ಹಾಲತೊರೆಗೆ ಬೆಲ್ಲದ ಕೆಸರು
ಸಕ್ಕರೆಯ ಮಳಲು
ತವರಾಜದ ನೊರೆತೆರೆಯಂತೆ ಆದ್ಯರ ವಚನವಿರಲು
ಬೇರೆ ಬಾವಿಯ ತೋಡಿ
ಉಪ್ಪುನೀರನುಂಬುವನ ವಿಧಿಯಂತಾಯಿತೆನ್ನ ಮತಿ
ಕೂಡಲಸಂಗಮದೇವ
ಅನ್ವಯಕ್ರಮ:
ಆದ್ಯರ ವಚನವು ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆತೆರೆಯಂತೆ ಇರಲು, ಎನ್ನ ಮತಿ ಬೇರೆ ಬಾವಿಯ ತೋಡಿ ಉಪ್ಪುನೀರನ್ ಉಂಬುವನ ವಿಧಿಯಂತೆ ಆಯಿತು – ಕೂಡಲಸಂಗಮದೇವ
ಪದ-ಅರ್ಥ:
ತೊರೆ– ಹೊಳೆ; ಕೆಸರು-ನೀರು ಬೆರೆತ ಮಣ್ಣು, ರಾಡಿ; ಮಳಲು-ಹೊಯಿಗೆ; ತವರಾಜ-ಒಂದು ಬಗೆಯ ಸಕ್ಕರೆ; ನೊರೆತೆರೆ-ಬುರುಗಿನಿಂದ ಕೂಡಿದ ಅಲೆ; ಆದ್ಯರ ವಚನ-ಪುರಾತನರ ಮಾತು, ಹಿರಿಯರ ಮಾತು, ಶಿವಶರಣರ ಮಾತು; ಉಪ್ಪುನೀರನುಂಬುವನ-ಉಪ್ಪುನೀರನ್ನು ಕುಡಿಯುವವನ; ವಿಧಿಯಂತೆ-ಸ್ಥಿತಿಯಂತೆ, ದುರವಸ್ಥೆಯಂತೆ; ಎನ್ನ ಮತಿ-ನನ್ನ ಬುದ್ಧಿ.
ಈಗಾಗಲೇ ವ್ಯವಸ್ಥಿತವಾಗಿ ರೂಢಿಯಾಗಿರುವ ವ್ಯವಸ್ಥೆಯನ್ನು ಬಿಟ್ಟುಬಿಟ್ಟು ತಾನೊಂದು ಹೊಸವ್ಯವಸ್ಥೆಯನ್ನು ರೂಢಿಸಿಕೊಳ್ಳುತ್ತೇನೆ ಎಂದು ಹೊರಡುವ ಮೂರ್ಖನ ಬುದ್ಧಿಗೇಡಿತನದ ವರ್ತನೆಯನ್ನು, ಮತ್ತು ಹಿರಿಯರ ಕೊಡುಗೆಯನ್ನು ಮೀರಿ ತಾನು ಅದಕ್ಕಿಂತಲೂ ಶ್ರೇಷ್ಠವಾದುದನ್ನು ರಚಿಸುತ್ತೇನೆ ಎಂಬ ದುರಹಂಕಾರದ ವರ್ತನೆಯನ್ನು ಬಸವಣ್ಣನವರು ಈ ವಚನದಲ್ಲಿ ಖಂಡಿಸಿದ್ದಾರೆ. ಪರಂಪರೆಯಿಂದ ಬಂದ ಬಳುವಳಿಯನ್ನು, ಹಿರಿಯರ ಅನುಭವದಿಂದ ದೊರಕಿದ ಫಲಶ್ರುತಿಯನ್ನು ತಿರಸ್ಕರಿಸಿ ಅಥವಾ ಕಡೆಗಣಿಸಿ ತಾನು ಹೊಸತೊಂದು ವ್ಯವಸ್ಥೆಯನ್ನು ಅಥವಾ ಪೂರ್ವಜರ ಸಾಧನೆಗಿಂತಲೂ ಶ್ರೇಷ್ಠವಾದುದನ್ನು ತಾನು ರೂಢಿಸಿಕೊಳ್ಳಲು ಹಾತೊರೆಯುವುದೆಂದರೆ ಪರಂಪರೆಯನ್ನು ತಿರಸ್ಕರಿಸಿದಂತಾಗುತ್ತದೆ. ಪರಂಪರೆಯಿಂದ ಬಂದುದೆಲ್ಲವೂ ಅನುಭವದ ತಳಹದಿಯ ಮೇಲೆ ನೆಲೆಗೊಂಡಿರುವಂತಹುದು. ಅವೆಲ್ಲವನ್ನೂ ತಿರಸ್ಕರಿಸಿ ತಾನು ಹೊಸತೊಂದನ್ನು ರೂಢಿಸಿಕೊಳ್ಳುತ್ತೇನೆ ಎನ್ನುವುದು ಮೂರ್ಖತನವಲ್ಲದೆ ಬೇರೇನಲ್ಲ ಎಂಬುದನ್ನು ಒಂದು ರೂಪಕದ ಮೂಲಕ ಬಸವಣ್ಣ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ. ಇನ್ನೊಂದರ್ಥದಲ್ಲಿ ಇದು ಬಸವಣ್ಣನ ಆತ್ಮವಿಮರ್ಶೆಯೂ ಹೌದು.
ಒಂದು ತೊರೆ ಎಂದಾಗ ಅಲ್ಲಿ ನೀರು, ಕೆಸರು ಹಾಗೂ ಮಳಲು ಸಹಜವಾಗಿ ಇದ್ದೇ ಇರುತ್ತವೆ. ಇಲ್ಲಿನ ನೀರೂ, ಕೆಸರೂ, ಮಳಲೂ ಸಾಮಾನ್ಯವಾದವು. ಕಾಲಕ್ರಮೇಣ ಇವೆಲ್ಲವೂ ಕಲುಷಿತಗೊಳ್ಳಬಹುದು, ನಾರಬಹುದು. ಆದರೆ ಹಾಲಿನ ತೊರೆ, ಬೆಲ್ಲದ ಕೆಸರು, ತವರಾಜದ ಮಳಲು ಕಲುಷಿತಗೂಳ್ಳದು, ನಾರದು. ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಸವಣ್ಣನವರು ಈ ವಚನದಲ್ಲಿ ಆದ್ಯರ ವಚನವನ್ನು ಹಾಲತೊರೆಗೆ, ಬೆಲ್ಲದ ಕೆಸರಿಗೆ, ತವರಾಜದ ನೊರೆತೆರೆಗೆ ಸಮೀಕರಿಸಿದ್ದಾರೆ. ಹಾಲು, ಬೆಲ್ಲ ಹಾಗೂ ತವರಾಜ ಇವೆಲ್ಲವೂ ಅತ್ಯಂತ ಪ್ರಶಸ್ತವಾದ ಸುವಸ್ತುಗಳು, ಆರೋಗ್ಯವರ್ಧಕಗಳು. ಆದ್ಯರ (ಹಿರಿಯ ಶಿವಶರಣರು) ಮಾತುಗಳು ಹಾಲೆಂಬ ತೊರೆಗೆ ಬೆಲ್ಲದ ಕೆಸರು ಇದ್ದಂತೆ, ಸಕ್ಕರೆಯ ಮಳಲು ಇದ್ದಂತೆ, ತವರಾಜದ ನೊರೆಯ ತೆರೆಗಳಿದ್ದಂತೆ. ಇವು ದೇಹಕ್ಕೂ ಹಿತ, ಮನಸ್ಸಿಗೂ ಹಿತ, ಸಮಾಜಕ್ಕೂ ಹಿತ ಹಾಗೂ ಆರೋಗ್ಯಕರ. ಅವೆಲ್ಲವನ್ನೂ ಕಡೆಗಣಿಸಿ ತಾನು ಹೊಸ ವಿಚಾರವನ್ನು, ಹೊಸ ವಿಧಾನವನ್ನು, ಹೊಸಚಿಂತನೆಯನ್ನು ಪ್ರತಿಪಾದಿಸುತ್ತೇನೆ ಎಂದು ಹೊರಟು ಬೇರೆ ಬಾವಿಯೊಂದನ್ನು ತೋಡಿ ಅಲ್ಲಿನ ಉಪ್ಪುನೀರನ್ನು ಕುಡಿಯುವಂತಹ ಸ್ಥಿತಿಯಂತಾಗಿದೆ ನನ್ನ ಬುದ್ಧಿ ಎಂದು ಬಸವಣ್ಣನವರು ಈ ವಚನದಲ್ಲಿ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ತನಗಿಂತ ಹಿಂದೆ ಆಗಿಹೋದ, ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಸಾಧನೆಗೈದು ಸಮಾಜದಲ್ಲಿ ಶ್ರೇಷ್ಠರೆನಿಸಿಕೊಂಡು ಶಿವಾನುಗ್ರಹಕ್ಕೆ ಪಾತ್ರರಾದ ಹಿರಿಯ ಶಿವಶರಣರು ತಮ್ಮ ಅನುಭವದ ನೆಲೆಯಲ್ಲಿ ಸಾಕಷ್ಟು ಮಾತುಗಳನ್ನು, ಹಿತವಚನಗಳನ್ನು ಆಡಿದ್ದಾರೆ. ಅವೆಲ್ಲವನ್ನು ನಿರಾಕರಿಸಿ, ಕಡೆಗಣಿಸಿ, ತಿರಸ್ಕರಿಸಿ ತಾನು ಹೊಸದೊಂದನ್ನು ಆಡುತ್ತೇನೆ, ಹೊಸ ವಿಚಾರವನ್ನು ಪ್ರತಿಪಾದಿಸುತ್ತೇನೆ, ಹೊಸಮಾರ್ಗವನ್ನು ಕಂಡುಕೊಳ್ಳುತ್ತೇನೆ ಎಂದು ಹೊರಡುವುದು ಒಂದು ಮತಿಗೆಟ್ಟ ಸ್ಥಿತಿಯಲ್ಲದೆ ಬೇರೇನಲ್ಲ ಎಂಬುದು ಬಸವಣ್ಣನವರ ಅಭಿಪ್ರಾಯ.
ಆದ್ಯರ ವಚನಗಳು ಹಾಲಿನ ತೊರೆಗೆ, ಅದರಲ್ಲಿರುವ ಬೆಲ್ಲದ ಕೆಸರಿಗೆ, ಅದರ ದಡದಲ್ಲಿರುವ ತವರಾಜದ ಮಳಲಿಗೆ ಸಮಾನವಾಗಿರುವಾಗ ಹಾಗೂ ಸ್ವೀಕೃತಿಗೆ ಪ್ರಶಸ್ತವಾಗಿರುವಾಗ ಹಾಲಿನ ತೊರೆಯೂ ಬೇಡ, ಬೆಲ್ಲದ ಕೆಸರೂ ಬೇಡ, ತವರಾಜದ ನೊರೆತೆರೆಯೂ ಬೇಡ ಎಂದುಕೊಂಡು ಬೇರೆ ಬಾವಿಯನ್ನು ತೋಡಿ ಉಪ್ಪುನೀರನ್ನು ಕುಡಿಯಲೆಳಸುವುದು ಮೂರ್ಖತನವಲ್ಲದೆ ಬೇರೇನಲ್ಲ. ಆದ್ಯರು ತಮ್ಮ ಅನುಭವದ ನೆಲೆಯಲ್ಲಿ ಆಡಿರುವ ಮಾತುಗಳು ಶರಣರಿಗೆ ಮಾತ್ರವಲ್ಲದೆ, ಸಮಸ್ತರಿಗೂ ಮಾರ್ಗದರ್ಶಕವಾಗಿವೆ. ಅವುಗಳ ಆಧಾರದ ಮೇಲೆ ಹೆಚ್ಚಿನದನ್ನು ಸಾಧಸಬಹುದಲ್ಲದೆ, ಅವೆಲ್ಲವನ್ನೂ ತಿರಸ್ಕರಿಸುವುದಾಗಲೀ ಅವಗಣಿಸುವುದಾಗಲೀ ಅವುಗಳಿಗಿಂತ ಹೆಚ್ಚಿನದನ್ನು ತಾನು ಸಾಧಿಸುತ್ತೇನೆ ಎನ್ನುವುದಾಗಲೀ ಮೂರ್ಖತನವಲ್ಲದೆ ಬೇರೇನಲ್ಲ. ಈ ರೀತಿಯ ವರ್ತನೆಗಳು ಆದ್ಯರನ್ನು ಅವಹೇಳನ ಮಾಡಿದಂತೆ, ತಿರಸ್ಕರಿಸಿದಂತೆ, ಮಾತ್ರವಲ್ಲ, ಆ ಮೂಲಕ ಶಿವನನ್ನೂ ನಿರ್ಲಕ್ಷಿಸಿದಂತಾಗುತ್ತದೆ ಎಂಬುದು ಬಸವಣ್ಣನವರ ಅಭಿಪ್ರಾಯ.
ಹನ್ನೆರಡನೆಯ ಶತಮಾನದಲ್ಲಿ ಸಾಕಷ್ಟು ಶರಣರು ವಚನಗಳನ್ನು ರಚಿಸುವ ಸ್ಪರ್ಧೆಯಲ್ಲಿ ತೊಡಗಿದಂತೆ ತೋರುತ್ತದೆ. ಇನ್ನೊಂದರ್ಥದಲ್ಲಿ ವಚನರಚನೆಯ ವಿಚಾರದಲ್ಲಿ ಶರಣರೊಳಗೆ ಮೇಲಾಟಗಳು ನಡೆಯುತ್ತಿತ್ತೆಂದು ತೋರುತ್ತದೆ. ಸ್ಪರ್ಧಾಮನೋಭಾವ ಬೆಳೆಸಿಕೊಂಡ ಎಷ್ಟೋ ಮಂದಿ ಶಿವಶರಣರು ತಮಗಿಂತಲೂ ಹಿರಿಯ ವಚನಕಾರರ ವಚನಗಳನ್ನು ತಿರಸ್ಕರಿಸುವ, ತಾವು ಅವರಿಗಿಂತಲೂ ಶ್ರೇಷ್ಠವಾದುದನ್ನು ರಚಿಸುವ, ತಾವೇ ಶ್ರೇಷ್ಠರೆಂದು ಪರಿಭಾವಿಸುವ ದುರಹಂಕಾರವನ್ನು ತೋರುತ್ತಿರುವುದನ್ನು ಹಾಗೂ ಅವುಗಳಿಂದ ಪರಿಹಾಸಕ್ಕೆ ಈಡಾಗುತ್ತಿರುವುದನ್ನು ಮನಗಂಡು ಬಸವಣ್ಣನವರು ಮೇಲಿನ ರೂಪಕದ ಮೂಲಕ ಅಂತಹ ದುರಹಂಕಾರಿಗಳನ್ನು ವಿಡಂಬಿಸಿದ್ದಾನೆ. ಅಲ್ಲದೆ, ತಾನೊಬ್ಬ ವಚನಕಾರನಾದರೂ ತಾನು ಅವರಿಗೆ ಸರಿಸಮನೆಂದಾಗಲೀ ತನ್ನ ವಚನಗಳು ಆದ್ಯರ ವಚನಗಳಿಗೆ ಸಮಾನವೆಂದಾಗಲೀ ತನ್ನ ಸಾಧನೆ ಹಿರಿಯರ ಸಾಧನೆಗಳಿಗೆ ಸಮಾನವೆಂದಾಲೀ ಬಸವಣ್ಣನವರು ಎಂದೂ ಭಾವಿಸಿದಂತೆ ಕಂಡುಬರುವುದಿಲ್ಲ. ಆದರೂ ಅವರು ತನ್ನ ವಚನರಚನೆ ಬೇರೆ ಬಾವಿಯನ್ನು ತೋಡಿ ಉಪ್ಪುನೀರನ್ನು ಕುಡಿಯುವವನ ಬುದ್ಧಿಗೆ ಸಮಾನವೆನ್ನುತ್ತಾರೆ. ಇದರಿಂದ ಎರಡು ವಿಚಾರಗಳು ಮನದಟ್ಟಾಗುತ್ತವೆ. ಮೊದಲನೆಯದು, ಆದ್ಯರಿಗೆ ತಾನು ಎಂದಿಗೂ ಸಮಾನನಲ್ಲ, ಅವರ ವಚನಗಳಿಗೆ ತನ್ನ ವಚನಗಳು ಎಂದಿಗೂ ಸಮಾನವಲ್ಲ ಎಂಬುದು. ಎರಡನೆಯದು, ತನ್ನ ವಚನರಚನೆ ಎಂಬುದು ಹಾಲತೊರೆಯನ್ನು, ಅದರಲ್ಲಿರುವ ಬೆಲ್ಲದ ಕೆಸರನ್ನು, ತವರಾಜದ ನೊರೆತೆರೆಯನ್ನು ಕಡೆಗಣಿಸಿ ಬೇರೆ ಬಾವಿಯನ್ನು ತೋಡಿ ಅದರಲ್ಲಿನ ಉಪ್ಪುನೀರನ್ನು ಕುಡಿಯಲೆಳಸುವ ಬುದ್ಧಿಹೀನನ ವರ್ತನೆಗೆ ಸಮಾನ ಎಂದು ಪರಿಭಾವಿಸುತ್ತಾರೆ. ಇದರಿಂದ ಬಸವಣ್ಣನವರ ವಿನಯವಂತಿಕೆ, ಹಿರಿಯರಿಗೆ ಶರಣಾಗುವ, ತನ್ನ ರಚನೆಗಳೆಲ್ಲವೂ ಉಪ್ಪುನೀರಿಗೆ ಸಮಾನವೆನ್ನುವ ಮನೋಭಾವ ದೃಢವಾಗುತ್ತದೆ.
ಈ ವಚನ ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಹಿನ್ನೆಲೆಯಲ್ಲಿ ರಚನೆಯಾಗಿದ್ದರೂ ಅದು ತನ್ನ ಅರ್ಥವ್ಯಾಪ್ತಿಯನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿಕೊಳ್ಳುವುದನ್ನು ಮನಗಾಣಬಹುದು. ಇಂದು ಇಪ್ಪತ್ತೊಂದನೆಯ ಶತಮಾನದ ಕಾಲಘಟ್ಟದಲ್ಲಿ ಬಸವಣ್ಣನವರ ಈ ನಿಲುವು ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಹಿರಿಯರನ್ನು ಕಡೆಗಣಿಸುವ, ಅವರ ಜೀವಮಾನದ ಸಾಧನೆಗಳನ್ನು ತಿರಸ್ಕರಿಸುವ, ಅವರ ಸ್ಥಾನಮಾನಗಳನ್ನು ನಿರ್ಲಕ್ಷಿಸುವ, ಭದ್ರವಾದ ತಳಹದಿಯೇ ಇಲ್ಲದ ತಮ್ಮ ಸಾಧನೆಗಳನ್ನು ವೈಭವೀಕರಿಸುವ, ಹತ್ತಾರು ನೆಲೆಗಳಲ್ಲಿ ಬಿಟ್ಟಿಪ್ರಚಾರವನ್ನು ಪಡೆಯುವ ಸಮಾಜಘಾತುಕವಾದ ದುಷ್ಟಪ್ರವೃತ್ತಿ ಬೆಳೆಯುತ್ತಿದೆ. ಇದು ಬಸವಣ್ಣನವರ ಮಾತಿನಂತೆ “ಬೇರೆ ಬಾವಿಯ ತೋಡಿ ಉಪ್ಪುನೀರನುಂಬವನ ಮತಿ”ಯಲ್ಲದೆ ಬೇರೇನಲ್ಲ. ಹಾಗಾಗಿಯೇ ಇಂದು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಅತಂತ್ರ, ಗೊಂದಲ, ಅಸಾಂಗತ್ಯಗಳು ತಾಂಡವವಾಡುತ್ತಿವೆ. ಅವರ ಸಾಧನೆಗಳು, ರಚನೆಗಳು ಅಂದಂದೇ ನಶಿಸಿಹೋಗುತ್ತಿವೆ, ಇಂದಿನದ್ದು ನಾಳೆಗೆ ಅಪ್ರಸ್ತುತವಾಗುತ್ತಿವೆ. ಎಲ್ಲವೂ ಪೂರ್ವಸೂರಿಗಳ ಜೀವನಾನುಭವದ, ಚಿಂತನೆಯ ವಿಚಾರಗಳನ್ನು ನಿರ್ಲಕ್ಷಿಸಿದ್ದರ ಫಲ. ಹಾಗಾಗಿ ಬಸವಣ್ಣನವರ ಮೇಲಿನ ಮಾತುಗಳು ಹನ್ನೆರಡನೆಯ ಶತಮಾನದ ಕಾಲಘಟ್ಟಕ್ಕಿಂತಲೂ ಇಂದಿನ ಕಾಲಘಟ್ಟಕ್ಕೆ ಹೆಚ್ಚು ಅರ್ಥಪೂರ್ಣವಾಗಿ ಅನ್ವಯವಾಗುತ್ತವೆ. ಜೊತೆಗೆ ಅವರ ಮಾತುಗಳ ಸಾರ್ವಕಾಲಿಕತೆಯೂ ಮನದಟ್ಟಾಗುತ್ತದೆ.
ಡಾ. ವಸಂತ್ ಕುಮಾರ್, ಉಡುಪಿ
*******