನೆಯದಾಗಿ, ಯೋಗ್ಯವಾದ ಕಾಲದಲ್ಲಿಯೇ ಪಿತೃಗಳಿಗೆ ತರ್ಪಣವನ್ನು ನೀಡುವಂತೆ ತಾನೇ ನೋಡಿಕೊಳ್ಳುತ್ತೇನೆಂದೂ ಎರಡನೆಯದಾಗಿ, ಆಗಮಿಸಿದ ಸಕಲ ಬ್ರಾಹ್ಮಣರನ್ನು ಗೌರವಿಸುವ, ಸತ್ಕರಿಸುವ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸುತ್ತಾಳೆ. ಉದ್ದಾಲಕ ನಿರಾಕರಿಸುವುದೆಲ್ಲವನ್ನೂ ತಾನು ಅಚ್ಚುಕಟ್ಟಾಗಿ ನೆರವೇರುವಂತೆ ಪ್ರಯತ್ನಿಸುತ್ತೇನೆ. ಅಲ್ಲದೆ, ಪರಿಶುದ್ಧವಾದ ವಸ್ತ್ರಗಳನ್ನು ದಕ್ಷಿಣೆಯಾಗಿ ಕೊಟ್ಟು ಆಗಮಿಸಿದ ಸಮಸ್ತ ಬ್ರಾಹ್ಮಣರನ್ನು ಸತ್ಕರಿಸಿ ಕಳುಹಿಸುತ್ತೇನೆ. ತಾನೇ ಸಂಪಾದಿಸಿ ತಂದಿರುವ ವಿವಿಧ ಬಗೆಯ ಧಾನ್ಯಗಳು, ತರಕಾರಿಗಳಿಂದ ಮತ್ತು ಸಮಸ್ಥ ವಸ್ತುಪರಿಕರಗಳಿಂದ ಸ್ವಾದಿಷ್ಟವಾದ ಅಡುಗೆಯನ್ನು ಸಿದ್ಧಪಡಿಸಿ ಬ್ರಾಹ್ಮಣರಿಗೆ ಉಣಬಡಿಸುತ್ತೇನೆ. ಶ್ರಾದ್ಧದಲ್ಲಿ ಯಾವುದೇ ರೀತಿಯಿಂದಲೂ ಲೋಪವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಉದ್ದಾಲಕನಿಗೆ ಸ್ಪಷ್ಟಪಡಿಸಿ ಅಡುಗೆಮಾಡತೊಡಗಿದಳು. ವಾಸ್ತವವಾಗಿ ಉದ್ದಾಲಕನಿಗೂ ಬೇಕಾದುದು ಅದೇ. ತಾನು ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದು ಹೊರಟರೆ ಆಕೆ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಾಳೆ. ಅದಕ್ಕಾಗಿ ಆತ ತನ್ನ ಇಚ್ಛೆಗೆ ವಿರುದ್ಧವಾಗಿ ಆಡಿ ಚಂಡಿಯಿಂದ ಎಲ್ಲವೂ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ.)  

 

ಕಂಡನೀತೆರನನುದ್ಧಾಲಕಂ ಸಂತಸಂ

ಗೊಂಡು ಮನದೊಳ್ ಪೊರಗೆ ತಾನೊಪ್ಪದವನಾಗಿ

ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ

ತೊಂಡುತೊಳಸಂ ಮರೆದು ಕರ್ಮಾಂಗಮಾಗಿರ್ದ

ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕೆಂದೊಡು

ದ್ದಂಡದಿಂದೆತ್ತಿ ಬೀದಿಗೆ ಬಿಸುಡಲಾ ದ್ವಿಜಂ ರೋಷಭೀಷಣನಾದನು  ೧೬

ಪದ್ಯದ ಅನ್ವಯಕ್ರಮ:

ಕಂಡನ್ ಈ ತೆರನನ್ ಉದ್ದಾಲಕಂ ಮನದೊಳ್ ಸಂತಸಂಗೊಂಡು, ಪೊರಗೆ ತಾನ್ ಒಪ್ಪದವನಾಗಿ ಚಂಡಿ ಪೇಳಿದವೊಲ್ ಆ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ ತೊಂಡುತೊಳಸಂ ಮರೆದು ಕರ್ಮಾಂಗಂ ಆಗಿರ್ದ ಪಿಂಡಮಂ ತೆಗೆದು ಮಡುವಿನೊಳೆ ಹಾಯ್ಕು ಎಂದೊಡೆ ಉದ್ದಂಡದಿಂದ ಎತ್ತಿ ಬೀದಿಗೆ ಬಿಸುಡಲ್ ಆ ದ್ವಜಂ ರೋಷಭೀಷಣನಾದನು.

ಪದ-ಅರ್ಥ:

ಕಂಡನ್-ನೋಡಿದನು;  ಈ ತೆರನನ್-ಈ ರೀತಿಯನ್ನು;  ಪೊರಗೆ-ಹೊರಗೆ;  ಪೇಳಿದವೋಲ್-ಹೇಳಿದಂತೆ;  ಸಂಪ್ರೀತಿಯಿಂದಂ-ಪ್ರೀತಿಪೂರ್ವಕವಾಗಿ, ವಿಶ್ವಾಸಪೂರ್ವಕವಾಗಿ;  ವಿಪರೀತದ-ವ್ಯತಿರಿಕ್ತವಾಗಿರುವ;  ತೊಂಡುತೊಳಸಂ-ಉದ್ಧಟತನವನ್ನು;  ಮರೆದು-ಮರೆತುಬಿಟ್ಟು;  ಕರ್ಮಾಂಗಮಾಗಿರ್ದ-ಶ್ರಾದ್ಧಕಾರ್ಯಕ್ಕೆ ಸಂಬಂಧಿಸಿದ;  ಪಿಂಡ-ಶ್ರಾದ್ಧದಲ್ಲಿ ಪಿತೃಗಳಿಗೆ ಮೀಸಲಿರುಸುವ ಅನ್ನದ ಉಂಡೆ;  ಮಡು-ಹೊಳೆ, ನದಿಗಳಲ್ಲಿನ ನೀರಿನ ಆಳವಾದ ಜಾಗ;  ಹಾಯ್ಕು-ಹಾಕು;  ಉದ್ದಂಡ-ಉಡಾಳತನ, ಅವಿನಯತೆ, ದುರಹಂಕಾರತೆ;  ದ್ವಿಜಂ-ಬ್ರಾಹ್ಮಣನು;  ರೋಷಭೀಷಣ-ಕೋಪದಿಂದ ಭಯಂಕರನಾಗು. 

ಚಂಡಿಯ ಈ ರೀತಿಯ ಮಾತುಗಳು ಹಾಗೂ ವರ್ತನೆಯನ್ನು ನೋಡಿ ಉದ್ದಾಲಕನು ಮನಸ್ಸಿನಲ್ಲಿಯೇ ಸಂತೋಷಪಟ್ಟುಕೊಂಡು ಹೊರಗೆ ತಾನು ಚಂಡಿಯ ಮಾತುಗಳನ್ನು ಒಪ್ಪದವನಂತೆ ನಟಿಸಿ, ಚಂಡಿಯು ಬಯಸಿದಂತೆಯೇ ಶ್ರಾದ್ಧದ ಕಾರ್ಯದಲ್ಲಿ ತೊಡಗಿಕೊಂಡು ವಿಶ್ವಾಸಪೂರ್ವಕವಾಗಿ ಹೆಂಡತಿ ಚಂಡಿಯ ವ್ಯತಿರಿಕ್ತವಾಗಿರುವ ಉದ್ಧಟತನವನ್ನು ಮರೆತುಬಿಟ್ಟು ಶ್ರಾದ್ಧಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಮುಗಿಸಿದನು. ಪುರೋಹಿತ ಬ್ರಾಹ್ಮಣನು ’ಪಿಂಡವನ್ನು ತೆಗೆದು ನೀರಿನ ಮಡುವಿನಲ್ಲಿ ಹಾಕು’ ಎಂದು ಚಂಡಿಗೆ ಆಜ್ಞಾಪಿಸಿದಾಗ ಅವಳು ಒಡನೆಯೇ ದುರಹಂಕಾರದಿಂದ ಪಿಂಡವನ್ನು ತೆಗೆದು ಬೀದಿಗೆ ಎಸೆದಳು. ಆಗ ಬ್ರಾಹ್ಮಣನು ಅದನ್ನು ನೋಡಿ ಕೋಪದಿಂದ ಭಯಂಕರನಾದನು.

(ತಾನು ಚಂಡಿಯ ಪ್ರತಿಯೊಂದು ಮಾತುಗಳಿಗೂ ವ್ಯತಿರಿಕ್ತವಾಗಿ ಆಡುವುದನ್ನು, ಕ್ರಮಕೈಗೊಳ್ಳುವುದನ್ನು ಪ್ರಾರಂಭಿಸಿದ ಮೇಲೆ ಆಕೆ ಅವುಗಳಿಗೆ ವಿರುದ್ಧವಾಗಿ ವರ್ತಿಸುವುದನ್ನು ಹಾಗೂ ಕಾರ್ಯಕೈಗೊಳ್ಳುವುದನ್ನು ಕಂಡಾಗ ಉದ್ದಾಲಕನಿಗೆ ತನ್ನ ಕಾರ್ಯ ಕೈಗೂಡುತ್ತಿದೆ ಅನ್ನಿಸಿ ಮನಸ್ಸಿನೊಳಗೆ ಸಂತೋಷ ಉಂಟಾಯಿತು. ಆದರೆ ತಾನದನ್ನು ಎಲ್ಲಿಯೂ ತೋರ್ಪಡಿಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡಿದ್ದಾನೆ. ಶ್ರಾದ್ಧಕ್ಕೆ ಸಂಬಂಧಿಸಿದ ಹಾಗೆ ಚಂಡಿ ಏನನ್ನು ಹೇಳಿದಳೋ ಅದಕ್ಕೆ ಯಾವುದೇ ರೀತಿಯಲ್ಲಿಯೂ ವಿರುದ್ಧ ಮಾತುಗಳನ್ನಾಡದೆ ಅವಳ ಇಚ್ಚೆಯ ಪ್ರಕಾರವೇ ಹೊರಗೆ ಚಂಡಿಯ ಮಾತುಗಳನ್ನು ಒಪ್ಪದವನಂತೆ ನಟಿಸುತ್ತ ಒಳಗೆ ತಾನು ಬಯಸಿದಂತೆಯೇ ಎಲ್ಲವೂ ನಡೆಯುತ್ತಿವೆಯಲ್ಲ ಎಂದು ಸಂತಸಪಡುತ್ತ, ಚಂಡಿಯ ಉದ್ಧಟತನದ ಮಾತು ಹಾಗೂ ಕಾರ್ಯಗಳನ್ನು ಮರೆತುಬಿಟ್ಟು ಶ್ರಾದ್ಧದ ಕಾರ್ಯಗಳನ್ನು ಒಂದೊಂದಾಗಿ ನೆರವೇರಿಸತೊಡಗಿದನು. ಅದುವರೆಗೆ ಯಾವುದೂ ಊನವಾಗದಂತೆ ಉದ್ದಾಲಕನು ನೋಡಿಕೊಂಡನು. ಚಂಡಿಯ ಈ ಸ್ವಭಾವದ ಪರಿಚಯವಿಲ್ಲದ ಪುರೋಹಿತ ಬ್ರಾಹ್ಮಣನು ಶ್ರಾದ್ಧಕಾರ್ಯಗಳೆಲ್ಲವೂ ಮುಗಿದೊಡನೆಯೇ ’ಪಿತೃಗಳಿಗೆ ಹಾಕಿದ ಪಿಂಡವನ್ನು ನೀರಮಡುವಿನಲ್ಲಿ ಹಾಕು’ ಎಂದು ಉದ್ದಾಲಕನ ಹೆಂಡತಿಗೆ ಆಜ್ಞಾಪಿಸಿದನು. ಅದುವರೆಗೂ ಸೌಮ್ಯಳಾಗಿದ್ದು ಎಲ್ಲವನ್ನೂ ಸಂಪ್ರದಾಯಬದ್ಧವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದ ಚಂಡಿಯು ಏಕಾಏಕಿ ವ್ಯಗ್ರಗೊಂಡು ದುರಹಂಕಾರದಿಂದ ಪಿಂಡವನ್ನು ಬೀದಿಗೆ ಎಸೆದಳು. ಅದುವರೆಗೂ ಸಸೂತ್ರವಾಗಿ ನಡೆಯುತ್ತಿದ್ದ ಪಿತೃಕಾರ್ಯವು ಈ ಒಂದು ಘಟನೆಯಿಂದ ವಿಫಲವಾದಂತಾಯಿತು. ಇದೆಲ್ಲವನ್ನು ನೋಡಿದ ಪುರೋಹಿತ ಬ್ರಾಹ್ಮಣನು ಅಪಶಕುನವಾಯಿತಲ್ಲ ಎಂದು ವ್ಯಗ್ರಗೊಂಡನು. ಉದ್ದಾಲಕನ ಪಿತೃಶ್ರಾದ್ಧವು ನೀರಲ್ಲಿ ಮಾಡಿದ ಹೋಮದಂತಾಯಿತು.)

 

ಎಲೆಗೆ ನಿನ್ನೊಡನೆ ನಾನೇಂ ಹರಿಯಹೋರುವೆಂ

ಛಲತನಕೆಳಸಿದೆ ನೀನರೆಯಾಗಿ ಹೋಗೆಂದು

ಸಲೆ ಮುಳಿದು ಶಾಪಮಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ  ಕೂಡೆ ತಿಳಿದು

ಕೆಲವು ಕಾಲಕೆ ನಿನ್ನೊಳಧ್ವರಹಯಂ ಬಂದು

ನಿಲಲರ್ಜುನಂ ಬಿಡಿಸಿದೊಡೆ ಮೋಕ್ಷಮಹುದೆಂದು

ತೊಲಗಿದಂ ಸಂನ್ಯಾಸಕವನತ್ತಲವನಿಯೊಳ್ ಕಲ್ಲಾದಳಿವಳಿತ್ತಲುಂ  ೧೭

ಪದ್ಯದ ಅನ್ವಯಕ್ರಮ:

’ಎಲೆಗೆ ನಿನ್ನೊಡನೆ ನಾನ್ ಏಂ ಹರಿಯ ಹೋರುವೆಂ? ಛಲತನಕೆ ಎಳಸಿದೆ, ನೀನ್ ಅರೆಯಾಗಿ ಹೋಗು’ ಎಂದು ಸಲೆ ಮುಳಿದು ಶಾಪಮಂ ಕೊಟ್ಟು ಕಾರುಣ್ಯದಿಂದ ಆ ದ್ವಿಜಂ ಕೂಡೆ ತಿಳಿದು, ’ಕೆಲವು ಕಾಲಕೆ ನಿನ್ನೊಳ್ ಅಧ್ವರ ಹಯಂ ಬಂದು ನಿಲಲ್ ಅರ್ಜುನಂ ಬಿಡಿಸಿದೊಡೆ ಮೋಕ್ಷಂ ಅಹುದು’ ಎಂದು ಸಂನ್ಯಾಸಕ ವನತ್ತಲ್ ತೊಲಗಿದನ್, ಇವಳಿತ್ತಲುಂ ಅವನಿಯೊಳ್ ಕಲ್ಲಾದಳ್.

ಪದ-ಅರ್ಥ:

ಎಲೆಗೆ-ಎಲೈ;  ನಿನ್ನೊಡನೆ-ನಿನ್ನೊಂದಿಗೆ;  ಹರಿಯಹೋರುವೆಂ-ನಾಶಹೊಂದುವಂತೆ ಹೋರಾಡಲಿ;  ಛಲತನಕೆಳಸಿದೆ-ಮೋಸಮಾಡಲು ಬಯಸಿದೆ;   ಅರೆಯಾಗಿ– ಬಂಡೆಯಾಗಿ, ಕಲ್ಲಾಗಿ;  ಸಲೆ-ಅತಿಯಾಗಿ;  ಮುಳಿದು-ಸಿಟ್ಟುಗೊಂಡು, ಕೋಪಗೊಂಡು;  ಕಾರುಣ್ಯದಿಂ-ಕರುಣೆಯಿಂದ;  ದ್ವಿಜಂ-ಬ್ರಾಹ್ಮಣನು;  ಕೂಡೆ ತಿಳಿದು-ಚೆನ್ನಾಗಿ ತಿಳಿದುಕೊಂಡು;  ಕೆಲವು ಕಾಲಕೆ-ಹಲವು ವರ್ಷಗಳ ಅನಂತರ;  ಧ್ವರಹಯಂ-ಯಾಗದ ಕುದುರೆಯು;  ನಿಲಲ್-ನಿಂತುಕೊಂಡಾಗ;  ಬಿಡಿಸಿದೊಡೆ– ಬಿಡುಗಡೆಗೊಳಿಸಿದಾಗ;  ಮೋಕ್ಷವಹುದು-ವಿಮೋಚನೆಯಾಗುತ್ತದೆ;  ತೊಲಗಿದಂ-ಹೊರಟುಹೋದನು;  ಸಂನ್ಯಾಸಕ-ಸನ್ಯಾಸಿ, ಮುನಿ;  ವನತ್ತಲು-ವನದ ಕಡೆಗೆ;  ಅವನಿಯೊಳ್-ಭೂಮಿಯಲ್ಲಿ;  ಇವಳ್-ಚಂಡಿ;  ಇತ್ತಲುಂ-ಈ ಕಡೆ. 

’ಎಲೈ ಚಂಡಿಯೆ, ನಾನು ನಿನ್ನೊಡನೆ ಯಾಕಾಗಿ ನಾಶಹೊಂದುವಂತೆ ಹೋರಾಡಲಿ? ಪಿತೃಪಿಂಡವನ್ನು ಅವಮಾನಿಸಿದ ನೀನು ಶಿಲೆಯಾಗಿ ಹೋಗು’ ಎಂದು ಪುರೋಹಿತ ಬ್ರಾಹ್ಮಣನು ಅತ್ಯಂತ ಕೋಪಗೊಂಡು ಚಂಡಿಗೆ ಶಾಪವನ್ನು ಕೊಟ್ಟನು. ಕೆಲವೇ ಕ್ಷಣಗಳಲ್ಲಿ ತನ್ನ ಶಾಪದ ತೀವ್ರತೆಯ ಅರಿವಾಗಿ, ’ಮುಂದೆ ಭವಿಷ್ಯದಲ್ಲಿ ಅರ್ಜುನನ ಯಾಗದ ಕುದುರೆಯು ನಿನ್ನಲ್ಲಿಗೆ ಬಂದು ತಟಸ್ಥವಾದಾಗ ಬೆಂಗಾವಲಾಗಿ ಬಂದ ಅರ್ಜುನನು ಬಿಡಿಸಿದೊಡನೆ ನಿನ್ನ ಶಾಪ ವಿಮೋಚನೆಯಾಗುವುದು’ ಎಂದು ಹೇಳಿ ಆ ಸಂನ್ಯಾಸಕ ಮುನಿಯು ವನಾಂತರಕ್ಕೆ ತೆರಳಿದನು. ಕೂಡಲೇ ಚಂಡಿಯು ಕಲ್ಲಾದಳು.

(ಚಂಡಿಯ ಸ್ವಭಾವಗಳನ್ನು ಅರಿಯದ ಸಂನ್ಯಾಸಕ ಬ್ರಾಹ್ಮಣನಿಗೆ ಇದೆಲ್ಲವೂ ಆಶ್ಚರ್ಯಕರ ಎನಿಸಿತು. ಪಿತೃಶ್ರಾದ್ಧದ ಕೆಲಸಗಳು ಮುಗಿಯುವವರೆಗೂ ಎಲ್ಲವನ್ನೂ ನಾಜೂಕಾಗಿ, ಸಾವಧಾನವಾಗಿ, ಸಂಪ್ರದಾಯಬದ್ಧವಾಗಿ ನಡೆಸಿಕೊಂಡು, ಆ ದಿನಕ್ಕೆ ಬೇಕಾದ ಬಗೆಬಗೆಯ ಅಡುಗೆಯನ್ನೂ ಸಿದ್ಧಪಡಿಸಿ ಶ್ರಾದ್ಧದ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡವಳು, ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರೂ ಶ್ರಾದ್ಧದ ಪಿಂಡವನ್ನು ಕೊಂಡುಹೋಗಿ ನೀರಲ್ಲಿ ಹಾಕೆಂದು ಆಜ್ಞಾಪಿಸಿದ ತಕ್ಷಣವೇ ವ್ಯಗ್ರಗೊಂಡು ದುರಹಂಕಾರಿಯಾಗಿ ವರ್ತಿಸಿದಳು. ನೀರಮಡುವಿನಲ್ಲಿ ಹಾಕಬೇಕಾದ ಪಿಂಡವನ್ನು ಬೀದಿಯಲ್ಲಿ ಎಸೆದು ಶ್ರಾದ್ಧದ ಕಾರ್ಯವೆಲ್ಲವನ್ನೂ ಕೆಡಿಸಿದಳಲ್ಲ ಎಂದುಕೊಂಡು ಪೌರೋಹಿತ್ಯವನ್ನು ನಿರ್ವಹಿಸಿದ ಬ್ರಾಹ್ಮಣನಿಗೆ ಎಲ್ಲಿಲ್ಲದ ಕೋಪ ಬಂತು. ಒಂದೆಡೆ ಶ್ರಾದ್ಧದ ನಿಯಮಗಳನ್ನು ಮೀರಿ ಪಿಂಡವನ್ನು ಬೀದಿಗೆ ಎಸೆದುದು, ಇನೊಂದೆಡೆ, ಗುರುಹಿರಿಯರ ಆಜ್ಞೆಯನ್ನು ಮೀರಿದುದು, ಮತ್ತೊಂದೆಡೆ, ಒಬ್ಬ ಗೃಹಿಣಿಯಾಗಿ ದುರಹಂಕಾರದಿಂದ ವರ್ತಿಸಿದುದು ಪುರೋಹಿತ ಬ್ರಾಹ್ಮಣರನ್ನು ಮಾತ್ರವಲ್ಲದೆ, ಅಲ್ಲಿ ನೆರೆದಿದ್ದ ಎಲ್ಲರನ್ನೂ ಅವಮಾನಿಸಿದಂತಾಯಿತು. ಉದ್ದಾಲಕನಿಗೆ ಹೆಂಡತಿಯ ಸ್ವಭಾವಗಳು ತಿಳಿದಿದ್ದರೂ ಆಗಮಿಸಿರುವ ಬ್ರಾಹ್ಮಣರಿಗೆ ತಿಳಿದಿರಲಿಲ್ಲ. ಹಾಗಾಗಿ ಶ್ರಾದ್ಧದ ಕೊನೆಯಲ್ಲಿ ಈ ಎಡವಟ್ಟು ಸಂಭವಿಸಿತು. ಆಕೆಯ ದುರಹಂಕಾರದ ವರ್ತನೆ ಬ್ರಾಹ್ಮಣರನ್ನು ರೊಚ್ಚಿಗೇಳುವಂತೆ ಮಾಡಿದುದರಿಂದ ಆಕೆ ’ಶಿಲೆಯಾಗು’ ಎಂಬ ಶಾಪಕ್ಕೆ ಗುರಿಯಾಗಬೇಕಾಯಿತು. ಆದರೆ ಮರುಕ್ಷಣದಲ್ಲಿಯೇ ಶಾಪವನ್ನು ನೀಡಿದ ಪುರೋಹಿತ ಬ್ರಾಹ್ಮಣನಿಗೆ ತಿಳಿವಳಿಕೆ ಮೂಡಿ ಅದಕ್ಕೊಂದು ಪ್ರತಿಶಾಪವನ್ನೂ ನೀಡಿದನು. ಮುಂದೆ ಭವಿಷ್ಯದಲ್ಲಿ  ಧರ್ಮರಾಯನ ಯಾಗದ ಕುದುರೆಯು ನಿನ್ನಲ್ಲಿಗೆ ಬಂದು ತಟಸ್ಥಗೊಂಡಾಗ ಅದರ ಬೆಂಗಾವಲಿಗೆ ಬರುವ ಅರ್ಜುನನು ಅದನ್ನು ಬಿಡಿಸಿದಾಗ ನಿನಗೆ ಶಾಪವಿಮೋಚನೆಯಾಗುತ್ತದೆ’ ಎಂದು ಹೇಳಿ ಹೊರಟುಹೋದನು. ಆ ಕ್ಷಣದಲ್ಲಿಯೇ ಚಂಡಿ ಶಿಲೆಯಾದಳು.)

***

Leave a Reply

Your email address will not be published. Required fields are marked *