ಸಾಹಿತ್ಯಾನುಸಂಧಾನ

heading1

ಬೇವು ಬೆಲ್ಲದೊಳಿಡಲೇನು ಫಲ? – ಪುರಂದರದಾಸ

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

ಬೇವು ಬೆಲ್ಲದೊಳಿಡಲೇನು ಫಲ

ಹಾವಿಗೆ ಹಾಲೆರೆದರೇನು ಫಲ   ||ಪ||

            ಕಹಿಬೇವಿನ ಮರದ ಸರ್ವಭಾಗವೂ ಕಹಿಯಾಗಿದ್ದು, ಅದರ ಕಹಿಯನ್ನು ತೆಗೆದುಹಾಕಲೆಂದು ಅದರ ಎಲೆಗಳನ್ನೋ ತೊಗಟೆಯನ್ನೋ, ಕಾಯಿಯನ್ನೋ ಬೆಲ್ಲದ ಪಾಕದಲ್ಲಿ ಅದ್ದಿದರೆ, ಅಥವಾ ಒಂದಷ್ಟು ದಿನಗಳ ಕಾಲ ಮುಳುಗಿಸಿ ಇರಿಸಿದರೆ ಬೇವು ಎಂದಿಗೂ ತನ್ನ ಕಹಿಗುಣವನ್ನು ಬಿಟ್ಟುಕೊಡಲಾರದು. ’ಕಹಿ” ಎಂಬುದು ಬೇವಿನ ಮೂಲಭೂತ ಗುಣ. ಹಾಗೆಯೇ ನಾಗರಹಾವು ವಿಷಯುಕ್ತವಾದುದು. ಅದರ ವಿಷವನ್ನು ಕಳೆದುಬಿಡೋಣವೆಂದು ದಿನನಿತ್ಯ ನಾಗರಹಾವಿಗೆ ಹಾಲನ್ನು ಎರೆದರೂ ಹಾವು ತನ್ನ ವಿಷವನ್ನು ಅಮೃತವಾಗಿ ಬದಲಾಯಿಸದು. ವಿಷವನ್ನು ಕಕ್ಕುವುದು ನಾಗರಹಾವಿನ ಮೂಲಭೂತ ಗುಣ. ಲೋಕದಲ್ಲಿ ಪ್ರತಿಯೊಂದು ಸಸ್ಯರಾಶಿ, ಜೀವರಾಶಿಗಳಿಗೆ ತಮ್ಮದೇ ಮೂಲಭೂತ ಸ್ವಭಾವ, ಗುಣಗಳು ಇದ್ದೇ ಇರುತ್ತವೆ. ಅವುಗಳನ್ನು ಯಾವುದೇ ರೀತಿಯಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಹಾಗೆ ಪ್ರಯತ್ನಿಸುವುದು ವ್ಯರ್ಥಕಾರ್ಯ. ಅಂತಹ ಪ್ರಯತ್ನಕ್ಕೆ ಯಾವುದೇ ಪ್ರತಿಫಲ ದೊರೆಯಲಾರದು ಎಂಬುದನ್ನು ಪುರಂದರದಾಸರು ಈ ಕೀರ್ತನೆಯ ಪಲ್ಲವಿಯಲ್ಲಿ ವಿವರಿಸಿದ್ದಾರೆ.

 

ಕುಟಿಲವ ಬಿಡದಿಹ ಕುಜನರು ಮಂತ್ರವ

ಪಠನೆಯ ಮಾಡಿದರೇನು ಫಲ

ಸಟೆಯನ್ನಾಡುವ ಮನುಜರು ಮನದಲಿ

ವಿಠಲನ ನೆನೆದರೆ ಏನು ಫಲ                  ||೧||

            ಲೋಕದ ಜನರಲ್ಲಿ ಹತ್ತು ಹಲವು ಸ್ವಭಾವಗಳು. ಕೆಲವು ಕೆಟ್ಟವು, ಕೆಲವು ಒಳ್ಳೆಯವು. ಕೆಲವರಲ್ಲಿ ಮೋಸ, ವಂಚನೆ, ಮತ್ಸರ ಮೊದಲಾದ ಸಮಾಜಘಾತುಕ ಸ್ವಭಾವಗಳು. ಇಂತಹ ಸ್ವಭಾವಗಳನ್ನು ತ್ಯಜಿಸದೆ ಮನುಷ್ಯನಿಗೆ ಸಮಾಜದಲ್ಲಿ ಸ್ಥಾನಮಾನವಿಲ್ಲ, ಗೌರವವಿಲ್ಲ. ಆದರೆ, ತನ್ನ ಯಾವ ದುರ್ಗುಣಗಳನ್ನೂ ದುರಭ್ಯಾಸಗಳನ್ನೂ ತ್ಯಜಿಸದೇ ಮನುಷ್ಯನಿಗೆ ತಾನು ಹಿರಿಯನೆನಿಸಿಕೊಳ್ಳಬೇಕು. ಸಭ್ಯನೆನಿಸಿಕೊಳ್ಳಬೇಕು. ಸಮಾಜದಲ್ಲಿ ದೊಡ್ಡಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಹತ್ತು ಹಲವು ವೇಷಗಳು, ಆಚರಣೆಗಳು, ವ್ರತಗಳು, ಪೂಜೆ-ಪುರಸ್ಕಾರಗಳು. ಎಲ್ಲವೂ ಅನ್ಯರನ್ನು ಮೆಚ್ಚಿಸುವುದಕ್ಕೆ ಮಾತ್ರ. ಬದುಕಿನಾದ್ಯಂತ ಕೇವಲ ಮೋಸವನ್ನೇ ಮೈಗೂಡಿಸಿಕೊಂಡು ತಾನು ಸಭ್ಯನೆನಿಸಿಕೊಳ್ಳಬೇಕು, ಲೋಕದ ಜನರ ದೃಷ್ಟಿಯಲ್ಲಿ ಮರ್ಯಾದಸ್ಥನೆನಿಸಿಕೊಳ್ಳಬೇಕು ಎಂದುಕೊಂಡು ದಿನದ ಮೂರೂ ಹೊತ್ತು ಅಥವಾ ಆಗಾಗ ಮಂತ್ರಗಳನ್ನು ಪಠಿಸಿದರೆ ವ್ಯಕ್ತಿ ಸಭ್ಯನಾಗುತ್ತಾನೆಯೇ? ಹಿರಿಯನಾಗುತ್ತಾನೆಯೇ? ಅದರಿಂದ ದೊರೆಯುವ ಫಲವಾದರೂ ಏನು? ಅದು ಕೇವಲ ಬೂಟಾಟಿಕೆ ಎನಿಸಿಕೊಳ್ಳುತ್ತದೆಯೇ ವಿನಾ ಸಭ್ಯತೆ ಎನಿಸಿಕೊಳ್ಳಲಾರದು.

            ಹೆಜ್ಜೆಹೆಜ್ಜೆಗೂ ಸುಳ್ಳನ್ನೇ ಆಡುತ್ತಾ ಅನ್ಯರನ್ನು ದಾರಿತಪ್ಪಿಸುವ, ಮೋಸಮಾಡುವ ಮತ್ತು ಆ ಮೂಲಕ ಸಮಾಜಘಾತುಕರಾಗಿ ವರ್ತಿಸುವ ಮನುಷ್ಯರು ಮನಸ್ಸಿನಲ್ಲಿ ವಿಠಲನನ್ನು ನೆನೆದರೆ ಏನು ಫಲ? ಅವರ ಮೂಲಭೂತಗುಣಗಳು ಬದಲಾಗುವುದಕ್ಕೆ ಸಾಧ್ಯವೇ? ಭಗವಂತನ ಸ್ಮರಣೆಗೆ ಮನಸ್ಸು ಶುದ್ಧವಾಗಿರಬೇಕು. ಮನಸ್ಸು ಶುದ್ಧವಾಗಿರಬೇಕಾದರೆ ಆತನ ಸ್ವಭಾವ, ಗುಣಗಳು ಶುದ್ಧವಾಗಿರಬೇಕು. ಇದಾವುದೂ ಸಾಧ್ಯವೇ ಇಲ್ಲದಿರುವಾಗ ಮನಸ್ಸು ಹೇಗೆ ಶುದ್ಧವಾದೀತು? ಆತನ ವರ್ತನೆಗಳು ಹೇಗೆ ಮೌಲಿಕವಾಗುವುದಕ್ಕೆ ಸಾಧ್ಯವಾದೀತು? ಸಮಾಜದ ಜನರನ್ನು ಸದಾ ಮೋಸಗೊಳಿಸುವುದಕ್ಕೆ ಪ್ರಯತ್ನಿಸುವ ಇಂತಹ ಡಾಂಬಿಕರ ಪೂಜೆ, ಪುರಸ್ಕಾರಗಳು, ಆಚರಣೆಗಳು, ಮಂತ್ರಪಠನಗಳು ಭಗವಂತನಿಗೆ ತಲುಪಲಾರವು, ಆತನಿಗೆ ಮೆಚ್ಚುಗೆಯಾಗಲಾರವು. ಸಮಾನಮನಸ್ಕ ಜನರಿಗೆ ಮೆಚ್ಚುಗೆಯಾದರೂ ಕ್ರಮೇಣ ಅಂತಹ ಡಾಂಬಿಕರ ಅಸಲಿಬಣ್ಣ ಬಯಲಾಗುವುದರಿಂದ ಸಮಾಜದ ಮುಂದೆ ನಗೆಗೀಡಾಗಬೇಕಾದ ಪ್ರಸಂಗವೂ ಒದಗುತ್ತದೆ, ಅದಕ್ಕಿಂತ ಮೊದಲೇ ನಮ್ಮನ್ನು ನಾವು ಸುಧಾರಿಸಿಕೊಳ್ಳಬೇಕು ಎಂಬುದನ್ನು ಪುರಂದರದಾಸರು ಈ ಸಾಲುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

 

ಮಾತಾಪಿತರನು ಬಳಲಿಸುವಾತನು

ಯಾತ್ರೆಯ ಮಾಡಿದರೇನು ಫಲ

ಘಾತಕತನವನು ಬಿಡದೆ ನಿರಂತರ

ಗೀತೆಯನೋದಿದರೇನು ಫಲ         ||೨||

            ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವುರಿಂದ, ತೀರ್ಥಸ್ನಾನ ಮಾಡುವುದರಿಂದ ಮಾಡಿದ ಪಾಪ ನಾಶವಾಗಿ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುದು ನಮ್ಮ ಪರಂಪರಾಗತ ನಂಬಿಕೆ. ಹೀಗೆ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ, ತೀರ್ಥಸ್ನಾನ ಮಾಡುತ್ತಾ ಹೋದಂತೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಮಾಡಿರುವ ಪಾಪಗಳು, ನಮ್ಮಲ್ಲಿರುವ ಅವಗುಣಗಳೆಲ್ಲವೂ ನಾಶವಾಗಬೇಕು. ದಯೆ, ದಾನ, ಧರ್ಮ, ಪರೋಪಕಾರ, ಹಿರಿಯರ ಬಗೆಗೆ ಗೌರವ, ಕಿರಿಯರ ಬಗೆಗೆ ವಾತ್ಸಲ್ಯ ಮೊದಲಾದ ಮೌಲ್ಯಗಳು ಬೆಳವಣಿಗೆಯಾಗಬೇಕು. ಇವೆಲ್ಲವೂ ಮನುಷ್ಯನ ಸಾಂಘಿಕಬದುಕಿಗೆ ಪೂರಕವಾದವುಗಳು. ಬದುಕಿನಲ್ಲಿ ತಂದೆ-ತಾಯಿಯರನ್ನು, ಮನೆಯಲ್ಲಿನ ಹಿರಿಯರನ್ನು ಅಥವಾ ಕಿರಿಯರನ್ನು ನೋಯಿಸುವವನು, ಕಾಡುವವನು, ಪೀಡಿಸುವವನು, ಅವಮಾನಿಸುವವನು, ಹಿಂಸಿಸುವವನು ತೀರ್ಥಯಾತ್ರೆಯನ್ನು ಮಾಡಿದರೆ ಸಿಗುವ ಫಲವಾದರೂ ಏನು? ಖಾಸಗಿಬದುಕಿನಲ್ಲಿ ಅನೈತಿಕವಾದುದನ್ನು ಮಾಡಿಕೊಂಡು ಲೋಕದ ಜನರೆಲ್ಲ ತನ್ನನ್ನು ಒಬ್ಬ ಭಕ್ತನೆಂದೋ, ಸಭ್ಯನೆಂದೋ ಭಾವಿಸಬೇಕೆಂದು ಅನ್ಯರನ್ನು ನಂಬಿಸುವುದಕ್ಕೆ ಮಾಡುವ ತೀಥಯಾತ್ರೆ, ತೀರ್ಥಸ್ನಾನಗಳು ನಿಷ್ಪ್ರಯೋಜಕವಾದವುಗಳು.

            ಅನ್ಯರನ್ನು ಪೀಡಿಸುವುದು, ಹಿಂಸಿಸುವುದು, ನೋಯಿಸುವುದು, ಅನ್ಯರ ಅನ್ನವನ್ನು ಕಸಿಯುವುದು, ಬದುಕಗೊಡದಿರುವುದು ಮೊದಲಾದವು ಘಾತಕತನ ಎಂದೆನಿಸಿಕೊಳ್ಳುತ್ತದೆ. ಇವೆಲ್ಲವೂ ಸಮಜವಿರೋಧಿ ವರ್ತನೆಗಳು. ಅನ್ಯರನ್ನು ಕಾಡಿ, ಪೀಡಿಸಿ ತಾನು ಸುಖವಾಗಿರುತ್ತೇನೆ ಎಂದುಕೊಂಡರೆ ಅದು ಮನುಷ್ಯತ್ವವಲ್ಲ. ಕೆಲವರು ಬದುಕಿನುದ್ದಕ್ಕೂ ಘಾತಕತನವನ್ನು ಮೈಗೂಡಿಸಿಕೊಂಡು ಅನ್ಯರನ್ನು ಮೆಚ್ಚಿಸುವುದಕ್ಕೆ, ತಾನು ಸಮಾಜದಲ್ಲಿ ಸಭ್ಯನೆನಿಸಿಕೊಳ್ಳುವುದಕ್ಕೆ ದಿನನಿತ್ಯ ಭಗವದ್ಗೀತೆಯನ್ನು ಪಠನಮಾಡುತ್ತಿದ್ದರೆ, ಜೀವನಮೌಲ್ಯಗಳನ್ನು ಅನ್ಯರಿಗೆ ವಿವರಿಸುತ್ತ ಭಗವದ್ಗೀತೆಯ ಮೇಲೆ ಪ್ರವಚನಗಳನ್ನು ಮಾಡುತ್ತಿದ್ದರೆ ಅದರಿಂದ ಸಿಗುವ ಫಲವಾದರೂ ಏನು? ನಮ್ಮ ಸ್ವಭಾವಕ್ಕೂ ನಮ್ಮ ಆಚರಣೆಗಳಿಗೂ ಸಾಮ್ಯವೇ ಇಲ್ಲದಿರುವಾಗ ಈ ರೀತಿಯ ವರ್ತನೆಗಳೆಲ್ಲವೂ ಬರೀ ಬೂಟಾಟಿಕೆ ಮಾತ್ರವಲ್ಲ, ಸಮಾಜವಿರೋಧಿ ಕೃತ್ಯಗಳೆನಿಸಿಕೊಳ್ಳುತ್ತವೆ ಎಂಬುದು ಪುರಂದರದಾಸರ ನಿಲುವು.

 

ಕಪಟತನದಲಿ ಕಾಡುವವರೆಲ್ಲರು

ಜಪಗಳ ಮಾಡಿದರೇನು ಫಲ

ಕುಪಿತಬುದ್ಧಿಯನು ಬಿಡದೆ ನಿರಂತರ

ಉಪವಾಸ ಮಾಡಿದರೇನು ಫಲ          ||೩||

            ಲೋಕದಲ್ಲಿ ಹೆಚ್ಚಿನವರು ನೂರಾರು ವಿಧಗಳಲ್ಲಿ ಅನ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಮತ್ತು ಆ ಮೂಲಕ ನೂರಾರು ರೀತಿಗಳಿಂದ ಲಾಭಹೊಡೆಯುತ್ತಲೇ ಇರುತ್ತಾರೆ. ಹಲವರ ಬದುಕಿನಲ್ಲಂತೂ ಕಪಟಗಳೇ ತುಂಬಿಕೊಂಡಿವೆ. ಕ್ಷಣಕ್ಕೊಂದು ವೇಷ, ಹೆಜ್ಜೆಗೊಂದು ನಾಟಕ. ಯಾವ ಶ್ರಮವೂ ಇಲ್ಲದೆ ಸಿರಿವಂತನಾಗಬೇಕು. ತನ್ನಲ್ಲಿ ಅರ್ಹತೆಗಳಿಲ್ಲದ್ದಿದ್ದರೂ ತಾನು ಅಧಿಕಾರ ಹಿಡಿಯಬೇಕು. ಸುಲಭದಲ್ಲಿ ಹಣಗಳಿಸಬೇಕು. ಇದಕ್ಕಾಗಿ ಜೀವಮಾನವಿಡೀ ಹೆಣಗಾಟ. ಯಾರು ಯಾರನ್ನೋ ನಂಬಿಸಿ ಮೋಸ, ವಂಚನೆ. ತನಗಾಗದವರನ್ನು ಹಣಿಯಲು ಹರಸಾಹಸ. ಲಾಭಹೊಡೆಯಲು ಒಂದಷ್ಟು ಪಿತೂರಿಗಳು. ಅಂತೂ ಕಪಟತನವನ್ನು ಮೈಗೂಡಿಸಿಕೊಂಡು, ಸಿಕ್ಕಸಿಕ್ಕವರನ್ನು ಕಾಡುತ್ತ, ಪೀಡಿಸುತ್ತ ಬದುಕುವವರು. ತಮ್ಮ ಈ ಅನೈತಿಕತೆಗಳನ್ನು ಮುಚ್ಚಿಡಲು, ಲೋಕದ ಜನರ ದೃಷ್ಟಿಯಲ್ಲಿ ಸಭ್ಯ, ಯೋಗ್ಯ, ಸಂಭಾವಿತನೆನಿಸಿಕೊಳ್ಳಲು, ಅನ್ಯರನ್ನು ಮೆಚ್ಚಿಸಲು ಬಗೆಬಗೆಯ ಜಪ, ತಪಗಳು. ಆದರೆ ಸ್ವಭಾವಕ್ಕೂ ಆಚರಣೆಗೂ ಸಾಮ್ಯವೇ ಇಲ್ಲದಿದ್ದರೆ ಅದರಿಂದ ಸಿಗುವ ಫಲವಾದರೂ ಏನು?

            ಮನುಷ್ಯನಲ್ಲಿರುವ ಹಲವು ಅವಗುಣಗಳಲ್ಲಿ ಕೋಪವೂ ಒಂದು. ಹೆಜ್ಜೆಹೆಜ್ಜೆಗೂ ಕೋಪಿಸಿಕೊಳ್ಳುವುದು, ಸಿಕ್ಕಸಿಕ್ಕವರ ಮೇಲೆ ಕೋಪಿಸಿಕೊಳ್ಳುವುದು, ತನ್ನ ದುರಹಂಕಾರದಿಂದ ಅನ್ಯರ ನೆಮ್ಮದಿಯನ್ನು ಕಳೆಯುವುದು-ಇವೆಲ್ಲವೂ ಸಮಾಜಘಾತಕ ವಿಚಾರಗಳು. ದುರಹಂಕಾರಿಗಳಲ್ಲಿ ಕೋಪವೇ ಅಧಿಕ. ಅವರು ಅನ್ಯರ ಏಳಿಗೆ, ಯಶಸ್ಸು, ಸಾಧನೆಗಳನ್ನು ಸಹಿಸಿಕೊಳ್ಳಲಾರರು. ಮನುಷ್ಯರು ಹೀಗೆ ಕುಪಿತಬುದ್ಧಿಯನ್ನು ಬಿಡದೆ ನಿರಂತರ ಉಪವಾಸ ವ್ರತವನ್ನು ಮಾಡಿದರೆ ಸಿಗುವ ಫಲವಾದರೂ ಏನು? ಮನುಷ್ಯರು ತಮ್ಮತಮ್ಮ ನ್ಯೂನತೆಗಳನ್ನು ಕಳೆದುಕೊಂಡು, ಪರಿಪೂರ್ಣನಾಗಿ ಭಗವಂತನ ಕೃಪೆಗೆ ಪಾತ್ರನಾಗಲು ಅನುಕೂಲಗಳನ್ನು ಕಲ್ಪಿಸುವುದೇ ವ್ರತಗಳ ಉದ್ದೇಶ. ತಮ್ಮಲ್ಲಿರುವ ನೀಚತನವನ್ನು ಕಳೆದುಕೊಳ್ಳದೆ, ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸದೆ ಭಗವಂತನ ಕೃಪೆಗೆ ಪಾತ್ರನಾಗುವುದಾದರೂ ಹೇಗೆ? ಹಾಗಾಗಿ ಸ್ವಭಾವಕ್ಕೂ ಆಚರಣೆಗೂ ಸಾಮ್ಯವೇ ಇಲ್ಲದಿದ್ದರೆ ಅದರಿಂದ ಯಾವ ಪ್ರಯೋಜನವೂ ಆಗಲಾರದು ಎಂಬುದು ಪುರಂದರದಾಸರ ನಿಲುವು.

 

ಪತಿಗಳ ನಿಂದಿಪ ಸತಿಯರು ಬಹುವಿಧ

ವ್ರತಗಳ ಮಾಡಿದರೇನು ಫಲ

ಅತಿಥಿಗಳೆಡೆಯಲಿ ಭೇದವ ಮಾಡಿ ಸ

ದ್ಗತಿಯನು ಬಯಸಿದರೇನು ಫಲ          ||೪||

            ಮನೆ ಮನುಷ್ಯನ ಮೊದಲ ಪಾಠಶಾಲೆ. ಅವನು ಪ್ರಾಥಮಿಕವಾಗಿ ಎಲ್ಲವನ್ನೂ ಕಲಿಯುವುದು ಮನೆಯಲ್ಲಿ. ಮನೆಯ ವಾತಾವರಣ ಆರೋಗ್ಯಪೂರ್ಣವಾಗಿದ್ದರೆ ಒಳ್ಳೆಯ ಬದುಕು ಸಾಧ್ಯ, ಮನೆಯಲ್ಲಿನ ಮಹಿಳೆಯರ ಮನೋಭಾವ, ಸ್ವಭಾವ, ಗುಣಗಳು ಸಮರ್ಪಕವಾಗಿದ್ದರೆ ಮನೆಮಂದಿಯೆಲ್ಲ ಸುಧಾರಣೆ ಹೊಂದಿದಂತೆ. ಆದರೆ ಮನೆಯಲ್ಲಿನ ಮಹಿಳೆಯರು ಅವಗುಣಗಳನ್ನು ಬೆಳೆಸಿಕೊಂಡರೆ, ತಮ್ಮ ಗಂಡಂದಿರನ್ನು ಸಂಶಯದಿಂದ ನೋಡುತ್ತಿದ್ದರೆ, ಕಾಡಿ ಪೀಡಿಸುತ್ತಿದ್ದರೆ ಸಂಸಾರವೆಂಬುದು ರಣರಂಗವಾಗುತ್ತದೆ.   ಮನೆ ನಾಶವಾಗುವುದರೊಂದಿಗೆ ಸಮಾಜವ್ಯವಸ್ಥೆಯೂ ಕುಸಿಯುತ್ತದೆ. ಒಂದೆಡೆ ಮನೆಯಲ್ಲಿ ಸತಿಯರು ತಮ್ಮ ಗಂಡಂದಿರನ್ನೇ ನಿಂದಿಸುವುದು, ಕಾಡುವುದು, ಪೀಡಿಸುವುದು ಮೊದಲಾದ ಅವಗುಣಗಳನ್ನು ಬೆಳೆಸಿಕೊಂಡು, ಇನ್ನೊಂದೆಡೆ ಲೋಕದ ದೃಷ್ಟಿಯಲ್ಲಿ ತಾವು ಸಭ್ಯರೆನಿಸಿಕೊಳ್ಳಲು, ದೈವಭಕ್ತೆಯರೆನಿಸಿಕೊಳ್ಳಲು ಪೂಜೆ, ಪುರಸ್ಕಾರ, ವಿವಿಧ ವ್ರತಗಳನ್ನು ಮಾಡಿದರೆ ಅದರಿಂದ ಸಿಗುವ ಲಾಭವೇನು? ಮನಸ್ಸು, ಸ್ವಭಾವ, ಗುಣ, ಆಚಾರ-ವಿಚಾರಗಳು ಶುದ್ಧವಾಗಿಲ್ಲದೆ ಕೈಗೊಳ್ಳುವ ಪೂಜೆ, ವ್ರತಗಳಿಂದ ಪ್ರಯೋಜವಾದರೂ ಏನು? ಅಥವಾ ಅವುಗಳಿಗೆ ಮಹತ್ವವಾದರೂ ಏನು?

            ಅತಿಥಿ ಸತ್ಕಾರ ನಮ್ಮ ಪಾರಂಪರಿಕ ಮೌಲ್ಯಗಳಲ್ಲಿ ಒಂದು. “ಅತಿಥಿ ದೇವೋ ಭವ” ಎಂಬುದು ಹಿರಿಯರ ಮಾತು. ಮನೆಗೆ ಬರುವ ಅತಿಥಿಗಳನ್ನು ಮನೆಮಂದಿ ಅದರಲ್ಲೂ ಮನೆಯಲ್ಲಿನ ಸತಿಯರು ಆದರಿಸಿ ಗೌರವಿಸುವುದು ಪರಿಪಾಠ. ಆದರೆ ಆತಿಥ್ಯದ ಸಂದರ್ಭದಲ್ಲಿ ಭೇದಭಾವ ಸಲ್ಲದು. ಬಂದ ಅತಿಥಿಗಳು ತಮ್ಮ ಕಡೆಯವರಿರಲಿ, ತಮ್ಮ ಗಂಡಂದಿರ ಕಡೆಯವರಿರಲಿ, ಬಡವರಿರಲಿ, ಸಿರಿವಂತರಿರಲಿ ಸಮಾನವಾದ ಸತ್ಕಾರ ಮುಖ್ಯ. ಆದರೆ ತಮ್ಮ ಕಡೆಯವರನ್ನು, ತಮಗೆ ಬೇಕಾದವರನ್ನು, ಸಿರಿವಂತರನ್ನು ಹೆಚ್ಚು ಆದರಿಸಿ, ಗೌರವಿಸಿ, ಬೇಕು ಬೇಕಾದುದೆಲ್ಲವನ್ನೂ ಉಣಬಡಿಸುವುದು; ಗಂಡನ ಕಡೆಯವರನ್ನು, ತಮಗೆ ಬೇಡವಾದವರನ್ನು, ಬಡವರನ್ನು ಸಾಮಾನ್ಯರಂತೆ ಕಾಣುವುದು, ತಾತ್ಸಾರದಿಂದ ಬೇಕಾಬಿಟ್ಟಿ ಉಪಚರಿಸುವುದು, ನಿರ್ಲಕ್ಷಿಸುವುದು ಎಲ್ಲವೂ ಆತಿಥ್ಯದಲ್ಲಿ ಮೋಸ, ಭೇದಭಾವ ಎನಿಸಿಕೊಳ್ಳುತ್ತದೆ. ಹೀಗೆ ಭೇದಭಾವ ಮಾಡಿ ಬದುಕಿನಲ್ಲಿ ತಾವು ಸದ್ಗತಿಯನ್ನು ಬಯಸಿದರೆ ಅದರಿಂದ ಸಿಗುವ ಫಲವಾದರೂ ಏನು ಎಂದು ಪುರಂದರದಾಸರು ಪ್ರಶ್ನಿಸುತ್ತಾರೆ.

 

ಹೀನಕೃತ್ಯಗಳ ಮಾಡುತ ನದಿಯಲಿ

ಸ್ನಾನವ ಮಾಡಿದರೇನು ಫಲ

ಶ್ರೀನಿಧಿ ಪುರಂದರವಿಠಲನ ನೆನೆಯದೆ

ಮೌನವ ಮಾಡಿದರೇನು ಫಲ             ||೫||

            ಲೋಕದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳ ಪರಿಮಾರ್ಜನೆಗಾಗಿ ಪುಣ್ಯಕ್ಷೇತ್ರ ದರ್ಶನ, ತೀರ್ಥಸ್ನಾನಾದಿಗಳನ್ನು ಮಾಡುವುದು ಮನುಷ್ಯ ಕಂಡುಕೊಂಡಿರುವ ಒಂದು ಮಾರ್ಗ. ಇದರಿಂದ ಪಾಪಗಳೆಲ್ಲ ಪರಿಹಾರವಾಗಿ ಭಗವಂತನ ಕೃಪೆಗೆ ಪಾತ್ರರಾಗುವುದಕ್ಕೆ, ಮುಂದೆ ಮುಕ್ತಿಯನ್ನು ಹೊಂದುವುದಕ್ಕೆ  ಸಾಧ್ಯವೆಂಬುದು ಜನರ ಸಾಮಾನ್ಯ ನಂಬಿಕೆ. ಆದರೆ ಅದಕ್ಕೆ ಪೂರಕವಾಗಿಯೇ ನಮ್ಮ ಬದುಕು, ಅನುಷ್ಠಾನಗಳು ಇರಬೇಕೆಂಬುದನ್ನು ಮನುಷ್ಯ ಮರೆತಿದ್ದಾನೆ. ತಪ್ಪು ಮಾಡಿದ ಮೇಲೆ ತೀರ್ಥಸ್ನಾನ ಮಾಡಿದರೆ ಪಾಪಕಳೆದುಹೋಗುತ್ತದೆ ಎಂಬ ಮಾತನ್ನೇ ನಂಬಿಕೊಂಡು ಮತ್ತೆ ಮತ್ತೆ ತಪ್ಪು ಮಾಡಿ, ಮತ್ತೆ ಮತ್ತೆ ತೀರ್ಥಸ್ನಾನ ಮಾಡುತ್ತ, ತಾವು ಪಾಪವನ್ನು ಕಳೆದುಕೊಂಡೆವೆಂಬ ಮನೋಭಾವ ಬಹುತೇಕರಲ್ಲಿ ತುಂಬಿಕೊಂಡಿದೆ. ಹೀಗೆ ಪದೇ ಪದೇ ಹೀನಕೃತ್ಯಗಳನ್ನು ಮಾಡುತ್ತ ಪದೇ ಪದೇ ಮೂಗನ್ನು ಹಿಡಿದುಕೊಂಡು ನದಿಯಲ್ಲಿ ಮುಳುಗುತ್ತ, ಏಳುತ್ತ ತೀರ್ಥಸ್ನಾನ ಮಾಡುವುದರಿಂದ ಪ್ರಯೋಜನವಾದರೂ ಏನು? ತಮ್ಮ ಸ್ವಭಾವಗಳಲ್ಲಿ, ಮನೋಭಾವದಲ್ಲಿ, ಗುಣದಲ್ಲಿ ಬದಲಾವಣೆಯೇ ಇಲ್ಲ ಎಂದಾದರೆ ತೀರ್ಥಸ್ನಾನದಿಂದ ಏನು ಫಲ?

            ’ದೇವರ ಭಯವೇ ಜ್ಞಾನದ ಆರಂಭ’, ಎಂಬುದು ಲೋಕೋಕ್ತಿ. ಮನುಷ್ಯನಿಗೆ ದೇವರ ಭಯವಿಲ್ಲದಿದ್ದರೆ ಆತ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಆದರೆ ಸಿರಿವಂತಿಕೆ, ದುರಹಂಕಾರ, ಮೇಲರಿಮೆ ಮೊದಲಾದ ಅವಗುಣಗಳು ದೇವರನ್ನು ಮರೆಸುತ್ತವೆ. ಆದರೆ ಅನ್ಯರ ದೃಷ್ಟಿಯಲ್ಲಿ ತಾವು ಭಕ್ತರೆನಿಸಿಕೊಳ್ಳುವುದಕ್ಕೆ ಹಲವು ವಿಧದ ಪೂಜೆ, ಪುರಸ್ಕಾರಗಳಲ್ಲಿ, ಹಲವು ವಿಧದ ವ್ರತಗಳಲ್ಲಿ ತಲ್ಲೀನರಾಗುವುದು ಸಾಮಾನ್ಯ. ಮೌನವ್ರತಗಳ ಸಂದರ್ಭಗಳಲ್ಲಿ ಅನ್ಯರೊಂದಿಗೆ ಸಂಭಾಷಿಸದೆ ಮನಸ್ಸಿನಲ್ಲಿಯೇ ತಮ್ಮತಮ್ಮ ಇಷ್ಟದೇವರನ್ನು ನಿರಂತರ ಸ್ತುತಿಸುತ್ತ ಒಳಿತನ್ನು ಬೇಡುವುದು ಭಕ್ತನ ಸಹಜಧರ್ಮ. ಆದರೆ ಭಗವಂತನನ್ನೇ ಸ್ತುತಿಸುವುದಿಲ್ಲ ಎಂದಾದರೆ ಅಂತಹ ಮೌನವ್ರತಕ್ಕೇನು ಬೆಲೆ? ಜೀವಮಾನವಿಡೀ ಪುರಂದರವಿಠಲನನ್ನು ನೆನೆಯದೆ ಹಲವು ರೀತಿಯಲ್ಲಿ ಮೌನವ್ರತವನ್ನು ಮಾಡಿದರೆ ಸಿಗುವ ಫಲವಾದರೂ ಏನು? ಎಂಬುದು ಪುರಂದರದಾಸರ ಸವಾಲು.

            ಲೋಕದಲ್ಲಿ ಮನುಷ್ಯ  ಸಭ್ಯನಾಗಿ, ಯೋಗ್ಯನಾಗಿ ಬದುಕದೆ; ಜೀವನಮೌಲ್ಯಗಳನ್ನು ಅನುಸರಿಸದೆ; ತಾನು ಬದುಕಿ ಇತರರನ್ನು ಬದುಕಗೊಡದೆ; ಭಗವಂತನಿಗೆ ಶರಣಾಗದೆ, ಕೇವಲ ಅನ್ಯರನ್ನು ಮೆಚ್ಚಿಸುವುದಕ್ಕೆ ಹಲವು ವಿಧಗಳಲ್ಲಿ ವ್ರತಗಳನ್ನು ಆಚರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದೆಲ್ಲವೂ ವ್ಯರ್ಥವೆಂದೂ ಮೊದಲು ತಾನು ತನ್ನನ್ನು ತಿದ್ದಿಕೊಂಡು, ಅನ್ಯರನ್ನು ಮೆಚ್ಚಿಸುವ ಹೀನಪ್ರವೃತ್ತಿಯನ್ನು ಬಿಟ್ಟುಬಿಟ್ಟು ಸಭ್ಯನೆನಿಸಿಕೊಂಡು ಅನಂತರ ಮಾಡುವ ಪ್ರತಿಯೊಂದು ಪೂಜೆ, ಪುರಸ್ಕಾರ, ಮಂತ್ರ ಪಠನ, ಭಕ್ತಿ, ತೀರ್ಥಯಾತ್ರೆ, ಗೀತೆಯ ಪಠನ, ಜಪತಪಗಳು, ವ್ರತಗಳು, ಸದ್ಗತಿಯ ಅಪೇಕ್ಷೆ ಮೊದಲಾದವುಗಳಿಗೆ ನಿಜವಾದ ಮಹತ್ವ ತನ್ನಿಂದ ತಾನೇ ದೊರೆಯುತ್ತದೆ ಎಂಬುದು ಪುರಂದರದಾಸರ ನಿಲುವು.

ಈ ಕೆಳಗಿನ ಲಿಂಕನ್ನು ಬಳಸಿ ಈ ಕೀರ್ತನೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಆಲಿಸಿರಿ.

***

 

 

One thought on “ಬೇವು ಬೆಲ್ಲದೊಳಿಡಲೇನು ಫಲ? – ಪುರಂದರದಾಸ

Leave a Reply

Your email address will not be published. Required fields are marked *