ಸಾಹಿತ್ಯಾನುಸಂಧಾನ

ಉಪರಂಭೆಯ ಆಖ್ಯಾನ – ನಾಗಚಂದ್ರ – ಭಾಗ -೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಎರಡನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ (ಭಾಗ – ೧)

ಕವಿ-ಕಾವ್ಯ ಪರಿಚಯ:

            ಪಂಪನ ಅನಂತರದ ಹಳೆಗನ್ನಡದ ಪ್ರಸಿದ್ಧ ಕವಿಗಳಲ್ಲಿ ನಾಗಚಂದ್ರನೂ ಒಬ್ಬ. ಈತನ ಕಾಲ ಸುಮಾರು ೧೧೦೦ ಎಂದು ಅಂದಾಜಿಸಲಾಗಿದೆ. ಹನ್ನೊಂದನೆಯ ಶತಮಾನದ ಕೊನೆಯ ಭಾಗ ಹಾಗೂ ಹನ್ನೆರಡನೆಯ ಶತಮಾನದ ಆದಿಭಾಗದಲ್ಲಿ ಬದುಕಿದ್ದು ಸಾಹಿತ್ಯ ರಚನೆ ಮಾಡಿದ್ದನೆಂದೂ ಈತನ ಊರು ಬಿಜಾಪುರವೆಂದೂ  ತಿಳಿಯಲಾಗಿದೆ.  ಪಂಪನಿಂದ ಗಾಢವಾದ ಪ್ರಭಾವಕ್ಕೆ ಒಳಗಾಗಿರುವ ಈತ ತನ್ನನ್ನು “ಅಭಿನವ ಪಂಪ” ಎಂದು ಕರೆಸಿಕೊಂಡಿದ್ದಾನೆ. ಈತ  “ಮಲ್ಲಿನಾಥ ಪುರಾಣ” ಹಾಗೂ “ರಾಮಚಂದ್ರಚರಿತ ಪುರಾಣ”ಗಳೆಂಬ ಎರಡು ಕಾವ್ಯಗಳನ್ನು ರಚಿಸಿರುವಂತೆ ತಿಳಿದುಬರುತ್ತದೆ. ಮೊದಲನೆಯದು ಜೈನ ತೀರ್ಥಂಕರನಾದ ಮಲ್ಲಿನಾಥನ ಕಥೆಯನ್ನು ಒಳಗೊಂಡಿದ್ದರೆ ಎರಡನೆಯದು ರಾಮಾಯಣದ ಕಥೆಯನ್ನು ಒಳಗೊಂಡಿದೆ. ರಾಮಚಂದ್ರಚರಿತ ಪುರಾಣವು ಜೈನಸಂಪ್ರದಾಯದಲ್ಲಿ ರಚನೆಯಾಗಿರುವ ಮೊದಲ ಕಾವ್ಯವಾಗಿರುವುದರಿಂದ ಇದನ್ನು ಮೊದಲ ಜೈನರಾಮಾಯಣ ಎಂದು ಕರೆಯಲಾಗಿದೆ.

            ರಾಮಚಂದ್ರಚರಿತ ಪುರಾಣವು ಪ್ರಾಕೃತದ ವಿಮಲಸೂರಿ(ಕ್ರಿ. ಶ. ಸು. ೧ನೇ ಶತಮಾನ)ಯ “ಪಉಮಚರಿಯ” ಹಾಗೂ ಸಂಸ್ಕೃತದ  ರವಿಷೇಣ(ಕ್ರಿ. ಶ. ಸು. ೨ನೇ ಶತಮಾನ)ನ “ಪದ್ಮಪುರಾಣ”ವನ್ನು ಆಧಾರವಾಗಿಟ್ಟುಕೊಂಡು ರಚನೆಯಾಗಿರುವ ಕಾವ್ಯವಾದರೂ ನಾಗಚಂದ್ರ ಈ ಕಾವ್ಯದ ರಚನೆಗೆ ಬಹುತೇಕ ವಿಮಲಸೂರಿಯ ಕಾವ್ಯವನ್ನೇ ಆಧರಿಸಿ ರಚಿಸಿರುವುದು ಕಂಡುಬರುತ್ತದೆ. ರಾಮಾಯಣದ ಕಥೆಯನ್ನು ಇಲ್ಲಿ ಜೈನಧರ್ಮದ ತತ್ತ್ವಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಈ ಕಾವ್ಯದಲ್ಲಿ ರಾಮನನ್ನು ಬಲದೇವನೆಂದೂ ಆತನ ತಮ್ಮನಾದ ಲಕ್ಷ್ಮಣನನ್ನು ವಾಸುದೇವನೆಂದೂ ರಾವಣನನ್ನು ಪ್ರತಿವಾಸುದೇವನೆಂದೂ ಚಿತ್ರಿಸಲಾಗಿದೆ. ರಾವಣನನ್ನು ಇಲ್ಲಿ ಒಬ್ಬ ಧರ್ಮಿಷ್ಠನನ್ನಾಗಿಯೂ ಪರಾಕ್ರಮಶಾಲಿಯನ್ನಾಗಿಯೂ ಉದಾತ್ತಚರಿತನನ್ನಾಗಿಯೂ ಚಿತ್ರಿಸಲಾಗಿದೆ.

ಕಾವ್ಯಭಾಗದ ಹಿನ್ನೆಲೆ:

            ಲಂಕಾಧಿಪತಿಯಾದ ರಾವಣ ಮಹಾಪರಾಕ್ರಮಶಾಲಿ ಎನಿಸಿ ಪ್ರಸಿದ್ಧನಾದವನು.            ಪರಾಂಗನಾ ವಿರತಿ ವ್ರತವನ್ನು ಕೈಗೊಂಡು ಪರಸ್ತ್ರೀಯರನ್ನು ಸಹೋದರಿಯರಂತೆ ಕಾಣುವವನು. ಅವನು ತನ್ನ ಸ್ವಭಾವ, ಗುಣ, ಹಾಗೂ ಕಾರ್ಯವೈಖರಿಗಳಿಂದ  ಮಹಾನುಭಾವನೆಂದೂ  ಉದಾತ್ತಚರಿತನೆಂದೂ  ಪ್ರಸಿದ್ಧನಾಗಿದ್ದಾನೆ. ಸಕಲ ಭೂಮಂಡಲವನ್ನು ಗೆಲ್ಲುವ ಉದ್ದೇಶದಿಂದ ದಿಗ್ವಿಜಯಕ್ಕೆ ಹೊರಟವನು ನಳಕೂಬರನ ಪರಾಕ್ರಮ, ಶಕ್ತಿ ಸಾಮರ್ಥ್ಯಗಳನ್ನು ಕೇಳಿ ಆತನನ್ನು ಸೋಲಿಸಿ ಆತನ ದುರ್ಲಂಘ್ಯಪುರವನ್ನು ವಶಪಡಿಸಿಕೊಳ್ಳಬೇಕೆಂಬ ಅಭಿಲಾಷೆಯಿಂದ  ಕೈಲಾಸ ಪರ್ವತದ ತಪ್ಪಲಿಗೆ ಬಂದು ಬೀಡುಬಿಡುತ್ತಾನೆ.  ಮುಂದೆ ಉಪಾಯದಿಂದ ನಳಕೂಬರನನ್ನು ಸೋಲಿಸುವ, ದುರ್ಲಂಘ್ಯಪುರವನ್ನು ವಶಪಡಿಸಿಕೊಳ್ಳುವ  ಕಥೆ ಈ ಕಾವ್ಯಭಾಗದಲ್ಲಿ ವರ್ಣಿತವಾಗಿದೆ.

ಕಾವ್ಯಭಾಗ:

ಗದ್ಯ: ದಶವದನಂ ಮಹಾಬಲ ಸಹಿತನಾಗಿ ಪದಿನೆಂಟು ವರ್ಷಕ್ಕೆ ವಿನೀತಾಖಂಡಮಂ ಬಾಯ್ಕೇಳಿಸಿ ಕೈಲಾಸನಗರದ ನಿತಂಬದೊಳ್ ಬೀಡುವಿಟ್ಟಿರ್ಪುದುಮಿತ್ತಲ್-

ಗದ್ಯದ ಅನ್ವಯಕ್ರಮ:

ದಶವದನಂ ಮಹಾಬಲ ಸಹಿತನಾಗಿ ಪದಿನೆಂಟು ವರ್ಷಕ್ಕೆ ವಿನೀತ ಅಖಂಡಮಂ ಬಾಯ್ಕೇಳಿಸಿ ಕೈಲಾಸ ನಗರದ ನಿತಂಬದೊಳ್ ಬೀಡುವಿಟ್ಟು ಇರ್ಪುದುಂ ಇತ್ತಲ್-

ಪದ-ಅರ್ಥ:

ದಶವದನಂ-ರಾವಣನು;  ಮಹಾಬಲ ಸಹಿತನಾಗಿ –ವಿಭೀಷಣನನ್ನು ಕೂಡಿಕೊಂಡು;  ಪದಿನೆಂಟು ವರ್ಷಕ್ಕೆ-ಹದಿನೆಂಟು ವರ್ಷಕ್ಕೆ;  ವಿನೀತಾಖಂಡಮಂ-ಸಮಸ್ತ ಭೂಮಂಡಲವನ್ನು;  ಬಾಯ್ಕೇಳಿಸಿ-ಗೆದ್ದುಕೊಂಡು, ವಶಪಡಿಸಿಕೊಂಡು;  ಕೈಲಾಸನಗರದ-ಕೈಲಾಸ ಪರ್ವತದ;  ನಿತಂಬದೊಳ್-ತಪ್ಪಲಲ್ಲಿ, ಸನಿಹದಲ್ಲಿ;  ಬಿಡುವಿಟ್ಟಿರ್ಪುದುಂ-ಬೀಡುಬಿಟ್ಟಿದ್ದಾಗ, ಬಿಡಾರವನ್ನು ಹೂಡಿದಾಗ;  ಇತ್ತಲ್-ಈಕಡೆ.

            ರಾವಣನು ತನ್ನ ತಮ್ಮನಾದ ಮಹಾಬಲ (ವಿಭೀಷಣ)ನನ್ನು ಕೂಡಿಕೊಂಡು ಹದಿನೆಂಟು ವರ್ಷಕ್ಕೆ ಸಮಸ್ತ ಭೂಮಂಡಲವನ್ನು ಯುದ್ಧದ ಮೂಲಕ  ವಶಪಡಿಸಿಕೊಂಡು ಉಳಿದಿರುವ ವೈರಿಗಳನ್ನು ಗೆಲ್ಲಲು ತೀರ್ಮಾನಿಸಿ ಕೈಲಾಸ ಪರ್ವತದ ತಪ್ಪಲಲ್ಲಿ  ಬೀಡುಬಿಟ್ಟಿದ್ದಾಗ ಈ ಕಡೆ-

 

ಪರಿರಕ್ಷಿಸಿ ದೇವೇಂದ್ರನ

ಶರಧಿ ಶರಾಸನ ತನುತ್ರತತಿಯಂ ನಳಕೂ

ಬರ ದಿಕ್ಪತಿ ದುರ್ಧರ ಭುಜ

ಪರಿಘಂ ದುರ್ಲಂಘ್ಯಪುರದೊಳತಿಬಲನಿರ್ದಂ  ೧

ಪದ್ಯದ ಅನ್ವಯಕ್ರಮ:

ದೇವೇಂದ್ರನ ಶರಧಿ, ಶರಾಸನ, ತನುತ್ರತತಿಯಂ ಪರಿರಕ್ಷಿಸಿ  ದುರ್ಲಂಘ್ಯಪುರದೊಳ್ ನಳಕೂಬರ ದಿಕ್ಪತಿ ದುರ್ಧರ ಭುಜಪರಿಘಂ ಅತಿಬಲನ್ ಇರ್ದನ್.

ಪದ-ಅರ್ಥ:

ಪರಿರಕ್ಷಿಸಿ-ಕಾಪಾಡಿಕೊಂಡು;  ದೇವೇಂದ್ರ-ದೇವಲೋಕದ ಒಡೆಯ, ಅಷ್ಟದಿಕ್ಪಾಲಕರಲ್ಲಿ ಒಬ್ಬ;  ಶರಧಿ-ಬತ್ತಳಿಕೆ;  ಶರಾಸನ– ಬಿಲ್ಲು;  ತನುತ್ರತತಿ-ಕವಚಗಳ ಸಮೂಹ;  ನಳಕೂಬರ-ದುರ್ಲಂಘ್ಯಪುರದ ರಾಜ;  ದಿಕ್ಪತಿ-ದಿಕ್ಪಾಲ;  ದುರ್ಧರ-ಜಯಿಸಲು ಅಸಾಧ್ಯವಾದ;  ಭುಜಪರಿಘಂ-ಭುಜವನ್ನೇ ಆಯುಧವನ್ನಾಗಿ ಹೊಂದಿರುವ;  ದುರ್ಲಂಘ್ಯಪುರ-ಲಂಘಿಸಲು ಅಸಾಧ್ಯವಾದ, ವಶಪಡಿಸಿಕೊಳ್ಳಲು ಅಸಾಧ್ಯವಾದ;  ಅತಿಬಲನ್-ಅತ್ಯಂತ ಬಲಶಾಲಿ.

            ದೇವೇಂದ್ರನ ಬತ್ತಳಿಕೆ, ಬಿಲ್ಲು, ಕವಚಗಳ ಸಮೂಹವನ್ನೇ ಕಾಪಾಡಿಕೊಳ್ಳುತ್ತ ಜಯಿಸಲು ಅಸಾಧ್ಯವಾದ ಭುಜವನ್ನೇ ಆಯುಧವನ್ನಾಗಿ ಹೊಂದಿರುವ, ಅತ್ಯಂತ ಬಲಶಾಲಿಯಾದ ನಳಕೂಬರ ರಾಜನು ದುರ್ಲಂಘ್ಯಪುರವನ್ನು ಆಳಿಕೊಂಡಿದ್ದನು. 

            ನಳಕೂಬರನೆಂಬ ರಾಜನು ಅಷ್ಟದಿಕ್ಪಾಲಕರಲ್ಲಿ ಒಬ್ಬ್ನಾಗಿದ್ದಾನೆ. ಅವನು ತನ್ನ ಒಡೆಯನಾದ ದೇವೇಂದ್ರನಿಗೆ ಎಲ್ಲಾ ವಿಧಗಳಲ್ಲಿಯೂ ಸಹಾಯಕನಾಗಿ ನಿಂತುಕೊಂಡು ದೇವೇಂದ್ರನನ್ನು ಕಾಪಾಡುತ್ತಿದ್ದನು. ಯುದ್ಧಸಂಬಂಧವಾದ ಎಲ್ಲಾ ಮಹತ್ಕಾರ್ಯಗಳಲ್ಲಿಯೂ ದೇವೇಂದ್ರನಿಗೆ ಸಹಾಯಕನಾಗಿ, ಬೆಂಗಾವಲಾಗಿ ನಿಂತುಕೊಂಡು ರಕ್ಷಿಸುತ್ತಿದ್ದನು. ಮಾತ್ರವಲ್ಲ, ಹೆಸರೇ ಹೇಳುವಂತೆ ದುರ್ಲಂಘ್ಯಪುರವೆಂಬ ಯಾರಿಂದಲೂ ಭೇದಿಸುವುದಕ್ಕೆ ಅಸಾಧ್ಯವಾದ, ಅಥವಾ ವಶಪಡಿಸಿಕೊಳ್ಳಲು ಅಸಾಧ್ಯವಾದ ಪುರವೊಂದನ್ನು ನಿರ್ಮಿಸಿಕೊಂಡು ಅತ್ಯಂತ ಬಲಶಾಲಿಯಾಗಿ ಮೆರೆಯುತ್ತಿದ್ದನು.

ಗದ್ಯ: ಆತಂ ರಾವಣಂ ಮೇಲೆತ್ತಿ ಬರ್ಪುದಂ ನಮ್ಮರಸಂಗಱಿಪೆಂದಟ್ಟಿದ ದೂತವಚನದಿನಿಂದ್ರನಱಿದು ಏವಂ ರಾವಣನ್ ಎತ್ತಿ ಬಂದು ಬಲಿದಿರ್ಕೆ ಎಂದು ದೋರ್ವಲ ಗರ್ವದಿಂ ಬಗೆದನಿಲ್ಲಿತ್ತ ನಳಕೂಬರಂ ಯೋಜನಾಂತರದೊಳಿರ್ದರಂ ನುಂಗುವಂತಪ್ಪ ಬೇತಾಳ ಯಂತ್ರಂಗಳಿಂ ದೂರದೇಶದೊಳಿರ್ದೆೞ್ಬಟ್ಟಿ ತಿಂಬಂತೆ ಪೂತ್ಕಾರ ಮುಖರಂಗಳಪ್ಪ ಮಹೋರಗಂಗಳಿನತಿದೂರದೊಳಟ್ಟಿ ಸುಡುವ ಕೇಸುರಿಯ ಪ್ರಾಕಾರಂಗಳಿಂ ಮತ್ತಮೆನಿತಾನುಂ ತೆಱದುಪದ್ರವ ಹೇತುಗಳಪ್ಪ ರೌದ್ರಮೃಗಂಗಳಿಂ ತುಱುಗಿ ವಜ್ರಸಾಲಮೆಂಬ ಕೋಂಟೆಯಂ ವಿಗುರ್ವಿಸಿ ಪೊೞಲ್ಗೆ ದುರ್ಲಂಘ್ಯಪುರಮೆಂಬ ಪೆಸರನ್ವರ್ಥಂ ಮಾಡಿ ಪೊಡರ್ಪುಗಿಡದಿರ್ಪುದುಂ-

ಗದ್ಯದ ಅನ್ವಯಕ್ರಮ:

ಆತಂ ರಾವಣಂ ಮೇಲೆತ್ತಿ ಬರ್ಪುದಂ ನಮ್ಮ ಅರಸಂಗೆ ಅಱಿಪು ಎಂದು ಅಟ್ಟಿದ ದೂತವಚನದಿನ್ ಇಂದ್ರನ್ ಅಱಿದು, ಏವಂ ರಾವಣನ್ ಎತ್ತಿ ಬಂದು ಬಲಿದು ಇರ್ಕೆ ಎಂದು ದೋರ್ವಲ ಗರ್ವದಿಂ ಬಗೆದನ್. ಇಲ್ಲಿ ಇತ್ತ ನಳಕೂಬರಂ ಯೋಜನ ಅಂತರದೊಳ್ ಇರ್ದರಂ ನುಂಗುವಂತಪ್ಪ ಬೇತಾಳ ಯಂತ್ರಂಗಳಿಂ ದೂರದೇಶದೊಳ್ ಇರ್ದು ಎೞ್ಬಟ್ಟಿ ತಿಂಬಂತೆ ಪೂತ್ಕಾರ ಮುಖರಂಗಳಪ್ಪ ಮಹಾ ಉರಗಂಗಳಿನ್, ಅತಿದೂರದೊಳ್ ಅಟ್ಟಿ ಸುಡುವ ಕೇಸುರಿಯ ಪ್ರಾಕಾರಂಗಳಿಂ ಮತ್ತಂ ಎನಿತಾನುಂ ತೆಱದ ಉಪದ್ರವ ಹೇತುಗಳಪ್ಪ ರೌದ್ರ ಮಗಂಗಳಿಂ ತುಱುಗಿ ವಜ್ರಸಾಲಂ ಎಂಬ ಕೋಂಟೆಯಂ ವಿಗುರ್ವಿಸಿ, ಪೊೞಲ್ಗೆ ದುರ್ಲಂಘ್ಯಪುರಂ ಎಂಬ ಪೆಸರನ್ ಅನ್ವರ್ಥಂ ಮಾಡಿ ಪೊಡರ್ಪು ಕಿಡದೆ ಇರ್ಪುದುಂ –

ಪದ-ಅರ್ಥ:

ಆತಂ-ಅವನು (ನಳಕೂಬರನು);  ರಾವಣ-ಲಂಕಾಧಿಪತಿ;  ಮೇಲೆತ್ತಿ ಬರ್ಪುದುಂ-ದಂಡೆತ್ತಿ ಬರುತ್ತಿರುವುದನ್ನು;  ನಮ್ಮರಸಂಗೆ-ನಮ್ಮ ಒಡೆಯನಾದ ದೇವೇಂದ್ರನಿಗೆ;  ಅಱಿಪೆಂದು –ತಿಳಿಸು ಎಂದು;  ಅಟ್ಟಿದ-ಕಳುಹಿಸಿದ;  ದೂತವಚನದಿನ್-ದೂತನ ಮಾತುಗಳಿಂದ;  ಇಂದ್ರನಱಿದು-ದೇವೇಂದ್ರನು ತಿಳಿದುಕೊಂಡು;  ಏವಂ ರಾವಣಂ– ಯಾವನು ಅವನು ರಾವಣ?;   ಎತ್ತಿ ಬಂದು-ದಂಡೆತ್ತಿ ಬಂದು;   ಬಲಿದಿರ್ಕೆ(ಬಲಿದು ಇರ್ಕೆ)– (ಕೋಟೆಗೆ)ಸುತ್ತುವರಿದಿರಲಿ;  ದೋರ್ವಲ ಗರ್ವದಿಂ-ಬಾಹುಬಲದ ಗರ್ವದಿಂದ;  ಬಗೆದನ್-ಭಾವಿಸಿಕೊಂಡನು;  ಇಲ್ಲಿತ್ತ-ಇಲ್ಲಿ ಈ ಕಡೆ;  ನಳಕೂಬರಂ-ನಳಕೂಬರ ರಾಜನು;  ಯೋಜನಾಂತರದೊಳಿರ್ದರಂ-ಯೋಜನಗಳಷ್ಟು ದೂರದಲ್ಲಿದ್ದವರನ್ನೂ;  ನುಂಗುವಂತಪ್ಪ-ನುಂಗುವಂತಹ;  ಬೇತಾಳಯಂತ್ರಂಗಳಿಂ-ಬೇತಾಳವೆಂಬ ಯಂತ್ರಗಳಿಂದ;  ದೂರದೇಶದೊಳಿರ್ದೆೞ್ಭಟ್ಟಿ -ದೂರದೇಶದಲ್ಲಿದ್ದರೂ ಅಟ್ಟಿಸಿಕೊಂಡು ಹೋಗಿ;   ತಿಂಬಂತೆ-ತಿನ್ನುವಂತೆ, ನುಂಗುವಂತೆ;  ಪೂತ್ಕಾರ ಮುಖರಂಗಳಪ್ಪ-ಪೂತ್ಕಾರ ಮಾಡುತ್ತಿರುವ;  ಮಹೋರಗಂಗಳಿನ್-ಭೀಕರವಾದ ದೊಡ್ಡ ಸರ್ಪಗಳಿಂದ;  ಅತಿದೂರದೊಳಟ್ಟಿ-ಅತ್ಯಂತ ದೂರದವರೆಗೂ ಅಟ್ಟಿಸಿಕೊಂಡು;  ಸುಡುವ-ಸುಟ್ಟುಹಾಕುವ;  ಕೇಸುರಿಯ ಪ್ರಾಕಾರಂಗಳಿಂ-ಕೆಂಪಾದ ಉರಿಯನ್ನು ಉಗುಳುತ್ತಿರುವ ಕೋಟೆಯ ಸುತ್ತುಪೌಳಿಗಳಿಂದ;  ಮತ್ತಂ-ಮತ್ತೂ, ಇನ್ನೂ;  ಎನಿತಾನುಂ ತೆಱದ-ಎಷ್ಟೋ ವಿಧಗಳ;  ಉಪದ್ರವ ಹೇತುಗಳಪ್ಪ-ತೊಂದರೆ ಕಾರಣವಾಗುವ, ತೊಂದರೆಯನ್ನು ಕೊಡುವ;  ರೌದ್ರಮೃಗಂಗಳಿಂ-ಭಯಂಕರವಾದ ಮೃಗಗಳಿಂದ;  ತುಱುಗಿ-ತುಂಬಿಸಿಕೊಂಡು;   ವಜ್ರಸಾಲಂ-ವಜ್ರದಂತಿರುವ ಕೋಟೆಯನ್ನು, ಅಭೇದ್ಯವಾದ ಕೋಟೆಯನ್ನು;  ವಿಗುರ್ವಿಸಿ-ರಚಿಸಿ, ಸಿದ್ಧಪಡಿಸಿ;  ಪೊೞಲ್ಗೆ-ಪಟ್ಟಣಕ್ಕೆ;  ದುರ್ಲಂಘ್ಯಪುರಂ-ಲಂಘಿಸುವುದಕ್ಕೆ ಅಸಾಧ್ಯವಾದ ಪಟ್ಟಣ;  ಪೆಸರನ್ವರ್ಥಂ ಮಾಡಿ-ಹೆಸರನ್ನು ಅನ್ವರ್ಥವನ್ನಾಗಿ ಮಾಡಿ;  ಪೊಡರ್ಪುಕಿಡದಿರ್ಪುದುಂ-ಶಕ್ತಿ ಕುಂದದಿರುವಂತೆ ಮಾಡಿ.

            ರಾವಣನು ದಂಡೆತ್ತಿ ಬರುತ್ತಿರುವುದನ್ನು ನಮ್ಮ ಅರಸನಾದ ಇಂದ್ರನಿಗೆ ತಿಳಿಸು ಎಂದು ನಳಕೂಬರನು ಕಳುಹಿಸಿದ ದೂತನ ಮಾತುಗಳಿಂದ ಇಂದ್ರನು ಎಲ್ಲವನ್ನೂ ತಿಳಿದುಕೊಂಡು “ಯಾವನು ಅವನು ರಾವಣನೆಂಬವನು? ಸುಮ್ಮನೆ ದಂಡೆತ್ತಿ ಬಂದು ಕೋಟೆಯನ್ನು ಸುತ್ತುವರಿದಿರಲಿ” ಎಂದು ತನ್ನ ಬಾಹುಬಲದ ಗರ್ವದಿಂದ ಭಾವಿಸಿಕೊಂಡನು. ಇಲ್ಲಿ ಈ ಕಡೆ ನಳಕೂಬರನು ವೈರಿಗಳು ಯೋಜನಗಳಷ್ಟು ದೂರದಲ್ಲಿದ್ದವರನ್ನೂ ನುಂಗುವಂತಿರುವ ಬೇತಾಳ ಯಂತ್ರಗಳಿಂದಲೂ ದೂರದೇಶದಲ್ಲಿದ್ದರೂ ಅಟ್ಟಿಸಿಕೊಂಡು ಹೋಗಿ ನುಂಗುವಂತೆ ಪೂತ್ಕಾರವನ್ನು ಮಾಡುವಂತಿರುವ ಭೀಕರವಾದ ದೊಡ್ಡ ಸರ್ಪಗಳಿಂದಲೂ ಅತ್ಯಂತ ದೂರದಲ್ಲಿದ್ದರೂ ಅಟ್ಟಿಸಿಕೊಂಡು ಹೋಗಿ ಸುಟ್ಟುಹಾಕುವ ಕೆಂಪಾದ ಉರಿಯನ್ನು ಕಾರುತ್ತಿರುವ ಕೋಟೆಯ ಪ್ರಾಕಾರಗೋಡೆಗಳಿಂದಲೂ ಮತ್ತೂ ಎನ್ನೆಷ್ಟೋ ವಿಧಗಳಿಂದ ತೊಂದರೆಗಳಿಗೆ ಕಾರಣವಾಗುವ ರೌದ್ರಮೃಗಗಳಿಂದಲೂ ವಜ್ರಸಾಲವೆಂಬ ಕೋಟೆಯನ್ನು ರಚಿಸಿಕೊಂಡು ಅದರೊಳಗಿನ ಪಟ್ಟಣಕ್ಕೆ ದುರ್ಲಂಘ್ಯಪುರ ಎಂಬ ಹೆಸರನ್ನು ಅನ್ವರ್ಥವನ್ನಾಗಿ ಮಾಡಿ ಕೋಟೆಯ ಶಕ್ತಿಗುಂದದಿರುವಂತೆ ನೋಡಿಕೊಂಡನು.  

            ರಾವಣ ತನ್ನ ದುರ್ಲಂಘ್ಯಪುರವನ್ನು ವಶಪಡಿಸಿಕೊಳ್ಳುವುದಕ್ಕೆ ದಂಡೆತ್ತಿ ಬರುತ್ತಿರುವುದನ್ನು ನಳಕೂಬರ ಮೊದಲೇ ಗೂಢಚಾರರ ಮೂಲಕ ತಿಳಿದುಕೊಂಡು ಆ ವಿಷಯವನ್ನು ತನ್ನ ಒಡೆಯನಾದ ದೇವೇಂದ್ರನಿಗೆ ತನ್ನ ದೂತನ ಮೂಲಕ ತಿಳಿಸಿದನು. ದೂತನಿಂದ ವಿಷಯವನ್ನು ಅರಿತ ದೇವೇಂದ್ರನು “ಯಾವನು ಅವನು ರಾವಣ ಎಂಬವನು? ಅಂತಹವನಿಂದ ದುರ್ಲಂಘ್ಯಪುರದ ಕೋಟೆಯನ್ನು ವಶಪಡಿಸಿಕೊಳ್ಳವುದಕ್ಕೆ ಸಾಧ್ಯವೇ? ಮಾತ್ರವಲ್ಲ, ನಳಕೂಬರನ ಶಕ್ತಿ ಸಾಮರ್ಥ್ಯಗಳನ್ನು ತಿಳಿಯದೆ ಮುತ್ತಿಗೆಹಾಕಲು ಬಂದಿದ್ದಾನೆ. ಸುಮ್ಮನೆ ಹಾಗೆಯೇ ಮುತ್ತಿಗೆ ಹಾಕಿಕೊಂಡಿರಲಿ, ಅವನಿಂದ ಆಗುವಂತಹುದು ಏನೂ ಇಲ್ಲ” ಎಂದು ತನ್ನಷ್ಟಕ್ಕೇ ಭಾವಿಸಿಕೊಂಡನು.  ಈ ಕಡೆ ನಳಕೂಬರನು ವೈರಿಯಿಂದ ತನ್ನ ಕೋಟೆಯನ್ನು, ಪಟ್ಟಣವನ್ನು ರಕ್ಷಿಸಿಕೊಳ್ಳುವುದಕ್ಕೆ ವಿವಿಧ ರೀತಿಯ ಐಂದ್ರಜಾಲ ತಂತ್ರಗಳಿಂದ ಸಜ್ಜುಗೊಳಿಸಿದನು. ವೈರಿಗಳು ಕೋಟೆಯಿಂದ ಯೋಜನಗಳಷ್ಟು ದೂರದಲ್ಲಿದ್ದರೂ ಅವರನ್ನು ನುಂಗಿನೊಣೆಯುವಂತಹ ಬೇತಾಳ ಯಂತ್ರಗಳನ್ನು ಕೋಟೆಯ ಮೇಲೆ ಸ್ಥಾಪಿಸಿದನು. ವೈರಿಗಳನ್ನು ದೂರದೇಶಗಳವರೆಗೂ ಅಟ್ಟಿಸಿಕೊಂಡು ಹೋಗಿ ನುಂಗುವಂತಹ ಶಕ್ತಿ, ಸಾಮರ್ಥ್ಯವುಳ್ಳ ಭೀಕರವಾಗಿ ಪೂತ್ಕರಿಸುತ್ತ ವಿಷಜ್ವಾಲೆಗಳನ್ನು ಚಾಚುತ್ತ ವೈರಿಗಳನ್ನು ಕಂಗಾಲಾಗುವಂತೆ ಹೆದರಿಸುತ್ತಲೇ ಇರುವ ಭೀಕರವಾದ ದೊಡ್ಡದೊಡ್ಡ ಸರ್ಪಗಳನ್ನು ನೆಲೆಗೊಳಿಸಿದನು. ವೈರಿಗಳು ಎಷ್ಟೇ ದೂರದಲ್ಲಿದ್ದರೂ ಕೆಂಪಾದ ಉರಿಯನ್ನು ಉಗುಳುತ್ತ ಅವರನ್ನು ಹುಡುಕಿಕೊಂಡು ಬಹುದೂರದವರೆಗೂ ಹೋಗಿ ಸುಟ್ಟುಹಾಕುವ ಶಕ್ತಿಯುಳ್ಳ ಕೋಟೆಯ ಪ್ರಾಕಾರದ ಗೋಡೆಗಳನ್ನು ಅಣಿಗೊಳಿಸಿದನು. ಅಲ್ಲದೆ, ವಿವಿಧ ರೀತಿಗಳಿಂದ ಪದೇ ಪದೇ ತೊಂದರೆಗಳಿಗೆ ಕಾರಣವಾಗುವ ಭಯಂಕರವಾದ ಮೃಗಗಳನ್ನು ಕೋಟೆಯ ಸುತ್ತ ಸ್ಥಾಪಿಸಿದನು. ಇವೆಲ್ಲವುಗಳಿಂದ ವಜ್ರಸಾಲ ಎಂಬ ಕೋಟೆಯನ್ನು ರಚಿಸಿಕೊಂಡು, ಅದರೊಳಗಿರುವ ಪಟ್ಟಣವನ್ನು ಹೆಸರಿಗೆ ಅನ್ವರ್ಥವಾಗುವಂತೆ ದುರ್ಲಂಘ್ಯಪುರ ಎಂದು ಹೆಸರಿಸಿ  ವೈರಿಗಳಿಂದ ಲಂಘಿಸುವುದಕ್ಕೆ, ವಶಪಡಿಸಿಕೊಳ್ಳುವುದಕ್ಕೆ ಅಸಾಧ್ಯವಾಗುವಂತೆ ರಚಿಸಿ, ಅದರ ಶಕ್ತಿಗುಂದದಿರುವಂತೆ ಕಾಪಾಡಿಕೊಂಡನು.   

 

ಅದಱ ತೆಱನರಿಯದಱಿಯೆಂ

ದುದಾತ್ತ ಬಲನಂ ಪ್ರಹಸ್ತನಂ ಪೇೞ್ವುದುಮಂ

ತದನಱಿದು ಬಂದವಂ ದಶ

ವದನಂಗಾದ್ಯಂತಮದಱಗುರ್ವಂ ಪೇೞ್ದಂ  ೨

ಪದ್ಯದ ಅನ್ವಯಕ್ರಮ:

ಅದಱ ತೆಱನ್ ಅಱಿಯದೆ, ಅಱಿ ಎಂದು ಉದಾತ್ತ ಬಲನಂ ಪ್ರಹಸ್ತನಂ ಪೇೞ್ವುದುಂ ಅಂತದನ್ ಅಱಿದು ಬಂದವಂ ದಶವದನಂಗೆ ಆದ್ಯಂತಂ ಅದಱ ಅಗುರ್ವಂ ಪೇೞ್ದಂ.

ಪದ-ಅರ್ಥ:

ಅದಱ ತೆಱನ್-ಕೋಟೆಯ ರಹಸ್ಯವನ್ನು;  ಅಱಿಯದೆ-ತಿಳಿಯದೆ;  ಅಱಿ-ತಿಳಿದುಕೊಳ್ಳು;  ಉದಾತ್ತಬಲಂ-ರಾವಣನು;  ಪ್ರಹಸ್ತನಂ-ಪ್ರಹಸ್ತನಿಗೆ(ರಾವಣನ ಮಂತ್ರಿ);  ಪೇೞ್ವುದುಂ-ಹೇಳಿದಾಗ;  ಅಂತದನ್-ಹಾಗೆ ಅದನ್ನು;  ಅಱಿದು ಬಂದವಂ-ತಿಳಿದು ಬಂದಕೂಡಲೇ ;  ದಶವದನಂಗೆ-ರಾವಣನಿಗೆ;  ಆದ್ಯಂತಂ-ಎಲ್ಲಾ ವಿಷಯಗಳನ್ನು;  ಅದಱಗುರ್ವಂ-ಅದರ ಭೀಕರತೆಯನ್ನು;  ಪೇೞ್ದಂ-ತಿಳಿಸಿದನು.

            ಕೋಟೆಯ ರಹಸ್ಯವನ್ನು ಅರಿಯದೆ ಆ ರಹಸ್ಯವನ್ನು ತಿಳಿದುಕೊಂಡು ಬಾ ಎಂದು ಉದಾತ್ತಬಲನೆನಿಸಿರುವ ರಾವಣನು ಮಂತ್ರಿಯಾದ ಪ್ರಹಸ್ತನಿಗೆ  ಆಜ್ಞಾಪಿಸಿದಾಗ ಅವನು ಹೋಗಿ ತಿಳಿದುಕೊಂಡು ಬಂದು ರಾವಣನಿಗೆ ಕೋಟೆಯ ಎಲ್ಲಾ ರಹಸ್ಯವನ್ನು, ಅದರ ಭೀಕರತೆಯನ್ನು ತಿಳಿಸಿದನು.

            ರಾವಣ ತನ್ನ ಸೈನ್ಯವನ್ನು ಕೂಡಿಕೊಂಡು ದುರ್ಲಂಘ್ಯಪುರವನ್ನು  ಸಮೀಪಿಸುವಷ್ಟರಲ್ಲಿಯೇ ಕೋಟೆಯ ಕಡೆಯಿಂದ ಕೆಲವು ಅನಾಹುತಕಾರಿಯಾದ ಸೂಚನೆಗಳು ಬಂದೊಡನೆಯೇ ರಾವಣ ಜಾಗೃತನಾಗಿ ಈ ಕೋಟೆ ಅಸಾಮಾನ್ಯವಾದುದು ಎಂಬುದನ್ನು ಅರಿತುಕೊಂಡನು. ಅನಂತರ ಕೋಟೆಯ ರಸಹ್ಯವನ್ನು, ಅದನ್ನು ಭೇದಿಸುವ ವಿಧಾನವನ್ನು ಕುರಿತು ಚಿಂತಿಸಿ ತನ್ನ ಮಂತ್ರಿಯಾದ ಪ್ರಹಸ್ತನನ್ನು ಕರೆದು ಕೋಟೆಯ ರಹಸ್ಯವೆಲ್ಲವನ್ನೂ ತಿಳಿದುಕೊಂಡು ಬರುವಂತೆ ಆಜ್ಞಾಪಿಸಿದಾಗ ಅವನು ಹೋಗಿ ಕೋಟೆಯ ಆದ್ಯಂತವನ್ನು ತಿಳಿದುಕೊಂಡು ಬಂದು ರಾವಣನಿಗೆ ಕೋಟೆಯ ರಹಸ್ಯವನ್ನೂ ಅದರ ಭೀಕರತೆಯನ್ನೂ ವಿವರಿಸಿದನು.

 

ಗದ್ಯ: ಅಂತು ಪೇೞ್ದು ನಮ್ಮ ಪಡೆಗಲ್ಲಿಯ ಜಂತ್ರಂಗಳಿಂದುಪದ್ರವಮಾಗದಂತು ತೊಲಗಿ ಬಿಟ್ಟು ಬೞಿಕ್ಕಿದಂ ಕೊಳ್ವ ತೆಱನಂ ಬಗೆವುದೆಂಬುದುಂ ದಶವದನನಾನುಡಿಯನವಕರ್ಣಿಸಿ ಕೋಂಟೆಯಂ ಕೊಳ್ವುಪಾಯಮನೆ ಬಗೆಯುತ್ತುಮಿರ್ಪುದುಮಿತ್ತಲ್ –

ಗದ್ಯದ ಅನ್ವಯಕ್ರಮ:

ಅಂತು ಪೇೞ್ದು ನಮ್ಮ ಪಡೆಗೆ ಅಲ್ಲಿಯ ಜಂತ್ರಂಗಳಿಂದ ಉಪದ್ರವಂ ಆಗದಂತು ತೊಲಗಿ ಬಿಟ್ಟು ಬೞಿಕ್ಕ ಇದಂ ಕೊಳ್ವ ತೆಱನಂ ಬಗೆವುದು ಎಂಬುದುಂ ದಶವದನನ್ ಆ ನುಡಿಯನ್ ಅವಕರ್ಣಿಸಿ ಕೋಂಟೆಯಂ ಕೊಳ್ವ ಉಪಾಯಮನೆ ಬಗೆಯುತ್ತುಂ ಇರ್ಪುದುಂ ಇತ್ತಲ್ –

ಪದ-ಅರ್ಥ:

ಅಂತು-ಹಾಗೆ;  ಪೇೞ್ದು-ಹೇಳಿ, ತಿಳಿಸಿ; ನಮ್ಮ ಪಡೆಗೆ-ನಮ್ಮ ಸೈನ್ಯಕ್ಕೆ;  ಅಲ್ಲಿಯ ಜಂತ್ರಂಗಳಿಂದ-ಕೋಟೆಯಲ್ಲಿನ ಯಂತ್ರಗಳಿಂದ;  ಉಪದ್ರವಂ-ತೊಂದರೆ;  ಆಗದಂತು-ಆಗದಿರುವಂತೆ;  ತೊಲಗಿಬಿಟ್ಟು-ದೂರಹೋಗಿ;  ಬೞಿಕ್ಕಿದಂ-ಅನಂತರ ಇದನ್ನು;  ಕೊಳ್ವ-ವಶಪಡಿಸಿಕೊಳ್ಳುವ;  ಆಕ್ರಮಿಸಿಕೊಳ್ಳುವ;  ತೆಱನಂ-ಉಪಾಯವನ್ನು;  ಬಗೆವುದು-ಆಲೋಚಿಸಬೇಕು, ಚಿಂತಿಸಬೇಕು;  ಎಂಬುದುಂ-ಎಂದು ಹೇಳಿದಾಗ;  ದಶವದನನ್-ರಾವಣನು;  ಆ ನುಡಿಯನವಕರ್ಣಿಸಿ– ಆ ಮಾತನ್ನು ಕೇಳಿಕೊಂಡು; ಕೋಂಟೆಯಂ ಕೊಳ್ವ-ಕೋಟೆಯನ್ನು ವಶಪಡಿಸಿಕೊಳ್ಳುವ;  ಉಪಾಯಮನೆ-ಉಪಾಯವನ್ನೇ;  ಬಗೆಯುತ್ತುಂ-ಆಲೋಚಿಸುತ್ತ;  ಇರ್ಪುದುಂ-ಇದ್ದಾಗ;  ಇತ್ತಲ್-ಈ ಕಡೆ (ಕೋಟೆಯೊಳಗೆ).

            ಹಾಗೆ ತಿಳಿಸಿ, ನಮ್ಮ ಸೈನ್ಯಕ್ಕೆ ಕೋಟೆಯಲ್ಲಿನ ಯಂತ್ರಗಳಿಂದ ತೊಂದರೆಯಾಗದಂತೆ ದೂರಹೋಗಿ ಬೀಡುಬಿಟ್ಟು ಅನಂತರ ಕೋಟೆಯನ್ನು ವಶಪಡಿಸಿಕೊಳ್ಳುವ ಉಪಾಯವನ್ನು ಕುರಿತು ಆಲೋಚಿಸಬೇಕು ಎಂದು ಪ್ರಹಸ್ತನು ಹೇಳಿದಾಗ, ರಾವಣನು ಪ್ರಹಸ್ತನ ಮಾತುಗಳನ್ನು ಕೇಳಿಕೊಂಡು ಕೋಟೆಯನ್ನು ವಶಪಡಿಸಿಕೊಳ್ಳುವ ಉಪಾಯವನ್ನೇ ಆಲೋಚಿಸುತ್ತ ಇದ್ದಾಗ, ಈ ಕಡೆ –

            ರಾವಣನ ಆಜ್ಞೆಯಂತೆ ನಳಕೂಬರನ ಕೋಟೆಯ ರಹಸ್ಯವನ್ನು ತಿಳಿದುಕೊಳ್ಳಲು ಹೋದ ಪ್ರಹಸ್ತ ಕೋಟೆಯ ರಹಸ್ಯಗಳೆಲ್ಲವನ್ನೂ ತಿಳಿದುಕೊಂಡು ಬಂದು ರಾವಣನಿಗೆ ಅದೆಲ್ಲವನ್ನೂ ತಿಳಿಸಿ, ಮೊದಲಿಗೆ ತಮ್ಮ ಸೈನ್ಯಕ್ಕೆ ಏನೂ ಅನಾಹುತವಾಗದಂತೆ ನೋಡಿಕೊಳ್ಳುವ ಸಲುವಾಗಿ ತಮ್ಮ ಸೈನ್ಯವನ್ನು ಕೋಟೆಯ ಯಂತ್ರಗಳಿಂದ ತೊಂದರೆಗೆ ಒಳಗಾಗದಂತೆ ಕೋಟೆಯಿಂದ ಸಾಕಷ್ಟು ದೂರಕ್ಕೆ ಸುರಕ್ಷಿತ ಪ್ರದೇಶಕ್ಕೆ ಹೋಗಿ ಬೀಡುಬಿಟ್ಟು ಅನಂತರ ಕೋಟೆಯನ್ನು ವಶಪಡಿಸಿಕೊಳ್ಳುವ ಉಪಾಯವನ್ನು ಆಲೋಚಿಸಬೇಕೆಂದು ಸಲಹೆನೀಡಿದನು. ರಾವಣನು ಪ್ರಹಸ್ತನ ಮಾತುಗಳು ಯುಕ್ತವೆಂದು ಭಾವಿಸಿಕೊಂಡು ಸೈನ್ಯವನ್ನು ದೂರಕ್ಕೆ ಹೋಗಿ ಬೀಡುಬಿಡುವಂತೆ ಆಜ್ಞಾಪಿಸಿ ವಿಭೀಷಣ, ಪ್ರಹಸ್ತ ಹಾಗೂ ಇತರ ಪ್ರಮುಖರೊಂದಿಗೆ  ಕೋಟೆಯನ್ನು ವಶಪಡಿಸಿಕೊಳ್ಳುವ ಉಪಾಯವನ್ನು ಕುರಿತು ಸಮಾಲೋಚಿಸತೊಡಗಿದನು.  ಅದೇ ಹೊತ್ತಿಗೆ ಈ ಕಡೆ ಕೋಟೆಯೊಳಗೆ –

 

ನಳಕೂಬರನ ಕುಲಾಂಗನೆ

ವಿಳಾಸವತಿ ರಾವಣಂಗೆ ಪಲಕಾಲಂ ಮು

ನ್ನೆಳಸಿರ್ಪ ಕಾಮಕಾತರೆ

ಕೆಳದಿಗೆ ತಿಳಿವಂತು ತನ್ನ ತೆಱನಂ ಪೇೞ್ದಳ್  ೩

ಪದ್ಯದ ಅನ್ವಯಕ್ರಮ:

ನಳಕೂಬರನ ಕುಲಾಂಗನೆ ವಿಳಾಸವತಿ ಪಲಕಾಲಂ ರಾವಣಂಗೆ ಮುನ್ನ ಎಳಸಿರ್ಪ ಕಾಮಕಾತರೆ ತನ್ನ ತೆಱನಂ ಕೆಳದಿಗೆ ತಿಳಿವಂತು ಪೇೞ್ದಳ್.

ಪದ-ಅರ್ಥ:

ಕುಲಾಂಗನೆ-ರಾಣಿ, ಹೆಂಡತಿ;  ವಿಳಾಸವತಿ-ಚೆಲುವೆ;  ರಾವಣಂಗೆ-ರಾವಣನಿಗೆ;  ಪಲಕಾಲಂ-ಹಲವು ಸಮಯದಿಂದ, ತುಂಬಾ ಸಮಯದಿಂದ;  ಮುನ್ನೆಳಸಿರ್ಪ-ಮೊದಲೇ ಬಯಸಿದ, ಮೊದಲೇ ಕಾಮಿಸಿದ;  ಕಾಮಕಾತರೆ-ಕಾಮಮೋಹಿತೆ, ಮೋಹಪರವಶಳಾದವಳು;  ಕೆಳದಿಗೆ-ಗೆಳತಿಗೆ, ಸಖಿಗೆ;  ತಿಳಿವಂತು-ತಿಳಿಯುವ ಹಾಗೆ, ಅರ್ಥವಾಗುವ ಹಾಗೆ;  ತನ್ನ ತೆಱನಂ-ತನ್ನ ಸ್ಥಿತಿಯನ್ನು;  ಪೇೞ್ದಳ್-ಹೇಳಿದಳು, ತಿಳಿಸಿದಳು.

            ನಳಕೂಬರನ ರಾಣಿಯಾದ ಉಪರಂಭೆಯು ಅತ್ಯಂತ ಚಲುವೆಯಾಗಿದ್ದು, ಮೊದಲೇ ರಾವಣನನ್ನು ಬಯಸಿ  ಹಲವು ಸಮಯದಿಂದ ರಾವಣನಿಗೆ ಮನಸೋತು ಕಾಮಮೋಹಿತೆಯಾಗಿದ್ದಳು. ಅವಳು ತನ್ನ ಮನಸ್ಸಿನ ಸ್ಥಿತಿಯನ್ನು ತನ್ನ ಸಖಿಗೆ ಅರ್ಥವಾಗುವ ಹಾಗೆ ತಿಳಿಸಿಹೇಳಿದಳು.

            ನಳಕೂಬರನ ರಾಣಿಯಾದ ಉಪರಂಭೆಯು ನಳಕೂಬರನನ್ನು ಮದುವೆಯಾಗುವುದಕ್ಕೆ ಮೊದಲೇ ರಾವಣನನ್ನು ಬಯಸಿದ್ದಳು. ಆದರೆ, ಆತನನ್ನು ಮದುವೆಯಾಗುವುದಕ್ಕೆ ಸಾಧ್ಯವಾಗಲಿಲ್ಲ. ನಳಕೂಬರನನ್ನು ಮದುವೆಯಾದರೂ ಆಕೆ  ತನ್ನ ಮನಸ್ಸಿನಲ್ಲಿ ಇನ್ನೂ ರಾವಣನನ್ನು ಕಾಮಿಸುತ್ತಲೇ ಇದ್ದು ,  ಬಹುಸಮಯದಿಂದ ತನ್ನ ಆಸೆಯನ್ನು ತೀರಿಸಿಕೊಳ್ಳಬಯಸುತ್ತಿದ್ದಾಳೆ. ಇದಕ್ಕೆ ಪೂರಕವೋ ಎಂಬಂತೆ  ರಾವಣ ತನ್ನ ದುರ್ಲಂಘ್ಯಪುರಕ್ಕೆ ಮುತ್ತಿಗೆ ಹಾಕುವುದಕ್ಕೆ ಬಂದಿದ್ದಾನೆ.  ಈಗ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೆ ಒಳ್ಳೆಯ ಸಂದರ್ಭ ಒದಗಿಬಂದಿದೆ ಎಂದು ಉಪರಂಭೆ ಭಾವಿಸಿಕೊಂಡು ಹೇಗಾದರೂ ರಾವಣನನ್ನು ಕೂಡಬೇಕೆಂದು ಬಯಸಿ ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ತನ್ನ ಪ್ರೀತಿಪಾತ್ರಳಾದ ಸಖಿಯನ್ನು ಕರೆದು ಗುಟ್ಟಾಗಿ ತನ್ನ ಮನಸ್ಸಿನ ಆಸೆಯನ್ನು ಆಕೆಗೆ ಅರ್ಥವಾಗುವಂತೆ ತಿಳಿಸುತ್ತಾಳೆ.

 

ಗದ್ಯ: ಅಂತು ವಿದ್ಯಾಧರ ಪರಮೇಶ್ವರಿ ಚಿತ್ರಮಾಲೆಗೆ ನಿಜಾಭಿಪ್ರಾಯಮಂ ಕಲಿಸಿ ರಾವಣನಲ್ಲಿಗಟ್ಟುವುದುಂ –

ಗದ್ಯದ ಅನ್ವಯಕ್ರಮ:

ಅಂತು ವಿದ್ಯಾಧರ ಪರಮೇಶ್ವರಿ ಚಿತ್ರಮಾಲೆಗೆ ನಿಜ ಅಭಿಪ್ರಾಯಮಂ ಕಲಿಸಿ ರಾವಣನಲ್ಲಿಗೆ ಅಟ್ಟುವುದುಂ –

ಪದ-ಅರ್ಥ:

ಅಂತು-ಹಾಗೆ;  ವಿದ್ಯಾಧರ ಪರಮೇಶ್ವರಿ-ನಳಕೂಬರನ ರಾಣಿ (ಉಪರಂಭೆ);  ಚಿತ್ರಮಾಲೆ-ಉಪರಂಭೆಯ ಸಖಿ;  ನಿಜಾಭಿಪ್ರಾಯಮಂ-ತನ್ನ ಅಭಿಪ್ರಾಯವನ್ನು;  ಕಲಿಸಿ-ಮನದಟ್ಟುಮಾಡಿಸಿ;  ರಾವಣನಲ್ಲಿಗಟ್ಟುವುದುಂ-ರಾವಣನಿದ್ದಲ್ಲಿಗೆ ಕಳುಹಿಸಿದಾಗ.

            ಹಾಗೆ ವಿದ್ಯಾಧರ ಪರಮೇಶ್ವರಿ ಎನಿಸಿರುವ ಉಪರಂಭೆಯು ತನ್ನ ಸಖಿಯಾದ ಚಿತ್ರಮಾಲೆಗೆ ತನ್ನ ಮನಸ್ಸಿನ ಅಭಿಲಾಷೆಯನ್ನು ವಿವರವಾಗಿ ಮನದಟ್ಟುಮಾಡಿಸಿ ರಾವಣನಿದ್ದಲ್ಲಿಗೆ  ಕಳುಹಿಸಿದಾಗ –

 

ನೀಲಪಟಚ್ಛದೆ ನಿಶೆಯೊಳ್

ಲೋಲೇಕ್ಷಣೆ ಗಗನಮಾರ್ಗದಿಂ ರಾವಣನಿ

ರ್ದಾಲಯಮಂ ವಿಜಯಶ್ರೀ

ಲೀಲೆಯಿನಾ ಚಿತ್ರಮಾಲೆ ಬಂದೊಳಪೊಕ್ಕಳ್  ೪

ಪದ್ಯದ ಅನ್ವಯಕ್ರಮ:

ನಿಶೆಯೊಳ್ ನೀಲಪಟ್ಟ ಅಚ್ಛದೆ ಲೋಲೇಕ್ಷಣೆ ಆ ಚಿತ್ರಮಾಲೆ ಗಗನಮಾರ್ಗದಿಂ  ಬಂದು ವಿಜಯಶ್ರೀ ಲೀಲೆಯಿನ್  ರಾವಣನ್ ಇರ್ದ ಆಲಯಮಂ   ಪೊಕ್ಕಳ್.

ಪದ-ಅರ್ಥ:

ನೀಲಪಟಚ್ಛದೆ -ಕಪ್ಪುಬಟ್ಟೆಯಿಂದ ಮುಸುಕು ಹಾಕಿಕೊಂಡು;  ನಿಶೆಯೊಳ್-ಕತ್ತಲೆಯಲ್ಲಿ;  ಲೋಲೇಕ್ಷಣೆ-ಚಂಚಲ ದೃಷ್ಟಿಯುಳ್ಳವಳು;  ಗಗನಮಾರ್ಗದಿಂ-ಆಕಾಶಮಾರ್ಗವಾಗಿ;  ರಾವಣನಿರ್ದಾಲಯಮಂ-ರಾವಣನು ಉಳಿದುಕೊಂಡಿರುವ ಬಿಡಾರವನ್ನು;  ವಿಜಯಶ್ರೀ ಲೀಲೆಯಿನ್ – ಯಾರಿಗೂ ಕಾಣಿಸದಂತೆ ಹೋಗುವ ವಿದ್ಯೆಯಿಂದ; ಒಳಪೊಕ್ಕಳ್-ಒಳಗೆ ಪ್ರವೇಶಿಸಿದಳು.

            ಕತ್ತಲೆಯಲ್ಲಿ ಕಪ್ಪುಬಟ್ಟೆಯನ್ನು ಮುಸುಕು ಹಾಕಿಕೊಂಡು,  ಚಂಚಲ ದೃಷ್ಟಿಯುಳ್ಳ ಚಿತ್ರಮಾಲೆಯು ಆಕಾಶ ಮಾರ್ಗವಾಗಿ ಬಂದು ಯಾರಿಗೂ ಕಾಣಿಸಲಾರದ ಓಡಾಡಬಹುದಾದ ವಿಜಯಶ್ರೀ ಎಂಬ ವಿದ್ಯೆಯಿಂದ ರಾವಣನು ಉಳಿದುಕೊಂಡಿರುವ ಬಿಡಾರಕ್ಕೆ ಬಂದು ಒಳಪ್ರವೇಶಿಸಿದಳು.

            ಉಪರಂಭೆ  ನಳಕೂಬರನನ್ನು ವಿವಾಹವಾಗುವುದಕ್ಕೆ ಮೊದಲೇ ರಾವಣನಿಗೆ ಮನಸೋತವಳು. ಇದುವರೆಗೂ ಆತನ ಮೇಲಿನ ಮೋಹವನ್ನು ಮನಸ್ಸಿನಲ್ಲಿಯೇ ಕಾಪಾಡಿಕೊಂಡು ಬಂದಿದ್ದಾಳೆ. ಈಗ ರಾವಣನೇ ತನ್ನನ್ನು ಹುಡುಕಿಕೊಂಡು ಬಂದಿದ್ದಾನೋ ಎಂಬಂತೆ  ತನ್ನ ಕೋಟೆಯವರೆಗೆ ಬಂದಿದ್ದಾನೆ. ಈಗ ತನ್ನಾಸೆಯನ್ನು ಈಡೇರಿಸಿಕೊಳ್ಳುವ ಸುಸಮಯ ಒದಗಿಬಂದಿದೆ ಎಂದುಕೊಂಡು ತನ್ನ ಆತ್ಮೀಯ ಹಾಗೂ ವಿಶ್ವಾಸಾರ್ಹ ಸಖಿಯಾದ ಚಿತ್ರಮಾಲೆಗೆ ಎಲ್ಲವನ್ನೂ ಅರ್ಥವಾಗುವಂತೆ ತಿಳಿಸಿ ಕಳುಹಿಸುತ್ತಾಳೆ. ಉಪರಂಭೆಯು ತನಗೆ ವಹಿಸಿರುವ ಕಾರ್ಯವು ಅತ್ಯಂತ ಗಹನವೂ ಅಪಾಯಕಾರಿಯೂ ಆಗಿದೆ ಎಂಬುದನ್ನೂ ನಳಕೂಬರನಿಗಾಗಲೀ ಆತನ ಮಂತ್ರಿವರ್ಗಕ್ಕಾಗಲೀ ಈ ವಿಷಯ ತಿಳಿಯಕೂಡದು ಎಂಬುದನ್ನೂ ಚಿತ್ರಮಾಲೆ ಬಲ್ಲಳು. ತನ್ನ ಒಡತಿಯ ಆಜ್ಞೆಯನ್ನು ಈಡೇರಿಸಿಕೊಡುವುದಕ್ಕಾಗಿ ಆಕೆ ಯಾರಿಗೂ ತಿಳಿಯಕೂಡದೆಂದು ರಾತ್ರಿಯಾದೊಡನೆ ಕಪ್ಪು ಬಟ್ಟೆಯನ್ನು ಮುಸುಕುಹಾಕಿಕೊಂಡು ಕತ್ತಲೆಯಲ್ಲಿ ವಿಜಯಶ್ರೀ ಲೀಲೆಯಿಂದ ಆಕಾಶಮಾರ್ಗವಾಗಿ ಹೋಗಿ ಯಾರಿಗೂ ತಿಳಿಯದಂತೆ ರಾವಣನು ಉಳಿದುಕೊಂಡಿರುವ ಬಿಡಾರವನ್ನು ಪ್ರವೇಶಿಸುತ್ತಾಳೆ.

 

ಗದ್ಯ: ಅಂತು ಪೊಕ್ಕು ರಾವಣನ ಕೆಲಕ್ಕೆ ವಂದು

ಪದ-ಅರ್ಥ:

ಅಂತು ಪೊಕ್ಕು– ಹಾಗೆ (ವಿಜಯಶ್ರೀ ಲೀಲೆಯಿಂದ)  ಪ್ರವೇಶಿಸಿ;  ರಾವಣನ ಕೆಲಕ್ಕೆ ವಂದು-ರಾವಣನ ಪಕ್ಕಕ್ಕೆ ಬಂದು.

            ಗಗನಮಾರ್ಗವಾಗಿ ಬಂದ ಚಿತ್ರಮಾಲೆ ರಾವಣನ ಬಿಡಾರವನ್ನು ಪ್ರವೇಶಿಸಿ ರಾವಣನು ಕುಳಿತುಕೊಂಡಿರುವಲ್ಲಿ ಆತ್ನ ಪಕ್ಕಕ್ಕೆ  ಬಂದು –

 

ಉಪರಂಭೆಯೆಂಬಳೆಮ್ಮರ

ಸಿ ಪೋಲಿಪೊಡೆ ರಂಭೆಗಗ್ಗಳಂ ಚೆಲ್ವಿಂದಾ

ರುಪಮೆಗೆ ಪೆಱರೆನಿಪಳ್ ಪೀ

ನ ಪಯೋಧರೆ ನಿನ್ನ ಸಾರ್ಕೆಗಟ್ಟಿದಳೆನ್ನಂ  ೫

ಪದ್ಯದ ಅನ್ವಯಕ್ರಮ:

ಎಮ್ಮರಸಿ ಉಪರಂಭೆ ಎಂಬಳ್ ಪೋಲಿಪೊಡೆ ರಂಭೆಗೆ ಅಗ್ಗಳಂ, ಚೆಲ್ವಿಂದ ಆರ್ ಉಪಮೆಗೆ ಪೆಱರ್ ಎನಿಪಳ್, ಪೀನ ಪಯೋಧರೆ, ಎನ್ನಂ ನಿನ್ನ ಸಾರ್ಕೆಗೆ ಅಟ್ಟಿದಳ್

ಪದ-ಅರ್ಥ:

ಉಪರಂಭೆಯೆಂಬಳ್-ಉಪರಂಭೆ ಎಂಬವಳು;  ಎಮ್ಮರಸಿ-ನಮ್ಮ ರಾಣಿ;  ಪೋಲಿಪೊಡೆ-ಹೋಲಿಸುವುದಾದರೆ;  ರಂಭೆಗಗ್ಗಳಂ-ರಂಭೆಗೂ ಮಿಗಿಲಾಗಿದ್ದಾಳೆ;  ಚೆಲ್ವಿಂದಾರ್– ಸೌಂದರ್ಯದಲ್ಲಿ ಯಾರೂ ಸರಿಸಮಾನರಿಲ್ಲ;  ಉಪಮೆಗೆ ಪೆಱರೆನಿಪಳ್ –ಹೋಲಿಕೆಗೆ ಸಿಗದವಳು, ಹೋಲಿಕೆಗೆ ಅಸಾಧ್ಯಳಾದವಳು;  ಪೀನ ಪಯೋಧರೆ-ದಪ್ಪ ಮೊಲೆಯುಳ್ಳವಳು;   ನಿನ್ನ ಸಾರ್ಕೆಗೆ-ನಿನ್ನ ಬಳಿಗೆ;  ಅಟ್ಟಿದಳ್-ಕಳುಹಿಸಿದ್ದಾಳೆ;  ಎನ್ನಂ-ನನ್ನನ್ನು.

            ನನ್ನ ಅರಸಿ ಉಪರಂಭೆ ಎಂಬವಳು ಹೋಲಿಸುವುದಾದರೆ ಸೌಂದರ್ಯದಲ್ಲಿ ರಂಭೆಗೂ ಮಿಗಿಲಾಗಿದ್ದಾಳೆ. ಸೌಂದರ್ಯದಲ್ಲಿ ಆಕೆ ಯಾರೂ ಸರಿಸಮಾನರಿಲ್ಲ.  ಹೋಲಿಸುವುದಾದರೆ ಆಕೆಗೆ ಸರಿಸಮಾನರಾದವರು ಯಾರೂ ಇಲ್ಲ. ದಪ್ಪ ಮೊಲೆಗಳನ್ನು ಹೊಂದಿರುವ ಚೆಲುವೆಯಾದ ಉಪರಂಭೆ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾಳೆ.

            ಉಪರಂಭೆಗೆ ರಾವಣನಿಗೆ ಕಾಮಮೋಹಿತೆಯಾಗಿರುವುದರಿಂದ ರಾವಣನೂ ಉಪರಂಭೆಗೆ ಮರುಳಾಗಲಿ ಎಂಬ  ಭಾವನೆಯಿಂದ ಚಿತ್ರಮಾಲೆಯು ತನ್ನ ರಾಣಿಯಾದ ಉಪರಂಭೆಯ ಸೌಂದರ್ಯವನ್ನು ಮನಃಪೂರ್ವಕ ಹೊಗಳಿ ರಾವಣನನ್ನು ಕಾಮಮೋಹಿತನಾಗುವಂತೆ ಪ್ರಯತ್ನಿಸುತ್ತಾಳೆ. ಉಪರಂಭೆ ಅತ್ಯಂತ ಚೆಲುವೆಯಾಗಿದ್ದು ರೂಪದಲ್ಲಿ, ಹಾವಭಾವಗಳಲ್ಲಿ, ಅಂಗಸೌಷ್ಠವದಲ್ಲಿ ರಂಭೆಗೂ ಮಿಗಿಲಾಗಿದ್ದಾಳೆ. ದಪ್ಪ ಮೊಲೆಗಳನ್ನು ಹೊಂದಿ ಸೌಂದರ್ಯದ ಖನಿಯಾಗಿದ್ದಾಳೆ. ಈ ವಿಷಯದಲ್ಲಿ ಆಕೆಯೊಂದಿಗೆ ಹೋಲಿಕೆಗೆ ಯಾರೂ ದೊರಕಲಾರರು ಎನ್ನುವಷ್ಟು ಚೆಲುವೆಯಾಗಿದ್ದಾಳೆ. ಆಕೆ ನಿನ್ನಲ್ಲಿ ತನ್ನ ವಿಷಯವನ್ನು ತಿಳಿಸುವುದಕ್ಕಾಗಿ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾಳೆ ಎಂದಳು.

 

ಪಲವು ದಿನಂ ನಿನ್ನೊಳ್ ತೊ

ಟ್ಟೊಲವಿಂದಾ ಚೆನ್ನೆ ನಿನ್ನನನವರತಂ ಪಂ

ಬಲಿಸುತ್ತುಂ ಚಿತ್ತೋದ್ಭವ

ನಲರಂಬುಗಳುರ್ಚೆ ನಾಡೆ ಪಾಡೞಿದಿರ್ದಳ್  ೬

ಪದ್ಯದ ಅನ್ವಯಕ್ರಮ:

ಪಲವು ದಿನಂ ನಿನ್ನೊಳ್ ತೊಟ್ಟ ಒಲವಿಂದ ಆ ಚೆನ್ನೆ ನಿನ್ನನ್ ಅನವರತಂ ಪಂಬಲಿಸುತ್ತುಂ ಚಿತ್ತೋದ್ಭವನ ಅಲರ ಅಂಬುಗಳ್ ಉರ್ಚೆ ನಾಡೆ ಪಾಡು ಅೞಿದಿರ್ದಳ್.

ಪದ-ಅರ್ಥ:

ಪಲವು ದಿನಂ-ಹಲವು ದಿನಗಳಿಂದ;  ನಿನ್ನೊಳ್ ತೊಟ್ಟ-ನಿನ್ನಲ್ಲಿ ಇರಿಸಿಕೊಂಡ;  ಒಲವಿಂದ-ಪ್ರೀತಿಯಿಂದ, ಆಸಕ್ತಿಯಿಂದ;  ಆ ಚೆನ್ನೆ– ಆ ಚೆಲುವೆ (ಉಪರಂಭೆ);  ನಿನ್ನನನವರತಂ-ನಿನ್ನನ್ನು ಯಾವತ್ತೂ, ನಿನ್ನನ್ನು ದಿನನಿತ್ಯವೂ;  ಪಂಬಲಿಸುತ್ತುಂ-ಹಂಬಲಿಸುತ್ತ;  ಚಿತ್ತೋದ್ಭವನ-ಕಾಮನ, ಮನ್ಮಥನ;  ಅಲರಂಬುಗಳುರ್ಚೆ-ಹೂ ಬಾಣಗಳು ನಾಟಿ, ಹೂಬಾಣಗಳು ಚುಚ್ಚಿ;  ನಾಡೆ ಪಾಡೞಿದಿರ್ದಳ್– ತುಂಬಾ ಸ್ಥಿತಿಗೆಟ್ಟಿದ್ದಾಳೆ.

            ಚೆಲುವೆ ಉಪರಂಭೆಯು  ಹಲವು ಸಮಯದಿಂದ ನಿನ್ನಲ್ಲಿ ಇರಿಸಿಕೊಂಡಿರುವ ಪ್ರೀತಿಯಿಂದ ನಿನ್ನನ್ನು ಯಾವತ್ತೂ ಹಂಬಲಿಸುತ್ತ, ಮನ್ಮಥನ ಹೂಬಾಣಗಳ ಘಾತಕ್ಕೆ ಗುರಿಯಾಗಿ ತುಂಬಾ ಸ್ಥಿತಿಗೆಟ್ಟಿದ್ದಾಳೆ.

            ನಮ್ಮ ಅರಸಿಯಾಗಿರುವ ಉಪರಂಭೆಯು ತನ್ನ ಮದುವೆಯ ಹಿಂದಿನಿಂದಲೂ ನಿನ್ನನ್ನೇ ಮದುವೆಯಾಗಬೇಕೆಂದು ಬಯಸಿದವಳು. ಆದರೆ ಅದು ಸಾಧ್ಯವಾಗಲಿಲ್ಲ. ಇದುವರೆಗೂ ನಿನ್ನ ಬಗೆಗಿನ ಪ್ರೀತಿ ಹಾಗೂ ಆಸಕ್ತಿಯನ್ನು ಕಳೆದುಕೊಳ್ಳದೆ ಉಳಿಸಿಕೊಂಡು ಬಂದಿದ್ದಾಳೆ. ದಿನನಿತ್ಯವೂ ನಿನ್ನನ್ನು ಹಂಬಲಿಸುತ್ತಿದ್ದಾಳೆ. ನಿನ್ನನ್ನು ಒಡಗೂಡುವುದಕ್ಕೆ ಕಾತರಿಸುತ್ತಿದ್ದಾಳೆ.  ಆಕೆ ನಿನ್ನ ಮೇಲೆ ಇರಿಸಿಕೊಂಡಿರುವ  ಒಲವಿನಿಂದಾಗಿ ಹಾಗೂ ಮನ್ಮಥನು ಆಕೆಯ ಮೇಲೆ ಎಸೆಯುತ್ತಿರುವ ಹೂಬಾಣಗಳ ಘಾತದಿಂದಾಗಿ ಆಕೆ ಇದುವರೆಗೂ ನಿನ್ನನ್ನು ಕೂಡಲಾರದೆ ತುಂಬಾ ಸ್ಥಿತಿಗೆಟ್ಟಿದ್ದಾಳೆ. ಒಲಿದವಳನ್ನು ತಿರಸ್ಕರಿಸುವುದು ಸರಿಯಲ್ಲ. ಆಕೆಯ ಆಸೆಯನ್ನು ಈಡೇರಿಸು ಎಂದು ಚಿತ್ರಮಾಲೆ ಕೇಳಿಕೊಂಡಳು.

(ಭಾಗ – ೨ರಲ್ಲಿ ಮುಂದುವರಿದಿದೆ)

ಡಾ. ವಸಂತ್ ಕುಮಾರ್, ಉಡುಪಿ.

*****

Leave a Reply

Your email address will not be published. Required fields are marked *