ಲಂಚವಂಚನಕ್ಕೆ ಕೈಯಾನದ ಭಾಷೆ,
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ!
-ಸತ್ಯಕ್ಕ
ತನ್ನದಲ್ಲದ ವಸ್ತುವಿಗೆ ಆಸೆಪಡುವುದು ಮನುಷ್ಯನ ಒಂದು ಮುಖ್ಯವಾದ ಸ್ವಭಾವ. ತಾನು ದುಡಿಯದೆ, ಅನಾಯಾಸವಾಗಿ ದೊರಕುವ ಹಣ, ಹೊನ್ನು, ಒಡವೆಗಳಿಗೆ ಹಾತೊರೆಯುವುದು, ಅನ್ಯರ ಗಮನಕ್ಕೆ ಬಾರದಂತೆ ಎಗರಿಸುವುದು, ಯಾರಿಗೋ ಸಲ್ಲಬೇಕಾದುದನ್ನು ತನ್ನದಾಗಿಸಿಕೊಳ್ಳುವುದು ಮನುಷ್ಯನಲ್ಲಿರುವ ಒಂದು ನೀಚಸ್ವಭಾವ. ಯಾರದ್ದೋ ದುಡಿಮೆ, ಯಾರಿಗೋ ಪ್ರತಿಫಲ. ಇದು ಇಂದು ಲೋಕದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಹನ್ನೆರಡನೆಯ ಶತಮಾನದ ಶಿವಶರಣೆ ಸತ್ಯಕ್ಕ ಮೇಲಿನ ವಚನದಲ್ಲಿ ಇಂತಹ ಪ್ರವೃತ್ತಿಯನ್ನು ಪರದ್ರವ್ಯದಾಸೆ ಎಂದು ತಿರಸ್ಕರಿಸುತ್ತಾಳೆ.
‘ಲಂಚ’ ಎಂಬುದು ವಂಚನೆಯ ಒಂದು ವಿಧಾನ. ತಾನದಕ್ಕೆ ಕೈಯೊಡ್ಡುವುದಿಲ್ಲ ಎಂದು ಆಕೆ ಭಾಷೆನೀಡುತ್ತಾಳೆ. ದಾರಿಯಲ್ಲಿ (ಸಂಬಂಧಿತರಿಗೆ ಅರಿವಿಲ್ಲದೆ) ಬಿದ್ದಿರುವ ವಸ್ತ್ರ, ಹೊನ್ನು ಮೊದಲಾದವುಗಳನ್ನು ತಾನು ಕೈಯಿಂದ ಮುಟ್ಟಲಾರೆ, ಹಾಗೆ ಮುಟ್ಟಿದರೆ ’ಶಿವನಾಣೆ’ ಮಾತ್ರವಲ್ಲ, ’ ಪ್ರಮಥರಾಣೆ’ ಎಂದು ತನಗೆ ತಾನೇ ಆಣೆಹಾಕಿಕೊಳ್ಳುತ್ತಾಳೆ. ತನ್ನದಲ್ಲದ, ಅನ್ಯರಿಗೆ ಸೇರಿದ ವಸ್ತುಗಳನ್ನು ಆಕೆ ಬಯಸುವುದಿಲ್ಲ. ಏಕೆಂದರೆ, ಮೊದಲನೆಯದಾಗಿ ಅವೆಲ್ಲವೂ ಅನ್ಯರ ಸಂಪಾದನೆಯ ಫಲ. ಎರಡನೆಯದಾಗಿ ಆಕೆ ಶಿವ ನೀಡಿದ ಭಿಕ್ಷದಲ್ಲಿದ್ದು ಬದುಕುವವಳು. ತನ್ನ ಕಾಯಕದಲ್ಲಿ ಮತ್ತು ಅದರಿಂದ ಬರುವ ಸಂಪಾದನೆಯಲ್ಲಿಯೇ ಸುಖ, ಸಂತೋಷಗಳನ್ನು ಕಂಡವಳು. ಹಾಗಿರುವಾಗ ಅದನ್ನೂ ಮೀರಿ ‘ಕ್ಷುದ್ರಮನಸ್ಸಿನಿಂದ ಅನ್ಯರ ದ್ರವ್ಯಗಳನ್ನು ಬಯಸಿದರೆ ತನ್ನನ್ನು ನರಕದಲ್ಲಿ ಅದ್ದಿಹೋಗು’ ಎಂದು ನಿಷ್ಟುರವಾಗಿ ಶಂಭುಜಕ್ಕೇಶ್ವರನಲ್ಲಿ ಬೇಡಿಕೊಳ್ಳುತ್ತಾಳೆ.
ಶಿವಭಕ್ತರ ಮನೆಯ ಕಸಗುಡಿಸುವ ಕಾಯಕವನ್ನು ನಡೆಸುತ್ತಿದ್ದ ಸತ್ಯಕ್ಕ ಆ ಮನೆಗಳಲ್ಲಿ ಅಥವಾ ಹೊರಗೆ ಅಲ್ಲಲ್ಲಿ ಬಿದ್ದಿರಬಹುದಾದ ಹಣ, ಹೊನ್ನು, ಬಟ್ಟೆಗಳನ್ನು ಬಯಸುತ್ತಿರಲಿಲ್ಲ. ತನ್ನ ಕಾಯಕಕ್ಕೆ ಶಿವಭಕ್ತರು ಕೊಡುತ್ತಿದ್ದ ಪ್ರತಿಫಲವನ್ನು ಮಾತ್ರ ಆಕೆ ಸ್ವೀಕರಿಸಿ, ತನ್ನ ಮನೆಯಲ್ಲಿ ಶಿವಭಕ್ತರಿಗಾಗಿ ದಾಸೋಹವನ್ನು ಏರ್ಪಡಿಸುತ್ತಿದ್ದಳು. ತನ್ನ ದುಡಿಮೆ ಕಡಿಮೆ ಇದ್ದರೂ ಆಕೆ, ತನಗೆ ಅನಾಯಾಸವಾಗಿ ದೊರಕಿದ ವಸ್ತುಗಳನ್ನು ಸ್ವೀಕರಿಸಲಿಲ್ಲ. ‘ಅದು ತನ್ನದಲ್ಲ’ ಎಂಬ ದೃಢಮನಸ್ಸು ಆಕೆಯದು. ‘ಒಂದು ವೇಳೆ ತಾನು ಲಂಚವಂಚನಕ್ಕೆ, ಪರರ ಹೊನ್ನು-ವಸ್ತ್ರಗಳಿಗೆ ಕೈ ಇಕ್ಕಿದರೆ ತನಗೆ ನರಕದಲ್ಲಿ ಅದ್ದಿ ಶಿಕ್ಷಿಸು’ ಎಂದು ಬೇಡಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಅಷ್ಟರಮಟ್ಟಿಗೆ ಆಕೆಗೆ ತನ್ನ ಮನಸ್ಸು, ಕಾಯಕಗಳ ಮೇಲೆ ದೃಢವಿಶ್ವಾಸ.
ಸತ್ಯಕ್ಕನ ಮಾತುಗಳು ಇಂದಿನ ಆಧುನಿಕಯುಗದಲ್ಲಿನ ಲಂಚಾವತಾರಿಗಳನ್ನು, ಭ್ರಷ್ಟಾಚಾರಿಗಳನ್ನು, ದರೋಡೆಕೋರರನ್ನು, ಕಳ್ಳಕಾಕರನ್ನು ವಿಡಂಬಿಸುವಂತಿವೆ. ಇಂದು ತಳಮಟ್ಟದಿಂದ ಹಿಡಿದು ತುದಿಮಟ್ಟದವರೆಗೂ ಲಂಚವೆಂಬ ವಂಚನಾವತಾರವೇ ಬೃಹದಾಕಾರವಾಗಿ ಬೆಳೆದಿದೆ. ಸದಾ ಅನ್ಯರ ಸಂಪಾದನೆಯನ್ನು ಲಪಟಾಯಿಸುವ, ಪ್ರತಿಯೊಂದಕ್ಕೂ ಲಂಚಕ್ಕೆ ಕೈಯೊಡ್ಡುವ, ಅನ್ಯರ ಸೊತ್ತನ್ನು ತನ್ನದಾಗಿಸಿಕೊಳ್ಳುವ, ಅನ್ಯರ ಸ್ಥಿರ-ಚರ ಆಸ್ತಿಗಳನ್ನು ಏನೇನೋ ಕುತಂತ್ರಗಳ ಮೂಲಕ ಎಗರಿಸುವ, ಸರಕಾರದ ಬೊಕ್ಕಸವನ್ನೇ ದೋಚುವ, ಭ್ರಷ್ಟಾಚಾರವನ್ನೇ ಸದಾ ಮೂಲಮಂತ್ರವನ್ನಾಗಿ ಜಪಿಸುತ್ತಿರುವ ಪರದ್ರವ್ಯ ಪಿಪಾಸುಗಳೇ ಇಂದು ದೇಶದಾದ್ಯಂತ ರಾರಾಜಿಸುತ್ತಿದ್ದಾರೆ. ಅಂದು ಹನ್ನೆರಡನೆಯ ಶತಮಾನದಲ್ಲಿ ಜನರಿಗೆ ಭಗವಂತನ ಭಯಭಕ್ತಿಗಳಿದ್ದರೂ ಇಂದು ಇಪ್ಪತ್ತೊಂದನೆಯ ಶತಮಾನದಲ್ಲಿ ಭಗವಂತನನ್ನೇ ಭಯಭೀತಗೊಳಿಸುವ ಹಂತಕ್ಕೆ ಲಂಚಾವತಾರಿಗಳು, ಭ್ರಷ್ಟಾಚಾರಿಗಳು ಬೆಳೆದಿದ್ದಾರೆ. ಯಾವ ಕಾನೂನಿನ ಅಸ್ತ್ರವೂ ಇವರನ್ನು ನರಕದಲ್ಲಿ ಅದ್ದುವಷ್ಟು ಶಕ್ತಿದಾಯಕವಾಗಿಲ್ಲದೆ ಇರುವುದು ಅತ್ಯಂತ ಶೋಚನೀಯ.
***