ಸಾಹಿತ್ಯಾನುಸಂಧಾನ

ಏನು ಭೈರವಲೀಲೆಯೀ ವಿಶ್ವಭ್ರಮಣೆ! – ಡಿ. ವಿ. ಜಿ.

9. ಏನು ಭೈರವಲೀಲೆಯೀ ವಿಶ್ವಭ್ರಮಣೆ!

    ಏನು ಭೂತಗ್ರಾಮನರ್ತನೋನ್ಮಾದ!

    ಏನಗ್ನಿ ಗೋಳಗಳು! ಏನಂತರಾಳಗಳು!

    ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ

ಅನ್ವಯಕ್ರಮ:

ಈ ವಿಶ್ವಭ್ರಮಣೆ ಏನು ಭೈರವಲೀಲೆ! ಏನು ಭೂತಗ್ರಾಮ ನರ್ತನ ಉನ್ಮಾದ! ಏನು ಅಗ್ನಿಗೋಳಗಳು! ಏನು ಅಂತರಾಳಗಳು! ಏನು ವಿಸ್ಮಯಸೃಷ್ಟಿ! ಮಂಕುತಿಮ್ಮ

ಪದ-ಅರ್ಥ:

ಭೈರವಲೀಲೆ-ಭೀಕರವಾದ ಆಟ; (ಕಾಲಭೈರವನ ತಾಂಡವದಂತಿರುವ ಆಟ)   ವಿಶ್ವಭ್ರಮಣೆ-ಭೂಮಿಯ ಸುತ್ತುವಿಕೆ;  ಭೂತಗ್ರಾಮ-ಪಂಚಮಹಾಭೂತಗಳ ಸಮೂಹ;  ನರ್ತನೋನ್ಮಾದ (ನರ್ತನ+ಉನ್ಮಾದ)-ನೃತ್ಯದ ಆವೇಶ, ಕ್ರಿಯೆಯ ಆವೇಶ;  ಅಗ್ನಿಗೋಳಗಳು– ಬ್ರಹ್ಮಾಂಡದಲ್ಲಿರುವ ಸೂರ್ಯನಂತಹ ಅಗ್ನಿಗೋಳಗಳು, ಆಕಾಶಕಾಯಗಳು; ಅಂತರಾಳಗಳು-ನಡುವಿನ ಅಂತರಗಳು, ಒಂದೊಂದರ ನಡುವಿನ ದೂರ;  ವಿಸ್ಮಯ ಸೃಷ್ಟಿ-ಆಶ್ಚರ್ಯಕರವಾದ ರಚನೆ.

            ಸಮಗ್ರ ಬ್ರಹ್ಮಾಂಡವೇ ವಿಸ್ಮಯಲೀಲೆಗಳಿಂದ ಕೂಡಿರುವ ಒಂದು ವ್ಯವಸ್ಥೆ. ಅದು ತನ್ನೊಳಗೆ ಭೀಕರವಾದ ವೈವಿಧ್ಯವನ್ನು ತುಂಬಿಕೊಂಡು ಕ್ಷಣಕ್ಷಣಕ್ಕೂ ಸವಾಲನ್ನೆಸೆಯುತ್ತ,  ಸೋಜಿಗವನ್ನುಂಟುಮಾಡುತ್ತ, ವಿಸ್ಮಯಗಳನ್ನು ಸೃಷ್ಟಿಸುತ್ತ, ಹೆಜ್ಜೆಹೆಜ್ಜೆಗೂ ನಿಗೂಢವಾಗುತ್ತ ಜೀವಸಂಕುಲದ ಬದುಕಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತ ಸಾಗುತ್ತದೆ. ಈ ಸೃಷ್ಟಿ ಮೇಲುನೋಟಕ್ಕೆ ಬುದ್ಧಿಗೋಚರವಾದಂತಿದ್ದರೂ ಒಳನೋಟಕ್ಕೆ ಅಗೋಚರವಾಗಿಯೇ ಉಳಿದು ಮನುಷ್ಯನ ಕುತೂಹಲವನ್ನು ಆದ್ಯಂತವಾಗಿ ಕೆರಳಿಸಿಕೊಂಡೇ ಸಾಗಿದೆ.  ಭೂಮಿ ಮೊದಲಾದ ಗ್ರಹಗಳ ಸುತ್ತುವಿಕೆ, ಅವುಗಳ ಮೇಲೆ ಸೂರ್ಯನ ನಿಯಂತ್ರಣ, ಸೃಷ್ಟಿಯ ವಿಸ್ಮಯದೊಳಗೆ ಪಂಚಮಹಾಭೂತಗಳ ಅಸ್ತಿತ್ವದ ಆವೇಶಗಳು, ಅಂತರೀಕ್ಷದಲ್ಲಿ ಸುತ್ತುತ್ತಿರುವ ವಿವಿಧ ಗಾತ್ರದ ಆಕಾಶಕಾಯಗಳು ಹಾಗೂ ಅವುಗಳ ನಡುವಿನ ಅಂತರಗಳು -ಇವೆಲ್ಲವೂ ಸಮಗ್ರ ವಿಶ್ವಸೃಷ್ಟಿಯನ್ನು  ವಿಸ್ಮಯಗೊಳಿಸುವಂತೆ, ನಿಗೂಢವೆನಿಸುವಂತೆ ಒಂದು ಏಕಸೂತ್ರದಲ್ಲಿ ಆಶ್ಚರ್ಯಕರವೆನ್ನುವಂತೆ ಅನೂಚಾನಾಗಿ ಬಂಧಿತವಾಗಿವೆ.

            ಮನುಷ್ಯ ಅನಾದಿಕಾಲದಿಂದಲೂ ಈ ಭೂಮಿಯ ಬೇರೆಬೇರೆ ಭಾಗಗಳಲ್ಲಿ ವಾಸಿಸಿಕೊಂಡು ಬರುತ್ತಿದ್ದರೂ ತನ್ನ ಜೀವನೋಪಾಯಕ್ಕೆ ಇಲ್ಲಿ ದೊರಕುವ ಅವಶ್ಯ ಪರಿಕರಗಳನ್ನು ಬಳಸಿಕೊಳ್ಳುತ್ತಿದ್ದರೂ ಈ ಸೃಷ್ಟಿಯ ಅಸ್ತಿತ್ವದ ಬಗ್ಗೆಯಾಗಲೀ ಅದರ ನಿಗೂಢತೆಯ ಬಗ್ಗೆಯಾಗಲೀ ಜೀವಸಂಕುಲದ ಬದುಕಿಗೆ ಪೂರಕವಾಗಿರುವ ವ್ಯವಸ್ಥೆಯ ಬಗ್ಗೆಯಾಗಲೀ ಈ ಭೂಮಿಯಲ್ಲಿ ಕಲ್ಪಿತವಾಗಿರುವ ಅನುಕೂಲಗಳ ಬಗ್ಗೆಯಾಗಲೀ ಕಿಂಚಿತ್ತೂ ಯೋಚಿಸಿಲ್ಲ, ತಲೆಕೆಡಿಸಿಕೊಳ್ಳಲೂ ಇಲ್ಲ. ಬೆಳಗಾಗುವಿಕೆ, ಕತ್ತಲಾಗುವಿಕೆ, ಜೀವಸಂಕುಲಕ್ಕೆ ಅರಿವೇ ಆಗದಂತೆ ಭೂಮಿಯ ಪರಿಭ್ರಮಣೆ, ಕಾಲಕಾಲಕ್ಕೆ ಬದಲಾಗುವ ಹವಾಮಾನ, ಮಿಂಚು-ಸಿಡಿಲು, ಗಾಳಿ-ಮಳೆ ಹಾಗೂ ಅವುಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ವೈಪರೀತ್ಯಗಳೆಲ್ಲವೂ ಒಂದು ರೀತಿಯ ಭೈರವಲೀಲೆ. ಸಮಗ್ರ ವಿಶ್ವವೇ ಇಂತಹ    ಭಯಂಕರವಾದ ಲೀಲೆಗಳಿಂದ  ತುಂಬಿಕೊಂಡಿದೆ. ಹೀಗಿದ್ದರೂ ಇಲ್ಲಿ ವಾಸಿಸುತ್ತಿರುವ ಜೀವಸಂಕುಲಕ್ಕೆ ಕೆಲವೊಮ್ಮೆ ಮಾರಕದಂತಿದ್ದರೂ ಬಹುತೇಕ ಅವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪೂರಕವಾಗಿಯೇ ಇವೆ.  ಅವೆಲ್ಲವನ್ನೂ ಅರಿಯುವುದಕ್ಕೆ ಕುತೂಹಲವನ್ನು ತಾಳಿದಷ್ಟೂ ಅವು ನಿಗೂಢವಾಗಿಯೋ ವಿಸ್ಮಯಕಾರಿಯಾಗಿಯೋ ಉಳಿದುಬಿಡುತ್ತವೆ.  ಅರಿತಷ್ಟೂ ರಹಸ್ಯವಾಗಿಬಿಡುತ್ತವೆ.

            ಸಮಗ್ರ ವಿಶ್ವವೇ ಪಂಚಭೂತಗಳೆನಿಸಿಕೊಂಡಿರುವ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶಗಳಿಂದ  ಸೃಷ್ಟಿಯಾಗಿದೆ. ಈ ಪಂಚಭೂತಗಳೇ ಸಮಸ್ತ ಸೃಷ್ಟಿಗಾಧಾರ. ಮಾತ್ರವಲ್ಲದೆ, ಈ ಪಂಚಭೂತಗಳು ಅಗಾಧವಾದ ರೂಪವೈವಿಧ್ಯಗಳನ್ನು ಇಲ್ಲಿ ಸೃಜಿಸಿವೆ. ಇಲ್ಲಿನ ಚರಾಚರ ವಸ್ತುಗಳು, ಜೀವಸಂಕುಲಗಳೆಲ್ಲವೂ ಪಂಚಭೂತಗಳ ಒಂದೊಂದು ರೂಪಗಳು. ಹಾಗಾಗಿಯೇ ಇಲ್ಲಿನ ಪಂಚಭೂತಗಳ ರೂಪವೈವಿಧ್ಯ ಆಶ್ಚರ್ಯಕರವೂ ಕುತೂಹಲಕರವೂ ಆದ ಅಸ್ತಿತ್ವವನ್ನು ಪಡೆದುಕೊಂಡಿವೆ. ಮಾತ್ರವಲ್ಲ, ಅವುಗಳೊಳಗೆ  ಅವಿನಾಭಾವ ಸಂಬಂಧಗಳಿರುವಂತೆಯೇ ಭೇದವೈವಿಧ್ಯವೂ ಕಂಡುಬರುತ್ತದೆ.  ಸಕಲವೂ ಅವುಗಳಿಂದಲೇ ಹುಟ್ಟಿಕೊಳ್ಳುತ್ತವೆ, ಕೊನೆಯಲ್ಲಿ ಸಕಲವೂ ಅವುಗಳಲ್ಲಿಯೇ ಸೇರಿಕೊಳ್ಳುತ್ತವೆ. ಇದೊಂದು ಆಶ್ಚರ್ಯಕರವಾದ, ಕುತೂಹಲಕಾರಿಯಾದ ನರ್ತನೋನ್ಮಾದವಾದರೂ ಸಕಲ ಜೀವಸಂಕುಲಕ್ಕೆ ಚೇತೋಹಾರಿಯೂ ಸ್ಫೂರ್ತಿದಾಯಕವೂ ಜೀವನಾಸಕ್ತಿದಾಯಕವೂ ಆಗಿದೆ ಎಂಬುದನ್ನು ಅರಿತ್ತಿದ್ದರೂ ಅದರ ರಹಸ್ಯವನ್ನು ಕಂಡುಕೊಳ್ಳುವುದು ದುಸ್ಸಾಧ್ಯವಾದರೂ ಕನಿಷ್ಠಪಕ್ಷ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸದೆ ಪುರಸ್ಕರಿಸುವ, ಕಾಪಾಡಿಕೊಳ್ಳುವ, ನೇರ್ಪುಗೊಳಿಸುವ ಪ್ರಯತ್ನವನ್ನಾದರೂ ಮಾಡಲೇಬೇಕಾಗಿದೆ.

            ಬ್ರಹ್ಮಾಂಡವೆಂಬುದು ಅಸಂಖ್ಯ ಸೂರ್ಯಮಂಡಲಗಳ, ವಿವಿಧ ಆಕಾಶಕಾಯಗಳ ಆಗರ. ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಒಂದು ಅಗಾಧ. ಭಿನ್ನಭಿನ್ನ ಆಕಾರ, ಗಾತ್ರ, ಸ್ವರೂಪ, ಪ್ರಕಾಶಗಳನ್ನು ಹೊಂದಿವೆ.  ಕಲ್ಪನೆಗೆ ನಿಲುಕದ, ಅರಿವಿಗೆ ಬಾರದ, ಸೂತ್ರವೊಂದರಲ್ಲಿ ಪೋಣಿತವಾದ ವ್ಯವಸ್ಥೆಯನ್ನು ಹೊಂದಿರುವ ಅಗ್ನಿಗೋಳಗಳೆನಿಸಿರುವ ಕೋಟ್ಯನುಕೋಟಿ ಸಂಖ್ಯೆಯ ಸೂರ್ಯಮಂಡಲಗಳಿಂದ,  ಗ್ರಹಗಳಿಂದ,  ಆಕಾಶಕಾಯಗಳಿಂದ  ನಿಬಿಡವಾಗಿದೆ. ಬ್ರಹ್ಮಾಂಡದಲ್ಲಿ ಮತ್ತೆಮತ್ತೆ ವಿವಿಧ ಕಾರಣಗಳಿಂದ ಆಸ್ಪೋಟಗೊಂಡು ಹೊಸಹೊಸ ಸೂರ್ಯಮಂಡಲಗಳೋ ಅಗ್ನಿಗೋಳಗಳೋ ಗ್ರಹಗಳೋ ಆಕಾಶಕಾಯಗಳೋ  ಹುಟ್ಟುಕೊಳ್ಳುತ್ತಲೇ ಇವೆ.  ಭೂಮಿಯಿಂದ ಎಷ್ಟೋ ಲಕ್ಷ ಕಿಲೋಮೀಟರ್ ದೂರದಲ್ಲಿರುವ ಅಗ್ನಿಗೋಳ ಸೂರ್ಯನ ಶಾಖವು ಸಹಿಸಲಸಾಧ್ಯವಾದರೂ ಜೀವಸಂಕುಲದ ಉಳಿವಿಗೆ ಅದು ಅತ್ಯಂತ ಅನಿವಾರ್ಯವೂ ಆಗಿದೆ. ಪ್ರತಿಯೊಂದು ಸೂರ್ಯಮಂಡಲವೂ ತನ್ನದೇ ಸೌರವ್ಯವಸ್ಥೆಯನ್ನು ಹೊಂದಿರುವಾಗ  ಅಂತಹ ಗ್ರಹಗಳಲ್ಲಿಯೂ ಸಸ್ಯಸಂಕುಲ, ಜೀವಸಂಕುಲದ ಸಾಧ್ಯತೆಗಳಿರಬಹುದು! ಇಲ್ಲದಿರಬಹುದು!  ಆದರೆ ನಿಗೂಢತೆಯೆಂಬುದು, ವಿಸ್ಮಯವೆಂಬುದು ಇದ್ದೇ ಇದೆ. ಈ ವ್ಯವಸ್ಥೆಯ ಹಿಂದೆ ಒಂದು ಅಗಾಧವಾದ ಶಕ್ತಿಯಿದೆಯಲ್ಲ! ಆ ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತಿದೆಯಲ್ಲ! ಅದೇ ಭೈರವಲೀಲೆ. ಈ ವ್ಯವಸ್ಥೆಯ ಸೃಜಕ ಹಾಗೂ ಅದನ್ನು ವ್ಯವಸ್ಥಿತವಾಗಿ ನಡೆಸುವ ಕಾಣದ ಶಕ್ತಿಗೆ ತಲೆಬಾಗಲೇಬೇಕು. ಎಷ್ಟೇ ಪ್ರಯತ್ನಿಸಿದರೂ ನಮ್ಮ ಅರಿವಿಗೆ ಬಾರದ, ಅರಿಯಲು ಸಾಧ್ಯವಾಗದ, ಕಲ್ಪಿಸಲೂ ಅಸಾಧ್ಯವಾದ ಅವುಗಳ ಅಸ್ತಿತ್ವ, ವ್ಯವಸ್ಥೆ ಜೀವಸಂಕುಲಕ್ಕೆ  ಕ್ಷಣಕ್ಷಣಕ್ಕೂ ಕುತೂಹಲವನ್ನು, ಸೋಜಿಗವನ್ನು, ಉಂಟುಮಾಡುತ್ತ ನಿಗೂಢತೆಯನ್ನು ಸಾಧಿಸುತ್ತ ಮನುಷ್ಯನ ಬುದ್ಧಿವಂತಿಕೆಗೆ, ಜ್ಞಾನಕ್ಕೆ ಸವಾಲುಗಳನ್ನು ಒಡ್ಡುತ್ತಲೇ ಇವೆ. ಸಾಧಿಸಲಸಾಧ್ಯವಾದರೂ ಮನುಷ್ಯನ ಆಸಕ್ತಿಯನ್ನು ಮತ್ತೆಮತ್ತೆ ಪ್ರಚೋದಿಸುತ್ತಲೇ ಇವೆ.

            ಬ್ರಹ್ಮಾಂಡದಲ್ಲಿರುವ ಕೋಟ್ಯನುಕೋಟಿ ಅಗ್ನಿಗೋಳಗಳು, ಸೌರವ್ಯೂಹಗಳು, ಗ್ರಹಗಳು, ಸೌರಪಥಗಳು, ಆಕಾಶಗಂಗೆಗಳು ಒಂದಕ್ಕೊಂದು ನಿರ್ದಿಷ್ಟ ಅಂತರದಲ್ಲಿ ನೆಲೆಗೊಂಡಿವೆ. ಅವುಗಳ ನಡುವೆ ಮೇರೆಯೇ ಇಲ್ಲದ ಅಗಾಧವಾದ ಅಂತರವೂ ಇದೆ. ಒಂದರಿಂದ ಇನ್ನೊಂದಕ್ಕೆ ಅಗಾಧವಾದ ದೂರವಿದ್ದು ಒಂದನ್ನೊಂದು ಘರ್ಷಿಸದ ವ್ಯವಸ್ಥಿತವಾದ ರೀತಿಯಲ್ಲಿ ಅವು ಚಲಸುತ್ತಲೇ ಬ್ರಹ್ಮಾಂಡಕ್ಕೆ ಚಲನಶೀಲತೆಯನ್ನು ತಂದುಕೊಟ್ಟಿವೆ. ಒಟ್ಟಿನಲ್ಲಿ ಸೋಜಿಗವನ್ನುಂಟುಮಾಡುವ, ಭಯಭೀತಗೊಳಿಸುವ, ಆಶ್ಚರ್ಯಚಕಿತಗೊಳಿಸುವ, ಕುತೂಹಲವನ್ನು ಕೆರಳಿಸುವ, ಕ್ಷಣಕ್ಷಣಕ್ಕೂ ಜಟಿಲತೆಯನ್ನುಂಟುಮಾಡುವ ಬ್ರಹ್ಮಾಂಡವ್ಯವಸ್ಥೆಯೇ  ಒಂದು ವಿಸ್ಮಯಕಾರಕ ಸೃಷ್ಟಿ. ಈ ವ್ಯವಸ್ಥೆಯನ್ನು ಸೃಜಿಸಿ ನಿಯಂತ್ರಿಸುತ್ತಿರುವ, ಸಕಲ ಜೀವಸಂಕುಲಕ್ಕೆ ಪೂರಕವಾಗಿ ವ್ಯವಸ್ಥೆಗೊಳಿಸಿರುವ ಭಗವಂತನ ಅಗಾಧವಾದ ಶಕ್ತಿಗೆ, ಆತನ ಸೃಷ್ಟಿವೈವಿಧ್ಯಕ್ಕೆ ಹಾಗೂ ಅದರ ನಿತ್ಯನೂತನತೆಗೆ ಶರಣಾಗಲೇಬೇಕು ಎನ್ನುತ್ತಾನೆ ಮಂಕುತಿಮ್ಮ.

  • ಡಾ. ವಸಂತ್ ಕುಮಾರ್, ಉಡುಪಿ

*****

One thought on “ಏನು ಭೈರವಲೀಲೆಯೀ ವಿಶ್ವಭ್ರಮಣೆ! – ಡಿ. ವಿ. ಜಿ.

  1. ತುಂಬಾ ದಿನದ‌ ನಂತರ ಮತ್ತೆ ಚಿಂತನೆಗೆ ಹಚ್ಚುವ ವಿಚಾರ ಬರೆದಿದ್ದೀರಿ ಸರ್.ಚೆನ್ನಾಗಿದೆ.ಧನ್ಯವಾದಗಳು

Leave a Reply

Your email address will not be published. Required fields are marked *