(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)
ಸಂತ ಶಿಶುನಾಳ ಶರೀಫರ ಪ್ರಸಿದ್ಧ ತತ್ತ್ವಪದಗಳಲ್ಲಿ ಇದೂ ಒಂದು. ಈ ತತ್ತ್ವಪದ ಒಂದೆಡೆ ಗಂಡ-ಹೆಂಡಿರ ಸಂಬಂಧವನ್ನು, ಇನ್ನೊಂದೆಡೆ ಗುರು-ಶಿಷ್ಯರ ಸಂಬಂಧವನ್ನು, ಮತ್ತೊಂದೆಡೆ ಭಗವಂತ-ಭಕ್ತರ ಸಂಬಂಧವನ್ನು ನಿರೂಪಿಸುತ್ತದೆ. ಇದು, ಹೆಣ್ಣೊಬ್ಬಳು ತನ್ನ ಗಂಡ ತನ್ನನ್ನು ತಿದ್ದಿ, ಸರಿದಾರಿಗೆ ತಂದ ರೀತಿಯನ್ನು ತನ್ನ ಗೆಳತಿಗೆ ನಿರೂಪಿಸುವ ರೀತಿಯಲ್ಲಿ ರಚನೆಯಾಗಿರುವ ಒಂದು ಪ್ರತಿಮಾತ್ಮಕ ತತ್ತ್ವಪದ.
ಗುರು-ಶಿಷ್ಯರ ಸಂಬಂಧವನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಶುನಾಳ ಶರೀಫರ ಈ ತತ್ತ್ವಪದವನ್ನು ವ್ಯಾಖ್ಯಾನಿಸಲಾಗಿದೆ.
ಏನೂ ಅರಿಯದ ಶಿಷ್ಯನೊಬ್ಬ ಗುರುವಿನ ಸಾನ್ನಿಧ್ಯದಿಂದ ತಾನು ಹೇಗೆ ಬದಲಾದೆ, ತನ್ನಲ್ಲಿನ ನ್ಯೂನತೆಗಳನ್ನು ಕಳೆದುಕೊಂಡು ಪರಿಪೂರ್ಣನಾದೆ ಎಂಬುದನ್ನು ಶರೀಫರ ಈ ತತ್ತ್ವಪದ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಈ ಅರಿವಿನ, ಬದಲಾವಣೆಯ, ಅಥವಾ ಸುಧಾರಣೆಯ ಪ್ರಕ್ರಿಯೆ ಒಮ್ಮೆಲೇ ನಡೆಯದೆ ಹಂತ ಹಂತವಾಗಿ ನಡೆಯುವುದನ್ನು, ಶಿಷ್ಯ ತನ್ನಲ್ಲಿನ ಲೋಪದೋಷಗಳನ್ನು, ಕೆಡುಕನ್ನು ಹಂತ ಹಂತವಾಗಿ ಕಳೆದುಕೊಂಡು ಹಂತ ಹಂತವಾಗಿ ಪರಿಶುದ್ಧನಾಗುತ್ತ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದನ್ನು ಪ್ರಸ್ತುತಪಡಿಸುತ್ತದೆ.
ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ! ||ಪ||
(ಎಲ್ಲರಂಥವನಲ್ಲ-ಸಾಮಾನ್ಯರಂಥವನಲ್ಲ, ಅಸಾಮಾನ್ಯ ವ್ಯಕ್ತಿ; ಗಂಡ-ಗುರು; ಬಲ್ಲಿದನು-ತಿಳಿದವನು, ಜ್ಞಾನಿಯಾದವನು; ಪುಂಡ-ತಂಟೆಕೋರ, ತುಂಟ)
ತತ್ತ್ವಪದದ ಪಲ್ಲವಿಯ ಈ ಮಾತುಗಳು ಗುರುವಿನ ವಿಲಕ್ಷಣವಾದ, ವಿಶೇಷವಾದ, ಅಸಾಮಾನ್ಯತೆಯನ್ನು ಸ್ಪಷ್ಟಪಡಿಸುತ್ತದೆ. ತನ್ನ ಗುರು ಲೋಕದ ಉಳಿದ ಗುರುಗಳ ಹಾಗಲ್ಲ. ಅವನು ಅಸಾಮಾನ್ಯನಾದವನು. ಜ್ಞಾನಿಯಾದವನು. ಎಲ್ಲವನ್ನೂ ತಿಳಿದುಕೊಂಡವನು. ಮಾತ್ರವಲ್ಲ, ತುಂಟಾಟದ ಶಿಷ್ಯನನ್ನು ತಂಟೆಕೋರನೆನಿಸಿಕೊಂಡು ತಿದ್ದುವವನು. ಹಾಗಾಗಿ ಅವನು ಸಾಮಾನ್ಯನಲ್ಲ.
ಎಲ್ಲರಂಥವನಲ್ಲ ಕೇಳೇ
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗ್ಹೋಗದ್ಹಾಂಗ ಮಾಡಿಟ್ಟಾ – ಕಾಲ್
ಮುರಿದುಬಿಟ್ಟಾ
ಎಲ್ಲರಂಥವನಲ್ಲ ನನ ಗಂಡ! ||ಅ.ಪ.||
(ಸೊಲ್ಲು ಸೊಲ್ಲಿಗೆ-ಮಾತು ಮಾತಿಗೆ, ಹೆಜ್ಜೆ ಹೆಜ್ಜೆಗೆ; ಬಯ್ದು-ತಿದ್ದಿ; ಎಲ್ಲಿಗ್ಹೋಗದ್ಹಾಂಗ-ಎಲ್ಲಿಗೂ ಹೋಗದ ಹಾಗೆ, ಮನಸ್ಸು ಚಂಚಲಗೊಳ್ಳದ ಹಾಗೆ, ಹದ್ದುಮೀರಿ ವರ್ತಿಸದ ಹಾಗೆ; ಮಾಡಿಟ್ಟಾ-ಮಾಡಿಬಿಟ್ಟ, ರೂಪಿಸಿದ; ಕಾಲ್ ಮುರಿದುಬಿಟ್ಟಾ-ಎಲ್ಲಿಗೂ ಓಡಾಡದಂತೆ ಮಾತಿನಲ್ಲೇ ತಡೆದುಬಿಡು.)
ತತ್ತ್ವಪದದ ಅನುಪಲ್ಲವಿಯ ಈ ಮಾತುಗಳು ಗುರುವಿನ ಉಪಚಾರವನ್ನು ಪ್ರಸ್ತುತಪಡಿಸುತ್ತವೆ. ಈ ಗುರು ಎಲ್ಲರಂಥವನಲ್ಲ. ಹೆಜ್ಜೆ ಹೆಜ್ಜೆಗೂ ನಡೆ-ನುಡಿಗಳ ಕ್ರಮವನ್ನು ಹೇಳಿಕೊಟ್ಟಿದ್ದಾನೆ. ಮಾತು ಮನುಷ್ಯನಲ್ಲಿ ಬುದ್ಧಿಯನ್ನು ಬೆಳೆಸುವುದರಿಂದ ಮಾತನ್ನು ತಿದ್ದುವ ಮೂಲಕ ಬುದ್ಧಿಯನ್ನೂ ತಿದ್ದಿದ್ದಾನೆ. ಹೀಗೆ ತಿದ್ದಿ ತನ್ನ ಮನಸ್ಸು ಚಂಚಲಗೊಳ್ಳದಂತೆ ಸ್ಥಿರಗೊಳಿಸಿದ್ದಾನೆ. ಕಾಲುಗಳು ಸಿಕ್ಕಸಿಕ್ಕಲ್ಲೆಲ್ಲಾ ಓಡಾಡಿ ಚಾಪಲ್ಯಗಳ ಜಂಜಾಟದಲ್ಲಿ ಸಿಲುಕಿ, ಬದುಕು ಮೂರಾಬಟ್ಟೆಯಾಗದಂತೆ; ಮನಸ್ಸು ಇಲ್ಲಸಲ್ಲದ್ದನ್ನು ಅಪೇಕ್ಷಿಸುತ್ತ ಎಲ್ಲೆಲ್ಲಿಗೋ ಓಡಾಡಿಕೊಂಡು ಗೊಂದಲದ ಗೂಡಾಗದಂತೆ, ಮಾತಿನಲ್ಲಿಯೇ ತಡೆದುಬಿಟ್ಟು; ಮನಸ್ಸು, ಮಾತು, ನಡೆ, ಬದುಕು ಎಲ್ಲವನ್ನೂ ಸಾಮ, ದಾನ, ಭೇದ, ಹಾಗೂ ದಂಡಗಳೆಂಬ ಚತುರೋಪಾಯಗಳಿಂದ ದಂಡಿಸಿ ತಿದ್ದಿದ್ದಾನೆ. ಮನಸ್ಸನ್ನು ಹದಗೊಳಿಸಿ, ಅಕ್ಷರಜ್ಞಾನವನ್ನು ಬಿತ್ತಿ, ತಿಳಿವಳಿಕೆಯ ನೀರೆರೆದು, ನ್ಯೂನತೆಗಳೆಂಬ ಕಳೆಗಳನ್ನು ಕಿತ್ತು, ಜ್ಞಾನಾರ್ಜನೆಯ ದಾರಿಯಲ್ಲಿ ಅದರ ಫಲವನ್ನು ಉಣ್ಣುವಂತೆ ಕರುಣಿಸಿದ್ದಾನೆ. ಹಾಗಾಗಿ ಈ ಗುರು ಎಲ್ಲರಂಥವನಲ್ಲ.
ಮಾತಾಪಿತರು ಮನೆಯೊಳಿರುತಿರಲು – ಮನ
ಸೋತು ಮೂವರು
ಪ್ರೀತಿ ಗೆಳೆತನ ಮಾತೊಳಿರುತಿರಲು
ಮೈನರೆತು ಮಾಯದಿ
ಘಾತವಾಯಿತು ಯವ್ವನವು ಬರಲು;
ದೂತೆ ಕೇಳ್ನಿಮ್ಮವನು ಶೋಭನ
ರೀತಿಚಾರವನೆಲ್ಲ ತೀರಿಸಿ
ಪ್ರೀತಿಯಲಿ ಮೈಮಾಟ ಮಾಡಿದನೇ!
ಮಮತೆಯಲಿ ಕೂಡಿದ
ಎಲ್ಲರಂಥವನಲ್ಲ ನನ ಗಂಡ!
(ಮಾತಾಪಿತರು-ಬುದ್ಧಿಭಾವಗಳು; ಮನೆ-ದೇಹ; ಮನಸೋತು-ಆಸೆಪಟ್ಟು; ಮೂವರು-ತ್ರಿಕರಣಗಳು (ದೇಹ, ಮಾತು, ಮನಸ್ಸು; ಪ್ರೀತಿ ಗೆಳೆತನ ಮಾತು-ತ್ರಿಕರಣಗಳ ಸೆಳೆತ; ಮೈನರೆತು-ದೇಹ ಬೆಳೆದು; ಮಾಯದಿ-ಮಾಯೆಯಿಂದ, ಆಕರ್ಷಣೆಯಿಂದ; ಘಾತವಾಯಿತು-ಹೊಡೆತಕ್ಕೆ ಒಳಗಾಯಿತು; ದೂತೆ-ಸಖಿ; ನಿಮ್ಮವನು-ಗುರು; ಶೋಭನ-ಮಂಗಳಕರವಾದ, ಶುಭಕರವಾದ; ರೀತಿಚಾರ-ಆಚಾರ; ಮೈಮಾಟ ಮಾಡು- ತಿದ್ದು, ಒಪ್ಪಗೊಳಿಸು; ಮಮತೆ-ವಾತ್ಸಲ್ಯ; ಕೂಡಿದ-ಸ್ವೀಕರಿಸಿದ)
ದೇಹವೆಂಬುದು ಒಂದು ಮನೆ. ಮನೆಯೊಳಗೆ ತಂದೆ, ತಾಯಿಗಳಿದ್ದಂತೆ ದೇಹದೊಳಗೆ ಬುದ್ಧಿ, ಭಾವಗಳು. ತಂದೆ-ತಾಯಿಯರ ಪ್ರೀತಿ, ಮಮತೆ, ವಾತ್ಸಲ್ಯಗಳಲ್ಲಿ ಕ್ರಮೇಣ ಬದಲಾವಣೆಗಳಾದಂತೆ ದೇಹದೊಳಗೆ ಸೇರಿಕೊಂಡಿರುವ ಬುದ್ಧಿ, ಭಾವಗಳಲ್ಲೂ ನಿರಂತರ ಬದಲಾವಣೆಗಳು. ದೇಹದಲ್ಲಿ ಯೌವನವು ಕಾಲಿರಿಸಿದಂತೆ ಅದರ ಜೊತೆಯಾಗಿ ದೇಹ, ಮಾತು, ಮನಸ್ಸುಗಳಲ್ಲಿ ಅಗಾಧವಾದ ಬದಲಾವಣೆಗಳು. ದೇಹಕ್ಕೆ, ಮಾತಿಗೆ, ಮನಸ್ಸಿಗೆ ಬಗೆಬಗೆಯ ಸೆಳೆತಗಳು. ದೇಹಬೆಳೆದಂತೆ ಎಲ್ಲೆಲ್ಲೂ ಆಕರ್ಷಣೆಗಳು. ದೇಹ ಈ ಯೌವನದ ಹೊಡೆತಕ್ಕೆ ಸಿಲುಕಿಕೊಂಡಾಗಲೇ ಗುರು ಬಂದು ತನ್ನನ್ನು ಒಲಿಸಿಕೊಂಡು ಪ್ರೀತಿಯಿಂದ ದೇಹ, ಮಾತು, ಮನಸ್ಸುಗಳನ್ನು ಬಗೆಬಗೆಯಿಂದ ತಿದ್ದಿ; ಬುದ್ಧಿ-ಭಾವಗಳಿಗೆ ಕಡಿವಾಣ ಬಿಗಿದು, ಬದುಕಿನ ಆಚಾರ-ವಿಚಾರಗಳನ್ನು ತಿಳಿಯಪಡಿಸಿ, ಪ್ರೀತಿಯಿಂದ ದೇಹ, ಮಾತು, ಮನಸ್ಸುಗಳನ್ನು ಒಪ್ಪಗೊಳಿಸಿದ್ದಾನೆ. ಮಾತ್ರವಲ್ಲ, ವಾತ್ಸಲ್ಯದಿಂದ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದಾನೆ.
ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ಹೊಕ್ಕಗೊಡಿಸದೆ ಹತ್ತು ದಿಕ್ಕುಗಳಾ
ತೆಕ್ಕೆಯೊಳು ಬಿಗಿದಪ್ಪಿ ಚುಂಬಿಸಿ
ಸೊಕ್ಕಿಸಿದ ತಾಂಬೂಲ ರಸಗುಟು-
ಕಿಕ್ಕಿ ಅಕ್ಕರತಿಯಲಿ ನಗುವನು ತಾ!
ಬಲು ರಸಿಕನೀತ
ಎಲ್ಲರಂಥವನಲ್ಲ ನನ ಗಂಡ!
(ಅಕ್ಕತಂಗಿಯರಾರು ಮಂದಿ-ಷಡ್ವೈರಿಗಳು(ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ); ಅಗಲಿಸಿದ-ಬಿಡಿಸಿದ; ಐವರ-ಪಂಚೇಂದ್ರಿಯಗಳ(ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ); ಕಕ್ಕುಲಾತಿ-ಪ್ರೀತಿ; ಅಣ್ಣತಮ್ಮಗಳು- ಮನುಷ್ಯನೊಂದಿಗೆ ಹುಟ್ಟಿರುವ ಕಾಮ, ಕ್ರೋಧಾದಿ ಷಡ್ವೈರಿಗಳು; ನೆದರೆತ್ತಿ ಮ್ಯಾಲಕ-ಮೈಮೇಲೆ ನೋಟ ಹಾಯಿಸಿ; ಹೊಕ್ಕಗೊಡಿಸದೆ-ಪ್ರವೇಶಿಸುವುದಕ್ಕೆ ಅವಕಾಶಕೊಡದೆ; ಹತ್ತು ದಿಕ್ಕುಗಳಾ-ವಿವಿಧ ಕಡೆಗಳಿಂದ(ವಿವಿಧ ಕಡೆಗಳಿಂದ ಬರಬಹುದಾದ ಸೆಳೆತಗಳು); ತೆಕ್ಕೆಯೊಳು ಬಿಗಿದಪ್ಪಿ-ನೈತಿಕ ಚೌಕಟ್ಟಿನೊಳಗೆ ಸೇರಿಸಿಕೊಂಡು, ಶಿಷ್ಯವಾತ್ಸಲ್ಯವೆಂಬ ಬಾಹುಗಳಲ್ಲಿ ಬರಸೆಳೆದು ಆಲಿಂಗಿಸಿ; ಸೊಕ್ಕಿಸಿದ ತಾಂಬೂಲ ರಸಗುಟುಕಿಕ್ಕಿ-ಅನುಭಾವದ ರಸಾಮೃತವನ್ನು ಉಣಿಸಿ; ಅಕ್ಕರತಿ-ಅಕ್ಕರೆ, ಪ್ರೀತಿ, ವಾತ್ಸಲ್ಯ; ಬಲು ರಸಿಕ-ರಸಸೂಕ್ಷ್ಮಗಳನ್ನು ಬಲ್ಲವನು)
ಮನುಷ್ಯನಿಗೆ ಒಡಹುಟ್ಟಿದ ಅಕ್ಕತಂಗಿಯರಂತೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಮನುಷ್ಯ ಜನ್ಮದೊಂದಿಗೆ ದೇಹಕ್ಕೆ ಅಂಟಿಕೊಂಡೇ ಬರುವ ಷಡ್ವೈರಿಗಳು. ಇವು ಬದುಕಿನ ಜಂಜಾಟಗಳಿಗೆ ಕಾರಣವಾಗುವಂತಹವು. ಹಾಗೆಯೇ ಒಡಹುಟ್ಟಿದ ಅಣ್ಣತಮ್ಮಂದಿರಂತೆ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಐದು ಪಂಚೇಂದ್ರಿಯಗಳು. ಇವು ಹುಟ್ಟುವಾಗಲೇ ದೇಹಕ್ಕೆ ಸೇರಿಕೊಂಡಿರುವಂತಹುಗಳು. ಈ ಷಡ್ವೈರಿಗಳು ಹಾಗೂ ಪಂಚೇಂದ್ರಿಯಗಳು ಮನುಷ್ಯನನ್ನು ಪದೇಪದೇ ದಾರಿತಪ್ಪಿಸುವಂಥವು. ಬದುಕಿನ ನಾಶಕ್ಕೆ ಕಾರಣವಾಗುವ ಇಂತಹ ಆಕರ್ಷಣೆಗಳಿಗೆ ತಾನು ತುತ್ತಾಗದಂತೆ ತನ್ನ ಮೇಲೆ ಕರುಣೆಯ ನೋಟವನ್ನು ಹಾಯಿಸಿ, ತನ್ನನ್ನು ಕಾಮಕ್ರೋಧಾದಿ ಷಡ್ವೈರಿಗಳ ಆಕ್ರಮಣದಿಂದ ಹಾಗೂ ಪಂಚೇಂದ್ರಿಯಗಳ ಸೆಳೆತದಿಂದ ಅಗಲಿಸಿ(ಬಿಡುಗಡೆಗೊಳಿಸಿ), ಅವುಗಳ ವ್ಯಾಮೋಹದಿಂದ, ಆಕರ್ಷಣೆಯಿಂದ ಬಿಡಿಸಿ ಅಸಾಮಾನ್ಯ ಗುರು ಕಾಪಾಡಿದ್ದಾನೆ. ಹತ್ತಾರು ಕಡೆಗಳಿಂದ ಬರುವ ಆಕರ್ಷಣೆಗಳಿಗೆ, ಸೆಳೆತಗಳಿಗೆ ತಾನು ಒಳಗಾಗದಂತೆ, ಅವು ತನ್ನ ದೇಹ, ಮನಸ್ಸುಗಳಿಗೆ ಪ್ರವೇಶಿಸದಂತೆ ತಡೆದು ತನ್ನ ಮನಸ್ಸು ಚಂಚಲಗೊಳ್ಳದಂತೆ ಸ್ಥಿರಗೊಳಿಸಿದ್ದಾನೆ. ಶಿಷ್ಯನೆಂಬ ಮಮಕಾರದಿಂದ, ನೈತಿಕ ಚೌಕಟ್ಟಿನೊಳಗೆ ಸೇರಿಸಿಕೊಂಡು, ತನ್ನ ಶಿಷ್ಯವಾತ್ಸಲ್ಯವೆಂಬ ಬಾಹುಗಳಲ್ಲಿ ಬರಸೆಳೆದು ಅಲಿಂಗಿಸಿ ರಕ್ಷಿಸಿದ್ದಾನೆ. ರಸಭಾವಗಳನ್ನು ಬಲ್ಲ ರಸಿಕನಾದ ಗುರು, ತಾನು ಕಂಡುಕೊಂಡ ಅನುಭಾವದ ರಸಾಮೃತವನ್ನು ತನಗೆ ಪ್ರೀತಿಯಿಂದ ಉಣಿಸಿದ್ದಾನೆ.
ತುಂಟ ಸವತಿಯ ಸೊಂಟ ಮುರಿಹೊಡೆದಾ
ಒಣ ಪಂಟಮಾತಿನ
ಗಂಟುಕಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಕುಂಟ ಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ!
ತಕ್ಕವನೆ ಸಿಕ್ಕಾ
ಎಲ್ಲರಂಥವನಲ್ಲ ನನ ಗಂಡ!
(ತುಂಟಸವತಿ-ಚಂಚಲ ಮನಸ್ಸು, ಕೆರಳಿಸುವ ಮನಸ್ಸು; ಸೊಂಟಮುರಿಹೊಡೆದ-ಅತ್ತಿತ್ತ ಚಲಿಸದಂತೆ ತಡೆದು ಹಿಡಿತಕ್ಕೆ ತರುವುದು; ಒಣಪಂಟಮಾತು-ಒಣ ಹರಟೆ, ವ್ಯರ್ಥಾಲಾಪ; ಗಂಟುಕಳ್ಳರು-ಮನಸ್ಸನ್ನು ಕೊಳ್ಳೆಹೊಡೆಯುವ ಭಾವಗಳು; ಬರಗೊಡದಾ-ಬರದಂತೆ ತಡೆಯುವುದು; ಹದಿನೆಂಟು ಮಂದಿ ಕುಂಟಲಿಯರು-ಮನುಷ್ಯನನ್ನು ಕಾಡುವ ಹದಿನೆಂಟು ಬಗೆಯ ದೋಷಗಳು(ಸಾವು, ನಿದ್ರೆ, ಚಿಂತೆ, ಲಜ್ಜೆ, ಕ್ಷುಧೆ(ಹಸಿವು) , ತೃಷೆ(ಬಾಯಾರಿಕೆ), ವಿಷಯ(ಕಾಮ), ಆಧಿ(ಮಾನಸಿಕ ತೊಂದರೆ), ವ್ಯಾಧಿ(ರೋಗ), ದ್ಯೂತೋದ್ಯೋಗ, ದಾಹ, ಕ್ಷಯ, ರತಿ, ಸ್ವೇದ, ಕೋಪ, ಶೋಕ, ಉದ್ಭ್ರಮೆ, ಭಯ); ಹಾದಿಯನು ಕಡಿದಾ-ರಕ್ಷಣೆಯನ್ನು ಒದಗಿಸಿದನು; ಕುಂಟಕುರುಡಾರೆಂಟು ಮಂದಿ-ಅಷ್ಟಮದಗಳು(ಧನದ ಮದ, ಕುಲದ ಮದ, ವಿದ್ಯೆಯ ಮದ, ರೂಪದ ಮದ, ಯೌವನದ ಮದ, ಬಲದ ಮದ, ಪರಿವಾರದ ಮದ ಹಾಗೂ ಅಧಿಕಾರದ ಮದ); ಗಂಟುಬಿದ್ದರೆ-ಅಂಟಿಕೊಂಡಾಗ; ಅವರ ಕಾಣುತ-ಅವುಗಳನ್ನು ತಡೆಯುತ್ತ; ಗಂಟಲಕೆ ಗಾಣಾದ-ಪ್ರಾಣಕ್ಕೆ ಮಾರಕನಾದ; ತಕ್ಕವ-ಯೋಗ್ಯನಾದವ; ಸಿಕ್ಕಾ-ಸಿಕ್ಕಿದ್ದಾನೆ, ದೊರಕಿದ್ದಾನೆ.)
ಮನುಷ್ಯನ ಬಹುತೇಕ ಅವನತಿಗೆ ಕಾರಣವಾಗುವಂತಹುದು ಆತನ ಚಂಚಲ ಮನಸ್ಸು ಅಥವಾ ಲೋಕದ ವ್ಯವಹಾರಗಳಿಗೆ ಕೆರಳುವ ಮನಸ್ಸು. ಆ ಮನಸ್ಸು ತುಂಟ ಸವತಿ ಇದ್ದಹಾಗೆ. ಮನಸ್ಸನ್ನು ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಕಾಡುತ್ತ, ಪೀಡಿಸುತ್ತ, ಕೆರಳಿಸುತ್ತಲೇ ಇರುತ್ತದೆ. ಗುರು ಅಂತಹ ಮನಸ್ಸನ್ನು ಅತ್ತಿತ್ತ ಚಲಿಸದಂತೆ ಹಿಡಿತಕ್ಕೆ ತಂದು ನಿಲ್ಲಿಸಿದ್ದಾನೆ. ಬದುಕಿಗೆ, ಅದರ ಸಾಧನೆಗೆ ಎಳ್ಳಷ್ಟೂ ಪ್ರಯೋಜನವಿಲ್ಲದ ಒಣ ಹರಟೆಗೆ ಮನಸ್ಸು ಬಲಿಯಾಗದಂತೆ ತಡೆದಿದ್ದಾನೆ. ಏನೇನೋ ನೆಪಹೇಳಿ ಮನಸ್ಸಿಗೆ ಲಗ್ಗೆಹಾಕಿ, ಮನಸ್ಸಿನ ನೆಮ್ಮದಿಯನ್ನು ಕೊಳ್ಳೆಹೊಡೆಯುವ ಭಾವಗಳನ್ನು ಹತ್ತಿರಕ್ಕೆ ಬಾರದಂತೆ ತಡೆದಿದ್ದಾನೆ. ಬದುಕಿನಲ್ಲಿ ಪದೇ ಪದೇ ಕಾಡುತ್ತ ಮನುಷ್ಯನನ್ನು ನಾಶದ ಅಂಚಿಗೆ ತಳ್ಳುವ ಹದಿನೆಂಟು ವಿಧದ ದೋಷ(ವಿಷ್ನ)ಗಳನ್ನು ತನ್ನ ಬದುಕಿನೊಳಗೆ ನುಸುಳದಂತೆ ತಡೆದು ರಕ್ಷಣೆಯನ್ನು ಒದಗಿಸಿದ್ದಾನೆ. ಮಾತ್ರವಲ್ಲ, ಮನುಷ್ಯನನ್ನು ದಾರಿತಪ್ಪಿಸಿ ನಾಶದ ಅಂಚಿಗೆ ತಳ್ಳುವ ಕುಂಟರೂ ಕುರುಡರೂ ಆಗಿರುವ ಧನ, ಕುಲ, ವಿದ್ಯೆ, ರೂಪ, ಯೌವನ, ಬಲ, ಪರಿವಾರ ಹಾಗೂ ಅಧಿಕಾರಗಳಿಗೆ ಸಂಬಂಧಿಸಿದ ಮದಗಳು ದೇಹ, ಮನಸ್ಸುಗಳಲ್ಲಿ ನೆಲೆಯೂರಲು ಹವಣಿಸಿದಾಗ ಅವುಗಳನ್ನು ತಡೆದು ನಾಶಮಾಡಿ ತನ್ನನ್ನು ರಕ್ಷಿಸಿದ್ದಾನೆ. ಹೀಗೆ ಹತ್ತಾರು ಬಗೆಗಳಿಂದ, ಹತ್ತಾರು ಕಡೆಗಳಿಂದ ತನ್ನ ದೇಹವನ್ನು, ಮನಸ್ಸನ್ನು, ಸಾಧನೆಯನ್ನು ಕಾಪಾಡಿಕೊಳ್ಳಲು ತನಗೆ ತಕ್ಕ ಗುರುವೇ ಸಿಕ್ಕಿದ್ದಾನೆ. ತನ್ನ ಬದುಕಿನ ಸಾರ್ಥಕ್ಯಕ್ಕೆ ಕಾರಣನಾಗಿರುವ ಈ ಗುರು ಎಲ್ಲರಂಥವನಲ್ಲ. ಅಸಾಮಾನ್ಯವಾದವನು.
ಅತ್ತೆ ಮಾವರ ಮನೆಯ ಬಿಡಿಸಿದನೇ
ಮತ್ತಲ್ಲಿ ಪ್ರೀತಿಯ
ಮಕ್ಕಳೈವರ ಮಮತೆ ಕೆಡಿಸಿದನೆ
ಕೈಹಿಡಿದು ತಂದು
ರತ್ನ ಜ್ಯೋತಿಯ ಪ್ರಭೆಯೊಳಿರಿಸಿದನೇ
ಎತ್ತ ಹೋಗದೆ ಚಿತ್ತ ಅಗಲದೆ
ಗೊತ್ತಿನಲ್ಲೇ ಇಟ್ಟು ನನ್ನ
ಮುತ್ತಿನಾ ಮೂಗುತಿಯ ಕೊಟ್ಟಾನೇ
ಇನ್ನೆಂಥ ದಿಟ್ಟನೆ
ಎಲ್ಲರಂಥವನಲ್ಲ ನನ ಗಂಡ!
(ಅತ್ತೆ ಮಾವರ ಮನೆ- ಸತ್ಯ(ಆತ್ಮ) ಮತ್ತು ಅಸತ್ಯ(ದ್ಳೇಹ) ಬಗೆಗಿನ ಅಜ್ಞಾನ; ಮಕ್ಕಳೈವರು-ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ); ಮಮತೆ-ಸೆಳೆತ; ಕೆಡಿಸು-ತಡೆಹಿಡಿ, ವಿಚಲಿತಗೊಳಿಸು; ರತ್ನಜೋತಿಯ ಪ್ರಭೆ- ಅಲೌಕಿಕವಾದ ಆನಂದದ ಸ್ಥಿತಿ, ಕಾರ್ಯವೊಂದನ್ನು ಸಾಧಿಸಿದಾಗ ಉಂಟಾಗುವ ಅಲೌಕಿಕ ಅನುಭವದ ಸ್ಥಿತಿ; ಎತ್ತಹೋಗದೆ-ಒಬ್ಬಂಟಿಗನಾಗಿರಲು ಬಿಡದೆ; ಚಿತ್ತ ಅಗಲದೆ-ಮಾನಸಿಕ ಸ್ಥಿರತೆಯನ್ನು ಕಾಪಾಡಿ; ಗೊತ್ತಿನಲ್ಲೇ ಇಟ್ಟು-ಅನ್ಯೋನ್ಯವಾಗಿರಿಸಿಕೊಂಡು; ಮುತ್ತಿನಾ ಮೂಗುತಿಯ ಕೊಟ್ಟಾನೆ-ಬದುಕಿಗೆ ಸಾರ್ಥಕ್ಯವನ್ನು ಕೊಡುವುದು; ದಿಟ್ಟ- ಧೈರ್ಯಶಾಲಿ.)
ಏನೂ ಅರಿಯದ ತನ್ನನ್ನು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ತನ್ನಲ್ಲಿ ಸತ್ಯ(ಆತ್ಮ) ಮತ್ತು ಅಸತ್ಯ(ದೇಹ)ಗಳ ಬಗೆಗಿನ ಅಜ್ಞಾನವನ್ನು ಬಿಡಿಸಿ, ತಿಳಿವಳಿಕೆಯನ್ನು ಮೂಡಿಸಿದ್ದಾನೆ. ಜ್ಞಾನಾರ್ಜನೆಯ ದಾರಿಯಲ್ಲಿ ಎಲ್ಲಿಯೂ ನಿರಂತರವಾದ ನಿಲುಗಡೆಯೇ ಇಲ್ಲವಾದ್ದರಿಂದ ಗುರು, ಈಗ ತನ್ನನ್ನು ಅಲ್ಲಿಯೇ ಬಹಳ ಕಾಲ ಇರಲು ಅವಕಾಶ ಕೊಡದೆ ಅಲ್ಲಿಂದಲೂ ಕರೆದೊಯ್ಯುತ್ತಾನೆ. ಅಲ್ಲಿಂದ ಕರೆದುಕೊಂಡು ಹೋಗಬೇಕಾದರೆ ಬದುಕಿನ ಮಮಕಾರಕ್ಕೆ ಕಾರಣವಾಗಬಲ್ಲ ಪಂಚೇಂದ್ರಿಯಗಳ ಮೇಲಿನ ಮಮತೆಯನ್ನು ಕಡಿದುಹಾಕಬೇಕು. ಸಾಧನೆಯ ದಾರಿಯಲ್ಲಿ ಮನುಷ್ಯನಿಗೆ ಪದೇ ಪದೇ ತಡೆಯೊಡ್ಡುತ್ತಿರುವುದೇ ಈ ಪಂಚೇಂದ್ರಿಯಗಳು ಹಾಗೂ ಅವುಗಳ ಕ್ರಿಯೆಗಳ ಸೆಳೆತ. ಗುರು, ಶಿಷ್ಯನಾದ ತನ್ನನ್ನು ಸೆಳೆಯುತ್ತಿರುವ ಪಂಚೇಂದ್ರಿಯಗಳ ಮೇಲಿನ ಮಮತೆ ಅಥವಾ ಸೆಳೆತವನ್ನು ಬಿಡಿಸುತ್ತಾನೆ. ಸಾಧನೆಯ ಹಾದಿಯಲ್ಲಿ ಈ ಪಂಚೇಂದ್ರಿಯಗಳು ಅನಿವಾರ್ಯವಾದರೂ, ಮುಖ್ಯವಾದರೂ ಅವುಗಳಲ್ಲಿಯೇ ಮನಸ್ಸು ವಿಹರಿಸಿಕೊಂಡಿದ್ದರೆ ಮುಂದಿನ ಸಾಧನೆ ಸಾಧ್ಯವಾಗುವುದಿಲ್ಲ. ಹಾಗಾಗಿ ಗುರು ತನ್ನ ಈ ಮಮಕಾರವನ್ನು ಬಿಡಿಸಿ, ಮನಸ್ಸನ್ನು ಅಲ್ಲಿಂದ ವಿಚಲಿತಗೊಳಿಸಿ, ಇನ್ನೂ ಉನ್ನತವಾದ ಸ್ಥಿತಿಯಲ್ಲಿ ಇರಿಸುವುದಕ್ಕೆ ಪ್ರಯತ್ನಿಸುತ್ತಾನೆ.
ಬದುಕಿನಲ್ಲಿ ಒಂದೊಂದು ಮಮಕಾರವನ್ನು ಕಳೆದುಕೊಳ್ಳುತ್ತ ಹೊಸತನ್ನು ಸಾಧಿಸುತ್ತ, ಸಾಧಿಸಿದ ಮೇಲೆ ನಿರಂತರ ಅಲ್ಲಿಯೇ ಸ್ಥಿರಗೊಳ್ಳದೆ ಮತ್ತೆ ಹೆಚ್ಚಿನ ಸಾಧನೆಯ ಹಾದಿಯಲ್ಲಿ ಮುಂದುವರಿದು ಅತ್ಯಂತ ಉನ್ನತವಾದ ಹಾಗೂ ಅಲೌಕಿಕವಾದ ಆನಂದಸ್ಥಿತಿಯನ್ನು ಪಡೆಯಬೇಕು. ಗುರು, ತನ್ನನ್ನು ಅಲ್ಲಿಗೆ ಕರೆದೊಯ್ದು ಬದುಕನ್ನು ಸಾರ್ಥಕಗೊಳಿಸುವುದಕ್ಕೆ ಕಾರಣನಾಗುತ್ತಾನೆ. ಸಾಧನೆಯ ತುತ್ತತುದಿಯಲ್ಲಿ ಮಾನಸಿಕ ಚಾಂಚಲ್ಯ ಹಾಗೂ ಗೊಂದಲಗಳು ಸಹಜವಾದುದರಿಂದ ಗುರು ತನ್ನನ್ನು ಬಿಟ್ಟುಬಿಡದೆ, ಸದಾ ತನ್ನೊಂದಿಗಿದ್ದುಕೊಂಡು, ತನ್ನ ಮಾನಸಿಕ ಚಾಂಚಲ್ಯ, ಗೊಂದಲಗಳನ್ನು ತಡೆಹಿಡಿದು, ಸ್ಥಿರತೆಯನ್ನು ಕಾಪಾಡಿಕೊಂಡು, ಅನ್ಯೋನ್ಯವಾಗಿರಿಸಿಕೊಂಡು, ಬದುಕನ್ನು ಸಾರ್ಥಕಗೊಳಿಸಿದ್ದಾನೆ. ಹಾಗಾಗಿ ಈ ಗುರು ಸಾಮಾನ್ಯದವನಲ್ಲ, ತನ್ನ ಬದುಕಿಗೆ ಸಾರ್ಥಕ್ಯವನ್ನು ನೀಡಿದ ಧೈರ್ಯಶಾಲಿಯಾಗಿದ್ದಾನೆ.
ಕಾಂತೆ ಕೇಳೆ ಕರುಣ ಗುಣದಿಂದಾ
ಎನಗಿಂಥ ಪುರುಷನು
ಎಂತೋ ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವದುರಿತವನು ಹರಿಸಿದನೇ
ಚಿಂತೆಯನು ಮರಸಿದ
ಎಲ್ಲರಂಥವನಲ್ಲ ನನ ಗಂಡ!
(ಕರುಣಗುಣ-ಕನಿಕರವುಳ್ಳ ಗುಣ; ಪುರುಷ-ಗುರು, ಮುಕ್ತಿಯ ದಾರಿಯಲ್ಲಿ ನಡೆಸುವವನು; ಎಂತೋ-ಹೇಗೋ; ಪುಣ್ಯಫಲ-ಪೂರ್ವಜನ್ಮದ ಫಲ; ಅಂತರಂಗ-ಮನಸ್ಸು; ಕಾಂತ-ಒಡೆಯ; ಶ್ರೀ ಗುರುನಾಥ ಗೋವಿಂದ- ಗುರು ಗೋವಿಂದ ಭಟ್ಟ; ಏಕಾಂತಮಂದಿರ-ಆಪ್ತ ಸಮಾಲೋಚನೆಯ ಸ್ಥಳ; ಭ್ರಾಂತಿ ಭವದುರಿತ-ಭ್ರಾಂತಿಗೆ ನಿಜವೆಂದು ತೋರುವ ಈ ಲೋಕದ ಕೇಡುಗಳು; ಹರಿಸು-ನಾಶಮಾಡು; ಚಿಂತೆ-ಕಳವಳ, ವ್ಯಥೆ; ಮರಸಿದ-ಮರೆಸಿದ, ಮರೆಯುವಂತೆ ಮಾಡಿದ.)
ತನಗೆ ದೊರಕಿದ ಗುರು, ಸಾಮಾನ್ಯನಾದ ತನ್ನನ್ನು ಅಸಾಮಾನ್ಯನನ್ನಾಗಿ ರೂಪಿಸಬೇಕೆಂಬ ಕನಿಕರ ಉಳ್ಳವನು. ಈತ ಹೇಗೋ ಪೂರ್ವಜನ್ಮದ ಪುಣ್ಯದ ಫಲದಿಂದ ತನಗೆ ದೊರಕಿದ್ದಾನೆ. ಮಾತ್ರವಲ್ಲ, ತನ್ನ ದೇಹದ ಒಂದೊಂದೇ ಅವಗುಣಗಳನ್ನು ಕಳೆಯುತ್ತಾ, ಸಂಶಯಗಳನ್ನು ಪರಿಹರಿಸುತ್ತಾ, ತನ್ನ ಅಂತರಂಗಕ್ಕೂ ಲಗ್ಗೆ ಇಟ್ಟಿದ್ದಾನೆ. ಹಾಗಾಗಿ ಈ ಗುರು ತನ್ನ ಅಂತರಂಗದ ಒಡೆಯನಾಗಿ ತನ್ನ ಮನಸ್ಸಿನಲ್ಲಿನ ಕ್ಷುಲ್ಲಕ ಭಾವನೆಗಳನ್ನು, ಆಸೆ-ಆಕಾಂಕ್ಷೆಗಳನ್ನು, ವ್ಯಾಮೋಹ, ಸೆಳೆತಗಳನ್ನು ತೊಡೆದುಹಾಕಿ ಮನಸ್ಸನ್ನು ಶುದ್ಧಗೊಳಿಸಿ ಆಳುತ್ತಿದ್ದಾನೆ. ಈ ಗುರು ಬೇರಾರೂ ಅಲ್ಲ, ಶ್ರೀ ಗುರುನಾಥ ಗೋವಿಂದ ಭಟ್ಟ. ಈ ಗುರು ಅತ್ಯಂತ ಒಲವಿನಿಂದ, ವಾತ್ಸಲ್ಯದಿಂದ, ಕರುಣೆಯಿಂದ ತನ್ನನ್ನು ಕರೆದು ಏಕಾಂತ ಮಂದಿರದೊಳಗೆ ಕುಳ್ಳಿರಿಸಿ, ಭ್ರಾಂತಿಗೆ ನಿಜವೆಂದು ಕಾಣುವ ಈ ಲೋಕದ ಕೆಡುಕುಗಳನ್ನು, ಮನದ ಕಶ್ಮಲಗಳನ್ನು, ಬದುಕಿನ ಸೆಳೆತಗಳನ್ನು, ಸಾಧನೆಯ ಹಾದಿಯಲ್ಲಿನ ಅಡೆತಡೆಗಳನ್ನು ತಡೆದು, ತೊಡೆದು, ಮನಸ್ಸಿನ ಕಳವಳವನ್ನು ಮರೆಯುವಂತೆ ಮಾಡಿ ಬದುಕನ್ನು ಸಾರ್ಥಕಗೊಳಿಸಿದ್ದಾನೆ. ಮುಕ್ತಿಯ ಹಾದಿಯಲ್ಲಿ ಕೈಹಿಡಿದು ನಡೆಸಿದ್ದಾನೆ. ಹಾಗಾಗಿ ಈ ಗುರು ಸಾಮಾನ್ಯದವನಲ್ಲ, ಅವನು ಅಸಾಮಾನ್ಯನಾದವನು.
ಈ ತತ್ತ್ವಪದ ಶಿಶುನಾಳ ಶರೀಫರ ಅತ್ಯುತ್ತಮ ತತ್ತ್ವಪದ ಎನಿಸಿಕೊಂಡಿದೆ. ಒಂದೇ ಓದಿನಲ್ಲಿ ಮೂರು ನೆಲೆಗಳಿಗೆ ತನ್ನ ಅರ್ಥಪ್ರತೀತಿಯನ್ನು ವಿಸ್ತರಿಸುವುದು ಶರೀಫರ ಅನುಭಾವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಗುರು ಗೋವಿಂದ ಭಟ್ಟರು, ಹೇಗೋ ಇದ್ದ ತನ್ನನ್ನು, ತನ್ನ ಬದುಕನ್ನು ಹಾಗೂ ತನ್ನ ಸಾಧನೆಯನ್ನು ಉಜ್ವಲಗಳಿಸಿದ ರೀತಿಯನ್ನು ಹಾಗೂ ಅದರ ವಿವಿಧ ಹಂತಗಳನ್ನು, ತಾನು ತನ್ನೆಲ್ಲ ಲೋಪದೋಷಗಳನ್ನು ಕಳೆದುಕೊಂಡು ಪರಿಷ್ಕಾರಗೊಂಡ ಬಗೆಯನ್ನು ಹಂತ ಹಂತವಾಗಿ ನಿರೂಪಿಸಿದ್ದಾರೆ. ಶಿಷ್ಯನೊಬ್ಬ ಸುಧಾರಿಸಿಕೊಳ್ಳುವುದಕ್ಕೆ, ತನ್ನೆಲ್ಲ ಅವಗುಣಗಳನ್ನು ಕಳೆದುಕೊಂಡು ಸಾಧಕನೆನಿಸಿಕೊಳ್ಳುವುದಕ್ಕೆ ಗುರು ಎಷ್ಟರಮಟ್ಟಿಗೆ ಕಾರಣನಾಗುತ್ತಾನೆ ಎಂಬುದನ್ನು ಈ ತತ್ತ್ವಪದ ಪ್ರಸ್ತುತಪಡಿಸುತ್ತದೆ. ತನ್ನ ಗಂಡ ತನ್ನೆಲ್ಲ ಅವಗುಣಗಳನ್ನು ತೊಡೆದುಹಾಕಿ ಬದುಕಿಗೊಂದು ಸಾರ್ಥಕ್ಯವನ್ನು ನೀಡಿದ ರೀತಿಯನ್ನು ಹೆಣ್ಣೊಬ್ಬಳು, ತನ್ನ ಗೆಳತಿಗೆ ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯಲ್ಲಿ ಈ ತತ್ತ್ವಪದ ನಿರೂಪಿತವಾಗಿರುವುದು ಈ ತತ್ತ್ವಪದಕ್ಕೆ ವಿವಿಧ ಆಯಾಮಗಳನ್ನು ಒದಗಿಸಿದೆ. ಸಾಂಸಾರಿಕ ಚಿತ್ರಣದ ಮೂಲಕ ಹಲವು ನೆಲೆಗಳಿಗೆ ವ್ಯಾಪಿಸುವ ಈ ತತ್ತ್ವಪದ ಶರೀಫರ ಮೇಧಾವಿತನಕ್ಕೆ, ಅವರ ಅಪರಿಮಿತ ಜ್ಞಾನಕ್ಕೆ ಹಾಗೂ ಅವರ ಸಾಧನೆಗೆ ಅತ್ಯುತ್ತಮವಾದ ಸಾಕ್ಷಿಯಾಗಿದೆ. ’ಯಥಾ ಗುರು, ತಥಾ ಶಿಷ್ಯ’ ಎನ್ನುವಂತೆ ಈ ತತ್ತ್ವಪದದಲ್ಲಿನ ಗುರುವು ಎಲ್ಲರಂಥವನಲ್ಲ! ಹಾಗೆಯೇ ಶಿಷ್ಯನೂ ಕೂಡಾ.
(ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಈ ತತ್ತ್ವಪದವನ್ನು ಸಂಗೀತದ ಹಿನ್ನೆಲೆಯೊಂದಿಗೆ ಆಲಿಸಿರಿ ).
***
ಉತ್ತಮ ಲೇಖನ. ಶುಭವಾಗಲಿ
ತುಂಬಾ ಚೆನ್ನಾಗಿದೆ ಸರ್.ಶರೀಫರ ಈ ಗೀತೆಯ ವಿಶ್ಲೇಷಣೆಯನ್ನು ವಿವರವಾಗಿ ನೀಡಿ ಓದುಗರಿಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ.ತುಂಬಾ ಸಂತೋಷ.
ನಿಮ್ಮ ಅಭಿಮಾನ ಹಾಗೂ ವಿಶ್ವಾಸಗಳಿಗೆ ಕೃತಜ್ಞತೆಗಳು. ನಿಮ್ಮ ಸಮಾನ ಮನಸ್ಕ ಸ್ನೇಹಿತರಿಗೆ, ವಿದ್ಯಾರ್ಥಿಗಳಿಗೆ ಇದರ ಲಿಂಕನ್ನು ಶೇರ್ ಮಾಡಬೇಕಾಗಿ ವಿನಂತಿ.🙏
Hi sir explanation is super and I want to know the explanation of ಸವಾಲೊಂದು ನಿನ್ನ ಮ್ಯಾಲ್ ಶಾಹಿರಾಕೆ song please upload sir
ಬಹಳ ಅರ್ಥಗರ್ಭಿತವಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು
ಪದ್ಯದ ವಿವರಣೆ ತುಂಬಾ ಚೆನ್ನಾಗಿದೆ ಹಾಗೆ ಮುಂದಿನ ಪದ್ಯ ಕವನ ಸಾರಾಂಶ ಆಪೋಲ್ಡ್ ಮಾಡಿ ಸರ್