ಕ್ರೀಯನರಿದವಂಗೆ ಗುರುವಿಲ್ಲ
ಆಚಾರವನರಿದವಂಗೆ ಲಿಂಗವಿಲ್ಲ
ಉತ್ಪತ್ತಿ ಸ್ಥಿತಿ ಲಯವನರಿದವಂಗೆ ಜಂಗಮವಿಲ್ಲ
ಪರಬ್ರಹ್ಮವನರಿದವಂಗೆ ಸರ್ವೇಂದ್ರಿಯವಿಲ್ಲ
ತನ್ನನರಿದವಂಗೆ ಹಿಂದೆ ಮುಂದೆ ಎಂಬುದೊಂದೂ
ಇಲ್ಲವೆಂದ ಅಂಬಿಗರ ಚೌಡಯ್ಯ
ವಚನದ ಅನ್ವಯಕ್ರಮ:
ಕ್ರೀಯನ್ ಅರಿದವಂಗೆ ಗುರುವಿಲ್ಲ, ಆಚಾರವನ್ ಅರಿದವಂಗೆ ಲಿಂಗವಿಲ್ಲ, ಉತ್ಪತ್ತಿ ಸ್ಥಿತಿ ಲಯವನ್ ಅರಿದವಂಗೆ ಜಂಗಮವಿಲ್ಲ, ಪರಬ್ರಹ್ಮವನ್ ಅರಿದವಂಗೆ ಸರ್ವೇಂದ್ರಿಯವಿಲ್ಲ, ತನ್ನನ್ ಅರಿದವಂಗೆ ಹಿಂದೆ ಮುಂದೆ ಎಂಬುದು ಒಂದೂ ಇಲ್ಲ ಎಂದ ಅಂಬಿಗರ ಚೌಡಯ್ಯ.
ಪದ-ಅರ್ಥ:
ಕ್ರೀಯನ್-ಕ್ರಿಯೆಯನ್ನು, ಕಾರ್ಯವನ್ನು; ಅರಿದವಂಗೆ-ತಿಳಿದವನಿಗೆ, ಅರಿತವನಿಗೆ; ಉತ್ಪತ್ತಿ-ಹುಟ್ಟು, ಸೃಷ್ಟಿ; ಸ್ಥಿತಿ-ಇರುವಿಕೆ, ಅಸ್ತಿತ್ವ; ಲಯ-ನಾಶ; ಪರಬ್ರಹ್ಮ-ಸೃಷ್ಟಿಯ ಮೂಲತತ್ತ್ವ
ವ್ಯಕ್ತಿಯೊಬ್ಬ ಕೇವಲ ಹುಟ್ಟಿ ಬೆಳೆದು ಸಾಯುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ, ಹುಟ್ಟಿನಿಂದ ಸಾಯುವಲ್ಲಿಯವರೆಗೆ ತನ್ನನ್ನು ತಾನು ಪರಿಪೂರ್ಣಗೊಳಿಸುವುದಕ್ಕೆ ಪ್ರಯತ್ನಿಸಲೇಬೇಕು. ಹಾಗಿದ್ದರೆ ಮಾತ್ರ ಸಮಾಜದಲ್ಲಿ ಆತನಿಗೊಂದು ಸ್ಥಾನ, ಮಾನ, ಗೌರವ ಎಲ್ಲವೂ ಸಲ್ಲುತ್ತದೆ. ಈ ಹಿನ್ನೆಲೆಯನ್ನಿಟ್ಟುಕೊಂಡು ಅಂಬಿಗರ ಚೌಡಯ್ಯ ಈ ವಚನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ನಿಟ್ಟಿನಲ್ಲಿ ತನ್ನನ್ನು ತಾನು ಅರಿತವನಿಗೆ ಯಾವ ಪ್ರತಿಬಂಧವೂ ಇರುವುದಿಲ್ಲ ಎಂಬುದನ್ನು ನಾಲ್ಕು ದೃಷ್ಟಾಂತಗಳ ಮೂಲಕ ವಿವರಿಸಿದ್ದಾನೆ.
ಮೊದಲನೆಯದು, ಒಬ್ಬ ವ್ಯಕ್ತಿಗೆ ತಾನು, ತನ್ನ ಅರಿವು, ತನ್ನ ಇತಿಮಿತಿಗಳು, ತನ್ನ ಕರ್ತವ್ಯ, ತನ್ನ ಆಂತರ್ಯದ ತಿಳಿವಳಿಕೆ ಮೊದಲಾದವುಗಳ ಅರಿವು ಇರುವುದಾದರೆ ಆತನಿಗೆ ಗುರುವಿನ ಅವಶ್ಯಕತೆಯಿಲ್ಲ. ಅಥವಾ ಇನ್ನೊಂದರ್ಥದಲ್ಲಿ ಅವನಿಗೆ ಗುರುವೇ ಇಲ್ಲ. ಎರಡನೆಯದು, ಮಾತು ಹಾಗೂ ಅದರ ಮಹತ್ವ, ಅದರ ಯುಕ್ತಾಯುಕ್ತತೆ ಹಾಗೂ ಅರ್ಥ, ನಡೆಗೂ ನುಡಿಗೂ ಇರಬೇಕಾದ ಸಾಮರಸ್ಯ, ಬದುಕು ಹಾಗೂ ಅದಕ್ಕೆ ಸಂಬಂಧಿಸಿದ ಆಚಾರ-ವಿಚಾರಗಳು ಹಾಗೂ ಅವುಗಳ ಅವಶ್ಯಕತೆ ಮತ್ತು ಅನುಸರಣೆ ಮೊದಲಾದವುಗಳ ಅರಿವು ಇರುವುದಾದರೆ ಅವನಿಗೆ ಲಿಂಗಧಾರಣೆಯ ಅವಶ್ಯಕತೆಯಿಲ್ಲ. ಅಥವಾ ಇನ್ನೊಂದರ್ಥದಲ್ಲಿ ಆತನಿಗೆ ಲಿಂಗಧಾರಣೆಯೇ ಇಲ್ಲ. ಮೂರನೆಯದು, ಸೃಷ್ಟಿ, ಸ್ಥಿತಿ ಹಾಗೂ ಲಯವೆಂಬ ಪ್ರಕೃತಿಯ ಮೂರು ನಿಯಮಗಳನ್ನು, ಅದರ ಆದ್ಯಂತಗಳನ್ನು, ಅದರ ರಹಸ್ಯವನ್ನು ಅರಿತಿರುವುದಾದರೆ ಆತನಿಗೆ ಜಂಗಮತನದ ಅವಶ್ಯಕತೆಯಿಲ್ಲ. ಅಥವಾ ಇನ್ನೊಂದರ್ಥದಲ್ಲಿ ಆತನಿಗೆ ಜಂಗಮವೇ ಇಲ್ಲ. ನಾಲ್ಕನೆಯದು, ಸೃಷ್ಟಿ, ಅದರ ಮೂಲ, ಅದರ ರಹಸ್ಯ, ಇವೆಲ್ಲವುಗಳಿಗೆ ಮೂಲವಾಗಿರುವ ಪರಬ್ರಹ್ಮವನ್ನು ಅರಿತುಕೊಂಡರೆ, ಹಾಗೂ ಆ ಮೂಲಕ ಭವಬಂಧನಗಳನ್ನು ಕಳಚಿಕೊಳ್ಳುವ ಅರ್ಹತೆಯನ್ನು ಪಡೆದುಕೊಳ್ಳುವುದಾದರೆ ಅವನಿಗೆ ಸರ್ವೇಂದ್ರಿಯಗಳ ಅವಶ್ಯಕತೆಯಿಲ್ಲ. ಅಥವಾ ಇನ್ನೊಂದರ್ಥದಲ್ಲಿ ಆತನಿಗೆ ಸರ್ವೇಂದ್ರಿಯವೇ ಇಲ್ಲ. ಹಾಗಾಗಿ ಗುರು, ಲಿಂಗ, ಜಂಗಮ ಹಾಗೂ ಪರಬ್ರಹ್ಮದ ಅರಿವಿನ ಜೊತೆಗೆ ತನ್ನನ್ನು ತಾನು ಅರಿತುಕೊಂಡರೆ ಅಂತಹವನಿಗೆ ಆದಿ ಅಂತ್ಯಗಳೆಂಬುದೇ ಇರುವುದಿಲ್ಲ ಎಂಬುದು ಅಂಬಿಗರ ಚೌಡಯ್ಯನ ನಿಲುವು.
ಗುರುವೆನಿಸಿಕೊಳ್ಳುವುದಕ್ಕೂ ಕೆಲವು ಮೂಲಭೂತವಾದ ಅರ್ಹತೆಗಳಿವೆ. ಅವುಗಳನ್ನು ಸಾಧಿಸಿಕೊಳ್ಳದೆ ಗುರುವೆನಿಸಿಕೊಳ್ಳಲಾರರು. ಆದರೆ ಗುರುವೆನಿಸಿಕೊಂಡು ಮೆರೆಯುವ ಹಂಬಲದಿಂದ ಏನನ್ನೂ ಅರಿಯಲು ಪ್ರಯತ್ನಿಸದವನು, ಅರಿತುಕೊಳ್ಳುವ ಹಂಬಲವೇ ಇಲ್ಲದವನು ಗುರುವೆನಿಸಿಕೊಳ್ಳುವುದು; ತನ್ನ ಇತಿಮಿತಿಗಳನ್ನು ಅರ್ಥೈಸಿಕೊಳ್ಳದೆ, ತನ್ನ ಆಂತರ್ಯವನ್ನು ತಾನರಿಯದೆ ಅನ್ಯರಿಗೆ ಉಪದೇಶಿಸುವುದು; ಉತ್ತಮ ನಡೆ-ನುಡಿಗಳಿಲ್ಲದೆ, ನುಡಿದಂತೆ ನಡೆಯಿಲ್ಲದೆ, ಆಚಾರ-ವಿಚಾರಗಳಿಲ್ಲದೆ ಲಿಂಗಧಾರಿ ಎನಿಸಿಕೊಂಡು ಅನ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುವುದು; ಹುಟ್ಟು-ಸಾವುಗಳ, ಬದುಕು-ವೈರಾಗ್ಯಗಳ ಸೂಕ್ಷ್ಮಗಳನ್ನು ಅರಿತುಕೊಳ್ಳದೆ, ಅರಿಯಲು ಪ್ರಯತ್ನಿಸದೆ ಜಂಗಮನೆನಿಸಿಕೊಳ್ಳುವುದು ಇವೆಲ್ಲವೂ ಡಾಂಬಿಕತೆಯನ್ನು ಸೂಚಿಸುತ್ತವೆ. ಈ ರೀತಿಯಲ್ಲಿ ಡಾಂಬಿಕತೆಯನ್ನು ಮೈಗೂಡಿಸಿಕೊಂಡವನು ಸದ್ಭಕ್ತನೆನಿಸಿಕೊಳ್ಳಲಾರ ಎಂಬುದು ಅಂಬಿಗರ ಚೌಡಯ್ಯನ ಅಭಿಪ್ರಾಯ.
ಬದುಕಿನಲ್ಲಿ ಎಲ್ಲದಕ್ಕೂ ಮೂಲ ಮಾತು, ಒಳಿತಿಗೂ ಕೆಡುಕಿಗೂ ಕೂಡಾ. “ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು” ಎಂಬುದು ಹಿರಿಯರ ಅನುಭವದ ಮಾತು. ಹಾಗಾಗಿ ಮಾತಾಡುವ ಮೊದಲೇ ಮಾತಿನ ಮಹತ್ವ, ಅದರ ಇತಿಮಿತಿ, ಪರಿಣಾಮಗಳ ಬಗ್ಗೆ ತಿಳಿದಿರಬೇಕು. ಲೋಕದಲ್ಲಿ ಪ್ರತಿಯೊಬ್ಬರಿಗೂ ಮಾತು ಮತ್ತು ಅದರ ಅನುಸರಣೆ ಅತ್ಯಂತ ಮುಖ್ಯ. ಶಿವಭಕ್ತರಿಗಂತೂ ಅದು ಇನ್ನೂ ಉನ್ನತವಾದುದು. ಮಾತು ಕೂಡಾ ಶಿವಾನುಗ್ರಹಕ್ಕೆ ಇರುವ ಒಂದು ಮಾರ್ಗ. ಮಾತು ಆಡುವವನ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ. ತಿಳಿವಳಿಕೆಯನ್ನು ನೀಡುತ್ತದೆ. ಬದುಕನ್ನು ಸಾರ್ಥಕಗೊಳಿಸುತ್ತದೆ. ಆಚಾರವನ್ನು ಕಲಿಸುತ್ತದೆ. ವಿಚಾರವಂತರನ್ನಾಗಿ ಮಾಡುತ್ತದೆ. ಮಾತಿನಲ್ಲಿ ಸಾಧಿಸುವ ಪರಿಪೂರ್ಣತೆಯು ಲಿಂಗಧಾರಣೆಗಿಂತ ಮಿಗಿಲು ಎಂಬುದು ಚೌಡಯ್ಯನ ನಿಲುವು.
ಮನುಷ್ಯನಾಗಿ ಹುಟ್ಟಿದ ಮೇಲೆ ಸದ್ಭಕ್ತನೆನಿಸಿಕೊಳ್ಳಬೇಕಾದರೆ ಕ್ರಿಯೆ, ಆಚಾರ, ವಿಚಾರ, ಹುಟ್ಟು-ಸಾವು, ಹಾಗೂ ಸೃಷ್ಟಿ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಸ್ವಂತವಾಗಿ ಏನನ್ನೂ ಸಾಧಿಸಿಕೊಳ್ಳದೆ, ಗುರುಮುಖೇನವೂ ತಿಳಿದುಕೊಳ್ಳದೆ ಯಾರಿಂದಲೋ ತಿಳಿದುಕೊಂಡಿದ್ದನ್ನು ತಾನು ಅನುಸರಿಸಲು ಪ್ರಯತ್ನಿಸುವುದಾದರೆ ಅಂತಹ ವ್ಯಕ್ತಿಗಳಿಗೆ ಗುರು, ಲಿಂಗ, ಜಂಗಮಗಳ ಅವಶ್ಯಕತೆ ಇರುತ್ತದೆ. ಆದರೆ ಸ್ವಪಯತ್ನದಿಂದ ಇವೆಲ್ಲವನ್ನೂ ಅರಿತುಕೊಳ್ಳತೊಡಗಿದ ಮೇಲೆ ಗುರು, ಲಿಂಗ, ಜಂಗಮಗಳ ಅವಶ್ಯಕತೆ ಒದಗುವುದಿಲ್ಲ ಎಂಬುದನ್ನು ಅಂಬಿಗರ ಚೌಡಯ್ಯ ಸ್ಪಷ್ಟಪಡಿಸಿದ್ದಾನೆ.
ಅಂಬಿಗರ ಚೌಡಯ್ಯನ ಪ್ರಕಾರ ಪ್ರತಿಯೊಬ್ಬರೂ ಸ್ವಪ್ರಯತ್ನದಿಂದ ಸಾಧ್ಯವಾದಷ್ಟು ಅರಿತುಕೊಳ್ಳುವುದಕ್ಕೆ, ಹಾಗೆ ಅರಿತುಕೊಂಡುದನ್ನು ಒಳಿತಿಗೆ ಬಳಸಿಕೊಳ್ಳುವುದಕ್ಕೆ, ತನ್ನ ನಡೆನುಡಿಗಳ ಮರ್ಮವನ್ನು ಅರಿತುಕೊಂಡು ಆಡುವುದಕ್ಕೆ, ಕಾಯಕವನ್ನನುಸರಿಸಿಕೊಂಡು ಲೋಕೋಪಕಾರಿಯಾಗುವುದಕ್ಕೆ, ಡಾಂಬಿಕತೆಯನ್ನು ಬಿಟ್ಟು ಲೋಕೋತ್ತರವಾದ ನಡವಳಿಕೆಯನ್ನು ಮೈಗೂಡಿಸಿಕೊಳ್ಳುವುದಕ್ಕೆ, ಒಟ್ಟಿನಲ್ಲಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಹಾಗಿದ್ದರೆ ಮಾತ್ರ ಸಮಾಜಸುಧಾರಣೆಯಲ್ಲಿ ಕಿಂಚಿತ್ ಸೇವೆ ಸಲ್ಲುತ್ತದೆ.
ಆಧುನಿಕ ಕಾಲದಲ್ಲಿಯೂ ಏನನ್ನೂ ಅರಿತುಕೊಳ್ಳದೆ ಗುರುಸ್ಥಾನಕ್ಕೇರಿದವರು, ಯಾವ ಅರ್ಹತೆಯೂ ಇಲ್ಲದೆ ಉಪದೇಶಿಸುವವರು; ಉತ್ತಮ ನಡೆ-ನುಡಿಗಳಿಲ್ಲದೆ, ಆಚಾರ-ವಿಚಾರಗಳಿಲ್ಲದೆ ಹಿರಿಯರೆನಿಸಿಕೊಳ್ಳುವರು; ಸೃಷ್ಟಿ, ಸ್ಥಿತಿ, ಲಯಗಳ ಬಗ್ಗೆ ಏನೂ ಅರಿಯದೆ, ನೈತಿಕವಾದುದೇನನ್ನೂ ಅನುಸರಿಸದೆ, ತಾಸುಗಟ್ಟಲೆ ಪ್ರವಚನ ನೀಡುವವರು; ಅನೈತಿಕ ಪ್ರವೃತ್ತಿಗಳಲ್ಲಿ ತೊಡಗಿಕೊಂಡು ಹೊರಗೆ ನೀತಿವಂತರೆಸಿಕೊಂಡು ಮೆರೆಯುವವರು ಲೋಕದಲ್ಲಿ ತುಂಬಿತುಳುಕಾಡುತ್ತಿದ್ದಾರೆ. ಆ ಮೂಲಕ ಸಾಮಾಜಿಕ ಅಸಮತೋಲನಕ್ಕೆ, ಅಧಃಪತನಕ್ಕೆ ಕಾರಣರಾಗುತ್ತಿದ್ದಾರೆ. ಹಾಗಾಗಿ ಅಂಬಿಗರ ಚೌಡಯ್ಯನ ಮಾತು ಅಂದಿಗೆ ಮಾತ್ರವಲ್ಲ, ಇಂದಿಗೆ ಹೆಚ್ಚು ಪ್ರಸ್ತುತ ಎನಿಸುತ್ತದೆ.
ಡಾ. ವಸಂತ್ ಕುಮಾರ್, ಉಡುಪಿ
*******