ಸಾಹಿತ್ಯಾನುಸಂಧಾನ

ಕರ್ಣಾವಸಾನಂ – ಪಂಪ – ಭಾಗ – ೧

(ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಕಾಂ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ – ಭಾಗ-೧)

ಕವಿ-ಕಾವ್ಯ ಪರಿಚಯ:

            ಕನ್ನಡದ ಆದಿಕವಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಪಂಪನ ಕಾಲ ಕ್ರಿ. ಶ. ಸು. ೯೦೩. ಪಂಪನ ಪೂರ್ವಜರು ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾದಲ್ಲಿದ್ದವರು. ಇದು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಪ್ರಸಕ್ತ ಇದು ತೆಲಂಗಾಣದ ಕರೀಂ ನಗರ ಜಿಲ್ಲೆಯಲ್ಲಿದ್ದು ವೇಮುಲವಾಡ ಎಂದು ಪ್ರಸಿದ್ಧವಾಗಿದೆ.  ಪಂಪನ ತಂದೆ ಭೀಮಪ್ಪಯ್ಯ, ತಾಯಿ ಅಬ್ಬಣಬ್ಬೆ. ಪಂಪ ತಾಯಿಯ ತವರೂರಾದ ಇಂದಿನ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಎಂಬಲ್ಲಿ ಜನಿಸಿದವನು. ಜಿನವಲ್ಲಭ ಪಂಪನ ಸಹೋದರ. ಪಂಪನ ಹಿರಿಯರು ಬ್ರಾಹ್ಮಣ ಕುಲದವರು. ಆತನ ತಂದೆ ಭೀಮಪ್ಪಯ್ಯ ಜೈನಧರ್ಮವನ್ನು ಸ್ವೀಕರಿದ್ದರಿಂದ ಪಂಪ ಜೈನನಾದ. ದೇವೇಂದ್ರಮುನಿ ಪಂಪನ ಗುರು. ವೇಮುಲವಾಡ ಚಾಲುಕ್ಯಶಾಖೆಯ ಇಮ್ಮಡಿ ಅರಿಕೇಸರಿಯ ಆಸ್ಥಾನವನ್ನು ಸೇರಿದ ಪಂಪ ಆತನ ಆಸ್ಥಾನದಲ್ಲಿ ಕವಿಯೂ ಆತನ ದಂಡನಾಯಕನೂ ಆಗಿ ಸೇವೆಸಲ್ಲಿಸಿದ್ದಾನೆ.

            ಪಂಪ ಕನ್ನಡ ಹಾಗೂ ಸಂಸ್ಕೃತಗಳೆರಡರಲ್ಲಿಯೂ ಪಾಂಡಿತ್ಯವನ್ನು ಸಂಪಾದಿಸಿದವನು. “ಆದಿಪುರಾಣ” ಪಂಪನ ಮೊದಲ ಕಾವ್ಯ. ಇದು ಜಿನಸೇನಾಚಾರ್ಯರ “ಪೂರ್ವಪುರಾಣ”ವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಧಾರ್ಮಿಕ ಕಾವ್ಯ. ಜೈನಧರ್ಮದ ಆದಿತೀರ್ಥಂಕರನಾದ ವೃಷಭದೇವ ಹಾಗೂ ಆತನ ಮಕ್ಕಳಾದ ಭರತ ಹಾಗೂ ಬಾಹುಬಲಿಯರ ಕಥೆಯನ್ನು ಈ ಕಾವ್ಯದಲ್ಲಿ ಪಂಪ ನಿರೂಪಿಸಿದ್ದಾನೆ. “ವಿಕ್ರಮಾರ್ಜುನ ವಿಜಯಂ” ಎಂಬುದು ಪಂಪನ ಎರಡನೆಯ ಕಾವ್ಯ. ಇದು ಮಹಾಭಾರತದ ಕಥೆಯನ್ನು ಒಳಗೊಂಡಿದ್ದು, ಮುಖ್ಯವಾಗಿ ವ್ಯಾಸಭಾರತವನ್ನು ಆಧರಿಸಿದೆ. ಪಂಪ ಲೌಕಿಕ ಹಾಗೂ ಆಗಮಿಕಗಳೆಂಬ ಎರಡು ಕಾವ್ಯಮಾರ್ಗಗಳನ್ನು ಅನುಸರಿಸಿರುವಂತೆ ಹೇಳಿಕೊಂಡಿದ್ದಾನೆ. ಲೌಕಿಕಕಾವ್ಯವಾಗಿ “ವಿಕ್ರಮಾರ್ಜುನ ವಿಜಯಂ” ಎಂಬ ಕಾವ್ಯವನ್ನೂ ಹಾಗೂ ಆಗಮಿಕಕಾವ್ಯವಾಗಿ “ಆದಿಪುರಾಣ” ಎಂಬ ಕಾವವನ್ನೂ ರಚಿಸಿದ್ದಾನೆ. ವಿಕ್ರಮಾರ್ಜುನ ವಿಜಯಂ ಎಂಬುದು ಕನ್ನಡದಲ್ಲಿ ಉಪಲಬ್ಧವಾದ ಮೊದಲ ಕಾವ್ಯವಾದುದರಿಂದ ಇದು ಕನ್ನಡದ ಆದಿಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿಯೇ ಪಂಪ ಕನ್ನಡದ ಆದಿಕವಿ ಎಂದು ಕರೆಸಿಕೊಂಡಿದ್ದಾನೆ.

ಕಾವ್ಯಭಾಗದ ಹಿನ್ನೆಲೆ:

            ಈ ಕಾವ್ಯಭಾಗವನ್ನು ಪಂಪನ “ವಿಕ್ರಮಾರ್ಜುನ ವಿಜಯಂ” ಕಾವ್ಯದ ಹನ್ನೆರಡನೆಯ ಆಶ್ವಾಸದಿಂದ ಆಯ್ದುಕೊಳ್ಳಲಾಗಿದೆ. ಪಾಂಡವರು ತಮ್ಮ ಅಜ್ಞಾತವಾಸವನ್ನು ಪೂರೈಸಿದ ಮೇಲೆ ತಮ್ಮ ರಾಜ್ಯವನ್ನು ಮರಳಿಪಡೆದುಕೊಳ್ಳಲು  ಕೃಷ್ಣನ ಮೂಲಕ ಪ್ರಯತ್ನಿಸಿದ ಸಂಧಾನಕ್ಕೆ ದುರ್ಯೋಧನ ಒಪ್ಪದೆ ಯುದ್ಧವನ್ನೇ ನಿರ್ಣಯಿಸಿದನು. ಇದರ ಪರಿಣಾಮವಾಗಿ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರ ಯುದ್ಧ ಪ್ರಾರಂಭವಾಯಿತು. ದುರ್ಯೋಧನ ತನ್ನ ಸೇನೆಗೆ ಮೊದಲ ಸೇನಾಧಿಪತಿಯನ್ನಾಗಿ ಭೀಷ್ಮನಿಗೆ ಪಟ್ಟಕಟ್ಟಿದನು. ಭೀಷ್ಮ ಒಂಬತ್ತು ದಿನಗಳ ಕಾಲ ಹೋರಾಡಿ ಪಾಂಡವರ ಅರ್ಧ ಸೇನೆಯನ್ನೇ ಧೂಳೀಪಟ ಮಾಡಿದಾಗ ಕೃಷ್ಣನ ಸಲಹೆಯಂತೆ  ಯುದ್ಧದ ಹತ್ತನೆಯ ದಿನ ಪಾಂಡವರು ಶಿಖಂಡಿಯನ್ನು ಮುಂದಿಟ್ಟುಕೊಂಡು ಯುದ್ಧಮಾಡಿ ಭೀಷ್ಮನನ್ನು ಶರಶಯ್ಯಾಗತನಾಗುವಂತೆ ಮಾಡಿದರು. ಅನಂತರ ದುರ್ಯೋಧನ ದ್ರೋಣಾಚಾರ್ಯನಿಗೆ ಸೇನಾಧಿಪತಿಯ ಪಟ್ಟವನ್ನು ಕಟ್ಟಿದನು. ದ್ರೋಣ ನಾಲ್ಕು ದಿನಗಳ ಕಾಲ ಸೇನಾಧಿಪತ್ಯವನ್ನು ನಿರ್ವಹಿಸಿ ಮರಣಹೊಂದಿದನು. ಅನಂತರ ದುರ್ಯೋಧನ ಕರ್ಣನಿಗೆ ಸೇನಾಧಿಪತಿಯ ಪಟ್ಟವನ್ನು ಕಟ್ಟಿದನು. ಮೊದಲನೆಯ ದಿನ ಎಷ್ಟೇ ಹೋರಾಡಿದರೂ ಪಾಂಡವರಲ್ಲಿ ಒಬ್ಬನನ್ನೂ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಕರ್ಣ ದುರ್ಯೋಧನನಲ್ಲಿ ಮದ್ರ ದೇಶಾಧಿಪತಿ ಶಲ್ಯನನ್ನು ನನ್ನ ರಥಕ್ಕೆ ಸಾರಧಿಯನ್ನಾಗಿ ಮಾಡು ಇಂದು ಸೂರ್ಯಾಸ್ತದೊಳಗೆ ಯುದ್ದವನ್ನು ಗೆದ್ದು ಕೊಡುತ್ತೇನೆ ಎಂದು ಹೇಳಿದಾಗ ದುರ್ಯೋಧನ ಶಲ್ಯನನ್ನು ಬಗೆಬಗೆಯಿಂದ ಒಪ್ಪಿಸಿದನು. ಆದರೆ ಶಲ್ಯ ತನ್ನ ಮಾತನ್ನು ಕರ್ಣ ಮೀರಿದರೆ ತಾನು ರಥದಿಂದ ನಿರ್ಗಮಿಸುತ್ತೇನೆ ಎಂಬ ಷರತ್ತಿನೊಂದಿಗೆ ಸಾರಥಿಯಾಗಲು ಒಪ್ಪಿದನು. ಆದರೆ ಕರ್ಣ ಸರ್ಪಾಸ್ತ್ರದ ಪ್ರಯೋಗದ ಸಂದರ್ಭದಲ್ಲಿ ಶಲ್ಯನ ಮಾತುಗಳನ್ನು ಮೀರಿದ ಕರ್ಣನ ಮೇಲೆ ಸಿಟ್ಟುಗೊಂಡು ರಥದಿಂದ ಇಳಿಯಲು ಸಿದ್ಧನಾದನು.  ಮುಂದಿನ ಕಥಾಭಾಗ ಈ ಪದ್ಯಭಾದಲ್ಲಿ ವರ್ಣಿತವಾಗಿದೆ.

ಕಾವ್ಯಭಾಗ

ಗದ್ಯ: ಆಗಳಂಗರಾಜಂಗೆ ಶಲ್ಯಂ ಕಿನಿಸಿ ಮುಳಿಸಿನೊಳೆ ಕಣ್ಗಾಣದಿಂತಪ್ಪೇಕ ಗ್ರಾಹಿಗಮೊರಂಟಂಗಂ ರಥಮನೆಸಗೆನೆಂದು ವರೂಥದಿಂದಿೞಿದು ಪೋಗೆ-

ಗದ್ಯದ ಅನ್ವಯಕ್ರಮ:

ಆಗಳ್ ಶಲ್ಯಂ ಅಂಗರಾಜಂಗೆ ಕಿನಿಸಿ ಮುಳಿಸಿನೊಳೆ ಕಣ್ ಕಾಣದ ಇಂತಪ್ಪ ಏಕಗ್ರಾಹಿಗಂ ಒರಂಟಂಗಂ ರಥಮನ್ ಎಸಗೆನ್ ಎಂದು ವರೂಥದಿಂದ ಇೞಿದು ಪೋಗೆ-

ಪದ-ಅರ್ಥ:

ಆಗಳ್-ಆ ಸಮಯದಲ್ಲಿ, ಅಷ್ಟರಲ್ಲಿ;  ಅಂಗರಾಜಂಗೆ-ಅಂಗದೇಶಾಧಿಪತಿಯಾದ ಕರ್ಣನಿಗೆ;  ಶಲ್ಯಂ-ಶಲ್ಯ ಭೂಪತಿಯು;  ಕಿನಿಸಿ-ಕೋಪಗೊಂಡು;  ಮುಳಿಸಿನೊಳೆ-ಸಿಟ್ಟಿನಿಂದಲೇ;  ಕಣ್ಗಾಣದ-ಕಣ್ಣುಕಾಣದ, ವಿವೇಕವಿಲ್ಲದ;  ಇಂತಪ್ಪ-ಇಂತಹ;  ಏಕಗ್ರಾಹಿಗಂ –ಹಠಮಾರಿಗೆ;  ಒರಂಟಂಗಂ-ಒರಟನಿಗೆ;  ರಥಮನೆಸಗೆನ್– ರಥವನ್ನು ಓಡಿಸಲಾರೆ;  ವರೂಥದಿಂದ-ರಥದಿಂದ;  ಇೞಿದು ಪೋಗೆ-ಇಳಿದು ಹೊರಟುಹೋದನು.

            ಅಷ್ಟರಲ್ಲಿ ಸೇನಾಧಿಪತಿಯಾದ ಅಂಗದೇಶಾಧಿಪತಿ ಕರ್ಣನ ಮೇಲೆ ಸಾರಥಿಯಾದ  ಮದ್ರದೇಶಾಧಿಪತಿ ಶಲ್ಯನು ಕೋಪಗೊಂಡು ಸಿಟ್ಟಿನಿಂದಲೇ ಕಣ್ಣುಕಾಣದ ಇಂತಹ ಹಠಮಾರಿಗೆ, ಮಾತು ಕೇಳದ ಒರಟನಿಗೆ ನಾನು ಸಾರಥಿಯಾಗಿ ರಥವನ್ನು ಓಡಿಸಲಾರೆ ಎಂದು ರಥದಿಂದ ಇಳಿದು ಹೋದನು.

            ಯುದ್ಧರಂಗದಲ್ಲಿ ಸರ್ಪಾಸ್ತ್ರವನ್ನು ಅರ್ಜುನನಿಗೆ ಗುರಿಯಿಡುವುದರ ಬಗೆಗಿನ ವಿಚಾರದಲ್ಲಿ ಹಾಗೂ ಗುರಿತಪ್ಪಿದ ಸರ್ಪಾಸ್ತ್ರವನ್ನು ಮತ್ತೆ ಪ್ರಯೋಗಿಸುವುದರ ಬಗೆಗಿನ ವಿಚಾರದಲ್ಲಿ ಕರ್ಣನು ಶಲ್ಯನ ಮಾತುಗಳನ್ನು ಮೀರಿದಾಗ ಶಲ್ಯನು ಕರ್ಣನ ಮೇಲೆ ಅತಿಯಾಗಿ ಕೋಪಗೊಳ್ಳುತ್ತಾನೆ. ಯುದ್ಧ ನಡೆಯುತ್ತಿರುವುದು ದುರ್ಯೋಧನನ ಗೆಲುವಿಗಾಗಿಯೇ ವಿನಾ ತನ್ನ ಅಥವಾ ಕರ್ಣನ ಪ್ರತಿಷ್ಠೆಗಾಗಿ ಅಲ್ಲವೆಂಬುದು ಶಲ್ಯನ ನಿಲುವು. ದುರ್ಯೋಧನನ ಗೆಲುವಿಗಾಗಿ ತಾನು ಸಲಹೆ ನೀಡಿದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ದುರ್ಯೋಧನನನ್ನು ಸೋಲಿಸಿ  ವಿನಾ ಪಾಂಡವರನ್ನು ಗೆಲ್ಲಿಸಿಕೊಟ್ಟಂತಾಗುತ್ತದೆ. ಅನ್ಯರ ಸಲಹೆ ಸೂಚನೆ, ಮಾರ್ಗದರ್ಶನದ ಮಾತುಗಳನ್ನು ಕೇಳದ ಒರಟನೂ ಯುದ್ಧ ಪರಿಣಾಮದ ಬಗ್ಗೆ ಎಳ್ಳಷ್ಟೂ ಆಲೋಚಿಸದೆ ಹಠಮಾರಿಯೂ ಆದ  ಕರ್ಣನಿಗೆ ನಾನು ಸಾರಥಿಯಾಗಿ ರಥವನ್ನು ಓಡಿಸಲಾರೆ ಎಂದು ನಿರ್ಧರಿಸಿ ಶಲ್ಯ ಕರ್ಣನ ರಥವನ್ನು ಬಿಟ್ಟುಬಿಟ್ಟು ಹೊರಟುಹೋದನು.

 

ಅರಿಗನ ಬಟ್ಟಿನಂಬುಗಳ ಬಲ್ಸರಿ ಸೋಂಕುಗುಮೇೞಿಮೆನ್ನ ತೋ

ಳ್ನೆರಮೆನಗೆನ್ನ ಬಿಲ್ಲೆ ನೆರಮೆಂದು ವರೂಥ ತುರಂಗಮಂಗಳಂ

ತುರಿಪದೆ ತಾನೆ ಚೋದಿಸುತುಮಾರ್ದಿಸುತುಂ ಕಡಿಕೆಯ್ದು ಕಾದೆ ಭೀ

ಕರ ರಥ ಚಕ್ರಮಂ ಪಿಡಿದು ನುಂಗಿದಳೊರ್ಮೆಯೆ ಧಾತ್ರಿ ಕೋಪದಿಂ   ೧

ಪದ್ಯದ ಅನ್ವಯಕ್ರಮ:

ಅರಿಗನ ಬಟ್ಟಿನ ಅಂಬುಗಳ ಬಲ್ಸರಿ ಸೋಂಕುಗುಂ ಏೞಿಂ ಎನ್ನ ತೋಳ್ನೆರಂ, ಎನಗೆ ಎನ್ನ ಬಿಲ್ಲೆ ನೆರಂ ಎಂದು ವರೂಥ ತುರಂಗಂಗಳಂ ತುರಿಪದೆ ತಾನೇ ಚೋದಿಸುತ್ತುಂ ಆರ್ದಿಸುತುಂ, ಕಡಿಕೆಯ್ದು ಕಾದೆ ಧಾತ್ರಿ ಕೋಪದಿಂ ಭೀಕರ ರಥ ಚಕ್ರಮಂ  ಪಿಡಿದು ಒರ್ಮೆಯೆ ನುಂಗಿದಳ್.

ಪದ-ಅರ್ಥ:

ಅರಿಗನ-ಅರ್ಜುನನ;  ಬಟ್ಟಿನಂಬುಗಳ-ದುಂಡಾದ ಮೊನೆಯುಳ್ಳ ಬಾಣಗಳ;  ಬಲ್ಸರಿ-ಭೀಕರವಾದ ಮಳೆ;  ಸೋಂಕುಗುಂ-ನಾಟಬಹುದು, ಚುಚ್ಚಬಹುದು;  ಏೞಿಂ-ಎದ್ದೇಳಿ;  ಎನ್ನ ತೋಳ್ನೆರಂ-ನನ್ನ ತೋಳುಗಳೇ ನನಗೆ ನೆರವಾಗುತ್ತವೆ;  ಎನಗೆ ಬಿಲ್ಲೆ ನೆರಂ– ನನಗೆ ಬಿಲ್ಲು ನೆರವಾಗುತ್ತದೆ;  ವರೂಥ-ರಥ;  ತುರಂಗಂಗಳಂ-ಕುದುರೆಗಳನ್ನು;  ತುರಿಪದೆ-ವೇಗವಾಗಿ;  ಚೋದಿಸುತ್ತುಂ-ಓಡಿಸುತ್ತ;  ಆರ್ದಿಸುತ್ತುಂ-ಭಯಪಡಿಸುತ್ತ;  ಕಡಿಕೆಯ್ದು-ತೀವ್ರವಾಗಿ;  ಕಾದೆ-ಕಾದಾಡುತ್ತಿರಲು;  ಭೀಕರ ರಥ ಚಕ್ರಮಂ-ಭಯಂಕರವಾದ ರಥದ ಚಕ್ರವನ್ನು; ನುಂಗಿದಳ್-ಹೂತುಹೋಗುವಂತೆ ಮಾಡಿದಳು;  ಒರ್ಮೆಯೆ-ಒಮ್ಮೆಗೆ;  ಧಾತ್ರಿ-ಭೂಮಿ.

            ಶಲ್ಯಭೂಪತಿಯೇ ನೀವು ಇನ್ನೂ ಇಲ್ಲಿಯೇ ಇದ್ದರೆ ಅರ್ಜುನನ ದುಂಡಾದ ಮೊನೆಯುಳ್ಳ ಬಾಣಗಳು ಭೀಕರವಾದ ಮಳೆಯ ರೂಪದಲ್ಲಿ ನಿಮ್ಮ ಮೇಲೆ ಎರಗಬಹುದು. ಏಳಿ ಹೊರಟುಹೋಗಿ. ನನಗೆ ನನ್ನ ಈ ತೋಳುಗಳೇ ನೆರವಾಗುತ್ತವೆ. ನನಗೆ ನನ್ನ ಈ ಬಿಲ್ಲೇ ನೆರವಾಗುತ್ತದೆ ಎಂದು ಹೇಳುತ್ತ ರಥವನ್ನೂ ಕುದುರೆಗಳನ್ನೂ ತಾನೇ  ವೇಗವಾಗಿ ಓಡಿಸುತ್ತ, ವೈರಿಸೈನ್ಯವನ್ನು ಭಯಪಡಿಸುತ್ತ ತೀವ್ರವಾಗಿ ಕಾಡಾಡುತ್ತಿದ್ದಾಗ ಭೂಮಿಯು ಕರ್ಣನ ಭೀಕರವಾದ ರಥದ ಚಕ್ರವನ್ನು ಭೂಮಿಯೊಳಗೆ ಹೂತುಹೋಗುವಂತೆ ಮಾಡಿದಳು.

            ಸೇನಾಧಿಪತಿಯಾಗಿರುವ ಕರ್ಣನಿಗೆ ಸಾರಥಿಯಾಗಿರುವ ಶಲ್ಯನ ಉಪದೇಶ ಹಿಡಿಸಲಿಲ್ಲ.  ಕರ್ಣ, ರಥದಿಂದ ಎದ್ದುಹೋಗುವುದಕ್ಕೆ ಸಿದ್ಧನಾದ ಶಲ್ಯನನ್ನು ಉದ್ದೇಶಿಸಿ, ”ಹೊರಟುಹೋಗುವವರನ್ನು ನಾನು ತಡೆಯಲಾರೆ, ಅದರ ಅವಶ್ಯಕತೆಯೂ ನನಗಿಲ್ಲ. ನೀವು ಇನ್ನೂ ಇಲ್ಲಿಯೇ ಇದ್ದರೆ ಎದುರಾಳಿಯಾದ ಅರ್ಜುನನ ದುಂಡಾದ ಮೊನೆಯುಳ್ಳ ಬಾಣಗಳು ಭೀಕರವಾದ ಮಳೆಯ ರೂಪದಲ್ಲಿಯೇ ಬಂದು ನಿಮ್ಮ ಮೇಲೆ ಎರಗಬಹುದು. ಅದು ನಿಮ್ಮ ಪ್ರಾಣಕ್ಕೆ ಅಪಾಯ. ಹೋಗಿ ನಿಮ್ಮನ್ನು ರಕ್ಷಿಸಿಕೊಳ್ಳಿ. ನನಗೆ ಸಾರಥಿಯ ಅವಶ್ಯಕತೆಯಿಲ್ಲ. ನಾನು ನನ್ನ ತೋಳ್ಬಲವನ್ನು ನಂಬಿ ಯುದ್ಧರಂಗಕ್ಕೆ ಬಂದವನು.  ನಾನು ನನ್ನ ತೋಳ್ಬಲವನ್ನೇ ನಂಬಿಕೊಂಡು ಯುದ್ಧಕ್ಕೆ ಬಂದವನು. ಮಾತ್ರವಲ್ಲ, ನನ್ನ ಕೈಯಲ್ಲಿರುವ ಬಲಿಷ್ಠವಾದ ಬಿಲ್ಲನ್ನು ನಂಬಿ ಬಂದವನು. ಅವೆರಡೂ ನನಗೆ ನೆರವಾಗಿ ನನ್ನನ್ನು ಯುದ್ಧರಂಗದಲ್ಲಿ ಕಾಪಾಡುತ್ತವೆ. ನಿಮ್ಮಂಥವರ ನೆರವು ನನಗ ಅಗತ್ಯವಿಲ್ಲ” ಎಂದು ಹೇಳಿ  ಒಂದು ಕಡೆ ತನ್ನ ರಥವನ್ನೂ ಕುದುರೆಗಳನ್ನೂ ತಾನೇ ಓಡಿಸುತ್ತ, ಮತ್ತೊಂದೆಡೆ ಎದುರಾಳಿ ಸೈನ್ಯವನ್ನು ಭಯಪಡಿಸುತ್ತ ಅರ್ಜುನನೊಂದಿಗೆ ತೀವ್ರವಾಗಿ ಕಾದಾಡುತ್ತಿದ್ದಾಗಲೇ ದುರದೃಷ್ಟವೆಂಬಂತೆ ಕರ್ಣನ ರಥದ ಚಕ್ರವು ಭೂಮಿಯಲ್ಲಿ ಹೂತುಹೋಯಿತು.  ಶಲ್ಯ ಸಾರಥ್ಯವನ್ನು ಬಿಟ್ಟುಬಿಟ್ಟು ಹೊರಟುಹೋದುದು ಮೊದಲನೆಯ ಆಘಾತವಾದರೆ, ಭೀಕರವಾಗಿ ಕಾದಾಡುವಾಗಲೇ ರಥದ ಚಕ್ರ ಭೂಮಿಯಲ್ಲಿ ಹೂತುಹೋದುದು ಎರಡನೆಯ ಆಘಾತ. ಆದರೂ ಕರ್ಣ ಧೃತಿಗೆಡಲಿಲ್ಲ.   

ಗದ್ಯ: ಅಂತು ತನ್ನಂ ಮುನ್ನೆ ಮುಯ್ಯೇಳ್ ಸೂೞ್ವರಮೊಲ್ಲಣಿಗೆಯಂ ಪಿೞಿವಂತೆ ಪಿಂಡಿ ಪಿೞಿದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದಿೞಿದು ಗಾಲಿಯನೆತ್ತುವಾಗಳಿವನನೀ ಪದದೊಳ್ ಕಡಿದೊಟ್ಟದಾಗಳ್ ಗೆಲಲಾಱೆಯೆಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನಿಂತೆಂದಂ-

ಗದ್ಯದ ಅನ್ವಯಕ್ರಮ:

ಅಂತು ತನ್ನಂ ಮುನ್ನೆ ಮುಯ್ಯೇಳ್ ಸೂೞ್ವರಂ ಒಲ್ಲಣಿಗೆಯಂ ಪಿೞಿವಂತೆ ಪಿಂಡಿ ಪಿೞಿದ ಪಗೆಗೆ ರಥಚಕ್ರಮಂ ನುಂಗುವುದುಂ ರಥದಿಂದ ಇೞಿದು ಗಾಲಿಯನ್ ಎತ್ತುವಾಗಳ್ ಇವನನ್ ಈ ಪದದೊಳ್ ಕಡಿದು ಒಟ್ಟದಾಗಳ್ ಗೆಲಲಾಱೆ ಎಂದು ನುಡಿದ ಮುಕುಂದನ ನುಡಿಗೆ ಕೊಕ್ಕರಿಸಿ ಜಗದೇಕಮಲ್ಲನ್ ಇಂತೆಂದಂ.

ಪದ-ಅರ್ಥ:

ಅಂತು-ಹಾಗೆ;  ಮುನ್ನೆ-ಹಿಂದೆ;  ಮುಯ್ಯೇಳ್ ಸೂೞ್ವರಂ-ಇಪ್ಪತ್ತೊಂದು ಬಾರಿ;  ಒಲ್ಲಣಿಗೆಯಂ-ಒದ್ದೆಬಟ್ಟೆಯನ್ನು;  ಪಿೞಿವಂತೆ-ಹಿಂಡುವಂತೆ;  ಪಿಂಡಿ-ಹಿಂಡಿ;  ಪಿೞಿದ-ಹಿಸುಕಿದ;  ಪಗೆಗೆ-ಹಗೆತನಕ್ಕೆ;  ನುಂಗುವುದುಂ-ಹೂತುಹೋಗುವಂತೆ ಮಾಡಿದಾಗ;  ಗಾಲಿಯನ್-ಚಕ್ರವನ್ನು;  ಇವನನ್-ಕರ್ಣನನ್ನು;  ಈ ಪದದೊಳ್-ಈ ಸ್ಥಿತಿಯಲ್ಲಿ;  ಕಡಿದು ಒಟ್ಟದಾಗಳ್-ಕೊಂದು ಕೆಡಹದಿದ್ದರೆ;  ಗೆಲರಾಱೆ-ಗೆಲ್ಲಲು ಅಸಾಧ್ಯ;  ಮುಕುಂದ-ಕೃಷ್ಣ;  ಕೊಕ್ಕರಿಸಿ-ಅಸಹ್ಯಪಟ್ಟು;  ಜಗದೇಕಮಲ್ಲನ್-ಅರ್ಜುನನು;  ಇಂತೆಂದಂ-ಹೇಗೆ ಹೇಳಿದನು.

            ಹಾಗೆ ತನ್ನನ್ನು ಈ ಹಿಂದೆ ಇಪ್ಪತ್ತೊಂದು ಬಾರಿ ಒದ್ದೆಬಟ್ಟೆಯನ್ನು ಹಿಂಡುವಂತೆ ಹಿಂಡಿ ಹಿಸುಕಿದ ಹಗೆತನಕ್ಕೆ ಭೂಮಿಯು ಕರ್ಣನ ರಥದ ಚಕ್ರವನ್ನು ನುಂಗಿದಾಗ ಕರ್ಣನು ರಥದಿಂದ ಇಳಿದು ರಥದ ಚಕ್ರವನ್ನು ಎತ್ತುತ್ತಿರುವಾಗಲೇ ಕೃಷ್ಣನು ಅರ್ಜುನನಿಗೆ ಈ ಕರ್ಣನನ್ನು ಈ ಸ್ಥಿತಿಯಲ್ಲಿಯೇ ಕೊಂದು ಕೆಡವದಿದ್ದರೆ  ಮತ್ತೆ  ನೀನು ಆತನನ್ನು ಗೆಲ್ಲಲಾರೆ ಎಂದು ಹೇಳಿದಾಗ, ಅರ್ಜುನನು ಕೃಷ್ಣನ ಮಾತುಗಳಿಗೆ ಅಸಹ್ಯಪಟ್ಟು ಹೀಗೆಂದನು.

            ಕರ್ಣ ಈ ಹಿಂದೆ ದುರ್ಯೋಧನನ ಮೆಚ್ಚುಗೆಗಾಗಿ ದಿಗ್ವಿಜಯವನ್ನು ಕೈಗೊಂಡು ಇಪ್ಪತ್ತೊಂದು ಬಾರಿ ಒದ್ದೆಬಟ್ಟೆಯನ್ನು ಹಿಂಡುವಂತೆ ಭೂಮಿಯನ್ನು ಹಿಂಡಿ ಹಿಸುಕಿದ್ದನು.  ಅದರಿಂದಾಗಿ ಭೂಮಿಗೆ ಕರ್ಣನ ಮೇಲೆ ಅತಿಯಾದ ಕೋಪವಿತ್ತು. ಜೊತೆಗೆ ಹಿಂದೆ ಶಸ್ತ್ರಾಭ್ಯಾಸದ ಕಾಲದಲ್ಲಿ ಕರ್ಣನು ಬ್ರಾಹ್ಮಣನೊಬ್ಬನ ಗೋವನ್ನು ಕೊಂದಿದ್ದನು. ಅದರಿಂದ ಆ ಬ್ರಾಹ್ಮಣನು ಕರ್ಣನಿಗೆ, ಆಪತ್ಕಾಲದಲ್ಲಿ ನಿನ್ನ ರಥವು ಭೂಮಿಯಲ್ಲಿ ಹೂತುಹೋಗಲಿ ಎಂದು ಶಪಿಸಿದ್ದನು. ಈಗ ಯುದ್ಧರಂಗದಲ್ಲಿ ಅರ್ಜುನನೊಡನೆ ಕಾದಾಡುತ್ತಿದ್ದಾಗಲೇ ಏಕಕಾಲದಲ್ಲಿ ಭೂಮಿಯ ಸಿಟ್ಟಿಗೂ ಬ್ರಾಹ್ಮಣನ ಶಾಪಕ್ಕೂ ಗುರಿಯಾಗಿ ಕರ್ಣನ ರಥ ಭೂಮಿಯಲ್ಲಿ ಹೂತುಹೋಯಿತು. ಯುದ್ಧವನ್ನು ಮುಂದುವರಿಸಬೇಕಾದರೆ ರಥದ ಚಕ್ರವನ್ನು ಮೇಲೆತ್ತಲೇಬೇಕು.  ಅದಕ್ಕಾಗಿ ಕರ್ಣ ರಥದಿಂದ ಕೆಳಗಿಳಿದು ರಥದ ಚಕ್ರಕ್ಕೆ ಹೆಗಲನ್ನು ಕೊಟ್ಟು ಎತ್ತುತ್ತಿರುವಾಗಲೇ ಕೃಷ್ಣ ಅರ್ಜುನನಿಗೆ ಕರ್ಣನನ್ನು ತೋರಿಸಿ, ”ನೋಡು ಅರ್ಜುನ, ನೀನು ಕರ್ಣನನ್ನು ಈ ಸ್ಥಿತಿಯಲ್ಲಿ ಹೊಡೆದು ಉರುಳಿಸದಿದ್ದರೆ ಮತ್ತೆ ಎಂದೂ ಸುಲಭವಾಗಿ ನೀನು ಆತನನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ತಡಮಾಡಬೇಡ’ ಎಂದಾಗ ಅರ್ಜುನನಿಗೆ ಕೃಷ್ಣನ ಮಾತುಗಳನ್ನು ಕೇಳಿ ಅಸಹ್ಯವೆನಿಸಿತು. ಎದುರಾಳಿಯ ಕೈಯಲ್ಲಿ ಶಸ್ತ್ರವೇ ಇಲ್ಲದಿದ್ದಾಗ ಆತನನ್ನು ಕೊಲ್ಲುವುದು ಯುದ್ಧನಿಯಮದ ಪ್ರಕಾರ ಅಪರಾಧ ಎಂಬುದು ಅರ್ಜುನನ ನಿಲುವು.

 

ಬಱುವಂ ಸಾರಥಿಯಿಲ್ಲ ಮೆಯ್ಗೆ ಮಱೆಯುಂ ತಾನಿಲ್ಲದೆಂತೀಗಳಾ

ನಿಱಿವೆಂ ನೋಡಿರೆ ಮತ್ತಮೊಂದನಿಸಲುಂ  ಕೆಯ್ಯೇೞದೇಕೆಂದುಮಾ

ನಱಿಯೆ ಕೂರ್ಮೆಯೆ ಮಿಕ್ಕು ಬಂದಪುದಿದರ್ಕೇಗೆಯ್ವೆನೇನೆಂಬೆನಾಂ

ಮಱೆದೆಂ ಮುನ್ನಿನದೊಂದು ವೈರಮನಿದಿಂತೇ ಕಾರಣಂ ಭೂಧರಾ  ೨

ಪದ್ಯದ ಅನ್ವಯಕ್ರಮ:

ಬಱುವಂ, ಸಾರಥಿ ಇಲ್ಲ, ಮೆಯ್ಗೆ ಮಱೆಯುಂ ತಾನ್ ಇಲ್ಲದೆ ಅದು ಎಂತು ಈಗಳ್ ಆನ್ ಇಱಿವೆಂ. ಮತ್ತಂ ಒಂದನ್ ಇಸಲುಂ ಕೆಯ್ಯೇೞದು ನೋಡಿರೆ, ಅದು ಏಕೆಂದುಂ ಆನ್ ಆಱಿಯೆ. ಎನಗೆ ಕೂರ್ಮೆಯೆ  ಮಿಕ್ಕು ಬಂದಪುದು. ಇದರ್ಕೆ ಏಗೆಯ್ವೆನ್ ಏನೆಂಬೆನ್, ಮುನ್ನಿನ ಅದೊಂದು ವೈರಮನ್ ಆಂ ಮಱೆದೆಂ ಇದು ಇಂತು ಏಕಾರಣಂ ಭೂಧರಾ?

ಪದ-ಅರ್ಥ:

ಬಱುವಂ-ಅಸಹಾಯನಾಗಿದ್ದಾನೆ;  ಸಾರಥಿಯಿಲ್ಲ-ರಥವನ್ನು ಓಡಿಸುವವನಿಲ್ಲ;  ಮೆಯ್ಗೆ ಮಱೆಯುಂ ತಾನಿಲ್ಲ-ದೇಹಕ್ಕೆ ರಕ್ಷೆಯೆಂಬುದು ಮೊದಲೇ ಇಲ್ಲ;  ಅದೆಂತು-ಅದು ಹೇಗೆ;  ಈಗಳಾನಿಱಿವೆಂ-ಈ ಕ್ಷಣದಲ್ಲಿ ನಾನು ಕೊಲ್ಲಲಿ;  ಮತ್ತಮೊಂದನಿಸಲುಂ– ಅಲ್ಲದೆ ಒಂದು ಬಾಣವನ್ನೂ ಎಸೆಯಲೂ;  ಕಯ್ಯೇೞದು-ಕೈ ಏಳುತ್ತಿಲ್ಲ; ಕೊಲ್ಲಲು ಮನಸ್ಸಾಗುತ್ತಿಲ್ಲ;  ಅದೇಕೆಂದಱಿಯೆ– ಅದು ಏಕೆ ಎಂದು ತಿಳಿಯಲಾರೆ;  ಕೂರ್ಮೆಯೆ ಮಿಕ್ಕು ಬಂದಪುದು –ಪ್ರೀತಿಯೆ ಉಕ್ಕಿ ಹರಿಯುತ್ತಿದೆ;  ಇದರ್ಕೇಗೆಯ್ವೆನ್-ಇದಕ್ಕೆ ಏನು ಮಾಡಲಿ;  ಮಱೆದೆಂ-ಮರೆತುಬಿಟ್ಟೆನು;  ಮುನ್ನಿನೊಂದು ವೈರಮನ್-ಹಿಂದಿನ ಹಗೆತನವನ್ನು;  ಇಂತೇ ಕಾರಣಂ –ಇದಕ್ಕೇನು ಕಾರಣ;  ಭೂಧರಾ-ಕೃಷ್ಣ

            ಕರ್ಣ ಅಸಹಾಯಕನಾಗಿದ್ದಾನೆ, ಜೊತೆಗೆ ರಥದಲ್ಲಿ ಸಾರಥಿಯೂ ಇಲ್ಲ, ಆತನ ದೇಹಕ್ಕೆ ರಕ್ಷೆಯೆಂಬುದು ಮೊದಲೇ ಇಲ್ಲ, ಈ ಸ್ಥಿತಿಯಲ್ಲಿ  ಆತನ ಮೇಲೆ ಒಂದು ಬಾಣವನ್ನು ಎಸೆಯಲೂ  ಮನಸ್ಸಾಗುತ್ತಿಲ್ಲ. ಹಾಗಾಗಿ ಆತನನ್ನು ಹೇಗೆ ಕೊಲ್ಲಲಿ? ಅಲ್ಲದೆ, ಬಾಣಹೂಡಲು ನನ್ನ ಕೈಗಳೇ ಏಳುತ್ತಿಲ್ಲ. ಏಕೆ ಹೀಗಾಗುತ್ತಿದೆ? ಎಂಬುದನ್ನು ನಾನು ತಿಳಿಯಲಾರೆ. ನನಗೆ ಕರ್ಣನಲ್ಲಿ ಪ್ರೀತಿಯೇ ಉಕ್ಕಿ ಹರಿಯುತ್ತಿದೆ. ಇದಕ್ಕೇನು ಮಾಡಲಿ? ಕರ್ಣನ ಮೇಲಿನ ಹಿಂದಿನ ಎಲ್ಲಾ ವೈರವನ್ನೂ ಮರೆತುಬಿಟ್ಟೆನು. ಕೃಷ್ಣ ಇದೇಕೆ ನನಗೆ ಹೀಗಾಗುತ್ತಿದೆ? ಎಂದು ಅರ್ಜುನನು ಕೃಷ್ಣನನ್ನು ಪರಿಪರಿಯಾಗಿ ಕೇಳಿಕೊಂಡನು.

            ಕೃಷ್ಣನ ಮಾತುಗಳನ್ನು ಕೇಳಿದಾಗ ಅರ್ಜುನನಿಗೆ ಒಂದು ರೀತಿಯಿಂದ ಅಸಹ್ಯವೆನಿಸುತ್ತದೆ. ಒಂದೆಡೆ ಕರ್ಣನ ರಥ ಭೂಮಿಯಲ್ಲಿ ಹೂತುಹೋಗಿರುವುದರಿಂದ ಆತ ಕೆಳಗಿಳಿದಿದ್ದಾನೆ. ಇನ್ನೊಂದೆಡೆ ಕರ್ಣನ ಕೈಯಲ್ಲಿ ಆಯುಧಗಳೂ ಇಲ್ಲದೆ ಅಸಹಾಯನಾಗಿದ್ದಾನೆ. ಮತ್ತೊಂದೆಡೆ ಆತನ ಸಾರಥಿ ರಥದಿಂದ ಇಳಿದು ಹೋಗಿದ್ದಾನೆ. ಪರಾಕ್ರಮಶಾಲಿಯಾದರೂ ಆತನ ದೇಹಕ್ಕೆ ಸುರಕ್ಷೆ ಎಂಬುದೇ ಇಲ್ಲ. ಕ್ಷತ್ರಿಯ ಧರ್ಮದ ಪ್ರಕಾರ ಬರಿಗೈಯಲ್ಲಿರುವವನನ್ನು, ಸಾರಥಿಯಿಲ್ಲದ ರಥಿಕನನ್ನು, ಅಸಹಾಯಕನನ್ನು ಘಾತಿಸಬಾರದು. ಈಗ ಕರ್ಣ ಅದೇ ಅಸಹಾಯಕ ಸ್ಥಿತಿಯಲ್ಲಿರುವುದರಿಂದ ಆತನನ್ನು ಹೇಗೆ ಘಾತಿಸಲಿ? ಹೇಗೆ ಬಾಣವನ್ನೆಸೆದು ಕೊಲ್ಲಲಿ? ಎಂಬುದು ಅರ್ಜುನನ ಪ್ರಶ್ನೆ. ಅಲ್ಲದೆ ಕರ್ಣ ರಥದಿಂದಿಳಿದು ತನ್ನ ರಥವನ್ನು ಎತ್ತುವುದಕ್ಕೆ ಪ್ರಯತ್ನಿಸುತ್ತಿರುವಾಗ ಆತನನ್ನು ನೋಡುತ್ತಿದ್ದಂತೆಯೇ ತನ್ನಲ್ಲಿ ಅಪರಿಮಿತವಾದ ಪ್ರೀತಿ ಉಕ್ಕಿಹರಿಯುತ್ತಿದೆ ಏಕೆ? ಯುದ್ಧರಂಗದಲ್ಲಿ ಹೋರಾಡುವುದಕ್ಕೆ ಬಂದಿದ್ದರೂ ಕರ್ಣನ ಮೇಲಿನ ದ್ವೇಷ, ಹಗೆತನ, ಅಸಹನೆಗಳೆಲ್ಲವೂ ಮರೆತುಹೋಗುತ್ತಿವೆ. ಏಕೆ ಹೀಗಾಗುತ್ತಿದೆ? ಎಂಬುದೇ ಅರ್ಜುನನನಿಗೆ ತಿಳಿಯುತ್ತಿಲ್ಲ. ಕರ್ಣ ಪರಕೀಯನಲ್ಲ, ನಮ್ಮವನೇ ಎಂಬ ಅವ್ಯಕ್ತವಾದ ಒಂದು ಬಾಂಧವ್ಯ ಅರ್ಜುನನನ್ನು ಕಾಡತೊಡಗುತ್ತದೆ. ಕೃಷ್ಣನನ್ನು ಮತ್ತೆ ಮತ್ತೆ ಏಕೆ ಹೀಗೆ? ಎಂದು ಪರಿಪರಿಯಾಗಿ ಕೇಳಿಕೊಂಡನು.

 

ಗದ್ಯ: ಎಂಬುದುಮೆನಿತಱಿಯದಿರ್ದೊಡಂ ಸೋದರಿಕೆಯೆ ಮಿಕ್ಕುಬರ್ಕುಮಾಗದೆಯೆಂದು ತನ್ನಂತರ್ಗತದೊಳ್ ಬಗೆದಸುರಾಂತಕನಿಂತೆಂದಂ-

ಗದ್ಯದ ಅನ್ವಯಕ್ರಮ:

ಎಂಬುದುಂ, ಎನಿತು ಅಱಿಯದೆ ಇರ್ದೊಡಂ ಸೋದರಿಕೆಯೆ ಮಿಕ್ಕು ಬರ್ಕುಂ ಆಗದೆ ಎಂದು ತನ್ನ ಅಂತರ್ಗತದೊಳ್ ಬಗೆದ ಅಸುರಾಂಕನ್ ಇಂತೆಂದಂ-

ಪದ-ಅರ್ಥ:

ಎಂಬುದುಂ-ಎಂದು ಹೇಳಿದಾಗ;  ಎನಿತು-ಎಷ್ಟು;  ಅಱಿಯದಿರ್ದೊಡಂ-ತಿಳಿಯದೇ ಇದ್ದರೂ;  ಸೋಕರಿಕೆಯೆ-ಸಹೋದರತ್ವವೇ;  ಮಿಕ್ಕುಬರ್ಕುಮಾಗದೆ– ಅಧಿಕವಾಗಿ ಪ್ರಕಟಗೊಳ್ಳಲಾರದೆ, ಮೀರಿ ವ್ಯಕ್ತವಾಗಲಾರದೆ;  ತನ್ನಂತರ್ಗತದೊಳ್-ತನ್ನ ಮನಸ್ಸಿನಲ್ಲಿಯೇ;  ಬಗೆದು-ತಿಳಿದುಕೊಂಡು, ಆಲೋಚಿಸಿಕೊಂಡು;  ಅಸುರಾಂತಕನ್-ರಾಕ್ಷಸರ ವೈರಿಯು(ಕೃಷ್ಣನು); ಇಂತೆಂದಂ-ಹೀಗೆಂದು ಹೇಳಿದನು.

            ಅರ್ಜುನನು ತನ್ನ ಮನಸ್ಸಿನ ಭಾವನೆಯನ್ನು ಹೇಳಿಕೊಂಡಾಗ, ಕೃಷ್ಣನು ಕರ್ಣನ ಬಗ್ಗೆ ಏನೂ ತಿಳಿಯದೇ ಇದ್ದರೂ ಸಹೋದರತ್ವವೆಂಬುದು ತನ್ನಿಂದ ತಾನೆ ಅಧಿಕವಾಗಿ ಪ್ರಕಟಗೊಳ್ಳಲಾರದೆ ಎಂದು ತನ್ನ ಮನಸ್ಸಿನಲ್ಲಿಯೇ ತಿಳಿದುಕೊಂಡು ಅರ್ಜುನನನ್ನು ಕುರಿತು ಹೀಗೆಂದನು.

            ಅರ್ಜುನನು ಕರ್ಣನನ್ನು ನೋಡಿದಾಗ, ಆತ ತನ್ನ ರಥದ ಚಕ್ರವನ್ನು ಎತ್ತತೊಡಗಿದ ಸಂದರ್ಭದಲ್ಲಿ ಅರ್ಜುನನಲ್ಲಿ ಉಂಟಾದ ಭಾವನೆಗಳನ್ನು, ಆ ಸಂಬಂಧವಾದ ಆತನ ಮಾತುಗಳನ್ನು ಕೇಳಿದಾಗ ಅರ್ಜುನನಲ್ಲಿ ಸೋದರತ್ವದ ಭಾವನೆಗಳು ಹಾಗೂ ಮಮಕಾರ ಜಾಗೃತಗೊಳ್ಳುತ್ತಿರುವುದನ್ನು ಕೃಷ್ಣ ಕಂಡುಕೊಂಡನು. ಒಂದು ವೇಳೆ ಅರ್ಜುನನ ಮನಸ್ಸಿನಲ್ಲಿನ ಸೋದರತ್ವದ ಭಾವನೆಗಳನ್ನು ಬೆಳೆಯಲು ಬಿಟ್ಟರೆ ಫಲಕೈಗೂಡದು ಎಂಬುದು ಕೃಷ್ಣನಿಗೆ ತಿಳಿದಿದೆ. ಹಾಗಾಗಿ ಆತನ ಯಾವ ಮಾತುಗಳಿಗೂ ಉತ್ತರಿಸದೆ ಆತನ ಮನಸ್ಸನ್ನು ಅಲ್ಲಿಂದ ವಿಚಲಿತಗೊಳ್ಳುವಂತೆ ಮಾಡಬೇಕೆಂದು ಪ್ರಯತ್ನಿಸಿ ಅರ್ಜುನನಲ್ಲಿ ಹೀಗೆಂದನು.

 

ನೆಗೞ್ದಭಿಮನ್ಯುವಂ ಚಲದಿನಂದಿಱಿದಿಂದು ನಿಜಾಗ್ರಜಾತನಂ

ಸುಗಿವಿನಮೆಚ್ಚು ಬೀರದೊಳೆ ಬೀಗುವ ಸೂತ ಸುತಂಗೆ ನೀನುಮಾ

ಜಿಗೆ ಸೆಡೆದಿರ್ದೆಯಪ್ಪೊಡಿರು ಚಕ್ರನಿಘಾತದಿನಿಕ್ಕಿ ಬೀರಮು

ರ್ವಿಗೆ ಪಡಿಚಂದಮಾಗೆ ತಱಿದೊಟ್ಟಿ ಜಯಾಂಗನೆಗಾಣ್ಮನಾದಪೆಂ  ೩

ಪದ್ಯದ ಅನ್ವಯಕ್ರಮ:

ನೆಗೞ್ದ ಅಭಿಮನ್ಯುವಂ ಅಂದು ಚಲದಿನ್ ಇಱಿದ, ಇಂದು ನಿಜ ಅಗ್ರಜಾತನಂ ಸುಗಿವಿನಂ ಎಚ್ಚು ಬೀರದೊಳೆ ಬೀಗುವ ಸೂತ ಸುತಂಗೆ ನೀನುಂ ಆಜಿಗೆ ಸೆಡೆದಿರ್ದೆ ಅಪ್ಪೊಡೆ ಇರು, ಚಕ್ರ ನಿಘಾತದಿನ್ ಇಕ್ಕಿ ಉರ್ವಿಗೆ ಬೀರಂ ಪಡಿಚಂದಂ ಆಗೆ ತಱಿದು ಒಟ್ಟಿ ಜಯಾಂಗನೆಗೆ ಆಣ್ಮನಾದಪೆಂ.

ಪದ – ಅರ್ಥ:

ನೆಗೞ್ದ-ಪ್ರಸಿದ್ಧನಾದ, ಪರಾಕ್ರಮಶಾಲಿಯಾದ;  ಅಭಿಮನ್ಯುವಂ-ಅಭಿಮನ್ಯುವನ್ನು; ಅಂದು-ಈ ಹಿಂದೆ(ಚಕ್ರವ್ಯೂಹದ ಸಂದರ್ಭದಲ್ಲಿ);  ಚಲದಿನ್-ಛಲದಿಂದ, ಹಠದಿಂದ; ಇಱಿದ-ಕೊಂದ;  ನಿಜಾಗ್ರಜಾತನಂ-ನಿನ್ನ ಅಣ್ಣನನ್ನು(ಧರ್ಮರಾಯನನ್ನು);  ಸುಗಿವಿನಂ-ಸೀಳುವಂತೆ;  ಎಚ್ಚು-ಪ್ರಯೋಗಿಸಿ;  ಬೀರದೊಳೆ-ಪರಾಕ್ರಮದಿಂದ;  ಬೀಗುವ-ಮೆರೆಯುವ;  ಸೂತಸುತ-ಕರ್ಣ;  ಆಜಿಗೆ-ಯುದ್ಧಕ್ಕೆ;  ಸೆಡೆದಿರ್ದೊಡೆಯಪ್ಪೊಡೆ-ಹೆದರಿಕೊಳ್ಳುವೆ ಎಂದಾದರೆ;  ಚಕ್ರನಿಘಾತದಿನಿಕ್ಕಿ-ಸುದರ್ಶನ ಚಕ್ರದ ಹೊಡೆತದಿಂದ ಕೊಂದು;  ಬೀರಮುಂ-ಶೌರ್ಯವನ್ನು;  ಉರ್ವಿಗೆ-ಭೂಮಿಗೆ, ಲೋಕಕ್ಕೆ;  ಪಡಿಚಂದಮಾಗೆ-ಮಾದರಿಯಾಗುವಂತೆ, ಜಾಹೀರುಗೊಳ್ಳುವಂತೆ;   ತಱಿದೊಟ್ಟಿ-ತುಂಡರಿಸಿ ಹಾಕಿ;  ಜಯಾಂಗನೆಗೆ-ಜಯಲಕ್ಷ್ಮೀಗೆ ;  ಆಣ್ಮನಾದಪೆಂ-ಒಡೆಯನಾಗುತ್ತೇನೆ.     

            ಅಂದು ಪರಾಕ್ರಮಶಾಲಿಯಾದ ಅಭಿಮನ್ಯುವನ್ನು ಚಕ್ರವ್ಯೂಹದ ಸಂದರ್ಭದಲ್ಲಿ ಹಠದಿಂದ ಇರಿದು ಕೊಂದ, ಇಂದು ಯುದ್ಧರಂಗದಲ್ಲಿ ನಿನ್ನ ಅಣ್ಣ ಧರ್ಮರಾಯನನ್ನು ಸೀಳುವಂತೆ ಆಯುಧವನ್ನು ಪ್ರಯೋಗಿಸಿ ಪರಾಕ್ರಮದಿಂದ ಮೆರೆಯುತ್ತಿರುವ ಈ ಸೂತಪುತ್ರನಾದ ಕರ್ಣನೊಂದಿಗೆ ಯುದ್ಧಮಾಡುವುದಕ್ಕೆ ಹೆದರಿಕೊಳ್ಳುವೆ ಎಂದಾದರೆ, ನೀನು ಹಾಗೆಯೇ ಇದ್ದುಬಿಡು. ನಾನೇ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆತನನ್ನು ಕೊಂದು ಈ ಲೋಕಕ್ಕೆ ನನ್ನ ಶೌರ್ಯವನ್ನು ಜಾಹೀರುಗೊಳ್ಳುವಂತೆ ಮಾಡಿ ಜಯಲಕ್ಷ್ಮೀಗೆ ಒಡೆಯನಾಗುತ್ತೇನೆ ಎಂದನು.

            ಅರ್ಜುನ ಕರ್ಣನ ಮೇಲೆ ಪ್ರೀತಿ, ವಾತ್ಸಲ್ಯವನ್ನು ತೋರಲು ಹಾತೊರೆಯುತ್ತಿರುವುದು ಕೃಷ್ಣನಿಗೆ ಇಷ್ಟವಾಗಲಿಲ್ಲ. ಅದನ್ನು ಹಾಗೆಯೇ ಮುಂದುವರಿಯಲು ಬಿಟ್ಟರೆ ಮುಂದೆ ಪಾಂಡವರಿಗೆ ಕಷ್ಟ. ಹಾಗಾಗಿ ಕೃಷ್ಣನು ಅರ್ಜುನನ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಮತ್ತು ಅದನ್ನು ಮುಂದಿನ ಯುದ್ಧಕ್ಕೆ ಸಿದ್ಧಪಡಿಸಲು ಕರ್ಣ ಮಾಡಿದ ಎರಡು ಅಪಚಾರಗಳನ್ನು ಉಲ್ಲೇಖಿಸಿ ಕರ್ಣನ ನೀಚತ್ವವನ್ನು ಮನದಟ್ಟುಮಾಡಲು ಪ್ರಯತ್ನಿಸಿದನು. ಕೆಲದಿನಗಳ ಹಿಂದೆ ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣ ಚಕ್ರವ್ಯೂಹವನ್ನು ರಚಿಸಿದ ಸಂದರ್ಭದಲ್ಲಿ ಅಭಿಮನ್ಯು ಒಬ್ಬನೇ ಚಕ್ರವ್ಯೂಹವನ್ನು ನುಚ್ಚುನೂರು ಮಾಡತೊಡಗಿದಾಗ ಆತನನ್ನು ಎದುರಿಸಲಾರದೆ ಹಿಂದಿನಿಂದ ಆತನ ಚಾಪವನ್ನು ಕಡಿದು, ಆತನ ತೋಳುಗಳನ್ನು ಕಡಿದು, ನಿರಾಯುಧನನ್ನಾಗಿ ಮಾಡಿ ಹೊಟ್ಟೆಗೆ ಇರಿಯುತ್ತ ಕೊಂದು ತನ್ನ ಹಠಸಾಧಿಸಿದ ಈ ಕರ್ಣನೊಂದಿಗೆ ಹೋರಾಡುವುದಕ್ಕೆ, ಮಾತ್ರವಲ್ಲ ಇಂದಿನ ಯುದ್ಧದಲ್ಲಿ ನಿನ್ನ ಅಣ್ಣನಾದ ಧರ್ಮರಾಯನನ್ನು ಈಟಿಯಿಂದ ಸೀಳುವಂತೆ ಚುಚ್ಚಿ ಕೊಲ್ಲಲು ಹವಣಿಸಿದ ಈ ಕರ್ಣನನ್ನು ಕೊಲ್ಲಲಾಗುತ್ತಿಲ್ಲ, ಆಯುಧವನ್ನು ಪ್ರಯೋಗಿಸುವುದಕ್ಕೆ ಕೈಯೇ ಏಳುತ್ತಿಲ್ಲ ಎನ್ನುವೆಯಲ್ಲ. ನಿನ್ನಿಂದ ಆಗದಿದ್ದರೆ ಹೋಗಲಿ, ನಾನೇ ನನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆತನನ್ನು ಕೊಂದು ಲೋಕಕ್ಕೆ ನನ್ನ ಪ್ರರಾಕ್ರಮವನ್ನು ಜಾಹೀರುಗೊಳಿಸುತ್ತೇನೆ. ಆ ಮೂಲಕ ನನ್ನ ಪರಾಕ್ರಮವನ್ನು ಲೋಕಕ್ಕೆ ಜಾಹೀರುಗೊಳ್ಳುವಂತೆ ಮಾಡಿ ಪಾಂಡವರಿಗೆ ಜಯ ಲಭಿಸುವಂತೆ ಮಾಡುತ್ತೇನೆ ಎಂದು ಕೃಷ್ಣ ಅರ್ಜುನನ ಮನಸ್ಸನ್ನು ಬೇರೆಡೆಗೆ ತಿರುಗಿಸಿ ಯುದ್ಧಕ್ಕೆ ಸನ್ನದ್ಧನಾಗುವಂತೆ ಮಾಡಿದನು.

 

ಗದ್ಯ: ಎಂಬನ್ನೆಗಂ ಧರಾತಳಮಳಱೆ ರಥದ ಗಾಲಿಯಂ ಕಿೞ್ತು ಮತ್ತಂ ರಥಮನಪ್ರತಿರಥನೇಱಿ ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟಿ ಮರ್ಮೋದ್ಘಾಟನಂಗೆಯ್ದು ಕಾದುವಾಗಳ್ ಕಪಿಧ್ವಜಂ ವನ ದಂತಿಯಂತೆ ಧ್ವಾಂಕ್ಷಧ್ವಜಮನುಡಿದು  ಕೆಡೆವಿನಮೆಚ್ಚಾಗಳ್ –

ಗದ್ಯದ ಅನ್ವಯಕ್ರಮ:

ಎಂಬ ಅನ್ನೆಗಂ ಧರಾತಳಂ ಅಳಱೆ, ರಥದ ಗಾಲಿಯಂ ಕಿೞ್ತು ಮತ್ತಂ ಅಪ್ರತಿರಥನ್ ರಥಮನ್ ಏಱಿ, ನಿಟ್ಟಾಲಿಯಾಗೆ ಮುಟ್ಟೆವಂದು, ಕಿಡಿಗುಟ್ಟಿ ಮರ್ಮೋದ್ಘಾಟನಂ ಗೆಯ್ದು ಕಾದುವಾಗಳ್ ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷಧ್ವಜಮನ್ ಉಡಿದು ಕೆಡೆವಿನಂ ಎಚ್ಚಾಗಳ್-

ಪದ-ಅರ್ಥ:

ಎಂಬನ್ನೆಗಂ– ಎನ್ನುವಷ್ಟರಲ್ಲಿ;  ಧರಾತಳಂ-ಭೂಮಿ;  ಅಳಱೆ-ಭಯಭೀತವಾಗುವಂತೆ;  ಗಾಲಿಯಂ-ಚಕ್ರವನ್ನು;  ಕಿೞ್ತು-ಕಿತ್ತು;  ಮತ್ತಂ-ಪುನಃ;  ರಥಮನ್-ರಥವನ್ನು;  ಅಪ್ರತಿರಥನ್-ಎದುರಾಳಿಯೇ ಇಲ್ಲದವನು(ಕರ್ಣ);  ನಿಟ್ಟಾಲಿಯಾಗೆ-ಕಣ್ಣುಗಳನ್ನು ಬಿಟ್ಟುಕೊಂಡು;  ಮುಟ್ಟೆವಂದು-ಸಮೀಪಕ್ಕೆ ಬಂದು;  ಕಿಡಿಗುಟ್ಟಿ-ಕಿಡಿಕೆದರಿ;  ಮರ್ಮೋದ್ಘಾಟನಂಗೆಯ್ದು-ಮರ್ಮಾಘಾತವಾಗುವಂತೆ;  ಕಾದುವಾಗಳ್-ಹೋರಾಡುತ್ತಿರುವಾಗ;  ಕಪಿಧ್ವಜಂ-ಕಪಿಯನ್ನು ಧ್ವಜದಲ್ಲಿ ಚಿಹ್ನೆಯಾಗಿ ಉಳ್ಳವನು (ಅರ್ಜುನ);  ವನದಂತಿಯಂತೆ-ಕಾಡಿನ ಮದ್ದಾನೆಯಂತೆ;  ಧ್ವಾಂಕ್ಷಧ್ವಜಮನ್-ಕಾಕಧ್ವಜವನ್ನು;  ಉಡಿದು-ಮುರಿದು;  ಕೆಡೆವಿನಂ-ಬೀಳುವಂತೆ;  ಎಚ್ಚಾಗಳ್-ಬಾಣಪ್ರಯೋಗಿಸಿದಾಗ.

            ಎಂದು ಕೃಷ್ಣ ಹೇಳುವಷ್ಟರಲ್ಲಿ ಭೂತಳವೇ ಭಯಭೀತವಾಗುವಂತೆ ಭೂಮಿಯಲ್ಲಿ ಹೂತುಹೋಗಿರುವ  ರಥದ ಚಕ್ರವನ್ನು ಕಿತ್ತು ಅಪ್ರತಿಮ ಪರಾಕ್ರಮಶಾಲಿಯಾದ ಕರ್ಣನು ಮತ್ತೆ ರಥವನ್ನೇರಿ ಬಿಟ್ಟಕಣ್ಣುಗಳಿಂದ ಅರ್ಜುನನ ಸಮೀಪಕ್ಕೆ ಬಂದು ಕೆಡಿಕೆದರುವಂತೆ ನೋಡುತ್ತ ಮರ್ಮಾಘಾತವಾಗುವಂತೆ ಹೊರಾಡುತ್ತಿರುವಾಗ ಅರ್ಜುನನು ಕಾಡಿನ ಮದ್ದಾನೆಯಂತೆ ನುಗ್ಗಿ ಕರ್ಣನ ರಥದಲ್ಲಿದ್ದ  ಆತನ ಕಾಕಧ್ವಜವನ್ನು ಮುರಿದು ಬೀಳುವಂತೆ ಬಾಣಪ್ರಯೋಗಿಸಿದಾಗ-

            ತನ್ನ ರಥ ಭೂಮಿಯಲ್ಲಿ ಹೂತುಹೋಗಿದ್ದರೂ ತನ್ನ ಸಾರಥಿ ರಥದಿಂದ ಇಳಿದುಹೋಗಿದ್ದರೂ ಅಪ್ರತಿಮ ಪರಾಕ್ರಮಶಾಲಿಯಾದ ಕರ್ಣನು ಧೃತಿಗೆಡದೆ ರಥದಿಂದಿಳಿದು ಹೆಗಲುಕೊಟ್ಟು ರಥವನ್ನು ಭೂತಳವೇ ಭಯಭೀತವಾಗುವಂತೆ ಎತ್ತಿ ಸಮಸ್ಥಿತಿಗೆ ತಂದು ನಿಲ್ಲಿಸಿ, ರಥವನ್ನೇರಿ ಎದುರಾಳಿಯೇ ಇಲ್ಲದಂತೆ ಪರಾಕ್ರಮದಿಂದ ತಾನೇ ರಥವನ್ನು ಚೋದಿಸಿಕೊಂಡು  ಅರ್ಜುನನ ರಥದ ಸಮೀಪಕ್ಕೆ ಬಂದು ಕಣ್ಣುಗಳಿಂದ ಕಿಡಿಕೆದರುವಂತೆ ದುರುಗುಟ್ಟುತ್ತ ಅರ್ಜುನನ ಮರ್ಮಾಘಾತವಾಗುವಂತೆ ಹೋರಾಡತೊಡಗಿದಾಗ ಅರ್ಜುನನು ಇನ್ನಷ್ಟು ವ್ಯಗ್ರಗೊಂಡು ಕಾಡಿನ ಮದ್ದಾನೆಯಂತೆ  ಮುಂದಕ್ಕೆ ನುಗ್ಗಿ ಕರ್ಣನ ರಥದಲ್ಲಿ ರಾರಾಜಿಸುತ್ತಿದ್ದ ಆತನ ಕಾಕಧ್ವಜವನ್ನು ಬಾಣದಿಂದ ಹೊಡೆದು ಉರುಳಿಸಿದನು. ಧ್ವಜವನ್ನು ಉರುಳಿಸಿದುದು ಕರ್ಣನ ಪರಾಕ್ರಮಕ್ಕೊಂದು ಸವಾಲು ಎನಿಸಿತು.

 

ಪೞಯಿಗೆ ಬಿೞ್ದೊಡೆ ಬೀರದ

ಪೞವಿಗೆಯಂ ನಿಱಿಸಲೆಂದೆ ಹರಿ ವಕ್ಷಮನ

ಲ್ಲೞಿವೋಗೆಯೆಚ್ಚು ಮುಳಿಸವ

ಗೞಿಯಿಸುತಿರೆ ನರನ ಬಿಲ್ಲ ಗೊಣೆಯುಮನೆಚ್ಚಂ  ೪

ಪದ್ಯದ ಅನ್ವಯಕ್ರಮ:

ಪೞಯಿಗೆ ಬಿೞ್ದೊಡೆ ಬೀರದ ಪೞಯಿಗೆಯಂ ನಿಱಿಸಲ್ ಎಂದೆ ಹರಿ ವಕ್ಷಮನ್ ಅಲ್ಲೞಿವೋಗೆ ಎಚ್ಚು ಮುಳಿಸು ಅವಗೞಿಯಿಸುತಿರೆ ನರನ ಬಿಲ್ಲ ಗೊಣೆಯುಂ ಎಚ್ಚಂ.

ಪದ-ಅರ್ಥ:

ಪೞಯಿಗೆ-ಧ್ವಜ;  ಬಿೞ್ದೊಡೆ-ಬಿದ್ದಾಗ;  ಬೀರದ ಪೞಯಿಗೆಯಂ– ಪರಾಕ್ರಮದ ಧ್ವಜವನ್ನು, ಶೌರ್ಯದ ಸಂಕೇತವನ್ನು;  ನಿಱಿಸಲ್-ಸ್ಥಾಪಿಸಲು;  ಹರಿವಕ್ಷಮನ್-ಕೃಷ್ಣನ ಎದೆಯನ್ನು;  ಅಲ್ಲೞಿವೋಗೆ-ಸೀಳಿಹೋಗುವಂತೆ;  ಎಚ್ಚು-ಬಾಣಪ್ರಯೋಗಿಸಿ;  ಮುಳಿಸವಗೞಿಯಿಸುತಿರೆ-ಕೋಪವನ್ನು ಕಡೆಗಣಿಸುವಂತೆ;  ನರನ-ಅರ್ಜುನನ;  ಬಿಲ್ಲ ಗೊಣೆಯುಮನ್-ಬಿಲ್ಲಿನ ಹೆದೆಯನ್ನು;  ಎಚ್ಚಂ-ಬಾಣಪ್ರಯೋಗಿಸಿದನು.

            ಅರ್ಜುನನ ಬಾಣಾಘಾತಕ್ಕೆ ಕರ್ಣನ ರಥದಲ್ಲಿದ್ದ ಕಾಕಧ್ವಜವು ಮುರಿದು ಬಿದ್ದಾಗ ಕರ್ಣನು ತನ್ನ ಶೌರ್ಯದ ಸಂಕೇತವನ್ನು ಮರಳಿ ಸ್ಥಾಪಿಸಲು ಕೃಷ್ಣನ ಕೋಪವನ್ನೇ ಕಡೆಗಣಿಸುತ್ತ ಕೃಷ್ಣನ ಎದೆಯನ್ನೇ ಸೀಳಿಹೋಗುವಂತೆ ಬಾಣವನ್ನು ಪ್ರಯೋಗಿಸಿ ಅರ್ಜುನನ ಬಿಲ್ಲಿನ ಹೆದೆಯು ತುಂಡಾಗುವಂತೆ ಮಾಡಿದನು.

            ಪ್ರತಿಯೊಬ್ಬ ವೀರನಿಗೂ ತನ್ನ ರಥದಲ್ಲಿ ಹಾರಾಡುತ್ತಿರುವ ಧ್ವಜ ಆತನ ಶೌರ್ಯದ, ಸ್ವಾಭಿಮಾನದ ಸಂಕೇತವಾಗಿರುತ್ತದೆ. ಅರ್ಜುನ ಯುದ್ಧರಂಗದಲ್ಲಿ ಬಾಣದಿಂದ ತನ್ನ ಧ್ವಜವನ್ನು ಮುರಿದುಹಾಕಿರುವುದು ಕರ್ಣನಿಗೆ ತನ್ನ ಸ್ವಾಭಿಮಾನಕ್ಕೆ ಹಾಗೂ ಶೌರ್ಯಕ್ಕೆ ಬಿದ್ದ ಪೆಟ್ಟು ಎನಿಸಿತು. ಅರ್ಜುನ ತನ್ನನ್ನು ಸಾಮಾನ್ಯನೆಂದೋ ಅಸಹಾಯಕನೆಂದೋ ಪರಿಭಾವಿಸುವುದನ್ನು  ಕರ್ಣ ಸಹಿಸಿಕೊಳ್ಳಲಿಲ್ಲ. ಅವನಲ್ಲಿಯೂ ಶೌರ್ಯ, ಪರಾಕ್ರಮ, ಸ್ವಾಭಿಮಾನಗಳು ಜಾಗೃತವಾಗಿ ತನ್ನ ಸಾಮರ್ಥ್ಯವನ್ನು ತೋರಿಸಲೇಬೇಕೆಂದು ಕೃಷ್ಣನ ಎದೆಯೇ ಸೀಳಿಹೋಗುವಂತೆ ಬಾಣವನ್ನು ಪ್ರಯೋಗಿಸಿ ಆತನನ್ನು ಘಾತಿಸಿದನು. ಕೂಡಲೇ ಮತ್ತೊಂದು ಬಾಣವನ್ನು ಪ್ರಯೋಗಿಸಿ ಯಾವ ಬಿಲ್ಲಿನಿಂದ  ಅರ್ಜುನ ತನ್ನ ರಥದಲ್ಲಿನ ಧ್ವಜವನ್ನು ಮುರಿದುಹಾಕಿದ್ದನೋ ಅದೇ ಬಿಲ್ಲಿನ ಹೆದೆಯನ್ನೇ ತುಂಡಾಗುವಂತೆ ಬಾಣವನ್ನು ಪ್ರಯೋಗಿಸಿ ಅರ್ಜುನನ ಸಾಹಸಕ್ಕೆ ಸವಾಲೆಸೆದನು.

 

ಬೆಳಗುವ ಸೊಡರ್ಗಳ ಬೆಳಗ

ಗ್ಗಳಿಸುವವೋಲ್ ಪೋಪ ಪೊೞ್ತಱೊಳ್  ತೇಜಂ ಪ

ಜ್ಜಳಿಸೆ ತೞತೞಿಸಿ ತೊಳ ತೊಳ

ತೊಳಗಿದನಸ್ತಮಯ ಸಮಯದೊಳ್ ದಿನಪಸುತಂ  ೫

ಪದ್ಯದ ಅನ್ವಯಕ್ರಮ:

ಅಸ್ತಮಯ ಸಮಯದೊಳ್ ಬೆಳಗುವ ಸೊಡರ್ಗಳ ಬೆಳಗನ್ ಅಗ್ಗಳಿಸುವವೋಲ್ ಪೋಪ ಪೊೞ್ತರೊಳ್ ತೇಜಂ ಪಜ್ಜಳಿಸೆ ದಿನಪಸುತಂ ತೞತೞಿಸಿ ತೊಳ ತೊಳ ತೊಳಗಿದನ್.

ಪದ-ಅರ್ಥ:

ಬೆಳಗುವ ಸೊಡರ್ಗಳ-ಉರಿಯುತ್ತಿರುವ ದೀಪಗಳ; ಬೆಳಗಗ್ಗಳಿಸುವವೋಲ್-ಪ್ರಕಾಶವು ಅಧಿಕಗೊಳ್ಳುವಂತೆ; ಪೋಪ ಪೊೞ್ತಱೊಳ್-ಅಸ್ತಮಿಸುತ್ತಿರುವ ಹೊತ್ತಿನಲ್ಲಿ;  ತೇಜಂ ಪಜ್ಜಳಿಸೆ-ಪ್ರಕಾಶವು ಪ್ರಜ್ವಲಿಸಿ;  ತೞತೞಿಸಿ-ಹೊಳೆಹೊಳೆಯುತ್ತ;  ತೊಳ ತೊಳ ತೊಳಗಿದನ್-ಥಳಥಳ ಪ್ರಕಾಶಿಸಿದನು;  ಅಸ್ತಮಯ ಸಮಯದೊಳ್– ನಂದಿಹೋಗುವ ಹೊತ್ತಿನಲ್ಲಿ;  ದಿನಪಸುತ-ಕರ್ಣ.

            ನಂದಿಹೋಗುವ ಸಮಯದಲ್ಲಿ ಉರಿಯುವ ದೀಪಗಳ ಬೆಳಕು ಅಧಿಕಗೊಳ್ಳುವಂತೆ  ಅಸ್ತಮಿಸುವ ಸಮಯದಲ್ಲಿ ಪ್ರಕಾಶವು ಪ್ರಜ್ವಲಿಸುವಂತೆ ಕರ್ಣನು ಯುದ್ಧರಂಗದಲ್ಲಿ ಥಳಥಳಿಸಿ ಪ್ರಕಾಶಿಸಿದನು. 

            ಎಣ್ಣೆ ಆರಿ ಅದರ ಜ್ವಾಲೆ ನಂದಿಹೋಗುವ ಸಮಯದಲ್ಲಿ ದೀಪವು ಕೊನೆಗೊಮ್ಮೆ ಪ್ರಕಾಶಮಾನವಾಗಿ ಬೆಳಗುತ್ತದೆ. ಹಾಗೆಯೇ ಅಸ್ತಮಿಸುವ ಹೊತ್ತಿನಲ್ಲಿ ಬೆಳಕು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುವುದು  ಲೋಕರೂಢಿ. ಸೂರ್ಯನು ಅಸ್ತಮಿಸುವುದಕ್ಕೆ ಮುಂದಾಗಿದ್ದಾನೆ. ಇನ್ನೇನು ಅಂದಿನ ಯುದ್ಧ ಮುಗಿಯುವ ಹೊತ್ತಾಗುತ್ತಿದೆ. ಯುದ್ಧರಂಗದಲ್ಲಿ ಕರ್ಣ ಅಪರಿಮಿತವಾದ, ಉನ್ನತವಾದ, ಅಮೋಘವಾದ ಪರಾಕ್ರಮ, ಶೌರ್ಯ, ಪ್ರತಾಪಗಳನ್ನು ಮೆರೆಸುತ್ತಿದ್ದಾನೆ. ಬೆಳಗ್ಗಿನಿಂದ ಕಾಣದ ಈ ರೀತಿಯ ಶೌರ್ಯ, ಪ್ರತಾಪಗಳು ಈಗ ಅಧಿಕವಾಗಿ ಪ್ರಕಟಗೊಳ್ಳುತ್ತಿವೆ. ದೀಪವು ತಾನು ನಂದಿಹೋಗುವ ಸಂದರ್ಭದಲ್ಲಿ ಅತಿಯಾಗಿ ಪ್ರಕಾಶಿಸುವಂತೆ ಕರ್ಣನೂ ಅಸ್ತದ ಹೊತ್ತಿನಲ್ಲಿ ಶೌರ್ಯದಿಂದ ಪ್ರಕಾಶಿಸುತ್ತಿದ್ದಾನೆ. ಕರ್ಣ ಅಸ್ತಮಿಸುವುದಕ್ಕೆ ಸಿದ್ಧನಾಗುತ್ತಿದ್ದಾನೆ ಎಂಬುದನ್ನು ಕವಿ ಇಲ್ಲಿ ಸೂಚಿಸಿದ್ದಾನೆ.

(ಭಾಗ – ೨ರಲ್ಲಿ ಮುಂದುವರಿದಿದೆ)

ಡಾ. ವಸಂತ ಕುಮಾರ್, ಉಡುಪಿ

*****

Leave a Reply

Your email address will not be published. Required fields are marked *