ಸಾಹಿತ್ಯಾನುಸಂಧಾನ

ಬದುಕಿಗಾರ್ ನಾಯಕರು? – ಡಿ.ವಿ.ಜಿ.

೭. ಬದುಕಿಗಾರ್ ನಾಯಕರು, ಏಕನೊ ಅನೇಕರೋ?

     ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ?

     ಕುದುರುವುದದೆಂತು ಈಯವ್ಯವಸ್ಥೆಯ ಪಾಡು?

     ಅದಿಗುದಿಯೆ ಗತಿಯೇನೊ? -ಮಂಕುತಿಮ್ಮ

ಅನ್ವಯಕ್ರಮ:

ಬದುಕಿಗೆ ಆರ್ ನಾಯಕರು, ಏಕನೊ ಅನೇಕರೋ? ವಿಧಿಯೊ, ಪೌರುಷವೊ, ಅಂಧಬಲವೋ? ಈ ಅವ್ಯವಸ್ಥೆಯ ಪಾಡು ಅದು ಎಂತು ಕುದುರುವುದು? ಅದಿಗುದಿಯೇ ಗತಿ ಏನೋ? – ಮಂಕುತಿಮ್ಮ.

ಪದ-ಅರ್ಥ:

ಬದುಕಿಗೆ – ಜೀವಿತಕ್ಕೆ; ಆರ್-ಯಾರು;  ನಾಯಕರು-ಒಡೆಯರು, ಮುಖಂಡರು;  ಏಕನೊ-ಒಬ್ಬನೊ;  ಅನೇಕರೋ-ಹಲವು ಮಂದಿಯೋ;  ವಿಧಿ-ಬ್ರಹ್ಮ, ಸೃಷ್ಟಿಕರ್ತ; ಪೌರುಷ-ಪುರುಷನಿಗೆ ಸಂಬಂಧಿಸಿದ ಗುಣ;  ಧರುಮ-ಧರ್ಮ, ಪುರುಷಾರ್ಥಗಳಲ್ಲಿ ಮೊದಲನೆಯದು;  ಅಂಧಬಲ-ಮೂಢನಂಬಿಕೆಯ ಮೇಲಿನ ಆಸ್ಥೆ, ಕುರುಡು ನಂಬಿಕೆಯ ಮೇಲಿನ ಆಸ್ಥೆ;  ಕುದುರು-ವ್ಯವಸ್ಥೆಗೆ ಬರು, ಏಳಿಗೆಹೊಂದು; ಅದೆಂತು-ಅದು ಹೇಗೆ;  ಈಯವ್ಯವಸ್ಥೆ(ಈ ಅವ್ಯವಸ್ಥೆ)- ಈ ನಿಯಮರಾಹಿತ್ಯ, ಸ್ಥಿತಿಗೇಡಿತನ;  ಪಾಡು-ಸ್ಥಿತಿ;  ಅದಿಗುದಿಯೆ-ವ್ಯಥೆ, ತಳಮಳ; ಗತಿ-ಅವಸ್ಥೆ.

ಈ ಬದುಕು ಹಾಗೂ ಇಲ್ಲಿನ ಸಮಾಜವ್ಯವಸ್ಥೆಯು ಪ್ರಾಚೀನಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಅದು ಹಲವು ಶತಮಾನಗಳ, ಸಹಸ್ರಮಾನಗಳ ಅನುಭವವನ್ನು ರೂಢಿಸಿಕೊಂಡಿದೆ. ಆದರೂ ಅದು ಹೆಜ್ಜೆಹೆಜ್ಜೆಗೂ ಗೊಂದಲಕ್ಕೆ, ಅವ್ಯವಸ್ಥೆಗೆ, ಕಳವಳಕ್ಕೆ ಕಾರಣವಾಗುತ್ತಲೇ ಇದೆ. ಈ ಬದುಕಿಗೆ ನಾಯಕರು ಯಾರು? ಹಾಗೇನಾದರೂ ಇದ್ದರೆ ಅವರು ಒಬ್ಬನೆಯೋ? ಅಥವಾ ಹಲವರೋ? ವಿಧಿಯೋ, ಪೌರುಷವೋ, ಅಥವಾ ಪರಂಪರಾಗತವಾಗಿ ಬಂದಿರುವ ಕುರುಡುನಂಬಿಕೆಯೋ? ಎಂಬ ಸವಾಲು ಹೆಜ್ಜೆಹೆಜ್ಜೆಗೂ ನಮ್ಮ ಮುಂದೆ ನಿಲ್ಲುತ್ತದೆ. ಈ ಬದುಕು ಪರಂಪರಾಗತವಾಗಿ ರೂಢಿಯಾಗಿ ಬಂದಿರುವುದಾದರೂ ಬದುಕಿನಲ್ಲಿ ಈ ಸ್ಥಿತಿಗೇಡಿತನ ಬೆಳೆದುಬಂದುದಾದರೂ ಹೇಗೆ? ಇನ್ನಾದರೂ ಮನುಷ್ಯಬದುಕು ಒಂದು ನಿರ್ದಿಷ್ಟ ವ್ಯವಸ್ಥೆಗೆ ಒಳಪಟ್ಟು ವ್ಯವಸ್ಥೆಗೊಳಪಡದೆ ವ್ಯಥೆ, ತಳಮಳಗಳ ನಡುವೆಯೇ ಹೊಯ್ದಾಡಬೇಕೇ? ಎಂದು ಪ್ರಶ್ನಿಸುತ್ತಾನೆ ಮಂಕುತಿಮ್ಮ.

ಈ ಬದುಕು ಮೇಲುನೋಟಕ್ಕೆ ಬಹಳ ಸುಂದರವಾಗಿ, ಸುಲಲಿತವಾಗಿ, ಆಶಾದಾಯಕವಾಗಿ, ಪರಿಪೂರ್ಣವಾಗಿ ತೋರುವುದಾದರೂ ಕೂಲಂಕಷವಾಗಿ ಪರಿಶೀಲಿಸಿದರೆ ಅದರ ಉದ್ದಗಲಕ್ಕೂ ಸಮಸ್ಯೆಗಳು, ಗೋಜಲುಗಳು, ಸಿಕ್ಕುಗಳು ಹಾಸುಹೊಕ್ಕಾಗಿರುವುದು ಗೋಚರಿಸುತ್ತದೆ. ಈ ಬದುಕು ಇಂದು ನಿನ್ನೆಯದಲ್ಲ, ಅದು ಅನಾದಿಕಾಲದಿಂದಲೂ ರೂಢಿಗೊಂಡು ಬಂದಿರುವಂತಹುದು. ಕಾಲಕಾಲದ ಅನುಭವವನ್ನು ಮೈಗೂಡಿಸಿಕೊಂಡಿರುವಂತಹುದು. ಹತ್ತು ಹಲವು ದಾರ್ಶನಿಕರ ಮಾರ್ಗದರ್ಶನದ ಮೇಲೆ ಬೆಳೆದುಕೊಂಡು ಬಂದಿರುವಂತಹುದು. ಹಲವು ಮಹಾಪುರುಷರ ಬದುಕಿನ ದೃಷ್ಟಾಂತಗಳಿಂದ ಪ್ರಭಾವಿತವಾಗಿರುವಂತಹುದು. ಆದರೂ ಅದು ಇಂದಿಗೂ ಗೊಂದಲಗಳಿಂದ, ಸಮಸ್ಯೆಗಳಿಂದ, ಅವ್ಯವಸ್ಥೆಗಳಿಂದ, ತಳಮಳಗಳಿಂದ ಮುಕ್ತವಾಗಿಲ್ಲ. ಕಾಲಕಾಲಕ್ಕೆ ಪರಿಷ್ಕಾರಗೊಳ್ಳದೆ ಹೊಸಹೊಸ ಸಮಸ್ಯೆಗಳನ್ನು, ಸವಾಲುಗಳನ್ನು, ಗೊಂದಲಗಳನ್ನು, ಮೋಸ-ವಂಚನೆಗಳನ್ನು ಮೈಗೂಡಿಸಿಕೊಂಡು ಬೆಳೆದುಕೊಂಡುಬಂದಿದೆ. ಇವೆಲ್ಲವೂ ಪ್ರಾಮಾಣಿಕವಾದ, ನೈತಿಕವಾದ, ನೆಮ್ಮದಿಯ ಜೀವಿತಕ್ಕೆ ಅಡ್ಡಿಯಾಗುತ್ತಲೇ ಇವೆ, ಬದುಕಿನ ನೆಮ್ಮದಿಯನ್ನು ನಾಶಮಾಡುತ್ತಲೇ ಇವೆ. ಹಾಗಾಗಿಯೇ ಮನುಷ್ಯ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯಬದುಕು ಅಶಾಂತಿ, ಅವ್ಯವಸ್ಥೆ, ಗೊಂದಲ, ಅನೈತಿಕತೆ, ಅವ್ಯವಹಾರ, ಸಮಸ್ಯೆ, ದ್ವೇಷ, ಅಸೂಯೆ, ಪಿತೂರಿ, ಕೊಲೆ, ಸುಲಿಗೆ ಮೊದಲಾದ ಕ್ರೌರ್ಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಳ್ಳುತ್ತಲೇ ಸಾಗುತ್ತಿದೆ ಏಕೆ?. ಮನುಷ್ಯಪ್ರಯತ್ನವನ್ನೂ ಮೀರಿ ಇವೆಲ್ಲವೂ ಮತ್ತೆಮತ್ತೆ ಬದುಕನ್ನು ಮೂರಾಬಟ್ಟೆಯಾಗಿಸುತ್ತಿವೆ ಏಕೆ? ಎಂಬ ಸವಾಲುಗಳು ನಮ್ಮ ಮುಂದಿವೆ. ಪರಿಹಾರವನ್ನು ಯಾರೂ ಚಿಂತಿಸುತ್ತಿಲ್ಲ. ಯೋಚಿಸಿದಷ್ಟೂ  ಪರಿಹಾರವೆಂಬುದು ಮರೀಚಿಕೆಯಾಗುತ್ತಿದೆ.

ಬದುಕಿನಲ್ಲಿನ ಗೊಂದಲಗಳಿಗೆ, ಅವ್ಯವಸ್ಥೆಗಳಿಗೆ, ಸಮಸ್ಯೆಗಳಿಗೆ ಯಾರು ಕಾರಣರು? ಎಂಬ ಪ್ರಶ್ನೆ ಸದಾ ಕಾಡುತ್ತಲೇ ಇದೆ. ನಮ್ಮನಮ್ಮ ಬದುಕನ್ನು ನಾವುನಾವೇ ರೂಪಿಸಿಕೊಳ್ಳುವುದಕ್ಕೆ, ನೇರ್ಪುಗೊಳಿಸುವುದಕ್ಕೆ ಸಾಧ್ಯವಿಲ್ಲವೇ? ಒಬ್ಬನಿಗೆ ಸರಿಕಂಡದ್ದು ಇನ್ನೊಬ್ಬನಿಗೆ ತಪ್ಪೆನಿಸುತ್ತಿದೆ! ಮತ್ತೊಬ್ಬನಿಗೆ ನೈತಿಕವಾದದ್ದು ಮಗುದೊಬ್ಬನಿಗೆ ಅನೈತಿಕವಾಗಿತ್ತಿದೆ! ಒಬ್ಬನಿಗೆ ಧರ್ಮವೆನಿಸಿದುದು ಇನ್ನೊಬ್ಬನಿಗೆ ಅಧರ್ಮವೆನಿಸುತ್ತಿದೆ. ಈ ಎಲ್ಲಾ ಗೊಂದಲಗಳನ್ನು ಗಮನಿಸಿದರೆ, ನಮ್ಮನ್ನು ಹೊರತುಪಡಿಸಿ ಇನ್ಯಾರೋ ನಮ್ಮ ಬದುಕನ್ನು ನಿಯಂತಿಸುತ್ತಿದ್ದಾರೆಯೇ? ಎಂಬ ಸವಾಲು ನಮ್ಮ ಮುಂದೆ ನಿಲ್ಲುತ್ತದೆ. ಹಾಗಿದ್ದರೆ,  ಸಮಸ್ತ ಮನುಷ್ಯರ ಬದುಕನ್ನು ನಿಯಂತ್ರಿಸುತ್ತಿರುವವರು ಯಾರು? ಹಾಗೆ ನಿಯಂತ್ರಿಸುವ ನಾಯಕನಿದ್ದಾನೆ ಎಂದಾದರೆ ಆತ ಯಾರು? ಅವನು ಒಬ್ಬನೇ? ಅಥವಾ ಹಲವು ಮಂದಿಯೇ? ಅವನು ವಿಧಿಯೇ? ಕಣ್ಣಿಗೆ ಕಾಣದ ಒಂದು ಪೌರುಷಗುಣವೋ? ಚತುರ್ವಿಧ ಪುರುಷಾರ್ಥಗಳಲ್ಲಿ ಮೊದಲನೆಯದಾದ ಧರ್ಮವೋ? ಅಥವಾ ಪರಂಪರಾಗತವಾಗಿ ಬೆಳೆದುಬಂದಿರುವ ಕುರುಡುನಂಬಿಕೆಗಳೋ? ಎಂಬ ಸಂದೇಹ ಪದೇಪದೇ ಕಾಡುತ್ತದೆ. ನಮ್ಮ ಬದುಕನ್ನು ಬ್ರಹ್ಮನೇ ನಿಯಂತ್ರಿಸುತ್ತಿದ್ದಾನೆ ಎಂದು ಕೆಲವರು, ಪುರುಷಾರ್ಥವೇ ನಿಯಂತ್ರಿಸುತ್ತಿದೆ ಎಂದು ಇನ್ನು ಕೆಲವರು, ಧರ್ಮವೇ ನಿಯಂತ್ರಿಸುತ್ತಿದೆ ಎಂದು ಮತ್ತೆ ಕೆಲವರು ವಾದಿಸುತ್ತಾರೆ. ಇದನ್ನು ಒಪ್ಪದ ಮತ್ತೂ ಕೆಲವರು ಪರಂಪರಾಗತವಾಗಿ ರೂಢಿಗೊಂಡಿರುವ ಕುರುಡುನಂಬಿಕೆಗಳು ಹಾಗೂ ಅವುಗಳ ಮೇಲಿನ ಆಸ್ಥೆಯೇ ನಿಯಂತ್ರಿಸುತ್ತಿವೆ ಎಂದೂ ವಾದಿಸುತ್ತಾರೆ.

ಬ್ರಹ್ಮ ಸೃಷ್ಟಿಕರ್ತನೇನೋ ಹೌದು, ಆದರೆ, ಕೇವಲ ಆತನೊಬ್ಬನೇ ಬದುಕನ್ನು ರೂಪಿಸಿದವನಲ್ಲ. ಪುರುಷನಿಗೆ ಸಂಬಂಧಿಸಿದ ಗುಣವೊಂದು ಮಾತ್ರ ಬದುಕನ್ನು ರೂಪಿಸಿದಂತೆಯೂ ಕಂಡುಬರುವುದಿಲ್ಲ. ಪುರುಷಾರ್ಥಗಳಲ್ಲಿ ಮೊದಲನೆಯದಾದ ಧರ್ಮವು ತಾನು ಮಾತ್ರ ಬದುಕನ್ನು ರೂಪಿಸಿದಂತಿಲ್ಲ.  ಹಾಗೆಯೇ ಪರಂಪರಾಗತವಾಗಿ ಬಂದಿರುವ ರೂಢಿಗತವಾಗಿರುವ ಕುರುಡುನಂಬಿಕೆಗಳು ಮಾತ್ರ ಬದುಕನ್ನು ರೂಪಿಸಿದಂತೆಯೂ ಕಂಡುಬರುವುದಿಲ್ಲ. ಈ ಬದುಕನ್ನು ರೂಪಿಸಿ, ರೂಢಿಸಿಕೊಂಡು ಬಂದವನು ಮನುಷ್ಯನೇ. ನೂರಾರು ದೇವರನ್ನು, ನೂರಾರು ಶಕ್ತಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ತನ್ನ ಮನಸ್ಸಿನ ಸಂತೋಷಕ್ಕಾಗಿ ಬಗೆಬಗೆಯಿಂದ ಅವುಗಳ ಉಪಾಸನೆಗಳನ್ನು ಕೈಗೊಂಡು, ಪ್ರತಿಯೊಂದಕ್ಕೂ ಹತ್ತಾರು ಕಥೆಗಳನ್ನು ಸೃಷ್ಟಿಸಿಕೊಂಡು, ವಿವೇಚನೆಯಿಲ್ಲದೆ ನೂರಾರು, ಸಾವಿರಾರು ಕುರುಡುನಂಬಿಕೆಗಳನ್ನು ಮೈಗೂಡಿಸಿಕೊಂಡಿದ್ದಾನೆ. ಆ ಹಿನ್ನೆಲೆಯಲ್ಲಿ ಬದುಕನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿದುದು ಮತ್ತು ಕಾಲಕಾಲಕ್ಕೆ ಇನ್ನೊಂದಷ್ಟನ್ನು ಸೇರಿಸುತ್ತ ಬದುಕನ್ನು ಸುಖಮಯಗೊಳಿಸಲು ಪ್ರಯತ್ನಿಸುತ್ತ ಅದನ್ನು ಇನ್ನಷ್ಟು ಗೋಜಲುಗೋಜಲಾಗುವಂತೆ ಮಾಡಿದುದರಿಂದಲೇ ಇಂದು ಬದುಕು ಎಂಬುದು ಒಂದು ನಿರ್ದಿಷ್ಟ ವ್ಯವಸ್ಥೆಗೆ ಒಳಪಟ್ಟು ರೂಢಿಯಾಗದೆ ವ್ಯಥೆ, ತಳಮಳ, ಗೊಂದಲ, ಸಮಸ್ಯೆ, ಸಿಕ್ಕುಗಳಲ್ಲಿ ಹೊಯ್ದಾಡುವಂತಾಗಿದೆ. ಎಲ್ಲವೂ ಮನುಷ್ಯನ ಪ್ರಾರಬ್ಧಕರ್ಮ.

ಈ ಮಧ್ಯೆ ಎಷ್ಟೋ ಮಂದಿ ಸ್ವಾರ್ಥಸಾಧಕರು ತಮ್ಮ ಸ್ವಾರ್ಥಸಾಧನೆಗಾಗಿ ಮನುಷ್ಯಬದುಕಿನ ಮೇಲೆ ಹಿಡಿತಸಾಧಿಸಿ ಇತರರನ್ನು ಸಾಮಾಜಿಕವಾಗಿ ದಾರಿತಪ್ಪಿಸಿದರು. ಇವರನ್ನು ಅನುಸರಿಸಿ ಇನ್ನಷ್ಟು ಮತ್ತಷ್ಟು ನಾಯಕರು ಹುಟ್ಟಿಕೊಂಡು ಬದುಕನ್ನು ಮೂರಾಬಟ್ಟೆಯನ್ನಾಗಿಸಿದರು. ಈಗ ಸಮಾಜದಲ್ಲಿ ನಾಯಕರೇ ತುಂಬಿಕೊಂಡಿದ್ದಾರೆ. ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ಪರಿಭಾವಿಸುವ, ವ್ಯಾಖ್ಯಾನಿಸುವ, ತಮ್ಮ ನಿಲುವುಗಳನ್ನು ಒಪ್ಪದವರನ್ನು ತುಳಿಯುವ, ಸಮಾಜವನ್ನು ಒಡೆದು ಆಳುವ ಮನೋಭಾವದ ನಾಯಕರೇ ಹುಟ್ಟಿಕೊಂಡಿರುವುದರಿಂದಲೇ ಬದುಕಿನಲ್ಲಿ ಅದಿಗುದಿಯೇ ತಾಂಡವವಾಡುತ್ತಿದೆ. ಹಲವು ದೇವರನ್ನು ಸೃಷ್ಟಿಸಿಕೊಂಡು ಆರಾಧಿಸುತ್ತ ತರತಮವನ್ನು ರೂಢಿಸಿಕೊಂಡು ಮನುಷ್ಯ ತನ್ನವರೊಳಗೆ ವೈಮಸ್ಸು, ದ್ವೇಷಗಳನ್ನು ರೂಢಿಸಿಕೊಂಡು ಬದುಕನ್ನು ಹಾಳುಗೆಡವಿದರೆ ಉಳಿಯುವುದಾದರೂ ಏನು? ಬದುಕಿನ ಗತಿಯನ್ನು, ಅದರ ಪರಂಪರೆಯನ್ನು, ಏಳುಬೀಳುಗಳನ್ನು ಗಮನಿಸಿಕೊಂಡು ಮುಂದಿನ ಹೆಜ್ಜೆಯನ್ನಿಟ್ಟುಕೊಂಡು ಬದುಕನ್ನು ಸುಧಾರಿಸುತ್ತ ಸಾಗಬೇಕಾದುದು ಮನುಷ್ಯನ ಕರ್ತವ್ಯ. ಆದರೆ, ಮನುಷ್ಯನಲ್ಲಿನ ಈ ಕರ್ತವ್ಯಲೋಪ ಇಂದು ಬದುಕನ್ನು ಅವ್ಯವಸ್ಥೆಗಳ, ತಳಮಳಗಳ ಆಗರವನ್ನಾಗಿಸಿದೆ. ನಾಯಕ ಒಬ್ಬನಿರಬೇಕೇ ವಿನಾ ಹಲವರಲ್ಲ. ನಮ್ಮ ಬದುಕಿಗೆ ನಾವೇ ನಾಯಕರಾಗಬೇಕಲ್ಲದೆ ಇತರರಲ್ಲ. ಹಲವರ ನಾಯಕತ್ವವನ್ನು ವಿವೇಚನೆಯಿಲ್ಲದೆ ಒಪ್ಪಿಕೊಂಡಿದ್ದರಿಂದ ಮತ್ತು ಅವರೆಲ್ಲರ ಮಾತುಗಳನ್ನು ಅನುಸರಿಸಿದ್ದರಿಂದಲೇ ಇಂದು ಬದುಕು ತಳಮಳಗಳ ನಡುವೆ ಹೊಯ್ದಾಡುವಂತಾಗಿದೆ. ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಇದು ಕೊನೆಯಿಲ್ಲದ ಹೊಯ್ದಾಟವಾಗಿರುವುದರಿಂದಲೇ ಈ ಅವ್ಯವಸ್ಥೆಯನ್ನು ಒಂದು ವ್ಯವಸ್ಥೆಗೆ ತರುವುದಾದರೂ ಹೇಗೆ? ಬದುಕಿನುದ್ದಕ್ಕೂ ಈ ತಳಮಳಗಳೇ ಗತಿಯೇನೋ! ಎಂದು ಮಂಕುತಿಮ್ಮ ಪ್ರಶ್ನಿಸುತ್ತಾನೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಂಡು ತನ್ನ ಅರಿವೇ ತನಗೆ ಗುರುವೆಂದು ಭಾವಿಸಿಕೊಂಡು ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ, ಮೌಲ್ಯವೂ ಕೂಡಾ.

ಡಾ. ವಸಂತ ಕುಮಾರ್, ಉಡುಪಿ.

*****

Leave a Reply

Your email address will not be published. Required fields are marked *