ಸಾಹಿತ್ಯಾನುಸಂಧಾನ

ಏನು ಪ್ರಪಂಚವಿದು! ಏನು ಧಾಳಾಧಾಳಿ! – ಡಿ. ವಿ. ಜಿ.

10. ಏನು ಪ್ರಪಂಚವಿದು! ಏನು ಧಾಳಾಧಾಳಿ!

      ಏನದ್ಭುತಾಪಾರಶಕ್ತಿ ನಿರ್ಘಾತ!

      ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?

      ಏನರ್ಥವಿದಕೆಲ್ಲ? – ಮಂಕುತಿಮ್ಮ

ಅನ್ವಯಕ್ರಮ:

ಇದು ಏನು ಪ್ರಪಂಚ! ಏನು ಧಾಳಾಧಾಳಿ! ಏನು ಅದ್ಭುತ ಅಪಾರ ಶಕ್ತಿ ನಿರ್ಘಾತ! ಮಾನವನ ಗುರಿ ಏನು? ಬೆಲೆ ಏನು? ಮುಗಿವು ಏನು? ಇದಕೆಲ್ಲ ಏನರ್ಥ? – ಮಂಕುತಿಮ್ಮ

ಪದ-ಅರ್ಥ:

ಪ್ರಪಂಚ-ಜಗತ್ತು, ವಿಶ್ವ;  ಧಾಳಾಧಾಳಿ-ಅತಿಯಾದ ಮುತ್ತಿಗೆ, ಒಂದೇ ಸಮನಾದ ಆಕ್ರಮಣ; ಅದ್ಭುತ-ಅತ್ಯಾಶ್ಚರ್ಯಕರ;  ಅಪಾರ ಶಕ್ತಿ ನಿರ್ಘಾತ-ಮೇರೆಯಿಲ್ಲದ ಶಕ್ತಿಯ ಬಿಗಿಯಾದ ಹೊಡೆತ;   ಗುರಿ-ಲಕ್ಷ್ಯ, ಉದ್ದೇಶ;  ಬೆಲೆ-ಮಹತ್ವ,  ಮೌಲ್ಯ;  ಮುಗಿವು-ಕೊನೆ, ಅವಸಾನ.

            ಈ ಜಗತ್ತೇ ಒಂದು ಅದ್ಭುತ ಸೃಷ್ಟಿ. ಅದರ ಆದ್ಯಂತಗಳನ್ನು, ಆಳ-ಹರಹುಗಳನ್ನು, ಇತಿಮಿತಿಗಳನ್ನು ಕಂಡುಕೊಳ್ಳುವುದು ಅಸಾಧ್ಯ. ಕಂಡುಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಇನ್ನೂ ನಿಗೂಢವಾಗುತ್ತ; ಹೆಜ್ಜೆಹೆಜ್ಜೆಗೂ ಮನುಷ್ಯನ ಬುದ್ಧಿಗೆ, ಜ್ಞಾನಕ್ಕೆ  ಸವಾಲುಗಳನ್ನು ಎಸೆಯುತ್ತ; ಕ್ಷಣಕ್ಷಣಕ್ಕೂ ಕುತೂಹಲವನ್ನು ಕೆರಳಿಸುತ್ತ, ಗೋಚರವಾದಂತಿದ್ದರೂ ಅಗೋಚರವಾಗಿಯೇ ಉಳಿಯುವ ವಿಸ್ಮಯಕಾರಕ ಸೃಷ್ಟಿ. ಹಾಗೆಂದು ಈ ಜಗತ್ತು ಪ್ರಶಾಂತತೆಯಿಂದ ಕೂಡಿಲ್ಲ. ಕ್ಷಣಕ್ಷಣಕ್ಕೂ ಬೇರೆಬೇರೆ ಕ್ಷೇತ್ರಗಳಲ್ಲಿ ನಡೆಯುವ ಆಕ್ರಮಣ-ಅತಿಕ್ರಮಣಗಳು, ಒಂದೇ ಸಮನಾದ ಮೇರೆಯಿಲ್ಲದ ಶಕ್ತಿಯ ಹೊಡೆತಗಳು, ಸಾವುನೋವುಗಳು, ದುಃಖದುಮ್ಮಾನಗಳು, ಕಷ್ಟಕಾರ್ಪಣ್ಯಗಳು ಸಂಭವಿಸಿಕೊಂಡು ಬರುತ್ತಿದ್ದರೂ  ಅವೆಲ್ಲವುಗಳ ಜೊತೆಜೊತೆಯಲ್ಲಿಯೇ ಒಳಿತು, ಸುಖ, ಸಂತೋಷಗಳೆಲ್ಲವೂ ಅನೂಚಾನಾಗಿ ಸೇರಿಕೊಂಡೇ ಬಂದಿವೆ. ಇವೆಲ್ಲದರ ನಡುವೆ ಮಾನವನ ಬದುಕಿನ ಗುರಿ ಯಾವುದು?  ಆತನ ಬದುಕಿಗೆ ಏನು ಬೆಲೆ? ಆತನ ಅವಸಾನ ಯಾವ ರೀತಿಯದು? ಮೊದಲಾದ ಸವಾಲುಗಳು ನಮ್ಮ ಮುಂದೆ ಬೃಹದಾಕಾರವಾಗಿ ನಿಂತುಬಿಡುತ್ತವೆ. ಈ ಜಗತ್ತಿನ ಸೃಷ್ಟಿ ಜೀವಸಂಕುಲದ ಜೀವಿತಕ್ಕೆ  ಪೂರಕ ಎನ್ನುವುದಾದರೆ ಈ ಧಾಳಿ, ಹೊಡೆತ ಹಾಗೂ ಅವುಗಳಿಂದ ಉಂಟಾಗುತ್ತಿರುವ ಅನರ್ಥಗಳಿಗೆ ಅರ್ಥವೇನು? ಎಂದು ಮಂಕುತಿಮ್ಮ ಪ್ರಶ್ನಿಸುತ್ತಾನೆ.

            ಈ ಜಗತ್ತು ಅಗೋಚರಶಕ್ತಿಯ ಸೃಷ್ಟಿಯೇ ವಿನಾ ಮಾನವನಿರ್ಮಿತವಲ್ಲ. ಈ ಜಗತ್ತಿನಲ್ಲಿ ವಾಸಿಸುವ ಸಕಲ ಜೀವಸಂಕುಲ ಹಾಗೂ ಸಸ್ಯಸಂಕುಲಗಳ ಜೀವಿತಕ್ಕೆ ಅನುಕೂಲಕರವಾದ ವಾತಾವರಣ, ಹಾಗೂ ಇವುಗಳ ನಡುವೆ ಅವಿನಾಭಾವತ್ವ ಅನಾದಿಕಾಲದಿಂದಲೂ ರೂಢಿಯಾಗಿ ಬಂದಿದೆ. ಇಲ್ಲಿ ಸೃಷ್ಟಿಯಾಗಿರುವ ಭೂಮಿ, ನೀರು, ಗಾಳಿ, ಬೆಂಕಿ ಹಾಗೂ ಆಕಾಶಗಳೆಂಬ ಪಂಚಭೂತಗಳು ಇಲ್ಲಿನ ಜೀವಸೃಷ್ಟಿಗೆ ಮೂಲಾಧಾರವಾಗಿವೆ. ಈ ಪಂಚಭೂತಗಳೂ ಮನುಷ್ಯಸೃಷ್ಟಿಯಲ್ಲ. ಅವುಗಳು ನಮ್ಮ ಅಧೀನದಲ್ಲಿಲ್ಲ, ಅವುಗಳ ಮೇಲೆ ನಮ್ಮ ಹಿಡಿತವೂ ಇಲ್ಲ. ಇಷ್ಟಬಂದಂತೆ ಬದಲಾಯಿಸಲೂ ಸಾಧ್ಯವಿಲ್ಲ. ಈ ವಿಶ್ವದಲ್ಲಿನ ಎಲ್ಲವೂ ಅವುಗಳಿಂದಲೇ ಹುಟ್ಟಿಕೊಳ್ಳುತ್ತವೆ, ಕಾಲಸಂದಾಗ ಅವುಗಳಲ್ಲಿಯೇ ಲೀನವಾಗಿ ಮತ್ತೆ ಮರುಸೃಷ್ಟಿಯಾಗುತ್ತವೆ. ಲೋಕದಲ್ಲಿ ಈ ರೀತಿಯ ಸೃಷ್ಟಿ ಹಾಗೂ ಅವಸಾನಗಳು ಒಂದನ್ನು  ಇನ್ನೊಂದು ಸದಾ ಅನುಸರಿಸಿಕೊಂಡು ಬಂದಿವೆ. ಇದೊಂದು ನಿರಂತರವಾದ ಪ್ರಕ್ರಿಯೆ. ಆದರೆ ಇಲ್ಲಿ ಎಲ್ಲವೂ ಮೇಲುನೋಟಕ್ಕೆ ಪರಸ್ಪರ  ಪೂರಕವಾಗಿರುವಂತೆ ಕಂಡರೂ ಅವುಗಳೊಳಗೆ ಆಕ್ರಮಣ, ಅತಿಕ್ರಮಣಗಳು ಢಾಳಾಗಿ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯಕರವಾದ ಸತ್ಯ.  

            ಈ ಜಗತ್ತಿನ ಸೃಷ್ಟಿ ಹಾಗೂ ಅದರೊಳಗೆ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಸಕಲ ಜೀವಜಾಲಗಳು ಪರಸ್ಪರ ಪೂರಕವಾಗಿರುವಂತೆಯೇ ಪರಸ್ಪರ ವಿರುದ್ಧವೂ ಆಗಿವೆ. ತನ್ನ ಮೇಲ್ಮೆಗಾಗಿ, ಅಸ್ತಿತ್ವಕ್ಕಾಗಿ ಒಂದು ಇನ್ನೊಂದರ ಮೇಲೆ ಎಸಗುವ ಆಕ್ರಮಣ, ಅತಿಕ್ರಮಣಗಳು ವ್ಯವಸ್ಥೆಯ ಅಧ್ವಾನಕ್ಕೆ, ನಾಶಕ್ಕೆ  ಕಾರಣವಾಗುತ್ತಿರುವುದು ವಿಪರ್ಯಾಸ. ಜೀವಸಂಕುಲಗಳ ನಡುವಿನ ಪರಸ್ಪರ ಧಾಳಿ, ಅತಿಕ್ರಮಣಗಳು ಒಂದು ಬಗೆಯದಾದರೆ, ಪ್ರಾಕೃತಿಕವಾದವುಗಳು ಹಲವು. ಜೀವಸಂಕುಲಗಳ ನಡುವಿನ ಅತಿಕ್ರಮಣಗಳು, ಧಾಳಿಗಳು ಬಹುತೇಕ ನಿರೀಕ್ಷಿತ. ಆದರೆ ಪ್ರಾಕೃತಿಕವಾದ ಧಾಳಿಗಳು ಅನಿರೀಕ್ಷಿತವಾಗಿದ್ದು, ವ್ಯವಸ್ಥೆಯನ್ನೇ ಅಧ್ವಾನಮಾಡಿಬಿಡುತ್ತವೆ. ಒಂದಷ್ಟು ಜೀವಹಾನಿಯೂ ಸಂಭವಿಸುತ್ತದೆ. ಮನುಷ್ಯನಾದರೂ ತನ್ನನ್ನು ತಾನು ಸುಧಾರಿಸಿಕೊಳ್ಳಬಹುದು. ಆದರೆ ಪ್ರಕೃತಿಯನ್ನು ಸುಧಾರಿಸುವುದು ಹೇಗೆ? ನಿರಂತರ ಸಂಭವಿಸುವ ಉಲ್ಕಾಪಾತಗಳು, ಭೂಕಂಪಗಳು, ತ್ಸುನಾಮಿಗಳು, ಉತ್ಪಾತಗಳು, ನೆರೆವಿಕೋಪಗಳು, ಅತಿವೃಷ್ಟಿ-ಅನಾವೃಷ್ಟಿಗಳು, ಶೀತ-ಶಾಖಗಳಿಂದುಂಟಾಗುವ ಅಧ್ವಾನಗಳು – ಯಾವುದೂ ನಮ್ಮ ವಶದಲ್ಲಿಲ್ಲ. ಇವೆಲ್ಲವೂ ಅತ್ಯಾಶ್ಚರ್ಯಕರವಾದ, ಇತಿಮಿತಿಗಳಿಲ್ಲದ ಹೊಡೆತಗಳಾಗಿದ್ದು ಸೃಷ್ಟಿ-ಸ್ಥಿತಿಗಳನ್ನೇ ಲಯಗೊಳಿಸಬಲ್ಲವು.  ಅವುಗಳನ್ನು ಅರ್ಥೈಸುವುದಾಗಲೀ ಅವುಗಳ ಪರಿಣಾಮಗಳನ್ನು ಊಹಿಸುವುದಾಗಲೀ ಜೀವಸಂಕುಲದ ಹಾನಿಯನ್ನು  ತಡೆಯುವುದಾಗಲೀ ಸಾಧ್ಯವಿಲ್ಲ.

            ಪ್ರಾಕೃತಿಕ ವಿಕೋಪಗಳಿಂದ ಎಲ್ಲವೂ ಅಳಿದರೂ ಮರಳಿ ಎಲ್ಲವೂ ಮರುಹುಟ್ಟು ಪಡೆಯುತ್ತವೆ. ಹೊಸರೂಪ, ಹೊಸಸ್ಥಿತಿ, ಹೊಸಹುರುಪನ್ನು ಪಡೆದುಕೊಂಡು ನೆಲೆಗೊಳ್ಳುತ್ತವೆ. ಇದರ ಮರ್ಮವನ್ನು ಅರಿಯಲಾರದು. ಮಾನವದೃಷ್ಟಿಗೆ ಅಗೋಚರವಾದ, ಆದರೆ ಬುದ್ಧಿಗೋಚರವಾಗುವ ಈ ಸೃಷ್ಟಿ, ಸ್ಥಿತಿ, ಲಯಗಳು ಅದ್ಭುತವಾಗಿ, ಅಸಾಮಾನ್ಯವಾಗಿ, ಶಕ್ತಿಭರಿತವಾಗಿ ಆಶ್ಚರ್ಯಕರವಾಗಿ ಕಾಣಿಸಿಕೊಳ್ಳುತ್ತವೆ. ಅಪಾಯವಿದ್ದರೂ ಮತ್ತೆಮತ್ತೆ ಜೀವಸಂಕುಲಗಳಲ್ಲಿ, ಸಸ್ಯಸಂಕುಲಗಳಲ್ಲಿ ಹೊಸಹುರುಪನ್ನು, ಹೊಸ ಆಲೋಚನೆಗಳನ್ನು, ಹೊಸ ಆಶೋತ್ತರಗಳನ್ನು ತುಂಬುತ್ತವೆ. ಕಾಲಕಾಲಕ್ಕೆ ಕಾಣಿಸಿಕೊಳ್ಳುವ ಈ ಅಧ್ವಾನಗಳಲ್ಲೂ ಬದಲಾವಣೆಯ ಹೊಳಹುಗಳಿವೆ, ನಿತ್ಯನೂತನತೆಯ ಪ್ರೇರಣೆಗಳಿವೆ. ಹಾಗಾಗಿಯೇ ಈ ಸೃಷ್ಟಿ ಸಕಲ ಜೀವಜಾಲಕ್ಕೆ ನಿತ್ಯನೂತನೆಯಿಂದ, ಆಶಾದಾಯಕತೆಯಿಂದ ಕೂಡಿದೆ. ಇದು ನೋವನ್ನು ಮರೆಸುತ್ತದೆ, ಭರವಸೆಯನ್ನು ಮೂಡಿಸುತ್ತದೆ, ಬದುಕುವ ಪಾಠವನ್ನು ಕಲಿಸುತ್ತದೆ. ಇವೆಲ್ಲವೂ ಅಗೋಚರಶಕ್ತಿಯೊಂದರ ಲೀಲೆಯಲ್ಲದೆ ಬೇರೇನಲ್ಲ. ಮನುಷ್ಯ ತನ್ನಿಂದಲೇ ಎಲ್ಲವೂ ಎಂದು ಮೆರೆಯಲಾಗದು.  ಇವೆಲ್ಲವೂ ಮಾನವಶಕ್ತಿಯನ್ನು ಮೀರಿದ ಶಕ್ತಿಯೊಂದಿದೆ, ಅದೇ ವಿಶ್ವವನ್ನು ನಿಯಂತ್ರಿಸುತ್ತಿದೆ, ಅದಕ್ಕೆ ಯಾವತ್ತೂ ಮಣಿಯಲೇಬೇಕು ಎಂಬ ಸಂದೇಶವನ್ನು ಮತ್ತಮತ್ತೆ ಮನುಕುಲಕ್ಕೆ ನೀಡುತ್ತಲೇ ಬಂದಿದೆ.

            ಈ ಧಾಳಾಧಾಳಿ, ಘರ್ಷಣೆ ಹಾಗೂ ಅವುಗಳಿಂದೊದಗುವ ಘೋರ ಪರಿಣಾಮಗಳ ನಡುವೆ ಸಕಲ ಜೀವಸಂಕುಲದ ಬದುಕೇ ದುಸ್ತರವಾಗಿರುವಾಗ ಮನುಷ್ಯಬದುಕಿನ ಗುರಿ ಏನು? ಅದರ ಬೆಲೆ ಏನು? ಅದರ ಕೊನೆ ಏನು? ಸೃಷ್ಟಿಯಾದುದೆಲ್ಲವೂ ಅಳಿಯುತ್ತಲೇ ಹೋಗುವುದಾದರೆ ಸೃಷ್ಟಿಗೇನು ಅರ್ಥ? ಏನು ಬೆಲೆ? ಎಂಬುದನ್ನು ಬಹುಶಃ ಹೆಚ್ಚಿನ ಯಾರೂ ಚಿಂತಿಸುತ್ತಿಲ್ಲ. ಹಲ್ಲುಗಳ ಮಧ್ಯೆ ನಾಲಗೆ ಸಿಕ್ಕಿಕೊಳ್ಳದೆ ತಪ್ಪಿಸಿಕೊಂಡು ಸುರಕ್ಷಿತವಾಗಿರುವಂತೆ ಮನುಷ್ಯನೂ ಪ್ರಾಕೃತಿಕವಾದ ಧಾಳಿ, ಘರ್ಷಣೆ ಮೊದಲಾದ ವಿಕೋಪ, ವಿಪತ್ತುಗಳ ಮಧ್ಯೆ ಬುದ್ಧಿವಂತಿಕೆಯಿಂದ, ಜವಾಬ್ದಾರಿಯಿಂದ ಬದುಕುಳಿದು ಸಾಧಿಸಬೇಕಲ್ಲದೆ ಸುಮ್ಮನೆ ಅಳಿಯುವುದಕ್ಕಿಂತ ಬದುಕುತ್ತಲೇ ಬಾಳಿಗೊಂದು ಗುರಿಯನ್ನಿಟ್ಟುಕೊಂಡು ಮೌಲಿಕ ಬಾಳಿ ಬದುಕಿ, ಮಹತ್ತರವಾದ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು. ಆಗಲೇ ಬದುಕು ಗುರಿಸಂಪನ್ನವಾಗುತ್ತದೆ, ಮೌಲ್ಯಭರಿತವಾಗುತ್ತದೆ, ಸಾರ್ಥಕವೆನಿಸಿಕೊಳ್ಳುತ್ತದೆ, ಅಳಿದ ಮೇಲೂ ಸಾಧನೆ ಉಳಿಯುವಂತಾಗುತ್ತದೆ.

  • ಡಾ. ವಸಂತ್ ಕುಮಾರ್, ಉಡುಪಿ

Leave a Reply

Your email address will not be published. Required fields are marked *