ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ
ಗಾಳಿ ನಿನ್ನಾಧೀನವಲ್ಲವಯ್ಯಾ
ನಾಳೆ ತೂರಿಹೆನೆಂದರೆ ಇಲ್ಲವಯ್ಯಾ
ಶಿವಶರಣ ಎಂಬುದೊಂದು ಗಾಳಿ ಬಿಟ್ಟಲ್ಲಿ
ಬೇಗ ತೂರೆಂದ ಅಂಬಿಗರ ಚೌಡಯ್ಯ
ಪದ-ಅರ್ಥ:
ಗಾಳಿ ಬಿಟ್ಟಲ್ಲಿ-ಗಾಳಿ ಬೀಸುವ ದಿಕ್ಕಿನಲ್ಲಿ; ತೂರಿಕೊಳ್ಳು-ಎಸೆದುಕೊಳ್ಳು; ಅಧೀನವಲ್ಲ-ನಿಯಂತ್ರಕ್ಕೆ ಮೀರಿದುದು; ತೂರಿಹೆನೆಂದರೆ-ಎರಚುತ್ತೇನೆ ಎಂದುಕೊಂಡರೆ ; ಶಿವಶರಣ-ಶಿವಭಕ್ತ; ಗಾಳಿಬಿಟ್ಟಲ್ಲಿ-ಆಗಮನದ ಸಂದರ್ಭದಲ್ಲಿ.
ಯುಕ್ತಸಮಯದಲ್ಲಿ, ಯುಕ್ತಸನ್ನಿವೇಶದಲ್ಲಿ ಹಾಗೂ ಯುಕ್ತರಾದ ಶಿವಶರಣರನ್ನು ಗೌರವಿಸುವ ಉಚಿತಕಾರ್ಯಗಳನ್ನು ಕೈಗೊಳ್ಳಬೇಕೆಂಬುದನ್ನು ಅಂಬಿಗರ ಚೌಡಯ್ಯ ಈ ವಚನದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಿಸಿದ್ದಾನೆ. ಬೆಳೆಯಿಂದ ಪಡೆದುಕೊಂಡ ಕಾಳಿನಲ್ಲಿ ಜಳ್ಳು ಮಾತ್ರವಲ್ಲದೆ, ಇತರ ನಿಷ್ಪ್ರಯೋಜಕವಾದ ಕಸಕಡ್ಡಿಗಳು ಕೂಡಾ ತುಂಬಿರುತ್ತವೆ. ಅವುಗಳನ್ನು ಬೇರ್ಪಡಿಸಿಕೊಂಡು ಧಾನ್ಯವನ್ನು ಹಸನುಗೊಳಿಸಬೇಕು. ರೈತರು ತಾವು ಬೆಳೆದ ಧಾನ್ಯಗಳನ್ನು ಹಸನುಗೊಳಿಸುವುದಕ್ಕೆ ಗಾಳಿಯ ವಿರುದ್ಧದಿಕ್ಕಿನಲ್ಲಿ ಅವುಗಳನ್ನು ತೂರಬೇಕಾಗುತ್ತದೆ. ಹೀಗೆ ಧಾನ್ಯಗಳನ್ನು ತೂರುವುದಕ್ಕೆ ರಭಸವಾಗಿ ಬೀಸುವ ಗಾಳಿಯ ಅವಶ್ಯಕತೆಯಿದೆ. ಆದರೆ ಅದು ನಮ್ಮ ಇಚ್ಛೆಯಂತೆ ಬೀಸಲಾರದು. ಹಾಗಾಗಿ ಗಾಳಿ ರಭಸವಾಗಿ ಬೀಸುವ ಸಮಯದವರೆಗೆ ಕಾಯಬೇಕಾಗುತ್ತದೆ. ಗಾಳಿ ದಿನವಿಡೀ ನಿರಂತರವಾಗಿ ಬೀಸಲಾರದು. ಅದು ಬೀಸತೊಡಗಿದಾಗ ಧಾನ್ಯವನ್ನು ತೂರಿ ಕಾಳು, ಜಳ್ಳು ಮತ್ತು ಕಸಕಡ್ದಿಗಳನ್ನು ಬೇರ್ಪಡಿಸಬೇಕಾಗುತ್ತದೆ. ಸಮರ್ಪಕವಾಗಿ ಗಾಳಿ ಬೀಸದಿದ್ದರೆ ಧಾನ್ಯವನ್ನು ತೂರಿಯೂ ಪ್ರಯೋಜನವಿಲ್ಲ. ಮತ್ತೆ ತೂರೋಣ, ನಾಳೆ ತೂರೋಣವೆಂದರೆ ಗಾಳಿಯು ಮರಳಿ ಬೀಸುವ ಭರವಸೆಯಿಲ್ಲ. ಏಕೆಂದರೆ ಗಾಳಿಯು ನಮ್ಮ ಅಧೀನದಲ್ಲಿಲ್ಲ. ಅದು ಬೀಸುವ ಸಮಯಕ್ಕಾಗಿ ಕಾಯಬೇಕು.
ಅಂಬಿಗರ ಚೌಡಯ್ಯ ಈ ವಚನದಲ್ಲಿ ಶಿವಶರಣರನ್ನು ಅಪರೂಪವಾಗಿ, ಯುಕ್ತವಾಗಿ, ಅವಶ್ಯಕತೆಗನುಗುಣವಾಗಿ ಬೀಸುವ ಗಾಳಿಗೆ ಹೋಲಿಸಿದ್ದಾನೆ. ಗಾಳಿ ಹೇಗೆ ಅಪರೂಪವೋ ಅನಿರೀಕ್ಷಿತವೋ ಹಾಗೆಯೇ ಶಿವಶರಣರ ಆಗಮನವು ಅಪರೂಪವೂ ಹೌದು, ಅನಿರೀಕ್ಷಿತವೂ ಹೌದು. ಮಾತ್ರವಲ್ಲ, ಸಮರ್ಪಕವಾಗಿ ಬೀಸುವ ಗಾಳಿಗೆ ಹೇಗೆ ಕಾಯಬೇಕೋ ಹಾಗೆಯೇ ನಮ್ಮಲ್ಲಿಗೆ ಬರುವ ಶಿವಶರಣರಿಗೂ ಕಾಯಬೇಕು. ಆದರೆ, ಧಾನ್ಯಗಳಲ್ಲಿನ ಜಳ್ಳು, ಕಸಕಡ್ದಿಗಳಂತಹ ಶಿವಶರಣರನ್ನಲ್ಲ, ಯೋಗ್ಯರಾದ ಶಿವಶರಣರ ಆಗಮನಕ್ಕಾಗಿ ಕಾಯಲೇಬೇಕು. ಅವರು ನಮ್ಮಲ್ಲಿಗೆ ಬಂದಾಗಲೇ ಅವರನ್ನು ಕರೆದು ಗೌರವಿಸಬೇಕು, ಆರೋಗಿಸಬೇಕು. ಇಂದು ಸಾಧ್ಯವಿಲ್ಲ, ನಾಳೆ ಗೌರವಿಸೋಣ, ನಾಳೆ ಆರೋಗಿಸೋಣ ಎಂದು ಉದಾಸೀನ ಮಾಡಿದರೆ ಶಿವಶರಣರು ಮರಳಿ ನಮ್ಮಲ್ಲಿಗೆ ಆಗಮಿಸುವ ಸಂಭವವೇ ಇರಲಾರದು. ಹೀಗಾದರೆ ಅವರನ್ನು ಆದರಿಸುವ, ಆರೋಗಿಸುವ, ಅವರ ಆಶೀರ್ವಾದಕ್ಕೆ ಪಾತ್ರವಾಗುವ ಅವಕಾಶವೇ ತಪ್ಪಿಹೋಗುತ್ತದೆ.
ಕಾಳು ಬಳಕೆಗೆ ಯುಕ್ತವಾಗಬೇಕೆಂದಾದರೆ ಬೆಳೆದ ಒಟ್ಟು ಧಾನ್ಯನ್ನು ಗಾಳಿಗೆ ತೂರಲೇಬೇಕು. ಹಾಗೆ ಗಾಳಿಗೆ ತೂರಿದೊಡನೆ ಕಾಳು ಜಳ್ಳಿನಿಂದ, ಕಸಕಡ್ಡಿಗಳಿಂದ ಬೇರ್ಪಟ್ಟು ಹಸನಾಗುತ್ತದೆ, ಬಳಕೆಗೆ ಯೋಗ್ಯವಾಗುತ್ತದೆ, ಸೇವನೆಗೆ ಪೂರಕವಾಗುತ್ತದೆ, ಆರೋಗ್ಯವರ್ಧನೆಗೆ ಕಾರಣವಾಗುತ್ತದೆ. ಇಂತಹ ವಿಚಾರಗಳಲ್ಲಿ ಪರಿಸ್ಥಿತಿ, ಸಮಯ, ಸಂದರ್ಭಗಳ ಪರಿಜ್ಞಾನ ಇರಲೇಬೇಕು. ಹಾಗೆಯೇ ಶಿವಶರಣರು ಆಗಮಿಸಿದಾಗ ಅವರನ್ನು ಗೌರವಿಸುವುದೆಂದರೆ ಧಾನ್ಯವನ್ನು ಗಾಳಿಗೆ ತೂರಿ ಕಾಳನ್ನು ಹಸನುಗೊಳಿಸಿದಂತೆ. ಶಿವಶರಣರಿಗೆ ನೀಡುವ ಗೌರವ, ದಾಸೋಹಗಳು ನಮ್ಮನ್ನು ನಾವು ಹಸನುಗೊಳಿಸಿಕೊಂಡಂತೆ. ಧಾನ್ಯ ಹಸನುಗೊಂಡ ಮೇಲೆ ಸೇವನೆಗೆ ಪೂರಕವಾಗುವಂತೆ, ಜನಸಾಮಾನ್ಯನ ಬದುಕು ಶಿವಶರಣರನ್ನು ಆದರಿಸಿದ ಮೇಲೆಯೇ ಗೌರವಕ್ಕೆ ಪೂರಕವಾಗುತ್ತದೆ, ಸಾರ್ಥಕವೂ ಆಗುತ್ತದೆ ಎಂಬುದು ಅಂಬಿಗರ ಚೌಡಯ್ಯನ ನಿಲುವು.
ಬದುಕು ತನ್ನಿಂದ ತಾನೇ ಪರಿಪೂರ್ಣವಾಗಲಾರದು. ಕಾಲಕಾಲಕ್ಕೆ ಅದರಲ್ಲಿ ಸೇರಿಕೊಳ್ಳುವ ಅನಪೇಕ್ಷಿತ ನಡವಳಿಕೆಗಳು, ಆಲೋಚನೆಗಳು, ಅಭಿರುಚಿಗಳು ಬದುಕನ್ನು ಅಯೋಮಯಗೊಳಿಸುತ್ತವೆ. ಬೆಳೆದ ಧಾನ್ಯವನ್ನು ಗಾಳಿಗೆ ತೂರಿ ಹಸನುಮಾಡಿಕೊಳ್ಳುವಂತೆ ಬದುಕನ್ನೂ ಹಸನುಮಾಡಿಕೊಳ್ಳಲೇಬೇಕು. ಧಾನ್ಯಗಳ ಹಸನುಗೊಳಿಸುವಿಕೆಗೆ ಬೇಕಾದುದು ಪ್ರಕೃತಿಯಲ್ಲಿ ಯುಕ್ತವಾದ ಹದದಲ್ಲಿ ಬೀಸುವ ಯುಕ್ತವಾದ ವೇಗದ ಗಾಳಿ. ಅದರೊಂದಿಗೆ ರೈತರ ನಿಯತ್ತು, ನಿಷ್ಠೆ, ಕಾಳಜಿಗಳೂ ಮುಖ್ಯ. ತೂರುವಿಕೆಯ ಸಂದರ್ಭದಲ್ಲಿ ಧಾನ್ಯ ಎಷ್ಟು ಹಸನಾಯಿತು? ಎಂಬುದರ ಜೊತೆಗೆ ಹೇಗೆ ಹಸನಾಯಿತು ಎಂಬುದೂ ಅಷ್ಟೇ ಮುಖ್ಯ. ಪೂರ್ತಿಯಾಗಿ ಹಸನುಗೊಂಡ ಮೇಲೆಯೇ ಆ ಧಾನ್ಯಕ್ಕೊಂದು ನೆಲೆ, ಬೆಲೆ. ಹಾಗೆಯೇ ಬದುಕಿನಲ್ಲಿ ಸೇರಿಕೊಳ್ಳುವ, ಬದುಕನ್ನು ಕಲುಷಿತಗೊಳಿಸುವ, ಅವನತಿಗೆ ತಳ್ಳುವ ಸ್ವಾರ್ಥ, ವಂಚನೆ, ಅನೈತಿಕತೆ, ದುರಹಂಕಾರ, ಮದ ಮೊದಲಾದ ಜಳ್ಳು, ಕಸ, ಕಡ್ಡಿಗಳನ್ನು ಕಳೆದುಕೊಳ್ಳಲೇಬೇಕು. ಅದಕ್ಕಾಗಿಯೇ ಮನುಷ್ಯ ಶಿವಶರಣರೆಂಬ ಗಾಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು. ಹೀಗೆ ಒಡ್ಡಿಕೊಂಡು ತನ್ನ ಬದುಕಿನಲ್ಲಿ ಸೇರಿಕೊಂಡಿರುವ ಜಳ್ಳು, ಕಸ, ಕಡ್ದಿಗಳನ್ನು ಕಳೆದುಕೊಂಡು ತನ್ನನ್ನು ಪರಿಷ್ಕರಿಸಿಕೊಳ್ಳುವುದಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಶಿವಶರಣರನ್ನು ಆದರಿಸುವುದು, ಗೌರವಿಸುವುದು, ಆರೋಗಿಸುವುದು.
ಧಾನ್ಯವು ಗಾಳಿಗೆ ತನ್ನನ್ನು ಒಡ್ಡಿಕೊಂಡು, ಹಸನುಗೊಂಡು ಶುದ್ಧವಾಗಿ ಬಳಕೆ ಪೂರಕವಾದಂತೆ, ಮನುಷ್ಯನೂ ಶಿವಶರಣರೆಂಬ ಗಾಳಿಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು. ಹಾಗೆ ಒಡ್ಡಿಕೊಂಡು ಶುದ್ಧವಾಗಬೇಕು. ಆಗ ಮಾತ್ರ ಆತನ ಬದುಕು ಕೆಡುಕನ್ನು ಕಳೆದುಕೊಂಡು ಶುದ್ಧವಾಗುತ್ತದೆ. ಸಮಾಜದಲ್ಲಿ ಮಾನ್ಯವಾಗುತ್ತದೆ. ಬಹುಶಃ ಅಂಬಿಗರ ಚೌಡಯ್ಯನ ಕಾಲದಲ್ಲಿ ನಿಜವಾದ ಶಿವಶರಣರನ್ನು ಹೊರತುಪಡಿಸಿ ವೇಷಧಾರಿ ಶಿವಶರಣರನ್ನು ಕರೆದು ಗೌರವಿಸುವ, ಅಂತಹವರಿಗೆ ದಾಸೋಹವನ್ನು ಏರ್ಪಡಿಸುವ, ಆ ಮೂಲಕ ತಾನೊಬ್ಬ ದಾಸೋಹಿ ಎಂದೋ ಶರಣನೆಂದೋ ಲೋಕಕ್ಕೆ ಸಾರುತ್ತ ಪ್ರಶಂಸೆಯನ್ನು, ಪ್ರಸಿದ್ಧಿಯನ್ನು ಗಳಿಸಿಕೊಳ್ಳುವುದಕ್ಕೆ ಹಾತೊರೆಯುವ, ನಿಜವಾದ ಶಿವಶರಣರನ್ನು ಅವಗಣಿಸುವ ಪರಿಪಾಠ ಬೆಳೆಯುತ್ತಿತ್ತೆಂದು ತೋರುತ್ತದೆ. ಹೊಟ್ಟೆಪಾಡಿಗಾಗಿ ವೇಷಧಾರಿ ಶಿವಶರಣರ ಹಾವಳಿಯನ್ನು ತಡೆಯಲು, ಶಿವಭಕ್ತಿಯಲ್ಲಿನ ಡಾಂಬಿಕತೆಯನ್ನು ತಡೆದು ಅದಕ್ಕೊಂದು ಯುಕ್ತ ಹಾಗೂ ಯೋಗ್ಯ ಸ್ಥಾನಮಾನವನ್ನು ಕಲ್ಪಿಸಲು ಅಂಬಿಗರ ಚೌಡಯ್ಯ ಪ್ರಯತ್ನಿಸಿದಂತೆ ಕಂಡುಬರುತ್ತದೆ. ಧಾನ್ಯವನ್ನು ಬೆಳೆಸುವುದು, ಕಸಕಡ್ದಿಗಳಿಂದ ಕೂಡಿದ ಅದನ್ನು ಗಾಳಿಗೆ ತೂರಿ ಹಸನುಗೊಳಿಸುವುದು, ಅನಂತರವೇ ಅದನ್ನು ಆರೋಗಣೆಗೆ ಸಿದ್ಧಪಡಿಸುವುದು, ಯುಕ್ತರಿಗೆ ಅದನ್ನು ಅರೋಗಿಸುವುದು ಹೇಗೆ ಒಂದು ಕಾಯಕವೋ ಹಾಗೆಯೇ ಮನುಷ್ಯ ತನ್ನಲ್ಲಿ ಬೆಳೆಕೊಂಡು ಬಂದಿರುವ ನ್ಯೂನತೆಗಳೆಂಬ ಕಸಕಡ್ಡಿಗಳನ್ನು ಶಿವಶರಣರೆಂಬ ಗಾಳಿಗೆ ತೂರಿ ತನ್ನನ್ನು ತಾನು ಹಸನುಗೊಳಿಸಿಕೊಳ್ಳುವುದು, ಹಾಗೆ ಹಸನುಗೊಂಡ ಮೇಲೆ ಶುದ್ಧವಾದ ಮನಸ್ಸಿನಿಂದ ಯೋಗ್ಯರಾದ ಶರಣರಿಗೆ ದಾಸೋಹವನ್ನು ನಡೆಸುತ್ತ ಅವರ ಆಶೀರ್ವಾದ, ಹಾರೈಕೆಗಳ ಮೂಲಕ ಸಾರ್ಥಕತೆಯನ್ನು ಹೊಂದುವುದೂ ಒಂದು ಕಾಯಕವೇ. ಅಂತಹ ಕಾಯಕವು ಪ್ರತಿಯೊಬ್ಬನ ಕರ್ತವ್ಯ ಎಂಬುದನ್ನೂ ತ್ರಿಕರಣಶುದ್ಧಿಯನ್ನು ಸಾಧಿಸಿಕೊಳ್ಳದ ಯಾವುದೇ ನಿಷ್ಪ್ರಯೋಜಕವೆಂಬ ಸಾರ್ವಕಾಲಿಕ ಸತ್ಯವನ್ನೂ ಅಂಬಿಗರ ಚೌಡಯ್ಯ ಈ ವಚನದ ಮೂಲಕ ಲೋಕಕ್ಕೆ ಸಾರಿದ್ದಾನೆ.
-ಡಾ. ವಸಂತ್ ಕುಮಾರ್, ಉಡುಪಿ
*****