ಸಾಹಿತ್ಯಾನುಸಂಧಾನ

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ-ಅಕ್ಕಮಹಾದೇವಿ

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ

ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ

ಶಿವನ ನೆನೆಯಿರೇ, ಶಿವನ ನೆನೆಯಿರೇ!

ಈ ಜನ್ಮ ಬಳಿಕಿಲ್ಲ!

ಚೆನ್ನಮಲ್ಲಿಕಾರ್ಜುನದೇವರ ದೇವ

ಪಂಚಮಹಾಪಾತಕರೆಲ್ಲ ಮುಕ್ತಿವಡೆದರು! 

 

 ವಚನದ ಅನ್ವಯಕ್ರಮ:

ಉದಯ ಅಸ್ತಮಾನ ಎಂಬ ಎರಡು ಕೊಳಗದಲ್ಲಿ ಆಯುಷ್ಯ ಎಂಬ ರಾಶಿಯ ಅಳೆದು ತೀರದ ಮುನ್ನ ಶಿವನ ನೆನೆಯಿರೇ, ಶಿವನ ನೆನೆಯಿರೇ!  ಬಳಿಕ ಈ ಜನ್ಮವಿಲ್ಲ. ಚೆನ್ನಮಲ್ಲಿಕಾರ್ಜುನ ದೇವರ ದೇವ. ಪಂಚ ಮಹಾಪಾತಕರೆಲ್ಲ ಮುಕ್ತಿ ಪಡೆದರು!

ಪದ-ಅರ್ಥ:

ಉದಯ-ಹುಟ್ಟು, ಸೂರ್ಯೋದಯ;  ಅಸ್ತಮಾನ-ಮುಳುಗುವಿಕೆ, ಸೂರ್ಯನ ಮುಳುಗುವಿಕೆ;  ಕೊಳಗ-ಒಂದು ಮಾಪನ (ನಾಲ್ಕು ಬಳ್ಳಗಳ ಪರಿಮಾಣ);  ಆಯುಷ್ಯವೆಂಬ ರಾಶಿ –ಒಟ್ಟು ಜೀವಿತಾವಧಿ, ಒಟ್ಟು ಜೀವಿತ ಪರಿಮಾಣ;   ಅಳೆದು ತೀರದ ಮುನ್ನ-ಲೆಕ್ಕಮಾಡಿ  ಮುಗಿಯುವ ಮೊದಲು;  ಪಂಚಮಹಾಪಾತಕ–  ಐದು ಬಗೆಯ ಮಹಾಪಾಪಗಳು (ಬ್ರಹ್ಮಹತ್ಯೆ, ಸುರಾಪಾನ, ಕಳ್ಳತನ; ಗುರುಪತ್ನಿಯನ್ನು ಕಾಮಿಸುವುದು ಮತ್ತು ಇವುಗಳನ್ನು ಮಾಡಿದವರ ಸಹವಾಸ) ; ಮುಕ್ತಿವಡೆದರು-ಮೋಕ್ಷವನ್ನು ಪಡೆದರು.

            ಮನುಷ್ಯನನ್ನು ಮೀರಿದ ಒಂದು ಶಕ್ತಿ ಎಂದರೆ ಭಗವಂತ. ಆತನನ್ನು ಮನುಷ್ಯ ಬೇರೆಬೇರೆ ಹೆಸರುಗಳಿಂದ ಕರೆದಿದ್ದಾರೆ. ಈ ಲೋಕದಲ್ಲಿ ಸಕಲ ಜೀವಸಂಕುಲದ ಜೀವಿತಕ್ಕೆ ಪೂರಕವಾದುದೆಲ್ಲವನ್ನೂ ಕರುಣಿಸಿರುವ ಭಗವಂತನಿಗೆ ಶರಣಾಗುವುದು, ಕಾಯಕದೊಂದಿಗೆ ತನ್ನನ್ನು ತಾನು ಪರಿಷ್ಕರಿಸಿಕೊಳ್ಳುತ್ತ ಭಗವಂತನ ಕೃಪೆಗೆ ಪಾತ್ರನಾಗುವುದು ಮನುಷ್ಯನ ಪ್ರಮುಖ ಹಾಗೂ ಆದ್ಯಕರ್ತವ್ಯಗಳಲ್ಲಿ ಒಂದು ಎಂಬುದನ್ನು ಪ್ರಾಚೀನಕಾಲದಿಂದಲೂ ಋಷಿಮುನಿಗಳು, ದಾರ್ಶನಿಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದನ್ನೇ ಮನಗಂಡು ಹನ್ನೆರಡನೆಯ ಶತಮಾನದ ಶಿವಶರಣೆ ಅಕ್ಕಮಹಾದೇವಿ ಮನುಷ್ಯಬದುಕಿನ ಸಾರ್ಥಕತೆಯನ್ನು ಗಮನದಲ್ಲಿಟ್ಟುಕೊಂಡು ಮನುಷ್ಯನ ಆಯುಷ್ಯರಾಶಿ ತೀರಿಹೋಗುವುದಕ್ಕಿಂತ ಮೊದಲೇ ಚೆನ್ನಮಲ್ಲಿಕಾರ್ಜುನನಿಗೆ ಶರಣಾಗಿ ಆತನನ್ನು ನೆನೆಯಬೇಕೆಂಬುದನ್ನು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ.

              ಪ್ರಾಚೀನಕಾಲದಲ್ಲಿ ಧಾನ್ಯವನ್ನು ಅಳೆಯುವುದಕ್ಕೆ ಪಾವು, ಸಿದ್ದೆ, ಸೇರು, ಖಂಡುಗ – ಹೀಗೆ ಹಲವು ಬಗೆಯ ನಿಗದಿತ ಮಾಪನಗಳಿದ್ದವು. ಧಾನ್ಯಗಳ ದೈನಂದಿನ ಉಪಯೋಗದ ಪ್ರಮಾಣವನ್ನನುಸರಿಸಿ ಈ ಮಾಪನಗಳು ಬಳಕೆಯಾಗುತ್ತಿದ್ದವು. ಬೆಳೆಸಿದ ಧಾನ್ಯವನ್ನು ರಾಶಿಹಾಕಿ ಶೇಖರಿಸಿದ ಮೇಲೆ ದಿನನಿತ್ಯದ ಉಪಯೋಗಕ್ಕೆ ಸಿದ್ದೆ, ಪಾವು, ಸೇರು, ಖಂಡುಗ ಮೊದಲಾದ ಅವಶ್ಯಕತೆಗಳಿಗನುಗುಣವಾಗಿ ಅದನ್ನು ಉಪಯೋಗಿಸತೊಡಗಿದಂತೆ ಧಾನ್ಯದ ರಾಶಿಯ ಗಾತ್ರ ಕ್ಷೀಣಿಸುತ್ತ ಒಂದು ದಿನ ಧಾನ್ಯವೆಲ್ಲವೂ ಮುಗಿದುಹೋಗುತ್ತದೆ. ಹಾಗೆಯೇ ಸೂರ್ಯನ ಉದಯಾಸ್ತಮಾನಗಳು ಸಮಯ(ಕಾಲ)ವನ್ನು ಅಳೆಯುವುದಕ್ಕೆ ಇರುವ ಒಂದು ಮಾಪನ. ಇದನ್ನೇ ಮನುಷ್ಯನ ಆಯುಷ್ಯವನ್ನು ಅಳೆಯುವ ಮಾಪನವೆಂದೂ ಅಕ್ಕಮಹಾದೇವಿ ಪರಿಭಾವಿಸಿಕೊಂಡು, ಅದನ್ನು ಆಕೆ ’ಕೊಳಗ’  ಎಂಬ ಹೆಸರಿನಿಂದ ಕರೆದಿದ್ದಾಳೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಇಂತಿಷ್ಟೇ ಆಯುಷ್ಯ ಎಂಬುದು ಮೊದಲೇ ನಿಗದಿಯಾಗಿರುವುದರಿಂದ ಅಕ್ಕಮಹಾದೇವಿ ಆಯುಷ್ಯದ ಒಟ್ಟು ಮೊತ್ತವನ್ನು ’ಆಯುಷ್ಯರಾಶಿ’ ಎಂದು ಕರೆದಿದ್ದಾಳೆ.  ಉದಯದಿಂದ ಹಿಡಿದು ಅಸ್ತಮಾನದವರೆಗಿನ ಅವಧಿಯನ್ನು ಒಂದು ದಿನ(ರಾತ್ರಿಯನ್ನೂ ಸೇರಿಸಿಕೊಂಡು)ವೆಂದು ಪರಿಗಣಿಸಿದರೆ ಪ್ರತಿದಿನ ಮನುಷ್ಯನ ಒಟ್ಟು ಆಯುಷ್ಯರಾಶಿಯ ಎರಡು ಕೊಳಗ ಭಾಗ ಕಳೆದುಹೋಗುತ್ತದೆ. ಹೀಗೆಯೇ ಪ್ರತಿನಿತ್ಯವೂ ಎರಡೆರಡು ಕೊಳಗ ಕಳೆದುಹೋಗಿ ಆತನ ಆಯುಷ್ಯರಾಶಿಯ ಪರಿಮಾಣ  ಕ್ಷೀಣಿಸುತ್ತ  ಕೊನೆಗೊಂದು ದಿನ ಮುಗಿದುಹೋದಾಗ ಮನುಷ್ಯ ಅಳಿಯುತ್ತಾನೆ. ಹೀಗೆ ಒಮ್ಮೆ ಆಯುಷ್ಯರಾಶಿ ಮುಗಿದುಹೋಯಿತೆಂದರೆ ಮತ್ತೆ ಮರು ಆಯುಷ್ಯವಾಗಲೀ ಮರುಜನ್ಮವಾಗಲೀ ದೊರೆಯದು. ಮನುಷ್ಯ ಜನ್ಮವೆಂಬುದು ಒಂದು ಬಾರಿ ಮಾತ್ರ. ಹಾಗಾಗಿ ಅಷ್ಟರೊಳಗೆ ಪ್ರತಿಯೊಬ್ಬ ಮನುಷ್ಯನೂ ಚೆನ್ನಮಲ್ಲಿಕಾರ್ಜುನನನ್ನು ನೆನೆಯತ್ತ, ಕಾಯಕಜೀವಿ ಎನಿಸಿಕೊಂಡು, ತನ್ನೆಲ್ಲ ಲೋಪದೋಷಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತ, ತನ್ನನ್ನು ತಾನು ಪರಿಷ್ಕರಿಸಿಕೊಳ್ಳುತ್ತ ಲೋಕೋಪಕಾರಿಯಾಗಿ ಚೆನ್ನಮಲ್ಲಿಕಾರ್ಜುನನ ಕೃಪೆಗೆ ಪಾತ್ರನಾಗಬೇಕು ಎಂಬುದು ಅಕ್ಕನ ನಿಲುವು.

            ಮನುಷ್ಯನಾಗಿ ತಾನು ಹುಟ್ಟಿದ ಮೇಲೆ ತನ್ನ ಜೀವಿತಾವಧಿಯಲ್ಲಿ ಕೇವಲ ಪುಣ್ಯವನ್ನೇ ಸಂಪಾದಿಸುತ್ತಾನೆ ಎಂಬ ಯಾವ ಭರವಸೆಯೂ ಇಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ, ಅರಿವಿದ್ದೋ ಅರಿವಿಲ್ಲದೆಯೋ ಸಮಯ ಸಂದರ್ಭಗಳನ್ನನುಸರಿಸಿ ಒಂದಷ್ಟು ಪಾಪವೂ ಸಂಪಾದನೆಯಾಗಬಹುದು. ಹೀಗೆ ಸಂಪಾದಿತವಾದ ಪಾಪ ಅದು ಯಾವುದೇ ಪ್ರಮಾಣದಲ್ಲಿದ್ದರೂ ಅದರಿಂದ ಮುಕ್ತಿಪಡೆಯಲು ಅಸಾಧ್ಯ. ಅಂತಹ ಪಾಪಸಂಪಾದನೆಯನ್ನು ವಿವಿಧ ರೀತಿಗಳಿಂದ ಪರಿಮಾರ್ಜನೆ ಮಾಡಿಕೊಳ್ಳಬೇಕು. ಚೆನ್ನಮಲ್ಲಿಕಾರ್ಜುನನನ್ನು ನಿರಂತರ ನೆನೆಯುವುದು, ಪೂಜಿಸುವುದು  ಪಾಪ ಪರಿಮಾರ್ಜನೆಗಿರುವ ಒಂದು ದಾರಿ. ಹಾಗಾಗಿ ಆಯುಷ್ಯರಾಶಿ ಮುಗಿದುಹೋಗುವ ಮೊದಲೇ ಶಿವನನ್ನು ನೆನೆದರೆ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳೆಲ್ಲ ನಿವಾರಣೆಯಾಗುತ್ತವೆ. ಪಂಚಮಹಾಪಾತಕಗಳನ್ನೇ ಮಾಡಿದ ಪಾತಕರೆಲ್ಲ ಹೀಗೆ ಶಿವನನ್ನು ನೆನೆದು ಮುಕ್ತಿಯನ್ನು ಪಡೆದಿರುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪಗಳನ್ನು ಮಾಡಿದವರೂ ಶಿವನನ್ನು ನೆನೆದು ಮುಕ್ತಿಯನ್ನು ಹೊಂದಲಾರರೇ?!  ಎಂಬುದು ಅಕ್ಕನ ನಿಲುವು.

            ನಾವು ಗುಡ್ದೆಹಾಕಿದ ಧಾನ್ಯದ ರಾಶಿ ನಾವು ಬಳಸುತ್ತ ಹೋದಂತೆ ಕ್ಷೀಣಿಸುತ್ತಿರುವುದು, ಮುಂದೆ ಎಷ್ಟು ದಿನಗಳಿಗೆ ಸಾಕೆಂಬುದು ನಮ್ಮ ಗಮನಕ್ಕೆ ಬರುತ್ತದೆ. ಹಾಗೆ ಕ್ಷೀಣಿಸತೊಡಗಿದಂತೆ ಅದಕ್ಕೆ ಪರ್ಯಾಯ ದಾರಿಯನ್ನು ಕಂಡುಕೊಳ್ಳಬಹುದು. ಧಾನ್ಯದ ರಾಶಿಯಂತೆಯೇ ಮನುಷ್ಯನ ಆಯುಷ್ಯರಾಶಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗುತ್ತದೆ. ಆದರೆ, ತನ್ನ ಆಯುಷ್ಯರಾಶಿ  ಇನ್ನೆಷ್ಟು ದಿನಗಳವರೆಗೆ ಉಳಿಯಬಹುದು? ಯಾವಾಗ ಮುಗಿಯಬಹುದು? ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ತನ್ನ ಕರ್ತವ್ಯಗಳನ್ನು ಆಯಾ ದಿನದಂದೇ ಮಾಡಿಮುಗಿಸಬೇಕು. ಇಲ್ಲದಿದ್ದರೆ ಅವು ಹಾಗೆಯೇ ಉಳಿದುಬಿಡುತ್ತವೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ತಿಳಿದೋ ತಿಳಿಯದೆಯೋ ತಪ್ಪುಗಳನ್ನು, ಪಾಪಗಳನ್ನು ಮಾಡಿರುವಾಗ ಪ್ರತಿಯೊಂದಕ್ಕೂ ಪರಿಹಾರ, ಪರಿಮಾರ್ಜನೆಗಳು ಇದ್ದೇ ಇರುತ್ತವೆ. ಅಕ್ಕನ ಪ್ರಕಾರ, ತನ್ನ ಇಷ್ಟದೇವನಿಗೆ ಶರಣಾಗುವುದು ಅವುಗಳಲ್ಲೊಂದು. ಮಾಡಿದ ಪಾಪಗಳಿಗೆ, ತಪ್ಪುಗಳಿಗೆ ಪಶ್ಚಾತ್ತಾಪ ಉಂಟಾದರೆ ಮನಸ್ಸು ಕಳಂಕರಹಿತವಾಗುತ್ತದೆ. ಇಂತಹ ನಿಷ್ಕಲ್ಮಶ ಮನಸ್ಸಿನಿಂದ  ಶಿವನಿಗೆ ಶರಣಾದರೆ ಆತ ಅನುಗ್ರಹಿಸುತ್ತಾನೆ. ಶಿವಾನುಗ್ರಹಕ್ಕೆ ಪಾತ್ರನಾದನೆಂದಾದರೆ ಅದು ಆತನಿಗೆ ಮುಕ್ತಿಯನ್ನು ಕರುಣಿಸುತ್ತದೆ. ಲೋಕದಲ್ಲಿ ಘನಘೋರವೆನಿಸಿದ ನಿಷಿದ್ಧವಾದ ಐದು ಬಗೆಯ ಪಾಪಕರ್ಮಗಳನ್ನು ಪಂಚಮಹಾಪಾತಕಗಳೆಂದು ಕರೆಯಲಾಗಿದೆ. ಅಂತಹ ಪಂಚಮಹಾಪಾತಕಗಳನ್ನು ಮಾಡಿರುವ ಪಾಪಿಗಳೇ ಶಿವನಿಗೆ ಶರಣಾಗಿ ಮುಕ್ತಿಯನ್ನು ಪಡೆದಿರುವಾಗ ಸಾಮಾನ್ಯ ಪಾಪಗಳನ್ನು ಮಾಡಿದವರು ಶಿವನಿಗೆ ಶರಣಾಗಿ ಆತನ ಅನುಗ್ರಹಕ್ಕೆ ಪಾತ್ರನಾಗಲು, ಮುಕ್ತಿಯನ್ನು ಹೊಂದಲು ಅವಕಾಶವಿರುವುದರಿಂದ ಪಾಪಿಗಳೆನಿಸಿಕೊಂಡು ಸತ್ತು ಮುಕ್ತಿವಂಚಿತರೆನಿಸಿಕೊಳ್ಳುವುದಕ್ಕೆ ಬದಲು, ಶಿವಾನುಗ್ರಹಕ್ಕೆ ಒಳಗಾಗಿ, ಬದುಕನ್ನು ಸಾರ್ಥಕಗೊಳಿಸಿ ಮುಕ್ತಿಯನ್ನು ಹೊಂದುವುದು ಒಳಿತು ಎಂದು ಅಕ್ಕ ಸ್ಪಷ್ಟಪಡಿಸುತ್ತಾಳೆ.

            ಹನ್ನೆರಡನೆಯ ಶತಮಾನದ ಸಾಮಾಜಿಕ ಆಂದೋನಲದ ಮುಖ್ಯ ಗುರಿಯೇ ಆತ್ಮವಿಮರ್ಶೆಯ ಮೂಲಕ  ಬದುಕನ್ನು ಪರಿಷ್ಕರಿಸಿಕೊಳ್ಳುವುದು ಮತ್ತು ಸಾರ್ಥಕಪಡಿಸಿಕೊಳ್ಳುವುದು. ಕಾಯಕ ಹಾಗೂ ದಾಸೋಹಗಳು ಅದಕ್ಕಿರುವ ಮಾರ್ಗಗಳು. ಮೋಕ್ಷಸಾಧನೆ ಅದಕ್ಕಿರುವ ಗುರಿ. ಬದುಕನ್ನು ಪರಿಷ್ಕರಿಸಿಕೊಳ್ಳದೆ ಕಾಯಕಕ್ಕಾಗಲೀ ದಾಸೋಹಕ್ಕಾಗಲೀ ಬೆಲೆಯೂ ಇಲ್ಲ. ಮಹತ್ವವೂ ಇಲ್ಲ. ಅಕ್ಕಮಹಾದೇವಿ  ಈ ವಚನದಲ್ಲಿ ಆಡಿರುವ ಮಾತುಗಳು ಹನ್ನೆರಡನೆಯ ಶತಮಾನದ ಸಾಮಾಜಿಕ ಬದುಕಿಗೆ ಸಂಬಂಧಿಸಿದ್ದು. ಅಂದೂ ಬದುಕನ್ನು ಪರಿಷ್ಕರಿಸಿಕೊಳ್ಳದೆ,  ಡಾಂಬಿಕತೆಯನ್ನು ಮೈಗೂಡಿಸಿಕೊಂಡು ಲೋಕದ ಜನರನ್ನು ಮೆಚ್ಚಿಸುವ ಹಾಗೂ ವಂಚಿಸುವ ಬೂಟಾಟಿಕೆಯನ್ನು ತೋರುತ್ತಿದ್ದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆಂದು ತೋರುತ್ತದೆ. ಇವರು ಒಂದೆಡೆ ತಮ್ಮನ್ನು ತಾವು ವಂಚಿಸುವುದರ ಜೊತೆಗೆ ಸಮಾಜವನ್ನೂ ವಂಚಿಸುತ್ತಿದ್ದಂತೆ ಕಂಡುಬರುತ್ತದೆ. ವೈಯಕ್ತಿಕ ಪರಿಷ್ಕಾರ, ಬೌದ್ಧಿಕ ಸುಧಾರಣೆ, ವಿವೇಚನಾಯುಕ್ತ ಬದುಕು, ಸಾಮಾಜಿಕ ಕಾಳಜಿ, ಸಮುದಾಯಪ್ರಜ್ಞೆ ಮೊದಲಾದವುಗಳು ಮನುಷ್ಯನನ್ನು ಮೇಲ್ಮಟ್ಟಕ್ಕೆ ಒಯ್ಯುವುದರ ಜೊತೆಗೆ ಸಮಾಜದಲ್ಲಿ ಹಿರಿಯ  ಸ್ಥಾನಮಾನಗಳನ್ನು ಕಲ್ಪಿಸಿಕೊಡುತ್ತವೆ. ಆದರೆ ಇವೆಲ್ಲವೂ ಸುಲಭಸಾಧ್ಯವಲ್ಲ. ಹಾಗಾಗಿ ಸುಲಭಮಾರ್ಗಗಳ ಅನುಸರಣೆಯ ಕಡೆಗೆ ಹೆಚ್ಚಿನ ಒಲವು. ಇಂದಿನ ಆಧುನಿಕಯುಗದಲ್ಲಿ ಭಗವಂತನ ಅನುಗ್ರಹ, ಮೋಕ್ಷಪ್ರಾಪ್ತಿ ಮೊದಲಾದ ಪರಿಕಲ್ಪನೆಗಳು ಹಾಗಿರಲಿ. ಆದರೆ, ನಮ್ಮ ಬದುಕನ್ನು ನಾವೇ ಪರಿಷ್ಕರಿಸಿಕೊಳ್ಳುವುದರಿಂದ, ನಮ್ಮನ್ನು ಲೋಕಹಿತವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮಗೂ ಹಿತ, ಸಮಾಜಕ್ಕೂ ಹಿತ, ದೇಶಕ್ಕೂ ಕೂಡಾ. ಅಕ್ಕನ ಈ ಮಾತುಗಳು ಅಂದಿನ ಸಾಮಾಜಿಕ ಆಂದೋಲನದ ಸಂದರ್ಭದಲ್ಲಿ ಮಾತ್ರ ಅರ್ಥವತ್ತಾಗಿರದೆ ಇಂದಿಗೂ ಇಂದಿನ ಸಮಾಜದ ಸ್ಥಿತಿಗತಿಗಳಿಗೂ ಅನ್ವಯಿಸುತ್ತಿರುವುದನ್ನು ಪರಿಭಾವಿಸಿದರೆ ಆಕೆಯ ಮಾತುಗಳ ಸಾರ್ವಕಾಲಿಕತೆ ಎಷ್ಟು ಎಂಬುದು ಅರಿವಾಗುತ್ತದೆ.

ಡಾ. ವಸಂತ್ ಕುಮಾರ್, ಉಡುಪಿ.

*******   

Leave a Reply

Your email address will not be published. Required fields are marked *