೮. ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?
ಭ್ರಮಿಪುದೇನಾಗಾಗ ಕರ್ತೃವಿನ ಮನಸು?
ಮಮತೆಯುಳ್ಳವನಾತನಾದೊಡೀ ಜೀವಗಳು
ಶ್ರಮಪಡುವುವೇಕಿಂತು? –ಮಂಕುತಿಮ್ಮ
ಅನ್ವಯಕ್ರಮ:
ಸೃಷ್ಟಿಯಲಿ ಒಂದು ಕ್ರಮವು, ಒಂದು ಲಕ್ಶ್ಯವು ಉಂಟೇನು? ಕರ್ತೃವಿನ ಮನಸು ಆಗಾಗ ಏನ್ ಭ್ರಮಿಪುದು? ಆತನ್ ಮಮತೆಯುಳ್ಳವನ್ ಆದೊಡೆ ಈ ಜೀವಗಳು ಇಂತು ಶ್ರಮಪಡುವುವು ಏಕೆ?
ಪದ-ಅರ್ಥ:
ಕ್ರಮ-ನಿಯಮ, ವ್ಯವಸ್ಥೆ; ಲಕ್ಷ್ಯ-ಗುರಿ, ದೃಷ್ಟಾಂತ; ಸೃಷ್ಟಿ-ಜಗತ್ತು, ಪ್ರಕೃತಿ, ರಚನೆ; ಭ್ರಮಿಪುದೇನ್-ಮರುಳುಗೊಳ್ಳುವುದೇನು; ಆಗಾಗ-ಕ್ಷಣಕ್ಷಣಕ್ಕೂ, ಹೆಜ್ಜೆಹೆಜ್ಜೆಗೂ; ಕರ್ತೃ-ಬ್ರಹ್ಮ, ಭಗವಂತ; ಮಮತೆಯುಳ್ಳವನ್-ಮಮಕಾರವುಳ್ಳವನು, ದಯಾಳು; ಆತನಾದೊಡೆ-ಆತನಾಗಿರುವಾಗ; ಈ ಜೀವಗಳು-ಸೃಷ್ಟಿಯಲ್ಲಿರುವ ಜೀವಜಂತುಗಳು; ಶ್ರಮಪಡು-ಕಷ್ಟಪಡು; ಆಯಾಸ ಹೊಂದು; ಏಕಿಂತು-ಏಕೆ ಹೀಗೆ.
ಈ ಸೃಷ್ಟಿ ಕೇವಲ ಜಡವಲ್ಲ, ಅದು ಸಕಲ ಸಸ್ಯರಾಶಿ, ಜೀವರಾಶಿಗಳಿಗೆ ಆಶ್ರಯತಾಣವಾಗಿರುವ ವೈವಿಧ್ಯಮಯವಾದ ಬೀಡು. ಇವೆಲ್ಲವೂ ಈ ಸೃಷ್ಟಿಗೆ ಚಲನಶೀಲತೆಯನ್ನು, ಕ್ರಿಯಾಶೀಲತೆಯನ್ನು, ಜೀವಂತಿಕೆಯನ್ನು ತುಂಬಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ಬೆಳವಣಿಗೆಯ ಕ್ರಮ, ಜೀವಿತಕ್ರಮವೊಂದಿದೆ ಎಂಬುದೇನೋ ಸರಿ. ವರ್ತಮಾನದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅವುಗಳ ಗುರಿಗಳು ಬೇರೆಬೇರೆ ಇವೆಯೇ? ಎಂಬ ಸಂಶಯ ಹಾಗೂ ಸವಾಲು ನಮ್ಮ ಮುಂದೆ ನಿಲ್ಲುತ್ತದೆ. ಈ ರೀತಿ ಗುರಿಗಳು ಬದಲಾಗುವುದಕ್ಕೆ ಇವೆಲ್ಲದರ ಸೃಷ್ಟಿಕರ್ತನಾದ ಬ್ರಹ್ಮನ ಮನಸ್ಸು ಆಗಾಗ ಮರುಳುಗೊಳ್ಳುತ್ತಿರುವುದು ಕಾರಣವೆ? ಈ ಸೃಷ್ಟಿಯಲ್ಲಿ ಎಲ್ಲವನ್ನೂ ವೈವಿಧ್ಯಮಯವಾಗಿ ರೂಪಿಸಿರುವ ಭಗವಂತ ತಾನು ಸೃಷ್ಟಿಸಿದ ಈ ವೈವಿಧ್ಯಮಯ ಸಸ್ಯರಾಶಿ, ಜೀವರಾಶಿಗಳ ಬಗ್ಗೆ ಮಮಕಾರವುಳ್ಳವನು ಎಂದಾದರೆ ಈ ಸೃಷ್ಟಿಯಲ್ಲಿರುವ ಜೀವಜಂತುಗಳು ಹೆಜ್ಜೆಹೆಜ್ಜೆಗೂ ಏಕೆ ಶ್ರಮಪಡುತ್ತಿವೆ? ಈ ಆಯಾಸಕ್ಕೆ, ಕಷ್ಟಗಳಿಗೆ ಕೊನೆಯೆಂಬುದೇ ಇಲ್ಲವೇ? ಎಂಬುದು ಮಂಕುತಿಮ್ಮನ ಸವಾಲು.
ಸೃಷ್ಟಿ ಎಂಬುದು ಕೇವಲ ಮಣ್ಣು, ಕಲ್ಲು, ಗುಡ್ಡ, ಬೆಟ್ಟ, ಪರ್ವತಗಳಿಂದ ಕೂಡಿಕೊಂಡಿರುವಂತಹುದಲ್ಲ. ಅವುಗಳ ಜೊತೆಗೆ ಈ ಸೃಷ್ಟಿಯ ಬೇರೆಬೇರೆ ಭಾಗಗಳ ಹವಾಮಾನ, ಪ್ರಾಕೃತಿಕ ರಚನೆ, ಭೌಗೋಳಿಕ ಪರಿಸ್ಥಿತಿಗಳಿಗನುಗುಣವಾಗಿ ಸಸ್ಯಸಂಕುಲ, ಪ್ರಾಣಿಸಂಕುಲ, ಪಕ್ಷಿಸಂಕುಲ, ಜೊತೆಗೆ ಇನ್ನೆಷ್ಟೋ ಜೀವಸಂಕುಲಗಳೊಂದಿಗೆ ಮನುಷ್ಯನನ್ನೂ ಸೇರಿಸಿಕೊಂಡು ಈ ಸೃಷ್ಟಿ ಚಲನಶೀಲತೆಯನ್ನೂ ವೈವಿಧ್ಯವನ್ನೂ ಜೀವಂತಿಕೆಯನ್ನೂ ಪಡೆದುಕೊಂಡಿದೆ. ಇಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಜೀವಿತಕ್ರಮವೊಂದಿದೆ. ಅದು ಪ್ರಾಣಿಯಿಂದ ಪ್ರಾಣಿಗೆ, ಪಕ್ಷಿಯಿಂದ ಪಕ್ಷಿಗೆ, ಸಸ್ಯದಿಂದ ಸಸ್ಯಕ್ಕೆ, ಮನುಷ್ಯನಿಂದ ಮನುಷ್ಯನಿಗೆ ವ್ಯತ್ಯಾಸಗೊಳ್ಳುತ್ತಾ ಸಾಗುತ್ತದೆ. ಆದರೆ ಇವೆಲ್ಲವುಗಳಿಗೂ ಒಂದೊಂದು ನಿರ್ದಿಷ್ಟ ಕ್ರಮವಿದ್ದರೂ ಅವುಗಳ ಗುರಿ ಮಾತ್ರ ಒಂದೇ ಇರದೆ ಅಸಂಖ್ಯವೆನಿಸಿ ಭಿನ್ನಭಿನ್ನವಾಗಿವೆ. ಮಾತ್ರವಲ್ಲ, ಅವು ಆಗಾಗ ಬದಲಾಗುತ್ತಲೇ ಇವೆ. ಇದಕ್ಕೆ ಕಾರಣವಾದರೂ ಏನು? ಸ್ವಾರ್ಥವೇ? ಸ್ವೇಚ್ಛೆಯೇ? ದುರಹಂಕಾರವೇ? ಹಣ, ಆಸ್ತಿ, ಅಂತಸ್ತು, ಶಕ್ತಿ, ರೂಪ ಮೊದಲಾದ ಮೈಮನಸ್ಸುಗಳಲ್ಲಿ ಸೇರಿಕೊಳ್ಳುವ ಮದಗಳೇ? ಉಚ್ಛನೀಚವೆಂಬ ತರತಮ ಮನೋಭಾವವೇ? ಹೀಗೆ ಹಲವು ಸವಾಲುಗಳು ನಮ್ಮ ಮುಂದೆ ನಿಂತುಬಿಡುತ್ತವೆ. ಸಕಲ ಜೀವರಾಶಿಗಳನ್ನು ಸೃಷ್ಟಿಕರ್ತನಾದ ಭಗವಂತನೇ ಸೃಷ್ಟಿಸಿರುವಾಗ ಈ ಜೀವರಾಶಿಗಳು ಹಾಗೂ ಅವುಗಳ ಬದುಕಿನ ಗುರಿಗಳು ವೈವಿಧ್ಯವಾಗಿರಲು ಅಥವಾ ಭಿನ್ನಭಿನ್ನವಾಗಿರಲು ಸೃಷ್ಟಿಕರ್ತನ ಮನಸ್ಸು ಆಗಾಗ ಭ್ರಮೆಗೆ ಒಳಗಾಗುತ್ತಿರುವುದೇ ಕಾರಣವೇ? ಎಂಬ ಸವಾಲೂ ಅಥವಾ ಆತನ ಸೃಷ್ಟಿಯೇ ಹೀಗಿರಬಹುದೇನೋ! ಎಂಬ ಸಂಶಯವೂ ಮೂಡುತ್ತದೆ. ಒಂದು ವೇಳೆ ಸೃಷ್ಟಿಕರ್ತ ತನ್ನ ಸೃಷ್ಟಿವೈವಿಧ್ಯದ ಮೇಲೆ ಮಮಕಾರವನ್ನು ಹೊಂದಿದ್ದಾನೆ ಎಂದಾದರೆ, ಈ ಸೃಷ್ಟಿಯಲ್ಲಿ ಪ್ರಾಣಿಸಂಕುಲಗಳು, ಪಕ್ಷಿಸಂಕುಲಗಳು, ಸಸ್ಯಸಂಕುಲಗಳು ಎಲ್ಲಕ್ಕಿಂತ ಮೇಲಾಗಿ ಮನುಷ್ಯಸಂಕುಲ ಹೆಜ್ಜೆಹೆಜ್ಜೆಗೂ ಕಷ್ಟಪಡಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗುತ್ತಿದೆ? ಎಂಬ ಸವಾಲೂ ನಮ್ಮ ಮುಂದೆ ನಿಲ್ಲುತ್ತದೆ.
ಭಗವಂತ ಈ ಭೂಮಿಯಲ್ಲಿರುವ ಸಕಲ ಜೀವಸಂಕುಲದ ಬದುಕಿಗೆ ಅನುವು ಮಾಡಿಕೊಟ್ಟಿದ್ದಾನೆ ಎಂಬುದೇನೋ ನಿಜ. ಆದರೆ ಅದರ ಕ್ರಮವನ್ನು ಆಯಾ ವರ್ಗದ ಜೀವಸಂಕುಲ, ಸಸ್ಯಸಂಕುಲಗಳು ರೂಢಿಸಿಕೊಂಡಿವೆ. ಮನುಷ್ಯವರ್ಗವನ್ನೇ ಪರಿಭಾವಿಸಿಕೊಂಡರೂ ಆತನ ಜೀವಿತದ ಕ್ರಮಗಳು ಹಲವಾರಿವೆ. ಆಯಾ ವರ್ಗದ ನಂಬಿಕೆ, ನಡವಳಿಕೆ, ಸಂಪ್ರದಾಯ, ಪರಂಪರೆಗಳಿಗನುಗುಣವಾಗಿ ಭಿನ್ನಭಿನ್ನವಾಗಿವೆ ಎಂಬುದೇನೋ ನಿಜ. ಆದರೆ ಪ್ರತಿಯೊಬ್ಬರ ಜೀವಿತದ ಗುರಿ ಒಂದೇ ಅಗಿರದೆ ಭಿನ್ನಭಿನ್ನವಾಗಿವೆ. ಕೆಲವೊಮ್ಮೆ ಅವೆಲ್ಲವು ಪರಸ್ಪರ ಪೂರಕವೂ ಇರಬಹುದು, ಇಲ್ಲಾ ಪರಸ್ಪರ ವಿರುದ್ಧವೂ ಇರಬಹುದು. ಸೃಷ್ಟಿಕರ್ತ ದಯಾಳುವಾದರೂ ಆತ ಈ ಭೂಮಿಯ ಮೇಲೆ ಮನುಷ್ಯನ ಬದುಕಿಗೆ ಎಲ್ಲವನ್ನೂ ಅನುಗೊಳಿಸಿದರೂ ಮನುಷ್ಯ ಮಾತ್ರ ತನ್ನ ಸ್ವಾರ್ಥಸಾಧನೆಗಾಗಿ ಹೆಜ್ಜೆಹೆಜ್ಜೆಗೂ ಜೀವಿತದ ಕ್ರಮವನ್ನೂ ಬದಲಿಸುವುದರ ಜೊತೆಗೆ ಅದರ ಗುರಿಯನ್ನೂ ಬದಲಿಸುತ್ತಿದ್ದಾನೆ. ಕೆಲವರ ಸ್ವಾರ್ಥಸಾಧನೆ ಹಲವರ ಕಷ್ಟನಷ್ಟಗಳಿಗೆ ಕಾರಣವಾಗುತ್ತಿದ್ದು, ಒಂದೆಡೆ ಕುಟುಂಬದ ನೆಮ್ಮದಿಯ ನಾಶಕ್ಕೆ, ಇನ್ನೊಂದೆಡೆ ಕುಟುಂಬದೊಳಗಿನ ದ್ವೇಷಕ್ಕೆ, ಮತ್ತೊಂದೆಡೆ ಸಮಾಜದ ಅಸ್ಥಿರತೆಗೆ, ಮಗುದೊಂದೆಡೆ ದೇಶದ ದುರ್ಬಲತೆಗೆ ಕಾರಣವಾಗುತ್ತಿದೆ. ಮನುಷ್ಯ ಸಂಘಜೀವಿಯಾಗಿರುವಾಗ ಅವನಲ್ಲಿ ಹೆಜ್ಜೆಹೆಜ್ಜೆಗೂ ಸಾಂಘಿಕಪ್ರಜ್ಞೆ, ಸಮಷ್ಟಿಪ್ರಜ್ಞೆ ಜಾಗೃತವಾಗಿರಲೇಬೇಕು. ಒಬ್ಬ ತನ್ನಿಚ್ಛೆಯಂತೆ ಬದುಕುತ್ತೇನೆ ಎಂದು ಹೊರಟರೆ ಉಳಿದವರ ಗತಿಯೇನು? ತನ್ನಂತೆ ಪರರ ಬಗೆಯುವ ಮನೋಭಾವ ಹಾಗೂ ಅದಕ್ಕನುಗುಣವಾದ ಬದುಕು ಅತ್ಯಂತ ಅಗತ್ಯ. ಅದು ಒಳ್ಳೆಯ ಗುರಿಯನ್ನು ಹೊಂದಿ ಮನುಷ್ಯನನ್ನು ಅರ್ಥಪೂರ್ಣಬದುಕಿನೆಡೆಗೆ ಕೊಂಡೊಯ್ಯುತ್ತದೆ.
ಮನುಷ್ಯ ಬದುಕಿನಲ್ಲಿ ಕಾಲಕಾಲಕ್ಕೆ ಪರಿಷ್ಕೃತಗೊಳ್ಳುವ ಜೀವನಸೌಕರ್ಯ, ಹೊಸಬಹುಕಿನ ತುಡಿತಕ್ಕೊಳಗಾಗಿ ಬದಲಾಗುತ್ತಿರುವ ದೃಷ್ಟಿಕೋನ, ಮರೀಚಿಕೆಯ ಬೆನ್ನುಹತ್ತಿಕೊಂಡು ಭ್ರಮಿಸುವ ಪ್ರವೃತ್ತಿ, ಯುಕ್ತಾಯುಕ್ತವಿಲ್ಲದ ಆಲೋಚನಾಕ್ರಮ, ಮಿತಿಮೀರಿದ ಸ್ವಾರ್ಥಮನೋಭಾವ, ತನ್ನ ಒಳಿತಿಗಾಗಿ ಅನ್ಯರನ್ನು ದಮನಿಸುವ ದುಷ್ಟಪ್ರವೃತ್ತಿ, ಅನ್ಯರ ನೆಮ್ಮದಿಯನ್ನು ಕೆಡಿಸಿ ಸಂಭ್ರಮಿಸುವ ಆಸುರಿತನವೇ ಸಮಾಜದಲ್ಲಿ ತಾಂಡವಾಡುತ್ತಿದೆ. ಸೃಷ್ಟಿಕರ್ತ ದಯಾಳುವೇನೋ ನಿಜ, ಆದರೆ ಆತನಿಂದ ಸೃಷ್ಟಿತನಾದ ಮನುಷ್ಯನೇನೋ ದಯಾಳು ಅಲ್ಲವಲ್ಲ. ಸ್ವಾರ್ಥ ಹೆಚ್ಚಿದಂತೆಲ್ಲ ಬದುಕಿನ ಗುರಿಗಳೂ ಬದಲಾಗುತ್ತಿರುವುದರ ಜೊತೆಗೆ ಅವುಗಳ ಸಂಖ್ಯೆಯೂ ಏರುತ್ತಲೇ ಇದೆ. ಹಾಗಾಗಿಯೇ ಮನುಷ್ಯ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಕೆಲವರಿಂದಾಗಿ ಹಲವರು ಶ್ರಮಪಡಬೇಕಾದ ಅನಿವಾರ್ಯ ಪರಿಸ್ಥಿತಿ ಒದಗುತ್ತಿದೆ.
ಸೃಷ್ಟಿಕರ್ತ ಮಮತೆಯುಳ್ಳವನಾಗಿ ಈ ಭೂಮಿಯಲ್ಲಿ ಸಕಲ ಜೀವಸಂಕುಲಕ್ಕೆ, ಅದರಲ್ಲೂ ಮನುಷ್ಯಕುಲದ ಜೀವಿತಕ್ಕೆ ಅಗತ್ಯವಾದುದನ್ನು, ಅನಿವಾರ್ಯವಾದುದನ್ನು ವ್ಯವಸ್ಥೆಗೊಳಿಸಿರುವಾಗ ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ ಅದನ್ನು ನ್ಯಾಯಸಮ್ಮತವಾಗಿ ಉಪಯೋಗಿಸಿಕೊಂಡು ಸಾಂಘಿಕಪ್ರಜ್ಞೆಯಿಂದ ತನ್ನ ಬದುಕಿನ ಕ್ರಮವನ್ನು ಕಾಲಕಾಲಕ್ಕೆ ಪರಿಷ್ಕೃತಗೊಳಿಸಿ, ಒಂದೇ ಲಕ್ಷ್ಯವನ್ನಿರಿಸಿಕೊಂಡು ಕಾರ್ಯಪ್ರವೃತ್ತನಾಗಬೇಕಾದುದು ತನ್ನ ಕುಲದ ಏಳಿಗೆಯ ದೃಷ್ಟಿಯಿಂದ, ಸಮಾಜದ ಪುನರುತ್ಥಾನದ ದೃಷ್ಟಿಯಿಂದ ಮತ್ತು ಆ ಮೂಲಕ ದೇಶದ ಅಭಿವೃದ್ಧಿ ಹಾಗೂ ಒಗ್ಗಟ್ಟಿನ ದೃಷ್ಟಿಯಿಂದ ಒಳಿತು. “ಲೋಕಾ ಸಮಸ್ತಾ ಸುಖಿನೋ ಭವಂತು”, “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಪೂರ್ವಸೂರಿಗಳ ಮಾತುಗಳು ಅದನ್ನೇ ದೃಢೀಕರಿಸುತ್ತವೆ.
ಡಾ. ವಸಂತ್ ಕುಮಾರ್, ಉಡುಪಿ.
********