ಸಾಹಿತ್ಯಾನುಸಂಧಾನ

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ-ಬಸವಣ್ಣ

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ

ಚಂದ್ರ ಕುಂದೆ ಕುಂದುವುದಯ್ಯ

ಚಂದ್ರಂಗೆ ರಾಹು ಅಡ್ಡಬಂದಲ್ಲಿ

ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ?

ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ

ಚಂದ್ರಮನಡ್ಡ ಬಂದನೇ ಅಯ್ಯ?

ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ

ಜಗದ ನಂಟ ನೀನೇ ಅಯ್ಯ ಕೂಡಲಸಂಗಮದೇವ 

-ಬಸವಣ್ಣ

ಪದ-ಅರ್ಥ:

ಅಂಬುಧಿ-ಸಮುದ್ರ;  ಹೆಚ್ಚುವುದು-ಉಕ್ಕೇರುವುದು;  ಕುಂದೆ– ಅಸ್ತಮಿಸಿದಾಗ; ಕುಂದುವುದು-ಉಡುಗುವುದು, ಕುಗ್ಗುವುದು;  ರಾಹು-ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಎಂಟನೆಯದು;  ಬೊಬ್ಬಿಟ್ಟಿತ್ತೇ-ಬೊಬ್ಬೆಹಾಕಿತೇ, ಕಳವಳಗೊಂಡಿತೇ;  ಮುನಿ-ಅಗಸ್ತ್ಯ;  ಆಪೋಶನವ ಕೊಂಡಲ್ಲಿ-ಕುಡಿದ ಸಂದರ್ಭದಲ್ಲಿ;  ಚಂದ್ರಮನಡ್ಡ ಬಂದನೇ-ಚಂದ್ರನು ತಡೆದನೇ;  ಆರಿಗಾರೂ ಇಲ್ಲ-ಯಾರಿಗೆ ಯಾರೂ ಇಲ್ಲ;  ಕೆಟ್ಟವಂಗೆ-ದಾರಿತಪ್ಪಿದವನಿಗೆ, ಕೆಡುಕನ್ನು ಉಂಟುಮಾಡುವವನಿಗೆ;  ಕೆಳೆಯಿಲ್ಲ-ಗೆಳೆತನವಿಲ್ಲ;  ಜಗದ ನಂಟ-ಲೋಕದ ಜನರ ಬಂಧು.     

            ಜೀವನವಿಮರ್ಶೆಯನ್ನು ಪ್ರತಿಪಾದಿಸುವ ಈ ವಚನದಲ್ಲಿ ಬಸವಣ್ಣನವರು ಮನುಷ್ಯನಿಗೆ ಒದಗುವ ಕಷ್ಟಕಾರ್ಪಣ್ಯಗಳ ಸಂದರ್ಭಗಳಲ್ಲಿ ರಕ್ಷಕನಾಗಿ, ಹಿತೈಷಿಯಾಗಿ, ಆಪತ್ಬಾಂಧವನಾಗಿ ಕೂಡಲಸಂಗಮದೇವನಲ್ಲದೆ ಇತರ ಯಾರೂ ಒದಗಲಾರರು ಎಂಬುದನ್ನು ಎರಡು  ಪರಸ್ಪರ ವಿರುದ್ಧ ದೃಷ್ಟಾಂತಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.

            ಮೊದಲನೆಯದು, ಆಗಸದಲ್ಲಿ ಚಂದ್ರ ಉದಯಿಸುವಾಗ ಸಮುದ್ರ ಉಕ್ಕೇರುತ್ತದೆ. ಅರ್ಥಾತ್ ಸಮುದ್ರದಲ್ಲಿ ಭರತ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸಮುದ್ರದಲ್ಲಿ ಅಲೆಗಳು ಎತ್ತರೆತ್ತರಕ್ಕೆ ಚಾಚಿಕೊಳ್ಳುವುದರಿಂದ ಅಲೆಗಳ ಅಬ್ಬರವೂ ಹೆಚ್ಚಾಗುತ್ತದೆ. ಹಾಗೆಯೇ ಈ  ಅಬ್ಬರ ಉಬ್ಬರಗಳು ರಾತ್ರಿಯಿಡೀ ಮುಂದುವರಿದು ಚಂದ್ರ ಅಸ್ತಮಿಸುವಾಗ  ಕುಂದುತ್ತವೆ. ಅಲೆಗಳ ಭರಾಟೆಯೂ ಕಡಿಮೆಯಾಗುತ್ತದೆ. ಸಮುದ್ರವೂ ಕುಂದಿ ಯಥಾಸ್ಥಿತಿಗೆ ಬರುತ್ತದೆ. ಇದನ್ನೆಲ್ಲ ಗಮನಿಸಿದಾಗ ಚಂದ್ರ ಹಾಗೂ ಸಮುದ್ರದ ಮಧ್ಯೆ ಅವಿನಾಭಾವದ ಹಾಗೂ ಗಾಢವಾದ  ನಂಟತನವಿದೆ ಎಂಬ ಭಾವನೆಯೂ ಮನಸ್ಸಿನಲ್ಲಿ ಮೂಡುತ್ತದೆ.

            ಎರಡನೆಯದು, ಚಂದ್ರನಿಗೆ ರಾಹುಗ್ರಹಣವಾದಾಗ, ಆತನ ಬೆಳದಿಂಗಳು ಕಣ್ಮರೆಯಾದಾಗ ತನ್ನ ನಂಟನ ರಕ್ಷಣೆಗಾಗಿ ಸಮುದ್ರವು  ಬೊಬ್ಬೆಹಾಕಿಯೋ ಅಥವಾ ಇನ್ನಾವುದೇ ರೀತಿಯಿಂದಲೋ ಅದನ್ನು ತಡೆಯಲಿಲ್ಲ. ಚಂದ್ರನನ್ನು ರಕ್ಷಿಸಲೂ ಇಲ್ಲ. ಹಾಗೆಯೇ,  ಅಗಸ್ತ್ಯಮುನಿಯು ಒಂದು ಸಂದರ್ಭದಲ್ಲಿ ನೀರನ್ನೆಲ್ಲ ಕುಡಿದು ಸಮುದ್ರವನ್ನೇ ಬರಿದು ಮಾಡಿದಾಗ ಚಂದ್ರನೂ ಅದನ್ನು ತಡೆಯಲಿಲ್ಲ (ಕೆಳಗೆ ನೀಡಲಾಗಿರುವ ಟಿಪ್ಪಣಿಯನ್ನು ನೋಡಿ). ಸಮುದ್ರವನ್ನು ರಕ್ಷಿಸಲೂ ಇಲ್ಲ.  ಈ ಘಟನಾವಳಿಗಳನ್ನು ಗಮನಿಸಿದಾಗ ಚಂದ್ರ ಹಾಗೂ ಸಮುದ್ರದ ನಡುವೆ ಮೇಲುನೋಟಕ್ಕೆ ಗೆಳೆತನವಿದೆ, ನಂಟುತನವಿದೆ ಎಂದೆನಿಸಿದರೂ ವಾಸ್ತವವಾಗಿ ಯಾವುದೇ ರೀತಿಯ ಗೆಳೆತನವಾಗಲೀ ಅವಿನಾಭಾವ ಸಂಬಂಧವಾಗಲೀ ಇಲ್ಲ  ಎಂಬುದೂ ದೃಢವಾಗುತ್ತದೆ.

            ಈ ಲೋಕಪ್ರಕ್ರಿಯೆಯನ್ನೇ ಮನುಷ್ಯಬದುಕಿನ ವಿಮರ್ಶೆಗೆ ದೃಷ್ಟಾಂತವಾಗಿ ಪರಿಭಾವಿಸಿದ ಬಸವಣ್ಣನವರು “ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ” ಎಂದಿದ್ದಾರೆ. ನಮ್ಮ ಬದುಕಿನುದ್ದಕ್ಕೂ ನಮ್ಮ ಸುತ್ತಮುತ್ತ ಎಷ್ಟೋ ಮಂದಿ ನಮ್ಮ ಹಿತೈಷಿಗಳಂತೆ, ಬಂಧುಗಳಂತೆ, ಸ್ನೇಹಿತರಂತೆ, ನಂಟರಂತೆ, ಸಹೃದಯರಂತೆ, ಪರೋಪಕಾರಿಗಳಂತೆ, ವಿಶ್ವಾಸಿಗರಂತೆ ವರ್ತಿಸುತ್ತಾರೆ. ತಮ್ಮ ನಾನಾ ರೀತಿಯ ವಿಕೃತಬುದ್ಧಿಯಿಂದ, ತರ್ಕ-ಕುತರ್ಕಗಳಿಂದ  ನಾವು ನಂಬುವಂತೆ, ನಮ್ಮ ವಿಶ್ವಾಸವನ್ನು ಗಳಿಸುವುದಕ್ಕೆ ಭಿನ್ನಭಿನ್ನ ರೀತಿಗಳಲ್ಲಿ ಪ್ರಯತ್ನಿಸುತ್ತಾರೆ. ಹಾಗೆ ವಿಶ್ವಾಸಗಳಿಸಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಕೊಳ್ಳೆಹೊಡೆಯುತ್ತಾರೆ. ಆದರೆ, ನಮಗೆ ಕಷ್ಟಕಾರ್ಪಣ್ಯಗಳು ಒದಗಿದಾಗ ಅಥವಾ ನಾವು ಆಪತ್ಕಾಲದಲ್ಲಿದ್ದಾಗ ವಿಚಾರಣೆ, ಸಹಾಯ, ಸಹಕಾರ, ಉಪಕಾರ, ಕನಿಕರಗಳು  ಹಾಗಿರಲಿ ಮುಖವನ್ನೂ ತೋರಿಸದೆ ಕಾಣೆಯಾಗುತ್ತಾರೆ. ತಮ್ಮ ಕಷ್ಟಗಳಲ್ಲಿ ನಮ್ಮಿಂದ ಸಹಾಯವನ್ನು ಪಡೆದವರು ನಮ್ಮ ಕಷ್ಟಗಳಲ್ಲಿ ಒದಗಲಾರರು.  ಇದೇ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿರುವ ಲೋಕನಡವಳಿಕೆ.

           ಕಷ್ಟಗಳು ಒದಗಿದಾಗ ಯಾರೊಬ್ಬರನ್ನೂ ನಂಬಿಕೊಂಡಿರಬಾರದು. ಹಾಗೆಯೇ ಮನುಷ್ಯ ತನ್ನ ಬದುಕಿನಲ್ಲಿ ಯಾರನ್ನೂ ಅತಿಯಾಗಿ ನೆಚ್ಚಿಕೊಂಡಿರಬಾರದು. ಮಾತ್ರವಲ್ಲ, ಬದುಕಿನಲ್ಲಿ ನೈತಿಕತೆಯನ್ನು ಮೀರಿ, ಸಮಾಜಘಾತುಕರಾಗಿ, ದಾರಿತಪ್ಪಿ ಲೋಕದೃಷ್ಟಿಯಲ್ಲಿ ’ಕೆಟ್ಟವ’ನೆಂದೂ ಗುರುತಿಸಿಕೊಳ್ಳಬಾರದು. ಏಕೆಂದರೆ, ಈ ಲೋಕದಲ್ಲಿ ಒಳ್ಳೆಯವರ ಕಷ್ಟಕ್ಕೆ ಒದಗುವವರು ಇಲ್ಲದಿರುವಾಗ ಕೆಟ್ಟವರಿಗೆ ಒದಗಲು ಸಾಧ್ಯವೇ? ನಮ್ಮ ಕಷ್ಟಕ್ಕೆ, ನಮ್ಮ ಆಪತ್ತಿಗೆ ನಾವೇ ಹೊಣೆಯಲ್ಲದೆ ಯಾರಿಗೆ ಯಾರೂ ಇಲ್ಲ. ಕಷ್ಟದಲ್ಲಿರುವವನಿಗೆ ಮಾತ್ರವಲ್ಲ, ಕೆಟ್ಟುಹೋದವನಿಗೂ ಕೂಡಾ ಗೆಳೆತನಕ್ಕೆ, ಸಹಾಯಕ್ಕೆ ಯಾರೂ ಸಿಗಲಾರರು. ಇನ್ನಿತರರನ್ನು ಅತಿಯಾಗಿ ನಂಬಿ, ಮೋಸಹೋಗಿ ಪರಿತಪಿಸುವುದಕ್ಕಿಂತ  ಯಾರಲ್ಲೂ ಅತಿಯಾದ ಭರವಸೆ ಇಟ್ಟುಕೊಳ್ಳದೆ, ಯಾರನ್ನೂ ಅತಿಯಾಗಿ ನಂಬದೆ ನಮಗೊದಗಿದ ಕಷ್ಟಗಳನ್ನು ನಾವು ನಾವೇ ಪರಿಹರಿಸಿಕೊಳ್ಳಬೇಕು.  ಇದನ್ನೇ ಮನಗಂಡು ಬಸವಣ್ಣನವರು ಕೂಡಲಸಂಗಮದೇವನಲ್ಲಿ, “ಜಗದ ನಂಟ ನೀನೇ ಅಯ್ಯ” ಎಂದಿದ್ದಾರೆ. ಯಾರು ಯಾರನ್ನೋ ನಂಬಿ ಮೋಸಕ್ಕೊಳಗಾಗಿ ಕೆಟ್ಟುಹೋಗುವುದಕ್ಕಿಂತ ಭಗವಂತನನ್ನು ನಂಬಿ ನೆಮ್ಮದಿಯಿಂದಿರುವುದು ಒಳಿತು, ಕೊನೆಗೂ ಮನುಷ್ಯನ ಸುಖಕಷ್ಟಗಳಲ್ಲಿ ಒದಗುವವನು ಭಗವಂತನೊಬ್ಬನೇ ಎಂಬುದು ಬಸವಣ್ಣನವರ ಅಭಿಪ್ರಾಯ.   

            ಸುಮಾರು ಎಂಟುನೂರು ವರ್ಷಗಳ ಹಿಂದೆ ಬಸವಣ್ಣನವರು ಆಡಿದ ಮಾತು ಇಂದಿಗೂ ಅರ್ಥಪೂರ್ಣ ಜೀವನವಿಮರ್ಶೆಯಾಗಿದೆ. ಇಂದೂ ಲೋಕದಲ್ಲಿ ಬಹುತೇಕ ಸ್ನೇಹ, ನಂಟತನಗಳು ಲಾಭ ಹಾಗೂ ಸ್ವಾರ್ಥದ ಮೇಲೆಯೇ ನಿರ್ಧರಿತವಾಗಿರುತ್ತವೆ. ಲಾಭ ಹಾಗೂ ಉಪಕಾರವಿದ್ದರಷ್ಟೇ ಸ್ನೇಹ, ನೆಂಟತನ. ಇಲ್ಲದಿದ್ದರೆ ಇಲ್ಲ. ಲೋಕದಲ್ಲಿ ನಿಸ್ವಾರ್ಥವಾದ ಸ್ನೇಹ, ನಂಟತನವೇ ಇಲ್ಲ, ಪರೋಪಕಾರವೇ  ಇಲ್ಲ, ಆಪತ್ಕಾಲಕ್ಕೆ ಒದಗದವರೇ ಇಲ್ಲ ಎಂದಲ್ಲ, ಅಂತಹವರ ಪ್ರಮಾಣ ತುಂಬಾ ಕಡಿಮೆ. ಲೋಕದಲ್ಲಿ ಹೆಚ್ಚಿನ ಮನುಷ್ಯರು ಸ್ವಾರ್ಥಿಗಳೂ ಹೌದು, ನಯವಂಚಕರೂ ಹೌದು. ಏನೇನೋ ನಾಟಕಗಳನ್ನಾಡಿ ಇತರರ ವಿಶ್ವಾಸವನ್ನು ಪಡೆದು ಎಷ್ಟು ಸಾಧ್ಯವೋ ಅಷ್ಟು ಲಾಭಹೊಡೆಯುತ್ತಾರೆ. ಆದರೆ ಪರೋಪಕಾರದ ಮನೋಭಾವ ಅವರಲ್ಲಿ ಎಳ್ಳಷ್ಟೂ ಇರಲಾರದು. ಹಾಗಾಗಿ ಇಂತಹವರನ್ನು ಅತಿಯಾಗಿ ನಂಬಿ ಇದ್ದುದೆಲ್ಲವನ್ನೂ ಕಳೆದುಕೊಂಡು ತೊಳಲಾಡಿ, ಪರಿತಪಿಸಿ ಕೆಟ್ಟುಹೋಗುವುದಕ್ಕಿಂತ ಕಷ್ಟಕಾಲದಲ್ಲಿ ನಿಸ್ವಾರ್ಥವಾಗಿ ನಮ್ಮನ್ನು ಕಾಪಾಡುವ ಭಗವಂತನ ಮೇಲೆ ವಿಶ್ವಾಸವನ್ನಿರಿಸಿಕೊಂಡು ಆರಕ್ಕೇರದೆ ಮೂರಕ್ಕಿಳಿಯದೆ ಬದುಕುವುದೇ ಒಳಿತು ಎಂಬುದು ಬಸವಣ್ಣನವರ ಅಭಿಪ್ರಾಯ.

(ಟಿಪ್ಪಣಿ: ಮುನಿ ಆಪೋಶನ: ಅಗಸ್ತ್ಯಮುನಿ ಅಪರಿಮಿತ ಶಕ್ತಿಯುಳ್ಳವನು. ಕಾಲಕೇಯರೆಂಬ ರಾಕ್ಷಸರು ಲೋಕಕಂಟಕರಾಗಿ ಹಗಲು ಹೊತ್ತಿನಲ್ಲಿ ಸಮುದ್ರದಲ್ಲಿ ಅಡಗಿಕುಳಿತು, ರಾತ್ರಿಯಾದ ಮೇಲೆ ಹೊರಬಂದು ತಪಸ್ವಿಗಳ ಯಜ್ಞಯಾಗಾದಿಗಳನ್ನು ಕೆಡಿಸಿ, ತಪಸ್ವಿಗಳನ್ನು ಕೊಲ್ಲುತ್ತಿದ್ದರು. ಇವರ ಉಪಟಳದಿಂದಾಗಿ ಭೂಮಿಯಲ್ಲಿ ಯಜ್ಞ ಯಾಗಾದಿಗಳು ನಿಂತುಹೋಗಿ ಜನಜೀವನ ಅಸ್ತವ್ಯಸ್ತವಾದಾಗ ದೇವತೆಗಳು ದೇವೇಂದ್ರನನ್ನು ಮುಂದಿಟ್ಟುಕೊಂಡು ಬ್ರಹ್ಮನ ಮೊರೆಹೊಕ್ಕರು. ಆತ ಕಾಲಕೇಯರನ್ನು ಸೋಲಿಸುವುದಕ್ಕೆ ಯೋಗ್ಯನಾದ ವ್ಯಕ್ತಿ ಅಗಸ್ತ್ಯ ಮಾತ್ರ ಎಂದು ತಿಳಿಸಿ ಅಗಸ್ತ್ಯನ ಬಳಿಗೆ ಕಳುಹಿಸಿದನು. ಅಗಸ್ತ್ಯನ ಬಳಿಗೆ ಬಂದ ಇಂದ್ರಾದಿ ದೇವತೆಗಳು ಆತನಿಗೆ ಪರಿಸ್ಥಿತಿಯನ್ನು ವಿವರಿಸಿದರು. ಪರಿಸ್ಥಿತಿಯ ಗಂಭೀರತೆಯನ್ನರಿತ ಅಗಸ್ತ್ಯ ತಾನು ಸಮುದ್ರದ ನೀರೆಲ್ಲವನ್ನೂ ಕುಡಿದು ಬರಿದುಮಾಡುತ್ತೇನೆ. ಆ ಕೂಡಲೇ ನೀವು ಕಾಲಕೇಯರನ್ನು ವಧಿಸಿ ಎಂದು ತಿಳಿಸಿ ಸಮುದ್ರದ ನೀರೆಲ್ಲವನ್ನೂ ಆಪೋಶನ ತೆಗೆದುಕೊಂಡನು ಆಗ ಕಾಲಕೇಯರಿಗೆ ಅಲ್ಲಿರಲು ಸಾಧ್ಯವಾಗದೆ ಸಮುದ್ರದಿಂದ ಹೊರಬಿದ್ದರು. ಕೂಡಲೇ ಇಂದ್ರಾದಿ ದೇವತೆಗಳು ಅವರನ್ನು ಕೊಂದು ತಪಸ್ವಿಗಳನ್ನು ರಕ್ಷಿಸಿದರು. ಕೂಡಲೇ ಅಗಸ್ತ್ಯಮುನಿ ತಾನು ಆಪೋಶನ ತೆಗೆದುಕೊಂಡ ಸಮುದ್ರದ ನೀರನ್ನು ಮರಳಿ ಸಮುದ್ರಕ್ಕೆ ಹರಿಸಿದನು.)

-ಡಾ. ವಸಂತ್ ಕುಮಾರ್, ಉಡುಪಿ

******

Leave a Reply

Your email address will not be published. Required fields are marked *